ಬಿರುಸಿನ ಕಾಮಗಾರಿ ತಂದ ನೆಮ್ಮದಿ

7

ಬಿರುಸಿನ ಕಾಮಗಾರಿ ತಂದ ನೆಮ್ಮದಿ

Published:
Updated:

ವಿಟ್ಲ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣಕ್ಕೆ ಅಂತೂ ಕಾಂಕ್ರೀಟಿಕರಣದ ಭಾಗ್ಯ ಒದಗಿ ಬಂದಿದೆ. ಬಿರುಸಿನಿಂದ ಕಾಮಗಾರಿ ನಡೆಯುತ್ತಿದೆ. ಬೇಸಿಗೆಯಲ್ಲಿ ಬೇಸಿಗೆಯಲ್ಲಿ ದೂಳು, ಮಳೆಗಾಲದಲ್ಲಿ ಕೆಸರಾಭಿಷೇಕವಾಗುತ್ತಿದ್ದ ಬಸ್ಸು ನಿಲ್ದಾಣದೊಳಗೆ ವೇಗವಾಗಿ ಕಾಮಗಾರಿ ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ತುಸು ನೆಮ್ಮದಿ ತಂದಿದೆ.ವಿಟ್ಲದಲ್ಲಿ ರಾಜ್ಯ ಸಾರಿಗೆ ಬಸ್ ನಿಲ್ದಾಣದ ಕನಸು ಕಂಡು ಅರಮನೆಯ ಜನಾರ್ದನ ಬಲ್ಲಾಳ್ ಬಾಕಿಮಾರು ಗದ್ದೆಯಲ್ಲಿ 1.5 ಎಕ್ರೆ ಜಮೀನನ್ನು ಸಾರ್ವಜನಿಕ ಬಸ್ಸು ನಿಲ್ದಾಣ ನಿರ್ಮಾಣಕ್ಕೆ ದಾನ ಮಾಡಿದ್ದರು. ಆ ಸಂದರ್ಭದಲ್ಲಿ ವಿಟ್ಲ ಶಾಸಕರಾಗಿದ್ದ ಕೆ.ಎಂ. ಇಬ್ರಾಹಿಂ ಅವರ ಸತತ ಪರಿಶ್ರಮದ ಫಲವಾಗಿ 2006 ಮಾರ್ಚ್ 6ರಂದು ಆಗಿನ ಸಾರಿಗೆ ಸಚಿವ ಚೆಲುವರಾಯಸ್ವಾಮಿ ಬಸ್ ತಂಗುದಾಣಕ್ಕೆ ಶಿಲಾನ್ಯಾಸ ನೆರವೇರಿಸಿರು. ಬಳಿಕ ಬಂದ ವಿಟ್ಲ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ನಿರ್ಮಾಣ ಕಾರ್ಯ ಬೇಗ ಮುಗಿಸುವಂತೆ ಮಾಡಿದರು. 2008 ಡಿಸೆಂಬರ್ 9ರಂದು ಸಾರಿಗೆ ಸಚಿವ ಆರ್.ಅಶೋಕ್ ಬಸ್ ನಿಲ್ದಾಣ ಉದ್ಘಾಟಿಸಿದರು.ಸುಸಜ್ಜಿತವಾದ ಬಸ್ಸು ನಿಲ್ದಾಣ ನಿರ್ಮಾಣವಾದರೂ ಅಲ್ಲಿ ಡಾಂಬರೀಕರಣ ಅಥವಾ ಕಾಂಕ್ರೀಟಿಕರಣ ನಡೆದಿರಲಿಲ್ಲ. ಈ ಬಗ್ಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸರ್ಕಾರಕ್ಕೆ ನಿರಂತರವಾಗಿ ಒತ್ತಡ ಹಾಕುತ್ತಿದ್ದರು. ಈ ಬಸ್ ನಿಲ್ದಾಣ ಕೆಸರುಮಯ ಹಾಗೂ ಧೂಳುಮಯವಾದ ಪರಿಣಾಮ ಜನರ ಪಾಡು ಅಷ್ಟಿಷ್ಟಲ್ಲ.

2012ರ ಜನವರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಟೆಂಡರ್ ಪಡೆದ ವ್ಯಕ್ತಿ ಕೆಲವೇ ದಿನಗಳಲ್ಲಿ ರಸ್ತೆ ದುರಂತದಲ್ಲಿ ನಿಧನ ಹೊಂದಿದ ಕಾರಣ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಈ ಕುರಿತು ಪತ್ರಿಕೆಯಲ್ಲಿ ವರದಿ ಕೂಡ ಪ್ರಕಟಗೊಂಡಿತ್ತು.ಸದ್ಯ ಮರು ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆ ಪಡೆದ ಮೈಸೂರು ಮೂಲದ ರೇವಣೀಪ್ರಸಾದ್ ಕಾಮಗಾರಿಯನ್ನು ವೇಗವಾಗಿ ನಡೆಸುತ್ತಿದ್ದು, ಮುಂದಿನ ಮಳೆಗಾಲದಲ್ಲಿ ಕೆಸರು ಎರಚಾಟದ ಪ್ರಮೇಯ ಇರುವುದಿಲ್ಲವೆಂದು ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.ನಿಲ್ದಾಣದ ಕಾಂಕ್ರೀಟ್ ಕಾಮಗಾರಿಗೆ ಮಂಜೂರಾಗಿರುವ 1.20 ಕೋಟಿ ರೂಪಾಯಿ ಕಾಮಗಾರಿ ನಡೆಯುತ್ತಿದೆ.

ಧರ್ಮಸ್ಥಳ, ಸುಬ್ರಹ್ಮಣ್ಯ ನಿಲ್ದಾಣಗಳ ಕಾಮಗಾರಿ ಮಾಡಿದ ಈ ಗುತ್ತಿಗೆದಾರ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಮುಗಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣ ಅಧಿಕಾರಿ ಯಶವಂತ ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry