ಬಿಬಿಎಂ ಪಿನ್ ಕೊಡುವಂತೆ ಪೀಡಿಸಿದ್ದಳು: ಸಿದ್ಧಾರ್ಥ್

7

ಬಿಬಿಎಂ ಪಿನ್ ಕೊಡುವಂತೆ ಪೀಡಿಸಿದ್ದಳು: ಸಿದ್ಧಾರ್ಥ್

Published:
Updated:
ಬಿಬಿಎಂ ಪಿನ್ ಕೊಡುವಂತೆ ಪೀಡಿಸಿದ್ದಳು: ಸಿದ್ಧಾರ್ಥ್

ನವದೆಹಲಿ (ಪಿಟಿಐ): ಆಸ್ಟ್ರೇಲಿಯಾದ ಆಟಗಾರ ಲೂಕ್ ಪಾಮರ್ಸ್‌ಬ್ಯಾಚ್ ಮೇಲೆ ಮಾನಭಂಗ ಯತ್ನದ ಆರೋಪ ಮಾಡಿರುವ ಅಮೆರಿಕ ಮಹಿಳೆಯು ತಮ್ಮ ಬಿಬಿಎಂ(ಬ್ಲ್ಯಾಕ್‌ಬೆರ‌್ರಿ ಮೆಸೆಂಜರ್)ನ ಪಿನ್ ಸಂಕೇತ ಕೊಡುವಂತೆ ಪೀಡಿಸಿದ್ದಳೆಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ದೇಶಕ ಸಿದ್ದಾರ್ಥ್ ಮಲ್ಯ ಹೇಳಿದ್ದಾರೆ.

ಇತ್ತ ಪಾಮರ್ಸ್‌ಬ್ಯಾಚ್ ಅವರನ್ನು ಪೊಲೀಸರು ಬಂಧಿಸುತ್ತಿದ್ದಂತೆಯೇ ಅಸಮಾಧಾನಗೊಂಡಿದ್ದ ಮಲ್ಯ ಆತುರದಲ್ಲಿ `ಟ್ವಿಟರ್~ನಲ್ಲಿ ಇಂಥದೊಂದು ಆರೋಪವನ್ನು ಅಮೆರಿಕ ಮಹಿಳೆಯ ಮೇಲೆ ಹೊರಿಸಿದ್ದರು.

`ಕಳೆದ ರಾತ್ರಿ ಅವಳು ನನ್ನ ಬೆನ್ನಿಗೇ ಬಿದ್ದಿದ್ದಳು. ಮತ್ತೆ ಮತ್ತೆ ನನ್ನ ಬಿಬಿಎಂ ಪಿನ್ ಕೊಡುವಂತೆ ಕೇಳುತ್ತಿದ್ದಳು~ ಎಂದು ಸಂದೇಶ ಹರಿಬಿಟ್ಟಿದ್ದರು ವಿಜಯ್ ಮಲ್ಯ ಪುತ್ರ. ಆದರೆ ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ತಪ್ಪು ಅರಿತುಕೊಂಡರು. ಆದರೆ ಅದಕ್ಕಾಗಿ ಕ್ಷಮೆ ಕೋರಲಿಲ್ಲ.

ಆನಂತರ ತಮ್ಮ ಟ್ವಿಟ್ ಸಂದೇಶವನ್ನು ಸಮರ್ಥಿಸಿಕೊಂಡ ಅವರು `ಅವಳ ವ್ಯಕ್ತಿತ್ವವನ್ನು ನಾನು ಪ್ರಶ್ನಿಸಿಲ್ಲ. ಆದರೆ ನಡೆದ ಸತ್ಯ ಘಟನೆಯನ್ನು ವಿವರಿಸಿದ್ದೇನೆ~ ಎಂದು ಖಾಸಗಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

`ನೇರವಾಗಿ ಸತ್ಯ ಹೇಳಿದ್ದೇನೆ. ಒಮ್ಮೆ ನೀಡಿದ ಹೇಳಿಕೆಯನ್ನು ನಾನೆಂದೂ ಹಿಂದೆ ಪಡೆಯುವುದಿಲ್ಲ. ಅವಳು ವರ್ತಿಸಿದ ರೀತಿಯನ್ನು ಯಥಾವತ್ತಾಗಿ ಬಹಿರಂಗಗೊಳಿಸಿದ್ದೇನೆ~ ಎಂದು ಸ್ಪಷ್ಟಪಿಸಿದ್ದಾರೆ.

`ಲೂಕ್ ತಪ್ಪು ಮಾಡಿದ್ದಾನೆ. ಅದಕ್ಕಾಗಿ ತಕ್ಕ ಕ್ರಮ ಎದುರಿಸಲೇಬೇಕು. ಆದರೆ ಅವಳು ತನ್ನ ಭಾವಿಪತಿಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಿದ್ದು ಸರಿಯಲ್ಲ. ಪಾರ್ಟಿಯಲ್ಲಿ ಆ ಮಹಿಳೆಯು ತನ್ನ ಭಾವಿಪತಿಯೊಂದಿಗೆ ಇರುವ ರೀತಿಯಲ್ಲಿ ವರ್ತಿಸಿರಲೇ ಇಲ್ಲ~ ಎಂದಿರುವ ಸಿದ್ದಾರ್ಥ್ `ಜನರಿಗೆ ವಿವಾದಗಳೇ ಆಸಕ್ತಿಕರ ಎನಿಸುತ್ತಿವೆ. ಶಾರೂಖ್ ಪ್ರಕರಣ, ಈಗ ಇದು... ಜನರು ಇದೆಲ್ಲವನ್ನು ಬಿಟ್ಟು ಕ್ರಿಕೆಟ್ ಆಟವನ್ನು ಆನಂದಿಸಬೇಕು. ಈ ಎಲ್ಲ ಗದ್ದಲದಲ್ಲಿ ಕ್ರಿಸ್ ಗೇಲ್ ಗಳಿಸಿದ ಅದ್ಭುತವಾದ ಶತಕ ಮರೆತು ಹೋಯಿತು~ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry