ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ನಿರ್ಧಾರ

7

ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ನಿರ್ಧಾರ

Published:
Updated:

ಬೆಂಗಳೂರು: ನಗರದಲ್ಲಿ ರಸ್ತೆ ವಿಸ್ತರಣೆಗಾಗಿ ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್) ಪ್ರಕ್ರಿಯೆ ಮೂಲಕ ಭೂಮಿ ಹಸ್ತಾಂತರಿಸಿದ ಫಲಾನುಭವಿಗಳಿಗೆ ಅಭಿವೃದ್ಧಿ ಹಕ್ಕುಗಳ ಪ್ರಮಾಣ ಪತ್ರ ನೀಡುವಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಉಪ ಆಯುಕ್ತ (ಭೂಸ್ವಾಧೀನ) ಚಿಕ್ಕಮುನಿಯಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚಿಸಲು ಬಿಬಿಎಂಪಿ ನಿರ್ಧರಿಸಿದೆ.



ನಗರದ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಬುಧವಾರ ಮೇಯರ್ ಡಿ. ವೆಂಕಟೇಶಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆದ ನಂತರ ಈ ತೀರ್ಮಾನ ಕೈಗೊಳ್ಳಲಾಯಿತು.



ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಹಿರಿಯ ಸದಸ್ಯ ಎಂ. ನಾಗರಾಜ್, `ರಾಜರಾಜೇಶ್ವರಿ ನಗರ, ಯಲಹಂಕ ಹಾಗೂ ಮಹದೇವಪುರ ವಲಯ ವ್ಯಾಪ್ತಿಗಳಲ್ಲಿ ರಸ್ತೆ ವಿಸ್ತರಣೆಗಾಗಿ ಟಿಡಿಆರ್ ಪ್ರಕ್ರಿಯೆ ಮೂಲಕ ಜಾಗ ಹಸ್ತಾಂತರಿಸಿದ ಫಲಾನುಭವಿಗಳಿಗೆ ಅಭಿವೃದ್ಧಿ ಹಕ್ಕುಗಳ ಪ್ರಮಾಣ ಪತ್ರ ನೀಡುವಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಟಿಡಿಆರ್ ಪ್ರಕ್ರಿಯೆಗೆ ಸಂಬಂಧಿಸಿದ ಸುಮಾರು 352 ಕಡತಗಳ ಬಗ್ಗೆ ಪರಿಶೀಲನೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು~ ಎಂದು ಒತ್ತಾಯಿಸಿದರು.



`ರಸ್ತೆ ವಿಸ್ತರಣೆಗಾಗಿ ಜಾಗ ಹಸ್ತಾಂತರಿಸಿದ ಅರ್ಹ ಫಲಾನುಭವಿಗಳಿಗೆ ಪರಿಹಾರ ಸಿಗಬೇಕಾಗಿದೆ. ಆದರೆ, ಈ ಮೂರು ವಲಯಗಳ ಟಿಡಿಆರ್ ಪ್ರಕ್ರಿಯೆಗೆ ಸಂಬಂಧಿಸಿದ ಕಡತಗಳಲ್ಲಿ ನ್ಯೂನತೆಗಳಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಈ ಅಕ್ರಮಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು~ ಎಂದು ಅವರು ಆಗ್ರಹಿಸಿದರು.



`ಮಧ್ಯವರ್ತಿಗಳು, ಜಮೀನ್ದಾರರು ಹಾಗೂ ಅಧಿಕಾರಿಗಳು ಸೇರಿಕೊಂಡು ಅರ್ಹ ಫಲಾನುಭವಿಗಳನ್ನು ವಂಚಿಸುವ ಪ್ರಯತ್ನ ನಡೆದಿದೆ. ಬೋಗಸ್ ಟಿಡಿಆರ್ ನೀಡಿ ರೈತರನ್ನು ಮೋಸ ಮಾಡುವ ಷಡ್ಯಂತ್ರ ನಡೆದಿದೆ. ಈ ಪ್ರಕರಣದಲ್ಲಿ ಪಾಲಿಕೆ ಅಧಿಕಾರಿಗಳ ಲೋಪವಿರುವುದು ಕೂಡ ಕೆಲವು ವಲಯಗಳ ಕಡತಗಳ ಪರಿಶೀಲನೆಯಿಂದ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಬೇಕು~ ಎಂದು ಅವರು ಒತ್ತಾಯಿಸಿದರು.



ಎರಡು ತಿಂಗಳಲ್ಲಿ ವರದಿ:ಈ ಬಗ್ಗೆ ಉತ್ತರ ನೀಡಿದ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ, `ಚಿಕ್ಕಮುನಿಯಪ್ಪ ನೇತೃತ್ವದ ಸಮಿತಿಗೆ ಖುದ್ದು ಸ್ಥಳ ಪರಿಶೀಲನೆ ನಡೆಸಿ ಎರಡು ತಿಂಗಳಲ್ಲಿ ವರದಿ ಸಲ್ಲಿಸಲು ಸೂಚಿಸಲಾಗುವುದು. ಆಗಸ್ಟ್‌ನಲ್ಲಿ ನಡೆಯಲಿರುವ ಸಭೆಗೆ ಪ್ರಕರಣದ ಸಂಪೂರ್ಣ ಮಾಹಿತಿ ಒದಗಿಸಲಾಗುವುದು~ ಎಂದು ಹೇಳಿದರು.



`ಸಮಿತಿಯು ಫಲಾನುಭವಿಗಳಿಗೆ ಅಭಿವೃದ್ಧಿ ಹಕ್ಕುಗಳ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ಜತೆಗೆ ಖುದ್ದು ಸ್ಥಳ ಪರಿಶೀಲನೆ ನಡೆಸಿ ಚಿತ್ರಸಹಿತ ವರದಿ ಸಲ್ಲಿಸಲಿದೆ. ಅಗತ್ಯ ಬಿದ್ದಲ್ಲಿ ಸ್ವಾಧೀನಪಡಿಸಿಕೊಂಡ ರಸ್ತೆಯ ಜಾಗ ಗುರುತಿಸುವುದಕ್ಕಾಗಿ ಗ್ರಾಮ ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಗಳ ನಕ್ಷೆಗಳ ಸಹಕಾರ ಪಡೆಯಬಹುದು. ಇದರಿಂದ ರಸ್ತೆಯ ಹಿಂದಿನ ವಿಸ್ತೀರ್ಣ, ಸ್ವಾಧೀನಪಡಿಸಿಕೊಂಡ ಜಾಗ, ಫಲಾನುಭವಿಗಳಿಗೆ ನೀಡಬೇಕಾಗಿರುವ ಪರಿಹಾರ ಮೊತ್ತ ಮತ್ತಿತರ ವಿವರಗಳು ಲಭ್ಯವಾಗಲಿವೆ~ ಎಂದರು.



`ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಪ್ರತಿಯೊಂದು ರಸ್ತೆಗಳ ಇತಿಹಾಸ ತಯಾರಿಸಲಾಗುತ್ತಿದೆ. ಪ್ರತಿಯೊಂದು ರಸ್ತೆಗೂ ಪ್ರತ್ಯೇಕ ಗುರುತಿನ ಸಂಖ್ಯೆ (ಪಿಐಡಿ) ನೀಡಲಾಗುವುದು. ಇದರಿಂದ ಕಾಮಗಾರಿಗಳಿಗೆ ಜಾಬ್ ಕೋಡ್ ನೀಡುವ ಸಂದರ್ಭದಲ್ಲಿ ರಸ್ತೆಯ ಪಿಐಡಿ ಸಂಖ್ಯೆಯನ್ನೂ ಸೇರಿಸಲಾಗುವುದು. ಇದರಿಂದ ಪ್ರತಿ ವರ್ಷ ಒಂದೇ ರಸ್ತೆಯಲ್ಲಿ ಪದೇ ಪದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದು ತಪ್ಪಲಿದೆ. ಅಲ್ಲದೆ, ಪಿಐಡಿ ಸಂಖ್ಯೆ ಇಲ್ಲದ ರಸ್ತೆಗಳಲ್ಲಿ ಕಾಮಗಾರಿಗಳನ್ನು ನಿರ್ವಹಿಸಿದಲ್ಲಿ ಗುತ್ತಿಗೆದಾರರಿಗೆ ಬಿಲ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.



ಈ ನಡುವೆ, ಮಳೆಗಾಲದಲ್ಲಿ ಸಂಭವಿಸಲಿರುವ ಅನಾಹುತಗಳನ್ನು ತಪ್ಪಿಸಲು ಪಾಲಿಕೆ ಶಾಶ್ವತ ಯೋಜನೆಗಳನ್ನು ಕೈಗೊಳ್ಳುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ ಎಂದು ವಿರೋಧ ಪಕ್ಷದ ನಾಯಕ ಎಂ.ಕೆ. ಗುಣಶೇಖರ್ ಟೀಕಿಸಿದರು.



`ರಾಜಕಾಲುವೆಗಳ ಒತ್ತುವರಿ ತೆರವು, ಹೂಳೆತ್ತುವುದು, ತಡೆಗೋಡೆ ಎತ್ತರಿಸುವುದು ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ಪಾಲಿಕೆ ವಿಫಲವಾಗಿದೆ. ಎರಡು ವರ್ಷ ಮಳೆಗಾಲದಲ್ಲಿ ಮುಖ್ಯಮಂತ್ರಿಗಳೇ ಖುದ್ದು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರೂ ಶಾಶ್ವತ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ~ ಎಂದು ದೂರಿದರು.



ಕ್ರಿಯಾ ಯೋಜನೆ ಸಿದ್ಧ: ರಾಜಕಾಲುವೆಗಳ ಅಭಿವೃದ್ಧಿಗಾಗಿ 150 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಈ ಹಿಂದೆ ಇ-ಪ್ರೊಕ್ಯೂರ್‌ಮೆಂಟ್‌ನಡಿ ಕರೆದಿದ್ದ ಟೆಂಡರ್ ಪ್ರಕ್ರಿಯೆಗೆ ಗುತ್ತಿಗೆದಾರರಿಂದ ಸರಿಯಾದ ಸ್ಪಂದನೆ ಸಿಗಲಿಲ್ಲ. ಹೀಗಾಗಿ, ಗುತ್ತಿಗೆದಾರರ ಬಾಕಿ ಬಿಲ್ ಮೊತ್ತ 12 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎರಡನೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅರ್ಹ ಗುತ್ತಿಗೆದಾರರಿಗೆ 150 ಕೋಟಿ ರೂಪಾಯಿಗಳ ಕಾಮಗಾರಿ ವಹಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.



ರಾಜಕಾಲುವೆ ಹಾಗೂ ಬೃಹತ್ ಮಳೆ ನೀರಿನ ಚರಂಡಿಗಳ ಅಭಿವೃದ್ಧಿಗಾಗಿ 21 ಪ್ಯಾಕೇಜ್‌ಗಳ ಮೂಲಕ ಕೈಗೊಳ್ಳಲಿರುವ 510 ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಅವರು ಮಾಹಿತಿ ನೀಡಿದರು.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry