ಸೋಮವಾರ, ನವೆಂಬರ್ 18, 2019
26 °C

ಬಿರುಸುಗೊಂಡ ಪ್ರಚಾರ: ಅಭಿವೃದ್ಧಿ ಹೆಸರಲ್ಲಿ ಮತಯಾಚನೆ

Published:
Updated:

ಶ್ರೀನಿವಾಸಪುರ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳ ಪ್ರಚಾರ ಚುರುಕುಗೊಂಡಿದೆ. ಸುಗಟೂರು, ಹೋಳೂರು ಹೋಬಳಿಗಳಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿರುವ ಕೆ.ಆರ್.ರಮೇಶ್ ಕುಮಾರ್ ಹಾಗೂ ಜಿ.ಕೆ.ವೆಂಕಟಶಿವಾರೆಡ್ಡಿ ಈಗ ತಮ್ಮ ಪ್ರಚಾರ ಕಾರ್ಯವನ್ನು ತಾಲ್ಲೂಕಿನ ಉತ್ತರದ ಗಡಿ ಗ್ರಾಮಗಳಿಗೆ ವಿಸ್ತರಿಸಿದ್ದಾರೆ.ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ಅಬ್ಬರ ಕಂಡುಬರದಿದ್ದರೂ; ಆಯಾ ಪಕ್ಷಗಳ ಸ್ಥಳೀಯ ಮುಖಂಡರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಸಹಕಾರ ಸಂಸ್ಥೆಗಳು ಹಾಗೂ ಪುರಸಭಾ ಸದಸ್ಯರು ತಮ್ಮ ನಾಯಕರ ಬೆನ್ನ ಹಿಂದೆ ಸುತ್ತುತ್ತಿದ್ದಾರೆ. ಸುಡು ಬಿಸಿಲನ್ನು ಲೆಕ್ಕಿಸದೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಶನಿವಾರ ತಾಲ್ಲೂಕಿನ ಗಡಿ ಗ್ರಾಮ ರಾಯಲ್ಪಾಡ್‌ನಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ತಾಲ್ಲೂಕಿನಲ್ಲಿ ಈವರೆಗೆ ತಾವು ಶಾಸಕರಾಗಿದ್ದ ಅವಧಿಯಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾರ್ಯ ನೋಡಿ ಮತ ನೀಡುವಂತೆ ಮನವಿ ಮಾಡಿದರು. ಶಾಶ್ವತ ಕುಡಿಯುವ ನೀರು ಯೋಜನೆ ಜಾರಿ ಸೇರಿದಂತೆ ನಾಡಿನ ಸರ್ವತೋಮುಖ ಪ್ರಗತಿಗೆ ಜೆಡಿಎಸ್‌ಗೆ ಮತ ನೀಡುವುದರ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈ ಬಲಪಡಿಸಲು ಕೋರಿದರು.ತಾಲ್ಲೂಕಿನ ಪುಲಗೂರುಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸೇರಿದಂತೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಹಾಗೂ ಸರ್ಕಾರಿ ಸೌಲಭ್ಯಗಳು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪುವಂತಾಗಲು ತಮಗೆ ಮತ ನೀಡುವಂತೆ ಕೋರಿದರು.ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಕಾಂಗ್ರೆಸ್ ಬದ್ಧವಾಗಿದೆ. ಈ ವಿಷಯಕ್ಕೆ ಚುನಾವಣಾ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದು ಖಂಡಿತ ಸಾಧ್ಯವಾಗುತ್ತದೆ ಎಂದು ಹೇಳಿದರು.ಚುನಾವಣೆ ಘೋಷಣೆಯೊಂದಿಗೆ ವ್ಯಕ್ತಿ ನಿಷ್ಠೆ ಬದಲಿಸುವ ಕಾರ್ಯವೂ ಆರಂಭವಾಗಿದೆ. ರಮೇಶ್‌ಕುಮಾರ್ ಬೆಂಬಲಿಗರೆಂದು ಹೇಳಿಕೊಳ್ಳುವ ಕೆಲವರು ವೆಂಕಟಶಿವಾರೆಡ್ಡಿ ಕಡೆ, ವೆಂಕಟಶಿವಾರೆಡ್ಡಿ ಬೆಂಬಲಿಗರೆಂದು ಹೇಳಿಕೊಳ್ಳುವ ಕೆಲವರು ರಮೇಶ್‌ಕುಮಾರ್ ಕಡೆ ಜಿಗಿಯಲು ಆರಂಭಿಸಿದ್ದಾರೆ. ಈ ವಿದ್ಯಮಾನಕ್ಕೆ ಅವರವರ ವೈಯಕ್ತಿಕ, ಸ್ಥಳೀಯ ವಿಷಯ ಕಾರಣವಾಗಿವೆಯೇ ಹೊರತು, ರಾಜಕೀಯ ಬದಲಾವಣೆಗಲ್ಲ ಎಂಬ ವಿಷಯ ಈ ಇಬ್ಬರು ಮುಖಂಡರಿಗೂ ಗೊತ್ತಿರುವ ವಿಷಯವೇ ಆಗಿದೆ. ಆದರೂ ಅವರು ಬರುತ್ತೇವೆ ಎಂದವರನ್ನು ಮುಗುಳ್ನಗುತ್ತಾ ಸ್ವಾಗತಿಸುತ್ತಿದ್ದಾರೆ.ಕ್ಷೇತ್ರದಲ್ಲಿ ಸತತವಾಗಿ ಅಲ್ಲದಿದ್ದರೂ, ನಾಲ್ಕು ಬಾರಿ ಗೆದ್ದಿರುವ ಜಿ.ಕೆ.ವೆಂಕಟಶಿವಾರೆಡ್ಡಿ, ಮೂರು ಬಾರಿ ಗೆದ್ದಿರುವ ಕೆ.ಆರ್.ರಮೇಶ್ ಕುಮಾರ್ ಪ್ರಬುದ್ಧ ರಾಜಕಾರಣಿಗಳು. ಇವರೆಂದೂ ಪರಸ್ಪರ ಆರೋಪ ಮಾಡಿಕೊಂಡವರಲ್ಲ. ಸಣ್ಣ ಪ್ರಮಾಣದ ಟೀಕೆಯನ್ನೂ ಅವರ ಬೆಂಬಲಿಗರು ಸಹಿಸುವುದಿಲ್ಲ. ಸಾರ್ವಜನಿಕ ಸಭೆಗಳಲ್ಲಿ ಆಕಸ್ಮಿಕವಾಗಿ ಬಾಯಿ ತಪ್ಪಿ ಬರುವ ಟೀಕೆಗಳನ್ನು ಈ ಇಬ್ಬರು ನಾಯಕರು ನಿರ್ಲಕ್ಷಿಸಿದರೂ, ಬೆಂಬಲಿಗರು ಸುಮ್ಮನೆ ಇರಲು ಬಿಡುವುದಿಲ್ಲ.ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈಗ ತಾಲ್ಲೂಕಿನಲ್ಲಿ ಉತ್ತಮ ರಾಜಕೀಯ ವಾತಾವರಣ ನಿರ್ಮಾಣವಾಗಿದೆ. ಈ ಇಬ್ಬರು ಮುಖಂಡರು ತಂಟೆಗಳನ್ನು ಇಷ್ಟಪಡದಿರುವುದು ಇದಕ್ಕೆ ಕಾರಣವಾಗಿದೆ. ರಾಜಕೀಯ ಜಿದ್ದಾ ಜಿದ್ದಾ ಎಂಬುದು ತಣ್ಣನೆ ವಾತಾವರಣದಲ್ಲಿ ನಡೆಯುತ್ತಿದೆ. ಹೊಗೆಯಾಡುತ್ತಿಲ್ಲ. ಇದು ನೆಮ್ಮದಿ ತರುವ ವಿಚಾರವಾಗಿದೆ. ಇದರೊಂದಿಗೆ ಮತದಾರರೂ ಎಚ್ಚೆತ್ತುಕೊಂಡಿದ್ದಾರೆ. ತಮ್ಮ ನಾಯಕರ ಪರವಾಗಿ ಹಿಂಸಾತ್ಮಕವಾಗಿ ವರ್ತಿಸುವುದರಿಂದ ಆಗುವ ವೈಯಕ್ತಿಕ ನಷ್ಟದ ಬಗ್ಗೆ ತಿಳುವಳಿಕೆ ಉಂಟಾಗಿದೆ. ಇದು ಶಾಂತಿಯುತ ಮತದಾನಕ್ಕೆ ಮುನ್ಸೂಚನೆಯಾಗಿದೆ.ಆದರೂ ಚುನಾವಣಾ ಆಯೋಗ ಈ ಗಡಿ ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆ ನಡೆಸಲು ಅಗತ್ಯವಾದ ಎಲ್ಲ ಕ್ರಮ ಕೈಗೊಂಡಿದೆ. ಪುಣೆಯಿಂದ ಸಿಆರ್‌ಪಿಎಫ್ ಪ್ಲಾಟೂನ್‌ಗಳು ಬಂದಿಳಿದಿವೆ. ಈ ಸೆಂಟ್ರಲ್ ರಿಸರ್ವ್ ಪೊಲೀಸರು ಸ್ಥಳೀಯ ಪೊಲೀಸರಿಗೆ ನೆರವಾಗಲಿದ್ದಾರೆ. ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ. ಮತದಾರರಿಗೆ ಮದ್ಯ ಹಂಚಿಕೆ ಮತ್ತಿತರ ಅವ್ಯವಹಾರ ನಡೆಯದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಯಲಾಗುತ್ತಿದೆ. ಅಬಕಾರಿ ಇಲಾಖೆ ಗಡಿ ಪ್ರದೇಶದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಅಕ್ರಮ ಮದ್ಯ ಸರಬರಾಜಾಗದಂತೆ ನೊಡಿಕೊಳ್ಳುತ್ತಿದೆ.ಚುನಾವಣಾ ಆಯೋಗದ ಕಣ್ಗಾವಲಿನ ನಡುವೆ, ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನ ಸಾಗಿದೆ. ಸಾಮಾನ್ಯ ಮತದಾರರು ಮತ ಕೇಳಲು ಬಂದವರನ್ನು ನಗು ಮುಖದಿಂದ ಬರಮಾಡಿಕೊಂಡು ಸಾಗಹಾಕುತ್ತಿದ್ದಾರೆ. ತಮ್ಮ ಮತವನ್ನು ಮತಯಂತ್ರದಲ್ಲಿ ಗುಟ್ಟಾಗಿ ದಾಖಲಿಸಲು ಕಾಯುತ್ತಿದ್ದಾರೆ.

ಪ್ರತಿಕ್ರಿಯಿಸಿ (+)