ಶುಕ್ರವಾರ, ಫೆಬ್ರವರಿ 26, 2021
25 °C
ಪಾಲಿಕೆಯ 2013–14ನೇ ಸಾಲಿನ ಹಣಕಾಸು ವರ್ಷದ ಲೆಕ್ಕ ಪರಿಶೋಧನೆ

ಬಿಬಿಎಂಪಿ: ₹ 1,564 ಕೋಟಿ ಬಳಕೆಗೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಬಿಎಂಪಿ: ₹ 1,564 ಕೋಟಿ ಬಳಕೆಗೆ ಆಕ್ಷೇಪ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2013–14ನೇ ಸಾಲಿನ ಹಣಕಾಸು ವರ್ಷದಲ್ಲಿ ₹ 1,564.26 ಕೋಟಿ ಮೊತ್ತದ ಬಳಕೆ ಕುರಿತಂತೆ ಮುಖ್ಯ ಲೆಕ್ಕ ಪರಿಶೋಧಕರು ಆಕ್ಷೇಪ ಎತ್ತಿದ್ದಾರೆ. ಅದರಲ್ಲಿ ಬಿಬಿಎಂಪಿ ಹಾನಿ ಅನುಭವಿಸಲು ಕಾರಣವಾದ ವ್ಯಕ್ತಿಗಳಿಂದ ₹ 210. 63 ಕೋಟಿಯನ್ನು ವಸೂಲಿ ಮಾಡಬೇಕು ಎಂದು ಶಿಫಾರಸು ಮಾಡಿದ್ದಾರೆ.2013–14ನೇ ಸಾಲಿನ ಹಣಕಾಸು ವರ್ಷದ ವ್ಯವಹಾರಗಳ ಕುರಿತು ಸಮಗ್ರವಾಗಿ ಪರಿಶೋಧನೆ ನಡೆಸಿರುವ ಮುಖ್ಯ ಲೆಕ್ಕ ಪರಿಶೋಧಕರು 634 ಪುಟಗಳ ವರದಿ ನೀಡಿದ್ದಾರೆ. ಲೆಕ್ಕ ಪರಿಶೋಧನೆಗಾಗಿ ಪಾಲಿಕೆ ಆರ್ಥಿಕ ವ್ಯವಹಾರಗಳನ್ನು ಸಾಮಾನ್ಯ ಆಡಳಿತ, ಶಿಕ್ಷಣ, ಕಂದಾಯ, ಆರೋಗ್ಯ ಹಾಗೂ ಕಾಮಗಾರಿ ವಿಭಾಗ ಎಂದು ವಿಂಗಡಿಸಲಾಗಿದೆ. ಕಂದಾಯ ಹಾಗೂ ಕಾಮಗಾರಿ ವಿಭಾಗಗಳಲ್ಲಿ ಅತಿ ಹೆಚ್ಚಿನ ಅವ್ಯವಹಾರಗಳು ನಡೆದಿರುವುದು ಬೆಳಕಿಗೆ ಬಂದಿದೆ.‘ಸಂಸ್ಥೆಗೆ ಬರಬೇಕಾದ ಆಸ್ತಿ ತೆರಿಗೆ, ಸಂಸ್ಥೆಗಳ ಕಟ್ಟಡಗಳ ಬಾಡಿಗೆ ಇತ್ಯಾದಿಗಳ ವಿವರವನ್ನು ಸರಿಯಾಗಿ ನಿರ್ವಹಿಸಿಲ್ಲ. ಇದರಿಂದ ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಹಿನ್ನಡೆಯಾಗಿದೆ’ ಎಂದು ಆಕ್ಷೇಪ ಎತ್ತಲಾಗಿದೆ.‘ಪಾಲಿಕೆಯ ನಗದು ಪುಸ್ತಕವನ್ನು ನಿಯಮಬದ್ಧವಾಗಿ ನಿರ್ವಹಣೆ ಮಾಡಿಲ್ಲ. ವೆಚ್ಚದ ಮೊತ್ತವನ್ನು ದಾಖಲಿಸಲು ಇಲಾಖಾವಾರು ವೆಚ್ಚದ ವಹಿಯನ್ನು ಇಡಲಾಗಿದೆ. ಇದರಲ್ಲಿ ಆಯಾ ಇಲಾಖೆಗಳಿಗೆ ಸಂಬಂಧಿಸಿದ ವೆಚ್ಚಗಳಿಗೆ ಪಾವತಿಸಿದ ಚೆಕ್‌ಗಳ ಸಂಖ್ಯೆ ಮತ್ತು ಮೊಬಲಗು ಮಾತ್ರ ನಮೂದಿಸಲಾಗಿದ್ದು, ವೆಚ್ಚದ ಸಂಕ್ಷಿಪ್ತ ವಿವರ ನಮೂದಿಸಿಲ್ಲ’ ಎಂದು ತಿಳಿಸಲಾಗಿದೆ.‘ನಗದು ಪುಸ್ತಕದ ಪಾವತಿಯ ಭಾಗದಲ್ಲಿ ವೆಚ್ಚದ ಮೊತ್ತ ನಮೂದಿಸಿದ್ದು, ಸ್ವೀಕೃತಿ ವಿಭಾಗದಲ್ಲಿ ಯಾವುದೇ ವಿವರ ನಮೂದಿಸಿಲ್ಲ. ಇದರಿಂದ ವೆಚ್ಚವನ್ನು ಯಾವ ಆದಾಯದ ಮೂಲದಿಂದ ಭರಿಸಲಾಗಿದೆ ಎಂಬ ವಿವರ ಲಭ್ಯವಾಗಿಲ್ಲ ಮತ್ತು ವಿವಿಧ ಆದಾಯದ ಮೂಲಗಳಿಂದ ಸ್ವೀಕೃತವಾಗಿರುವ ಆದಾಯದ ವಿವರವೂ ಸಿಕ್ಕಿಲ್ಲ’ ಎಂದು ದೋಷಗಳ ಪಟ್ಟಿ ಮಾಡಲಾಗಿದೆ.‘ನಗದು ಪುಸ್ತಕವನ್ನು ಪ್ರತಿದಿನ ಇಲ್ಲವೆ ಮಾಸಿಕವಾಗಿ ಮುಕ್ತಾಯಗೊಳಿಸಿ ದೃಢೀಕರಿಸಿಲ್ಲ. ನಗದು ಪುಸ್ತಕದ ಲೆಕ್ಕಗಳನ್ನು ಬ್ಯಾಂಕ್ ಲೆಕ್ಕಗಳೊಂದಿಗೆ ಸಮನ್ವಯಗೊಳಿಸಿ  ದೃಢೀಕರಿಸಿಲ್ಲ. ಪಾಲಿಕೆಯ ವಿವಿಧ ಆದಾಯಗಳ ಮೂಲಗಳಿಂದ ವಿವಿಧ ಕಚೇರಿಗಳಲ್ಲಿ ವಸೂಲಾಗುವ ಮೊತ್ತಗಳನ್ನು ಮುಖ್ಯ ಖಾತೆಗೆ ವರ್ಗಾವಣೆ ಮಾಡಿದ ಕುರಿತು ನಗದು ಪುಸ್ತಕದ ಸ್ವೀಕೃತಿ ವಿಭಾಗದಲ್ಲಿ ನಮೂದು ಮಾಡಿಲ್ಲ. ಇದರಿಂದ ಆದಾಯದ ಲೆಕ್ಕಗಳ ಮತ್ತು ಮುಖ್ಯ ಖಾತೆಗೆ ವರ್ಗಾವಣೆಯಾದ ವಿವರಗಳ ಅಧಿಕೃತ ಮಾಹಿತಿ ದೊರೆಯುವುದಿಲ್ಲ’ ಎಂದು ಆಕ್ಷೇಪ ಎತ್ತಲಾಗಿದೆ.‘ಹಣಕಾಸಿನ ವ್ಯವಹಾರಗಳ ಮೇಲೆ ಆಂತರಿಕ ನಿಯಂತ್ರಣ ಸಮರ್ಪಕವಾಗಿಲ್ಲ. ಆಯವ್ಯಯ ಅಂದಾಜುಗಳು ಅವಾಸ್ತವಿಕವಾಗಿವೆ ಮತ್ತು ವಾರ್ಷಿಕ ಲೆಕ್ಕಗಳು ನೈಜ ಅಂಕಿ-ಅಂಶಗಳನ್ನು ಒಳಗೊಂಡಿಲ್ಲ. ಅಂಕಿ ಅಂಶಗಳ ಪುಷ್ಟೀಕರಣಗೊಳಿಸುವ ಪೂರಕ ದಾಖಲೆಗಳನ್ನು ನಿರ್ವಹಿಸಿಲ್ಲ. ಸರ್ಕಾರದ ಅನುಮತಿ ಇಲ್ಲದೆ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ’ ಎಂದು ದೋಷಗಳನ್ನು ಎತ್ತಿ ತೋರಲಾಗಿದೆ. ‘ಈ ಎಲ್ಲಾ ದೋಷಗಳ ಕುರಿತು ಹಿಂದಿನ ಸಾಲುಗಳ ಲೆಕ್ಕಪರಿಶೋಧನಾ ವರದಿಯಲ್ಲಿ ಆಕ್ಷೇಪಿಸಲಾಗಿದ್ದರೂ ಸಹ ಯಾವುದೇ ಸುಧಾರಣೆ ಆಗಿಲ್ಲ’ ಎಂದು ತಿಳಿಸಲಾಗಿದೆ.‘2012–13ನೇ ಸಾಲಿನವರೆಗೆ ಬಿಡುಗಡೆಯಾದ ಲೆಕ್ಕ ಪರಿಶೋಧನಾ ವರದಿಗಳಲ್ಲಿ ಒಟ್ಟಾರೆ ₹ 1,080 ಕೋಟಿ ವಸೂಲಾತಿಗೆ ಶಿಫಾರಸು ಮಾಡಲಾಗಿದೆ. ಆದರೆ ಬಾಕಿ ಉಳಿದಿರುವ ಆಕ್ಷೇಪಣೆಗಳ ತೀರುವಳಿ ತುಂಬಾ  ಮಂದಗತಿಯಲ್ಲಿ ಸಾಗಿದ್ದು ಈ ಕಾರ್ಯಕ್ಕೆ ಹೊಸ ರೂಪ ನೀಡಿ ಚುರುಕುಗೊಳಿಸುವ ಅಗತ್ಯವಿದೆ’ ಎಂದು ವರದಿಯಲ್ಲಿ ಪ್ರತಿಪಾದಿಸಲಾಗಿದೆ.‘ನಿವೃತ್ತ ನೌಕರರ ಪಿಂಚಣಿ ಇತ್ಯರ್ಥಿ ಸುವ ಪಿಂಚಣಿ ವಿಭಾಗ ಅವ್ಯವಸ್ಥೆಯ ಆಗರವಾಗಿದ್ದು 2008–09ರ ಸಾಲಿನಿಂದ ನಿವೃತ್ತ ನೌಕರರ ಪಿಂಚಣಿ ಇತ್ಯರ್ಥದಲ್ಲಿ ಸುಮಾರು ₹ 3 ಕೋಟಿ ಹೆಚ್ಚುವರಿ ಪಾವತಿಯಾಗಿದೆ. ಈಗಲೂ ಇದೇ ಪ್ರವೃತ್ತಿ ಮುಂದುವರೆದಿದೆ. ಆದ್ದರಿಂದ ಈ ಶಾಖೆಗೆ ಕಾಯ್ದೆ ಮತ್ತು ನಿಯಮ ಅರಿತ ನೌಕರರನ್ನು ನಿಯೋಜಿಸುವುದು ಅಗತ್ಯ’ ಎಂದು ತಿಳಿಸಲಾಗಿದೆ.‘ಪಾವತಿಗಳಲ್ಲಿ ಆಗುತ್ತಿರುವ ದೋಷ ತಗ್ಗಿಸುವ ನಿಟ್ಟಿನಲ್ಲಿ ಪ್ರತಿ ಬಿಲ್‌ ಪಾವತಿಸುವ ಮುನ್ನ ಪ್ರೀ ಆಡಿಟ್‌ಗೆ ಒಳಪಡಿಸುವ ಪದ್ಧತಿಯನ್ನು ತರಬೇಕು. ನೌಕರರ ಮುಂಬಡ್ತಿ ವೇತನ ನಿಗದಿ ಮಾಡುವಾಗ ಹೆಚ್ಚುವರಿ ಪಾವತಿಯಾದ ಉದಾಹರಣೆಗಳಿದ್ದು ಸೇವಾ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಎಲ್ಲಾ ಹಂತದಲ್ಲಿ ಪ್ರತಿಯೊಂದು ಕಾಮಗಾರಿಯ ಪರಿವೀಕ್ಷಣೆಯನ್ನು ಬಲಪಡಿಸಬೇಕು’ ಎಂದು ಶಿಫಾರಸು ಮಾಡಲಾಗಿದೆ.

*

ಲೆಕ್ಕ ಪರಿಶೋಧಕರ ನೀಡಿರುವ ವರದಿಯಿಂದ ಆರ್ಥಿಕ ವ್ಯವಸ್ಥೆ ನಿರ್ವಹಣೆಯಲ್ಲಿ ಆಗಿರುವ ಲೋಪಗಳು ಗಮನಕ್ಕೆ ಬಂದಿವೆ. ಲೋಪಗಳನ್ನು ಸರಿಪಡಿಸುವ ಪ್ರಯತ್ನಗಳು ಈಗಾಗಲೇ ನಡೆದಿವೆ.

–ಬಿ.ಎನ್‌. ಮಂಜುನಾಥ್‌ ರೆಡ್ಡಿ, ಮೇಯರ್‌

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.