ಮಂಗಳವಾರ, ಮೇ 18, 2021
31 °C

ಬಿಬಿಎಂಪಿ ಹೊಸ ಮೇಯರ್ ನಿರೀಕ್ಷೆಯಲ್ಲಿ...:ಬೆಂಗಳೂರು ಪ್ರಥಮ ಪ್ರಜೆ ಹೇಗಿರಬೇಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸಮಸ್ಯೆಗೆ ಸ್ಪಂದನೆ ಅಗತ್ಯ~

ಮೇಯರ್ ಹುದ್ದೆ ಅಲಂಕರಿಸುವವರು ಕನ್ನಡಿಗರಾಗಿರಬೇಕು. ಸಮಾಜಸೇವಕ ಆಗಿರಬೇಕು. ನಾಗರಿಕ ಸಮಸ್ಯೆಗಳಿಗೆ ಸ್ಪಂದಿಸುವ ಹೃದಯವಂತನಾಗಿರಬೇಕು. ಪಾಲಿಕೆಯಲ್ಲಿ ಸೇವೆ ಸಲ್ಲಿಸಿದ ಅನುಭವದೊಂದಿಗೆ ತಕ್ಕ ಮಟ್ಟಿಗೆ ಶಿಕ್ಷಣ ಪಡೆದಿರಬೇಕು. ನೀರು, ಸೂರು, ರಸ್ತೆ, ಆಹಾರ, ಆರೋಗ್ಯ, ಉದ್ಯೋಗ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಪಡಿಸಲು ಸಾಮಾಜಿಕ ಕಳಕಳಿಯ ಸಾಮರ್ಥ್ಯ ಇರಬೇಕು.ಕಾರ್ಯರೂಪಕ್ಕೆ ತರುವಂತಹ ಯೋಜನೆಗಳನ್ನು ರೂಪಿಸುವ ಮೂಲಕ ವ್ಯವಸ್ಥಿತವಾದ ಸುರಕ್ಷಿತ ನಗರದ ನಿರ್ಮಾಣಕ್ಕೆ ಮುಂದಾಗಬೇಕು. ಸಾರ್ವಜನಿಕ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಮನಸ್ಸು ಇರಬೇಕು. ಅಧಿಕಾರದ ಆಸೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇಲ್ಲದವರನ್ನು ಆರಿಸುವುದು ಸೂಕ್ತ. 

ಸು.ಜಗದೀಶ್, ಸಾಹಿತಿ

`ಅಭಿವೃದ್ಧಿಯ ಇಚ್ಛಾಶಕ್ತಿ ಇರಬೇಕು~

ಜಗತ್ತಿನಲ್ಲಿಯೇ ಬೆಂಗಳೂರು ಅತೀ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ. ಆದರೆ ಇಲ್ಲಿ ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ಅವ್ಯವಸ್ಥೆ, ವಸತಿ ಸಮಸ್ಯೆ, ಕೆರೆ ಒತ್ತುವರಿ, ಮಾಲಿನ್ಯ, ತಾಜ್ಯ ವಿಲೇವಾರಿ ಸಮಸ್ಯೆ, ಸಂಚಾರ ದಟ್ಟಣೆ, ಪಾರ್ಕಿಂಗ್ ಅವ್ಯವಸ್ಥೆ ಸಮಸ್ಯೆ ಗಂಭೀರ ಸ್ವರೂಪ ತಾಳಿದೆ.ಮೇಯರ್ ಆಗಲಿರುವ ವ್ಯಕ್ತಿ ಈ ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ಮೆಟ್ಟಿ ನಿಲ್ಲುವ, ಪರಿಹಾರೋಪಾಯಗಳನ್ನು ಕೈಗೊಳ್ಳುವ ಹಾಗೂ ಮುಖ್ಯವಾಗಿ ನಗರವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಬಲ್ಲಂತಹ ಸಮರ್ಥ ನಾಯಕನಾಗಿರಬೇಕು.ಮೇಯರ್ ಆಯ್ಕೆ ವಿಚಾರದಲ್ಲಿ ಯೋಗ್ಯತೆಗಿಂತಲೂ ಯೋಗವೇ ಮುಖ್ಯವಾಗಿರುವುದು ದುಃಖದ ಸಂಗತಿ. ಆದರೂ ಮೀಸಲಾತಿ ಆಧಾರದ ಮೇಲೆ ಆಯ್ಕೆಯಾಗಲಿರುವ ಯಾವುದೇ ಜಾತಿಯ ವ್ಯಕ್ತಿಯಾದರೂ ನಗರದ ಅಭಿವೃದ್ಧಿಯ ಬಗೆಗೆ ನಿರ್ದಿಷ್ಟ ಪರಿಕಲ್ಪನೆ ಹೊಂದಿರಬೇಕು. ಪಾಲಿಕೆಯ ಎಲ್ಲ ಸದಸ್ಯರನ್ನು ಪರಿಗಣನೆಗೆ ತೆಗೆದುಕೊಂಡು, ಪಕ್ಷಾತೀತವಾಗಿ ಪ್ರತಿಯೊಂದು ವಾರ್ಡ್ ಅಭಿವೃದ್ಧಿಗೊಳಿಸುವ ಇಚ್ಛಾಶಕ್ತಿ ಹೊಂದಿರಬೇಕು.

ಹರಿಶಂಕರ್ ಆರ್., ವಿದ್ಯಾರ್ಥಿ, ಸೆಂಟ್ರಲ್ ಕಾಲೇಜು

`ಹೆಚ್ಚಿನ ಅವಧಿ, ಅಧಿಕಾರ ನೀಡಬೇಕು~

ಮೇಯರ್ ಅಧಿಕಾರ ಅವಧಿಯನ್ನು ವಿಸ್ತರಿಸುವುದರ ಜತೆಗೆ, ಹೆಚ್ಚಿನ ಅಧಿಕಾರ ಕೂಡ ನೀಡಬೇಕು. ಇದರಿಂದ ಸಹಜವಾಗಿ ಮೇಯರ್ ಜವಾಬ್ದಾರಿ ಕೂಡ ಹೆಚ್ಚುತ್ತದೆ. ಹೀಗಾಗಿ, ನಮ್ಮ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು.

ಮೇಯರ್ ಆದವರಿಗೆ ನಗರದ ಅಭಿವೃದ್ಧಿ ಬಗ್ಗೆ ಕಾಳಜಿ ಹಾಗೂ ದೂರದೃಷ್ಟಿಯೂ ಇರಬೇಕು. ಸಮಸ್ಯೆಗಳನ್ನು ಯಾವ ರೀತಿ ಪರಿಹರಿಸಬೇಕು ಹಾಗೂ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಯಾವ ರೀತಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂಬುದರ ಬಗ್ಗೆ ಅರಿವಿರಬೇಕು. ಹೊಸದಾಗಿ ಮೇಯರ್ ಹುದ್ದೆಗೆ ಆಯ್ಕೆಯಾದವರು ನಗರಕ್ಕೆ ನಾಯಕತ್ವ ನೀಡಬೇಕು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಜಲಮಂಡಳಿ, `ಬೆಸ್ಕಾಂ~, ಬಿಎಂಟಿಸಿ ಮತ್ತಿತರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಜತೆ ಸಮನ್ವಯ ಸಾಧಿಸಿ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಬೇಕು.

 ಡಾ. ಎ.ರವೀಂದ್ರ, ಮುಖ್ಯಮಂತ್ರಿಯವರ ಸಲಹೆಗಾರರು (ನಗರ ವ್ಯವಹಾರ)`ಕೈಗೊಂಬೆಯಾಗದ ವ್ಯಕ್ತಿ ಆಯ್ಕೆ ಆಗಲಿ~

ವಿಶ್ವದಲ್ಲೇ ಅತಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ನಗರ ನಮ್ಮ ಬೆಂಗಳೂರು. ಅಲ್ಲದೆ ವಿಶ್ವದ ಎಲ್ಲಾ ಐಟಿ, ಬಿಟಿ ಕಂಪೆನಿಗಳ ಅಂತರ್ಜಾಲ ನೆಲೆಯಾಗಿ ಮತ್ತೊಂದು ಸಿಲಿಕಾನ್ ಸಿಟಿಯಾಗಿ ಬೆಂಗಳೂರು ಪರಿವರ್ತನೆಯಾಗುತ್ತಿದೆ.ಇಂತಹ ಬೃಹತ್ ಬೆಂಗಳೂರಿಗೆ ಸಮಸ್ತ ಜನರ ಹಿತದೃಷ್ಟಿ ಕಾಯುವ ಆಧುನಿಕ ಮನೋಭಾವದ, ಪ್ರಾಮಾಣಿಕ, ವಿದ್ಯಾವಂತ ಮೇಯರ್ ಅತ್ಯಗತ್ಯ. ಮುಖ್ಯವಾಗಿ ನಗರದ ಕೊಳಚೆ ಪ್ರದೇಶಗಳ ನಿವಾಸಿಗಳಿಂದ ಹಿಡಿದು ಅತ್ಯಾಧುನಿಕ ಬಡಾವಣೆಗಳ ಪ್ರಬುದ್ಧ ನಾಗರಿಕರ ಜ್ವಲಂತ ಸಮಸ್ಯೆಗಳ ಬಗ್ಗೆ ನಿಷ್ಪಕ್ಷಪಾತವಾಗಿ ಅಧಿಕಾರ ನಡೆಸುವ ಇಚ್ಛಾಶಕ್ತಿ ಇರಬೇಕು. ಅಧಿಕಾರಶಾಹಿ ವ್ಯಕ್ತಿಗಳ ಕೈಗೊಂಬೆಯಾಗದೆ ಎಲ್ಲಾ ಸವಾಲುಗಳನ್ನು ನಿರ್ವಹಿಸುವ ವ್ಯಕ್ತಿ ಮೇಯರ್ ಆಗಲಿ.

ಡಿ.ಎಸ್.ವೆಂಕಟಾಚಲಪತಿ, ನಿವೃತ್ತ ಬ್ಯಾಂಕ್ ಅಧಿಕಾರಿ, ಯಲಹಂಕ

`ಖಾಸಗಿ ಸಹಕಾರಪಡೆಯಲು ಸಿದ್ಧರಿರಬೇಕು~

ನೂತನ ಮೇಯರ್ ಆಗುವವರು 364 ದಿನವೂ ನಗರದ ಅಭಿವೃದ್ಧಿಗೆ ಕೆಲಸ ಮಾಡುವ ಮನೋಭಾವ ಉಳ್ಳವರು ಆಗಿರಬೇಕು. ಕಸ ವಿಲೇವಾರಿ, ಕುಡಿಯುವ ನೀರಿನ ವಿತರಣೆ ಸೇರಿದಂತೆ ನಗರದಲ್ಲಿ ನೂರಾರು ಸಮಸ್ಯೆಗಳು ಇವೆ. ಅವುಗಳನ್ನು ಅರ್ಥಮಾಡಿಕೊಂಡು ಬಗೆ ಹರಿಸುವವರು ಮೇಯರ್ ಆಗಿ ಆಯ್ಕೆ ಆಗಬೇಕು.ನಗರದ ಸಮಸ್ಯೆಯನ್ನು ಬಗೆಹರಿಸಲು ನೆರವು ನೀಡಲು ಸಂಘ ಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ಸಿದ್ಧರಿದ್ದಾರೆ. ನೂತನ ಮೇಯರ್ ಅಂತವರ ಸಹಕಾರ ಪಡೆಯಬೇಕಿದೆ. ನಗರದ ಸರ್ವತೋಮುಖ ಅಭಿವೃದ್ಧಿಯ ಕನಸು ಇರುವ ಉತ್ತಮ ವ್ಯಕ್ತಿ ಮೇಯರ್ ಆಗಬೇಕು.

ಬಿ.ಎನ್.ವಿಜಯಕುಮಾರ್ಜಯನಗರ ಶಾಸಕ

`ತಜ್ಞರ ಸಮಿತಿ ರಚಿಸಿ~

ಮಹಾನಗರ ಶೀಘ್ರವಾಗಿ ಬೆಳೆಯುತ್ತಿದೆ. ಅದೇ ವೇಗದಲ್ಲಿ ಸೌಲಭ್ಯಗಳನ್ನು ಒದಗಿಸಬೇಕಿದೆ. ನಗರದಲ್ಲಿ ನಾಗರಿಕ ಸೌಲಭ್ಯದ ಕೊರತೆ ಇದೆ. ಕಸ ವಿಲೇವಾರಿ ಸಮಸ್ಯೆ, ಶುಚಿತ್ವ, ರಸ್ತೆ ವಿಸ್ತರಣೆಗೆ ತೊಡಕು, ಮಳೆಗಾಲದಲ್ಲಿ ಎದುರಾಗುವ ತೊಂದರೆಗಳ ಬಗ್ಗೆ ಗಮನ ಹರಿಸಬೇಕಿದೆ.ಎಲ್ಲ ಸಮಸ್ಯೆಗಳನ್ನು ಒಬ್ಬನಿಂದಲೇ ಬಗೆಹರಿಸುವುದು ಅಸಾಧ್ಯ. ಅದಕ್ಕೊಂದು ತಜ್ಞರ ಸಮಿತಿ ಮಾಡಿ ತುರ್ತು ಕೆಲಸಗಳಿಗೆ ಮೊದಲ ಆದ್ಯತೆ ನೀಡಬೇಕು. ನೂತನ ಮೇಯರ್ ಆಗುವವರು ಈ ವಿಚಾರಗಳ ಬಗ್ಗೆ ಗಮನ ಹರಿಸಬೇಕು.

ಸುಬ್ಬಣ್ಣಬಿಜೆಪಿ ನಗರ ಘಟಕದ ಅಧ್ಯಕ್ಷ

`ಸಚಿವರ ಪ್ರಭಾವಕ್ಕೆ ಮಣಿಯಬಾರದು~

ಮುಂದಿನ ಮೇಯರ್ ಬೇರೆಯವರ ಮಾತಿಗೆ ಮಣಿಯಬಾರದು. ಪ್ರತಿ ಆರು ತಿಂಗಳಿಗೊಮ್ಮೆ ಲೋಕಾಯುಕ್ತ ಅಥವಾ ಸಿಬಿಐ ಸಂಸ್ಥೆ ಮೇಯರ್ ಚಟುವಟಿಕೆಗಳನ್ನು ಪರಿಶೀಲಿಸಬೇಕು. ಮೇಯರ್ ಹತ್ತಿರದ ಸಂಬಂಧಿಗಳು ತಮ್ಮ ಆಸ್ತಿ ಘೋಷಣೆ ಮಾಡಬೇಕು. ಮೇಯರ್ ಆಗುವವರು ಸಚಿವರು ಅಥವಾ ಶಾಸಕರ ಪ್ರಭಾವಕ್ಕೆ ಒಳಗಾಗಬಾರದು.

ಡಾ. ಆರ್.ಎಂ.ಎನ್ ರಮೇಶ್ ಬಿಡಿಎಸ್‌ಎಸ್ ಅಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.