ಬಿಬಿಎಂಪಿ: ಸಿಐಡಿಗೆ ಕಡತ ಒಪ್ಪಿಸಿದ ಅಧಿಕಾರಿಗಳು

7

ಬಿಬಿಎಂಪಿ: ಸಿಐಡಿಗೆ ಕಡತ ಒಪ್ಪಿಸಿದ ಅಧಿಕಾರಿಗಳು

Published:
Updated:

ಬೆಂಗಳೂರು: ಬಿಬಿಎಂಪಿಯ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಿಭಾಗಗಳಲ್ಲಿ ನಡೆದ 1,539 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಲ್ಲಿನ ಅಕ್ರಮಕ್ಕೆ ಸಂಬಂಧಪಟ್ಟಂತೆ ಮಹತ್ವದ ಸಾಕ್ಷಿ ಎನಿಸಿರುವ ಬಹುಪಾಲು ಕಡತಗಳನ್ನು ಪಾಲಿಕೆ ಅಧಿಕಾರಿಗಳು ಶನಿವಾರ ಸಿಐಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿನ ಪೌರ ಸಭಾಂಗಣದಲ್ಲಿರುವ ಕೊಠಡಿಯನ್ನು ಶನಿವಾರ ಸಂಜೆ ತೆರೆದು ಕಡತಗಳನ್ನು ಸಾಗಿಸುವ ಪ್ರಕ್ರಿಯೆ ಆರಂಭವಾಯಿತು. ಮೂರು ವಿಭಾಗಗಳ ಕಾಮಗಾರಿಗಳಿಗೆ ಸಂಬಂಧಪಟ್ಟ ಕಡತಗಳನ್ನು ಪ್ರತ್ಯೇಕಿಸಲಾಯಿತು.ನಂತರ ಟೆಂಪೊದಲ್ಲಿ ಎರಡು ಬಾರಿ ಪ್ರತ್ಯೇಕವಾಗಿ ಕಡತಗಳನ್ನು ಸಿಐಡಿ ಕಚೇರಿಗೆ ಸಾಗಿಸಲಾಯಿತು. ಕಡತಗಳನ್ನು ಒಳಗೊಂಡಿದ್ದ ಅಲ್ಮೆರಾಗಳನ್ನು ಕೊಂಡೊಯ್ಯಲಾಯಿತು. ರಾಜರಾಜೇಶ್ವರಿನಗರ ಮತ್ತು ಮಲ್ಲೇಶ್ವರ ವಿಭಾಗಕ್ಕೆ ಸಂಬಂಧಪಟ್ಟ ದಾಖಲೆಗಳನ್ನಷ್ಟೇ ಸಾಗಿಸಲಾಗಿದ್ದು, ಗಾಂಧಿನಗರ ವಿಭಾಗದ ಕಡತಗಳು ಕೊಠಡಿಯಲ್ಲೇ ಉಳಿದಿವೆ ಎಂದು ಮೂಲಗಳು ತಿಳಿಸಿವೆ.ಪಾಲಿಕೆಯ ಹಿಂದಿನ ಆಯುಕ್ತರ ಸೂಚನೆ ಮೇರೆಗೆ ಈ ಮೂರು ವಿಭಾಗಗಳಲ್ಲಿ 2008ರಿಂದ ನಡೆದಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದ ಆಯುಕ್ತರ ತಾಂತ್ರಿಕ ಜಾಗೃತ ಕೋಶವು (ಟಿವಿಸಿಸಿ) ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದನ್ನು ಪತ್ತೆ ಹಚ್ಚಿ ಪ್ರಾಥಮಿಕ ವರದಿ ಸಲ್ಲಿಸಿತ್ತು.ಈ ನಡುವೆ ಮೂರು ವಿಭಾಗಗಳಿಗೆ ಸಂಬಂಧಪಟ್ಟ ಕಡತಗಳನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ಮಂಜುನಾಥರಾಜು ಅವರು ವಶಕ್ಕೆ ಪಡೆದಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.ನಿಯಮಗಳ ಪ್ರಕಾರ ಯಾವುದೇ ಅಧಿಕಾರಿ, ಕಾಮಗಾರಿಗಳಿಗೆ ಸಂಬಂಧಪಟ್ಟ ಕಡತಗಳನ್ನು ನೇರವಾಗಿ ಯಾವುದೇ ಸಮಿತಿಗೆ ಸಲ್ಲಿಸುವಂತಿಲ್ಲ. ಆಯುಕ್ತರು ಅಥವಾ ಸಂಬಂಧಪಟ್ಟ ಅಧಿಕಾರಿಗಳ ಮುಖಾಂತರವೇ ಕಡತಗಳನ್ನು ಸಲ್ಲಿಸಬೇಕು. ಹಾಗಿದ್ದರೂ ಈ ಮೂರು ವಿಭಾಗಗಳ ಅಧಿಕಾರಿಗಳು ಸಮಿತಿ ಅಧ್ಯಕ್ಷರಿಗೆ ನೇರವಾಗಿ ಕಡತಗಳನ್ನು ಸಲ್ಲಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಸುಮಾರು ಮೂರೂವರೆ ತಿಂಗಳ ಕಾಲ ಈ ಕಡತಗಳು ಪೌರ ಸಭಾಂಗಣದ ಕೊಠಡಿಯಲ್ಲಿದ್ದವು. ಇದೀಗ ಅಧಿಕಾರಿಗಳು ಬಹುಪಾಲು ಕಡತಗಳನ್ನು ಸಿಐಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry