ಶನಿವಾರ, ಅಕ್ಟೋಬರ್ 19, 2019
28 °C

ಬಿರುಸಿನ ಮಾತು: ಕೋರ್ಟ್ ಗರಂ

Published:
Updated:

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನಾಗಿ ಶಂಕರ ಬಿದರಿ ಅವರನ್ನು ನೇಮಕ ಮಾಡಿರುವ ಆದೇಶದ ರದ್ದತಿಗೆ ಕೋರಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಎ.ಆರ್. ಇನ್ಫಂಟ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಬುಧವಾರ ಆದೇಶಿಸಿದೆ.

ಕಳೆದ ಡಿಸೆಂಬರ್ 1ರಂದು ಹೊರಡಿಸಲಾದ ಆದೇಶ ರದ್ದತಿಗೆ ಅವರು ಕೋರಿದ್ದಾರೆ. ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಾಗಿರುವ ಬಿದರಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಸಿಎಟಿ ಆಡಳಿತಾತ್ಮಕ ಸದಸ್ಯೆ ಕಾತ್ಯಾಯಿನಿ ನೇತೃತ್ವದ ಪೀಠ ವಿಚಾರಣೆ ಮುಂದೂಡಿತು.

ಸೇವಾ ಹಿರಿತನವನ್ನು ಕಡೆಗಣಿಸಿ ಬಿದರಿ ಅವರನ್ನು ನೇಮಕ ಮಾಡಲಾಗಿದೆ ಎನ್ನುವುದು ಇನ್ಫಂಟ್ ಅವರ ಆರೋಪ. `ನಾನು 1977ನೇ ಗುಂಪಿನ ಅಧಿಕಾರಿ. ಆದರೆ ಬಿದರಿಯವರು 1978ರ ಗುಂಪಿಗೆ ಸೇರಿದವರು. ಸೇವಾ ಹಿರಿತನದ ಪಟ್ಟಿಯಲ್ಲಿ ನನ್ನ ಹೆಸರು ಮೊದಲ ಸ್ಥಾನದಲ್ಲಿ ಇತ್ತು. ಬಿದರಿ ಅವರ ಹೆಸರು ಮೂರನೆಯ ಸ್ಥಾನದಲ್ಲಿ ಇತ್ತು. ಆದರೆ ಇದಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ~ ಎಂದು ಅವರು ದೂರಿದ್ದಾರೆ.

ಕೋರ್ಟ್ `ಗರಂ~: ಈ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಕೇಳಿದ ಪ್ರಶ್ನೆಗಳಿಗೆ ವಕೀಲರು ಉತ್ತರಿಸಿದ ಪರಿಯಿಂದ ವಾತಾವರಣ ಕೆಲಕಾಲ `ಗರಂ~ ಆಯಿತು.

`ನನಗೆ ಮಾತ್ರವಲ್ಲದೇ ಸೇವಾ ಹಿರಿತನದಲ್ಲಿರುವ ಇನ್ನೊಬ್ಬ ಡಿಜಿಪಿ ಶ್ರೇಣಿಯ ಅಧಿಕಾರಿ ಅಚ್ಯುತರಾವ್ ಅವರಿಗೂ ಅನ್ಯಾಯ ಎಸಗಲಾಗಿದೆ~ ಎಂದು ಇನ್ಫಂಟ್ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ಅದಕ್ಕೆ ನ್ಯಾಯಾಧೀಶರು, `ಇದೇನಿದು, ನಿಮ್ಮ ಬಗ್ಗೆ ಮಾತ್ರವಲ್ಲದೇ, ಇನ್ನೊಬ್ಬರ ಪರವಾಗಿಯೂ ಬರೆದಿದ್ದೀರಲ್ಲ. ಇದೇನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೇ~ ಎಂದು ಪ್ರಶ್ನಿಸಿದರು.

ಅದಕ್ಕೆ ಇನ್ಫಂಟ್ ಪರ ವಕೀಲರು, `ಅರ್ಜಿದಾರರು ಐಪಿಎಸ್ ಅಧಿಕಾರಿ. ಅವರಿಗೆ ಅರ್ಜಿ ಹೇಗೆ ಸಲ್ಲಿಸಬೇಕು ಎನ್ನುವುದು ಚೆನ್ನಾಗಿಯೇ ಗೊತ್ತು. ಯಾರೂ ಹೇಳಬೇಕಿಲ್ಲ~ ಎಂದರು. ಈ ಉತ್ತರಕ್ಕೆ ತೀವ್ರ ಅಸಮಾಧಾನಗೊಂಡ ನ್ಯಾಯಾಧೀಶರು, `ನಾವು ಎಷ್ಟು ಪ್ರಶ್ನೆ ಕೇಳುತ್ತೇವೆಯೋ, ಅಷ್ಟಕ್ಕೆ ಉತ್ತರ ನೀಡಿ, ಇಲ್ಲಸಲ್ಲದ ಉತ್ತರ ಬೇಡ~ ಎಂದರು.

ಇದೇ ರೀತಿ ಕೆಲವು ಮಾತುಗಳು ಕೋರ್ಟ್‌ನಲ್ಲಿ ಕೇಳಿಬಂದವು.

`ನರಹಂತಕ ವೀರಪ್ಪನ್ ವಿರುದ್ಧ ಕಾರ್ಯಾಚರಣೆಗೆಂದು ಬಿದರಿ ಅವರ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗಿತ್ತು. ಆ ಸಂದರ್ಭದಲ್ಲಿ ವೀರಪ್ಪನ್ ಹುಡುಕಾಟ ಮಾಡಲು ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೇ ತಿಳಿಸಿದೆ. ಇದು ಬಿದರಿ ಅವರ ವಿರುದ್ಧ ಇರುವ ಕಪ್ಪುಚುಕ್ಕೆ. ಆದರೂ ಉನ್ನತ ಹುದ್ದೆ ನೀಡಲಾಗಿದೆ~ ಎನ್ನುವುದು ಇನ್ಫಂಟ್ ಅವರ ಇನ್ನೊಂದು ಆರೋಪ.

ಆಯೋಗ ನೀಡಿರುವ ವರದಿಯ ದಾಖಲೆ ನೀಡುವಂತೆ ವಕೀಲರಿಗೆ ಕಳೆದ ಬಾರಿ ವಿಚಾರಣೆ ವೇಳೆ ನ್ಯಾಯಾಧೀಶರು ಆದೇಶಿಸಿದ್ದರು. ಆದರೆ ಅದನ್ನೂ ಅವರು ಬುಧವಾರ ಹಾಜರುಪಡಿಸಿರಲಿಲ್ಲ. ಇದು ಕೂಡ ನ್ಯಾಯಾಧೀಶರ ಅಸಮಾಧಾನಕ್ಕೆ ಕಾರಣವಾಯಿತು. ನಂತರ ವಿಚಾರಣೆ ಮುಂದೂಡಿದರು.

2012ರ ಮೇ 23ರಂದು ಬಿದರಿ ಹಾಗೂ ಇನ್ಫಂಟ್ ನಿವೃತ್ತರಾಗಲಿದ್ದಾರೆ.

Post Comments (+)