ಬಿರಿಯಾನಿ ಅಡ್ಡದ ಸ್ವಾದ ಕಥಾನಕ

ಶನಿವಾರ, ಜೂಲೈ 20, 2019
22 °C
ರಸಾಸ್ವಾದ

ಬಿರಿಯಾನಿ ಅಡ್ಡದ ಸ್ವಾದ ಕಥಾನಕ

Published:
Updated:

ಮಾಂಸಾಹಾರದಲ್ಲಿ ಎಲ್ಲ ಖಾದ್ಯಗಳದ್ದೂ ಒಂದು ತೂಕವಾದರೆ, ಬಿರಿಯಾನಿಯದ್ದೇ ಒಂದು ತೂಕ. ಬಿರಿಯಾನಿ ಎಲ್ಲ ಮಾಂಸಹಾರಿಗಳಿಗೂ ಇಷ್ಟವಾಗುವುದಿಲ್ಲ. ಆದರೆ, ಅದರ ರುಚಿ ಹತ್ತಿಸಿಕೊಂಡವರು ಮತ್ತೆ ಮತ್ತೆ ಅದನ್ನು ಸವಿಯಬಯಸುತ್ತಾರೆ.ಬಿಟ್ಟಿರಲು ಬಯಸುವುದಿಲ್ಲ. ಸಾಮಾನ್ಯವಾಗಿ ಎಲ್ಲರಿಗೂ ಬಿರಿಯಾನಿಯನ್ನು ರುಚಿಯಾಗಿ ಮಾಡಲು ಬರುವುದಿಲ್ಲ. ಅದಕ್ಕೆ ಬಿರಿಯಾನಿ ಮೋಹಿಗಳು ಹೀಗನ್ನುತ್ತಾರೆ: `ಬಿರಿಯಾನಿ ತಯಾರಿಕೆಗೆ ಧ್ಯಾನಸ್ಥ ಭಾವ ಬೇಕು'.ರುಚಿಯಾದ ಬಿರಿಯಾನಿ ತಯಾರು ಮಾಡಲು ಕೆಲವು ನಿಯಮಗಳನ್ನು ಪಾಲಿಸಬೇಕು. ಮೊದಲನೆಯದಾಗಿ, ಬಿರಿಯಾನಿಯ ಶೇ 80ರಷ್ಟು ರುಚಿ ಮಾಂಸದ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಹಾಗಾಗಿ ಬಿರಿಯಾನಿಗೆ ಬಳಸುವ ಮಾಂಸದ ಆಯ್ಕೆ ಬಗ್ಗೆ ತುಂಬ ಜಾಗೃತರಾಗಿಬೇಕು.

ಇದಕ್ಕೆ ಬಳಸುವ ಮಾಂಸದ ಗಾತ್ರ ತುಂಬಾ ದಪ್ಪವೂ ಇರಬಾರದು, ಸಣ್ಣ ಕೂಡ ಆಗಿರಬಾರದು. ಮಧ್ಯಮ ಗಾತ್ರದಲ್ಲಿದ್ದರೆ ತಿನ್ನಲು ಸೊಗಸು. ಅತಿ ಕೆಂಪೂ ಅಲ್ಲದ ತೀರಾ ಬಿಳಿಯೂ ಅಲ್ಲದ, ಸ್ವಲ್ಪ ಗುಲಾಬಿ ಬಣ್ಣದಲ್ಲಿರುವ ಮಾಂಸವನ್ನು ಬಿರಿಯಾನಿಗೆ ಆಯ್ದುಕೊಳ್ಳಬೇಕು. ಬಳಸುವ ಪ್ರತಿ ಮಾಂಸದ ತುಂಡಿನಲ್ಲೂ ಒಂದು ಮೂಳೆ, ಸ್ಪಲ್ಪ ಚರ್ಬಿ (ಫ್ಯಾಟ್) ಇರುವಂತೆ ನೋಡಿಕೊಳ್ಳಬೇಕು.ಮಾಂಸದ ಆಯ್ಕೆಯ ನಂತರ ಬಿರಿಯಾನಿಗೆ ಬಳಸುವ ಅಕ್ಕಿಯ ಆಯ್ಕೆಯಲ್ಲೂ ನಿಗಾ ವಹಿಸಬೇಕು.

ಬಿರಿಯಾನಿಯಲ್ಲಿ ಬಾಸುಮತಿ ರೈಸ್‌ನ ಪ್ರಮಾಣ ಕಡಿಮೆ ಇದ್ದಷ್ಟೂ ಖಾದ್ಯದ ರುಚಿ ಅದ್ಭುತವಾಗಿರುತ್ತದೆ. ಶೇ 85ರಷ್ಟು ಸೋನಾ ಮಸೂರಿ ಬುಲೆಟ್ ಅಕ್ಕಿ ಜತೆಗೆ ಸುವಾಸನೆಗೆಂದು ಶೇ 15ರಷ್ಟು ಬಾಸುಮತಿ ರೈಸ್ ಬಳಸಿದರೆ ರುಚಿ ಚೆನ್ನಾಗಿರುತ್ತದೆ. ಮಾಂಸ, ಅಕ್ಕಿಯ ಆಯ್ಕೆ ನಂತರ ಅದಕ್ಕೆ ಬೇಕಾದ ಸಾಂಬಾರ ಪದಾರ್ಥಗಳೆಲ್ಲವನ್ನೂ ತಯಾರು ಮಾಡಿಕೊಂಡು ಒಲೆಯ ಮೇಲಿಟ್ಟು ಹದವಾಗಿ ಬೇಯಿಸಿದರೆ ಅಲ್ಲಿಗೆ ಬಿರಿಯಾನಿ ತಯಾರಿ ಪರಿಪೂರ್ಣವಾದಂತೆ.

ಘಮ ಘಮಿಸುವ ಬಿರಿಯಾನಿಯನ್ನು ಒಂದು ದೊನ್ನೆಗೆ ಹಾಕಿಕೊಂಡು, ಅದರ ಮೇಲೊಂದಿಷ್ಟು ನಿಂಬೆ ರಸ ಹಿಂಡಿ ಜತೆಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಸಲಾಡ್ ಸೇರಿಸಿ ಬಿರಿಯಾನಿ ಸವಿದರೆ, ಹಾ... ಹಾ... ನಾಲಗೆ ತಂತಾನೇ `ಸೂಪರ್' ಎಂದು ಲೊಟ್ಟೆ ಹೊಡೆಯುತ್ತದೆ.ಇಂಥದ್ದೊಂದು ನಾಟಿ ಬಿರಿಯಾನಿ ಹವಾ ಈಗ ನಗರದೆಲ್ಲೆಡೆ ಹಬ್ಬುತ್ತಿದೆ. ಬಿರಿಯಾನಿ ಮೋಹಿಗಳು ಈ ಅಡ್ಡಾಗೆ ಧಾವಿಸಿ ತಮಗಿಷ್ಟವಾಗ ಬಿರಿಯಾನಿಯನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದಾರೆ. ಇಲ್ಲಿ ಬಿರಿಯಾನಿ ಬಿಟ್ಟು ಬೇರೇನೂ ಸಿಗುವುದಿಲ್ಲ. ಕಣ್ಣಿಗೆ ಮುದ ನೀಡುವ ಇಲ್ಲಿನ ಒಳಾಂಗಣ ವಿನ್ಯಾಸಕ್ಕೆ ಕಲೆಯ ಸ್ಪರ್ಶವಿದೆ. ಇಲ್ಲಿಗೆ ಬರುವ ಬಿರಿಯಾನಿ ಮೋಹಿಗಳು ಮಟನ್, ಚಿಕನ್ ಬಿರಿಯಾನಿ ರುಚಿ ಜತೆಗೆ ರೆಸ್ಟೋರಾದಲ್ಲಿನ ಹಳ್ಳಿ ಸೊಗಡಿನ ಕಲೆಯನ್ನು ಆಸ್ವಾದಿಸುತ್ತಿದ್ದಾರೆ.

ನಾಟಿ ಬಿರಿಯಾನಿ ಸ್ಪೆಶಲ್

ಇಲ್ಲಿ ಬಿರಿಯಾನಿ ಬಿಟ್ಟು ಬೇರೇನೂ ಸಿಗುವುದಿಲ್ಲ. ಅದರಲ್ಲೂ ವೆರೈಟಿ ಏನೂ ಇಲ್ಲ. ಅದಕ್ಕೆ ಕಾರಣವೂ ಇದೆ. ಅದನ್ನು ಉದಯ್ ಹೀಗೆ ವಿವರಿಸುತ್ತಾರೆ: `ನಗರದಲ್ಲಿ ನಾನಾ ಬಗೆಯ ಬಿರಿಯಾನಿಗಳು ಲಭ್ಯ. ಆದರೆ, ನಾಟಿ ಬಿರಿಯಾನಿ ಸಿಕ್ಕುವುದು ತುಂಬಾ ಕಮ್ಮಿ. ಹಳ್ಳಿ ಸೊಗಡಿನ ಬಿರಿಯಾನಿ ರುಚಿಯನ್ನು ಮಾತ್ರ ಗ್ರಾಹಕರಿಗೆ ಕೊಡಬೇಕು ಎಂಬುದು ನಮ್ಮ ಉದ್ದೇಶ.

ಹಾಗಾಗಿ, ನಮ್ಮ ರೆಸ್ಟೋರಾದಲ್ಲಿ ಬಿರಿಯಾನಿ ಮತ್ತು ಒಂದು ಬಗೆಯ ಡ್ರೈ ತಿನಿಸನ್ನು ಬಿಟ್ಟು ಬೇರೆ ಯಾವ ಮಾಂಸಾಹಾರ ಖಾದ್ಯಗಳನ್ನೂ ಪರಿಚಯಿಸಿಲ್ಲ. ಬಿರಿಯಾನಿ ಅಡ್ಡದಲ್ಲಿ ನಾಟಿ ಬಿರಿಯಾನಿಯೇ ಸ್ಪೆಶಲ್'.ಹೀಗೆ ತಯಾರಾಗುತ್ತೆ...

`ತುಪ್ಪ, ಎಣ್ಣೆ, ಏಲಕ್ಕಿ, ಚಕ್ಕೆ, ಲವಂಗ, ಅನಾರಸ್ ಮೊಗ್ಗು, ಲವಂಗದ ಎಲೆ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಚಿಲ್ಲಿ ಪೌಡರ್, ಧನಿಯಾ ಕೊಬ್ಬರಿ ಹಾಲು (ಚಕ್ಕೆ, ಲವಂಗ ಮೊದಲಾದವುಗಳ ತೀವ್ರ ಸುಗಂಧವನ್ನು ಒಡೆಯಲು) ಬಿರಿಯಾನಿಗೆ ಬಳಸುತ್ತೇವೆ. ಮಧ್ಯಮ ಗಾತ್ರದಲ್ಲಿ ಕತ್ತರಿಸಿಕೊಂಡ ಗುಲಾಬಿ ಬಣ್ಣದ ಮಾಂಸದ ತುಂಡುಗಳನ್ನು ಇದಕ್ಕೆ ಬಳಸುತ್ತೇವೆ. ಪ್ರತಿ ತುಂಡಿನಲ್ಲೂ ಮೂಳೆ, ಸ್ಪಲ್ಪ ಫ್ಯಾಟ್ ಇರುವಂತೆ ನೋಡಿಕೊಳ್ಳುತ್ತೇವೆ.

ದೊಡ್ಡ ಗಾತ್ರದಲ್ಲಿ ಬಿರಿಯಾನಿ ತಯಾರಿಸುವಾಗ ಏಳು ಕೆ.ಜಿ. ಸೋನಾ ಮಸೂರಿ ಅಕ್ಕಿಜತೆಗೆ ಒಂದು ಕೆ.ಜಿ. ಬಾಸುಮತಿ ಅಕ್ಕಿ (ಸುವಾಸನೆಗಾಗಿ) ಬಳಸುತ್ತೇವೆ. ಬಿರಿಯಾನಿಗೆ ಬಳಕೆ ಮಾಡುವ ಎಲ್ಲ ಮಸಾಲಾ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳುತ್ತೇವೆ. ಹಾಗಾಗಿ ಇಲ್ಲಿನ ಬಿರಿಯಾನಿ ಗ್ರಾಹಕರಿಗೆ ಮನೆಯ ರುಚಿ ನೀಡುತ್ತದೆ' ಎಂದು ವಿವರಿಸುತ್ತಾರೆ `ಬಿರಿಯಾನಿ ಅಡ್ಡ'ದ ಭಟ್ಟ ರಾಮಣ್ಣ.ಮನೆಯಲ್ಲಿ ಮಾಡಿದ ಬಿರಿಯಾನಿ ರುಚಿ ನೀಡುವ ಇಲ್ಲಿನ ನಾಟಿ ಬಿರಿಯಾನಿ ಬೆಲೆ ಕೂಡ ಕಡಿಮೆ. ಇನ್ನು ಒಂದೂವರೆ ತಿಂಗಳಲ್ಲಿ ರಾಜರಾಜೇಶ್ವರಿ ನಗರದಲ್ಲೊಂದು ಅಡ್ಡ ತೆರೆಯುವ ಯೋಚನೆ ಇದೆ ಎನ್ನುವ ಉದಯ್ ಅವರಿಗೆ ಹತ್ತು ವರ್ಷದೊಳಗೆ ನಾಟಿ ಬಿರಿಯಾನಿ ರುಚಿಯನ್ನು ಇಡೀ ಬೆಂಗಳೂರು ತುಂಬೆಲ್ಲಾ ಹಬ್ಬಿಸಬೇಕು ಎನ್ನುವ ಆಸೆ.

ಅದಕ್ಕಾಗಿ ನಗರದೆಲ್ಲೆಡೆ ಬಿರಿಯಾನಿ ಅಡ್ಡ ಔಟ್‌ಲೆಟ್‌ಗಳನ್ನು ತೆರೆಯುವ ಉತ್ಸಾಹದಲ್ಲಿದ್ದಾರೆ. ಇಲ್ಲಿನ ಸ್ವಾದಿಷ್ಟ ಬಿರಿಯಾನಿ ಮನೆಗೂ ತಲುಪಿಸುವ ವ್ಯವಸ್ಥೆ ಇದೆ.ಸ್ಥಳ: ಬಿರಿಯಾನಿ ಅಡ್ಡ, ನಂ.52 (ಎಸ್), 2ನೇ ಎ ಮುಖ್ಯರಸ್ತೆ, 2ನೇ ಕ್ರಾಸ್, 1ನೇ ಹಂತ, ಪ್ರಸನ್ನ ಗಣಪತಿ ದೇವಸ್ಥಾನದ ಹಿಂಭಾಗ, ಚಂದ್ರಾ ಲೇಔಟ್ ಸರ್ಕಲ್. ಮಾಹಿತಿಗೆ: 99000 19477. ಹೋಂ ಡೆಲಿವರಿಗೆ: 99007 40985.

ಬಿರಿಯಾನಿ ಅಡ್ಡ

ರೆಸ್ಟೋರೆಂಟ್ ಹೆಸರು ಬಿರಿಯಾನಿ ಅಡ್ಡ. ಇದರ ಬೀಡು ಇರುವುದು ಚಂದ್ರಾ ಲೇಔಟ್‌ನಲ್ಲಿ. ಈ ಅಡ್ಡಾ ಕಟ್ಟಿದ್ದು ಉದಯ್ ತೇಜಾ ಮತ್ತು ಶ್ರೀನಿವಾಸ್ ಗೌಡ ಎಂಬ ಇಬ್ಬರು ಗೆಳೆಯರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಓದುತ್ತಿದ್ದ ಹುಡುಗರು ವಾರಾಂತ್ಯದಲ್ಲಿ ಮನೆಯಲ್ಲಿ ಬಿರಿಯಾನಿ ಮಾಡಿಕೊಳ್ಳುತ್ತಿದ್ದರು.

ಅದಕ್ಕೆ ಉದಯ್ ಅವರ ಅಮ್ಮ ಮಾಡುತ್ತಿದ್ದ ನಾಟಿ ಬಿರಿಯಾನಿ ಪ್ರೇರಣೆ. ಕೊಠಡಿಯಲ್ಲಿ ಉದಯ್ ಮಾಡುತ್ತಿದ್ದ ಬಿರಿಯಾನಿ ತುಂಬಾ ರುಚಿರುಚಿಯಾಗಿರುತ್ತಿತ್ತು. ಅವರ ಕೈರುಚಿಗೆ ಗೆಳೆಯರೆಲ್ಲ ಮನಸೋತಿದ್ದರು. ಹಳ್ಳಿ ಸೊಗಡಿನ ನಾಟಿ ಬಿರಿಯಾನಿ ರುಚಿ ಇವರಿಬ್ಬರಿಗೆ `ಬಿರಿಯಾನಿ ಅಡ್ಡ' ಶುರು ಮಾಡಲು ಸ್ಫೂರ್ತಿ.

-ಕೆ.ಎಂ.ಸತೀಶ್ ಬೆಳ್ಳಕ್ಕಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry