ಸೋಮವಾರ, ನವೆಂಬರ್ 18, 2019
21 °C

ಬಿರುಸಿನ ಪ್ರಚಾರ: ಮತಬೇಟೆಗೆ ಪಾದಯಾತ್ರೆ

Published:
Updated:

ಶಿವಮೊಗ್ಗ: ನಗರದಲ್ಲಿ ಸರ್ವ ಪಕ್ಷಗಳೂ ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಬಿಸಿಲಿನ ತಾಪದಲ್ಲೇ ಮತದಾರನ ಮನೆಬಾಗಿಲಿಗೆ ಅಭ್ಯರ್ಥಿಗಳು ಎಡತಾಕುತ್ತಿದ್ದಾರೆ.ಬಿಜೆಪಿ

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ನಗರದಲ್ಲೇ ಠಿಕಾಣಿ ಹೂಡಿದ್ದು, ಹಳೆಯ ಬಿಜೆಪಿ ಕಾರ್ಯಕರ್ತರ ಮನೆಗೆ ಭೇಟಿ ನೀಡುತ್ತಿದ್ದಾರೆ. ಆಟದ ಮೈದಾನಗಳಿಗೆ ತೆರಳಿ ಅಲ್ಲಿ ಆಟ, ವ್ಯಾಯಾಮ, ವಾಕಿಂಗ್ ಮಾಡುತ್ತಿರುವವರ ಬಳಿ ಮತಯಾಚನೆ ಮಾಡುತ್ತಿದ್ದಾರೆ.ಈಶ್ವರಪ್ಪ ಇದೇ 20, 21 ಮತ್ತು 22ರಂದು ಮೂರು ದಿನಗಳ ಕಾಲ 35 ವಾರ್ಡ್‌ಗಳಲ್ಲಿ ಸಾಮೂಹಿಕ ಪಾದಯಾತ್ರೆ ಮೂಲಕ ಮತಯಾಚನೆ ಮಾಡಲಿದ್ದಾರೆ. ಮೂರು ದಿವಸವೂ ಬೆಳಿಗ್ಗೆ ಮತ್ತು ಸಂಜೆ ಬೀದಿ, ಬೀದಿಗಳಲ್ಲಿ ಪಾದಯಾತ್ರೆಯಲ್ಲಿ ತೆರಳಿ ಮತದಾರರ ಮನ ತಟ್ಟಲಿದ್ದಾರೆ. ಇದರ ಜತೆಗೆ 217 ಬೂತ್‌ಮಟ್ಟದ ಕಾರ್ಯಕರ್ತರು ಮನೆ, ಮನೆ ಸಂಪರ್ಕ ಮಾಡಲಿದ್ದಾರೆ.ಕಾಂಗ್ರೆಸ್

ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರ್ ಶುಕ್ರವಾರ ಶರಾವತಿ ನಗರ ಮತ್ತಿತರ ಕಡೆಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಪಕ್ಷದ ಮುಖಂಡರೊಂದಿಗೆ ಪಾದಯಾತ್ರೆ ಆರಂಭಿಸಿರುವ ಅವರು, ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.ಕೆಜೆಪಿ

ಅಭ್ಯರ್ಥಿ ಎಸ್. ರುದ್ರೇಗೌಡ, ಶುಕ್ರವಾರ ಬೆಳಿಗ್ಗೆ ನಗರದ 2, 17 ಮತ್ತು 7ನೇ ವಾರ್ಡ್‌ನ ಶಾಂತಿನಗರ, ಸೇವಾಲಾಲ್ ನಗರ, ತ್ರಿಮೂರ್ತಿ ನಗರ, ವಿನೋಬ ನಗರ ದಕ್ಷಿಣ ಮತ್ತು ಸ್ಲಂನ ಮನೆಗಳಿಗೆ ನೂರಾರು ಕಾರ್ಯಕರ್ತರೊಡನೆ ಬಿರುಸಿನ ಪಾದಯಾತ್ರೆಯ ಮೂಲಕ ಮತ ಯಾಚಿಸಿದರು.ತಮ್ಮ ಪಕ್ಷದ ಹೆಗ್ಗುರುತಾದ ತೆಂಗಿನಕಾಯಿಯನ್ನು ಕೈಯಲ್ಲಿ ಹಿಡಿದು ರುದ್ರೇಗೌಡರು ಮತಯಾಚನೆ ಮಾಡುತ್ತಿದ್ದಾರೆ. 20ರಂದು ಬೆಳಿಗ್ಗೆ 7.30ರಿಂದ 10.30 ರವರೆಗೆ ವಾರ್ಡ್ ಸಂಖ್ಯೆ.23 ಟಿಪ್ಪುನಗರ ಮತ್ತು 16 ಗೋಪಾಲಗೌಡ ಬಡಾವಣೆ. ಸಂಜೆ 4.30ರಿಂದ 7.30 ವಾರ್ಡ್ ಸಂಖ್ಯೆ 24 ವಿಜಯನಗರ, 16 ಗೋಪಾಲಗೌಡ ಬಡಾವಣೆ ಪಾದಯಾತ್ರೆ ಮಾಡಿ ಮತ ಕೇಳಲಿದ್ದಾರೆ.ಜೆಡಿಎಸ್

ಜೆಡಿಎಸ್ ಅಭ್ಯರ್ಥಿ ಎಂ. ಶ್ರೀಕಾಂತ್, 28ನೇ ವಾರ್ಡಿನ ಆರ್.ಎಂ.ಎಲ್ ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ಅವರೊಂದಿಗೆ ನಗರಸಭಾ ಸದಸ್ಯರಾದ ಕೇಬಲ್ ಬಾಬು (ಏಳುಮಲೈ), ಎಚ್. ಪಾಲಾಕ್ಷಿ, ಪಕ್ಷದ ಪ್ರಮುಖರಾದ ಎಚ್.ಆರ್. ತ್ಯಾಗರಾಜ್, ಸುನೀಲ್, ಜಿ.ಡಿ. ಮಂಜುನಾಥ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)