ಶನಿವಾರ, ಜೂನ್ 19, 2021
22 °C
ಕರಗಿದ ಮುಕೇಶ್‌ ಸಂಪತ್ತು; ಫೋಬ್ಸ್‌ ಪಟ್ಟಿಗೆ ನಿಲೇಕಣಿ

ಬಿಲ್‌ಗೇಟ್ಸ್‌ ವಿಶ್ವದ ನಂ 1 ಶ್ರೀಮಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌(ಪಿಟಿಐ): ಮೈಕ್ರೊಸಾಫ್ಟ್‌ ಕಂಪೆನಿಯ ಸಹ ಸ್ಥಾಪಕ ಬಿಲ್‌ಗೇಟ್ಸ್‌ ಮತ್ತೊಮ್ಮೆ ಪ್ರಪಂಚದ ನಂ 1 ಶ್ರೀಮಂತ ವ್ಯಕ್ತಿಯ ಪಟ್ಟ ಅಲಂ­ಕರಿ­ಸಿದ್ದಾರೆ.ಫೋಬ್ಸ್‌ ನಿಯತಕಾಲಿಕ ಪ್ರಕಟಿಸುವ ‘ವಿಶ್ವ ಕುಬೇರರ ಪಟ್ಟಿ’ಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮೆಕ್ಸಿಕೊದ ಉದ್ಯಮಿ ಕಾರ್ಲೊಸ್‌  ಸ್ಲಿಮ್‌ ಮೊದಲ ಸ್ಥಾನದಲ್ಲಿದ್ದರು. ಈ ಬಾರಿ ಮತ್ತೆ ಬಿಲ್‌ಗೇಟ್ಸ್‌ಗೆ ಮೊದಲ ಸ್ಥಾನ ಒಲಿದಿದೆ.ಬಿಲ್‌ಗೇಟ್ಸ್‌ ಅವರ ಸಂಪತ್ತು ಕಳೆದ ವರ್ಷ 900 ಕೋಟಿ ಡಾಲರ್‌ಗಳಷ್ಟು (ರೂ. 55,800 ಕೋಟಿ) ವೃದ್ಧಿಸಿದೆ. ಇದೀಗ ಅವರು ಒಟ್ಟು 7600 ಕೋಟಿ ಡಾಲರ್‌ (ರೂ. 4.71 ಲಕ್ಷ ಕೋಟಿ) ಸಂಪತ್ತಿನ ಒಡೆಯ. ಕಳೆದ 20 ವರ್ಷಗಳಿಂದ ಫೋಬ್ಸ್‌ ಪಟ್ಟಿಯಲ್ಲಿ (ಮೊದಲ 15 ಶ್ರೀಮಂತರಲ್ಲಿ) ಗೇಟ್ಸ್‌ ಸ್ಥಾನ ಕಾಯ್ದುಕೊಂಡಿದ್ದಾರೆ.ಫೋಬ್ಸ್‌ 28ನೇ ವರ್ಷದ ‘ವಿಶ್ವ ಕುಬೇರರ ಪಟ್ಟಿ’ಯಲ್ಲಿ 56 ಮಂದಿ ಭಾರತೀಯರೂ ಇದ್ದಾರೆ. ಇವರಲ್ಲಿ  1860 ಕೋಟಿ ಡಾಲರ್‌ (ರೂ. 1.15 ಲಕ್ಷ ಕೋಟಿ) ಸಂಪತ್ತಿನ ಒಡೆಯ, ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ನಂ 1 ಸ್ಥಾನದಲ್ಲಿದ್ದಾರೆ. ಅರ್ಸೆಲರ್‌ ಮಿತ್ತಲ್‌ ಕಂಪೆನಿಯ ‘ಸಿಇಒ’ ಲಕ್ಷ್ಮಿ ಮಿತ್ತಲ್‌ ಈ ಪಟ್ಟಿಯಲ್ಲಿ 52ನೇ ಸ್ಥಾನದಲ್ಲಿದ್ದಾರೆ. ಅವರ ಸಂಪತ್ತು 1670 ಕೋಟಿ ಡಾಲರ್‌ (ರೂ. 1.03 ಲಕ್ಷ ಕೋಟಿ). 1530 ಕೋಟಿ ಡಾಲರ್‌ (ರೂ. 94,860 ಕೋಟಿ) ಸಂಪತ್ತು ಹೊಂದಿರುವ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ, ಫೋಬ್ಸ್‌ ಪಟ್ಟಿಯಲ್ಲಿ 61ನೇ ಸ್ಥಾನದಲ್ಲಿದ್ದಾರೆ. ಇನ್ಫೊಸಿಸ್‌ ಅಧ್ಯಕ್ಷ,   ಎನ್‌.ಆರ್‌. ನಾರಾಯಣ ಮೂರ್ತಿ ಪಟ್ಟಿಯಲ್ಲಿ 1046 ನೇ ಸ್ಥಾನದಲ್ಲಿದ್ದರೆ, ಇನ್ಫೊಸಿಸ್‌ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಮತ್ತು ರಾಷ್ಟ್ರೀಯ ವಿಶಿಷ್ಠ ಗುರುತಿನ ಸಂಖ್ಯೆ ಪ್ರಾಧಿಕಾರದ ಅಧ್ಯಕ್ಷ ನಂದನ್‌ ನಿಲೇಕಣಿ ಫೋಬ್ಸ್‌ ಪಟ್ಟಿಯಲ್ಲಿ 1210ನೇ ಸ್ಥಾನದಲ್ಲಿರುವುದು ವಿಶೇಷ.ಸಿರಿವಂತ ವನಿತೆಯರು

ಪ್ರಪಂಚದಾದ್ಯಂತ ಇರುವ 1,645 ಕುಬೇರರನ್ನು ಫೋಬ್ಸ್‌ ಪಟ್ಟಿ ಮಾಡಿದೆ. ಇವರಲ್ಲಿ 172 ಮಂದಿ ಮಹಿಳೆಯರೂ ಇದ್ದಾರೆ. ಪಟ್ಟಿಯಲ್ಲಿ ಭಾರತದ ಸಾವಿತ್ರಿ ಜಿಂದಾಲ್‌ ಮತ್ತು ಇಂದು ಜೈನ್‌ ಕ್ರಮವಾಗಿ 295 ಮತ್ತು 764ನೇ ಸ್ಥಾನ ಪಡೆದಿದ್ದಾರೆ.ಸಾವಿತ್ರಿ ಜಿಂದಾಲ್‌ ಕುಟುಂಬದ ಒಟ್ಟು ಆಸ್ತಿ ಮೌಲ್ಯ 490 ಕೋಟಿ ಡಾಲರ್‌ಗಳಾದರೆ ( ರೂ. 30,380 ಕೋಟಿ) ಇಂದು ಜೈನ್‌ ಅವರು 230 ಕೋಟಿ ಡಾಲರ್‌ (ರೂ. 14,260 ಕೋಟಿ) ಸಂಪತ್ತಿನ ಒಡತಿ.ಈ ವರ್ಷ ಷೇರು ಮತ್ತು ಡಾಲರ್‌ ಮೂಲಕ ಹೆಚ್ಚು ಲಾಭ ಮಾಡಿಕೊಂಡ­ ಉದ್ಯಮಿ ಫೇಸ್‌ಬುಕ್‌ ಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌.  ಅವರ ಸಂಪತ್ತು 1520 ಕೋಟಿ ಡಾಲರ್‌ನಿಂದ ( ರೂ. 94,240 ಕೋಟಿ)  2850 ಕೋಟಿ ಡಾಲರ್‌ಗಳಿಗೆ ( ರೂ. 1.76 ಲಕ್ಷ ಕೋಟಿಗೆ )  ಜಿಗಿದಿದೆ ಎಂದು ಫೋಬ್ಸ್‌ ಹೇಳಿದೆ.ಫೇಸ್‌ಬುಕ್‌ನ ‘ಸಿಒಒ’ ಷೆಯಲ್‌ ಸ್ಯಾಂಡ್‌ಬರ್ಗ್, ವಾಟ್ಸ್‌ ಆ್ಯಪ್‌ ಸ್ಥಾಪಕರಾದ ಜಾನ್‌ ಕೋಮ್‌ ಮತ್ತು ಬ್ರಿಯಾನ್‌ ಆ್ಯಕ್ಟನ್‌ ಸಹ ಈ ಬಾರಿ ಹೊಸದಾಗಿ ಫೋಬ್ಸ್‌ ಕುಬೇರರ ಪಟ್ಟಿಗೆ ಸೇರಿಕೊಂಡಿದ್ದಾರೆ.5ನೇ ಸ್ಥಾನದಲ್ಲಿ ಭಾರತ

ಅತಿ ಹೆಚ್ಚು ಶ್ರೀಮಂತರನ್ನು ಹೊಂದಿ­ರುವ ದೇಶಗಳ ಪಟ್ಟಿಯಲ್ಲಿ ಭಾರತ ವಿಶ್ವದಲ್ಲೇ 5ನೇ ಸ್ಥಾನದಲ್ಲಿದೆ ಎಂದು ಚೀನಾ ಮೂಲದ ಅಧ್ಯಯನ ಸಂಸ್ಥೆ  ‘ಹ್ಯೂರನ್ಸ್‌’ನ ಇತ್ತೀಚಿನ ವರದಿ ಹೇಳಿದೆ.ಕಳೆದ ವರ್ಷ ಡಾಲರ್‌ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಶೇ 12ರಷ್ಟು ಕುಸಿತ ಕಂಡಿದೆ. ಇದರಿಂದ ಭಾರತದ ಭಾರಿ ಸಿರಿವಂತರ ಸಂಪತ್ತು  ಸಹ ಗಣನೀಯವಾಗಿ ಕರಗಿದೆ. ಆದರೂ, ಜರ್ಮನಿ, ಫ್ರಾನ್ಸ್‌, ಜಪಾನ್‌ಗೆ ಹೋಲಿಸಿದರೆ ಭಾರತದಲ್ಲೇ ಅತಿ ಹೆಚ್ಚು ಶ್ರೀಮಂತರಿದ್ದಾರೆ. ಇವರಲ್ಲಿ 33 ಜನರು ಮುಂಬೈ ಮೂಲದವರು ಎಂಬುದು ಗಮನಾರ್ಹ.ನ್ಯೂಯಾರ್ಕ್‌ ವಿಶೇಷ

‘ಹ್ಯೂರನ್ಸ್‌’ ವರದಿಯಂತೆ  ಅಮೆರಿ­ಕದಲ್ಲಿ 481 ಕುಬೇರರಿದ್ದಾರೆ. ­ನ್ಯೂಯಾರ್ಕ್‌ ನಗರವನ್ನು ‘ವಿಶ್ವ ಕುಬೇರರ ರಾಜಧಾನಿ’ ಎಂದು ಬಣ್ಣಿಸ­ಲಾಗಿದೆ. ಚೀನಾದಲ್ಲಿ 358 ಮಂದಿ ಭಾರಿ ಸಿರಿವಂ­ತರಿದ್ದಾರೆ.ಕರಗುತ್ತಿರುವ ಭಾರತದ ಶ್ರೀಮಂತರ ಸಂಪತ್ತು

ಭಾರತದ ಭಾರಿ ಶ್ರೀಮಂತರ ಒಟ್ಟು ಆಸ್ತಿಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ ಎಂದು ‘ಫೋಬ್ಸ್‌’ ನಿಯತಕಾಲಿಕ ವಿಶ್ಲೇಷಿಸಿದೆ. ವಿಶ್ವದ ಕುಬೇರರ ಒಟ್ಟು ಸಂಪತ್ತು  6.4 ಲಕ್ಷ ಕೋಟಿ ಡಾಲರ್‌. ಈ ಬಾರಿಯದು ದಾಖಲೆ ಮಟ್ಟದ ಏರಿಕೆ. ಆದರೆ, ಭಾರತದ ಶ್ರೀಮಂತರ ಸಂಪತ್ತು ಮೌಲ್ಯ 19,150 ಕೋಟಿ ಡಾಲರ್‌ಗಳಿಗೆ  (ರೂ. 11.87 ಲಕ್ಷ ಕೋಟಿ) ಇಳಿಕೆಯಾ­ಗಿದೆ. ದುರ್ಬಲ ಅರ್ಥವ್ಯವಸ್ಥೆ ಮತ್ತು ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತವಾಗಿದ್ದರಿಂದ ಭಾರತೀಯರ ಸಿರಿವಂತಿಗೂ ಪೆಟ್ಟು ಬಿದ್ದಿದೆ ಎಂದು ಫೋಬ್ಸ್‌ ಹೇಳಿದೆ.2008ರ ಜಾಗತಿಕ ಆರ್ಥಿಕ ಹಿಂಜರಿ­ತದ ನಂತರ ಮುಕೇಶ್‌ ಅಂಬಾನಿ ಅವರ ಸಂಪತ್ತು ದೊಡ್ಡ ಪ್ರಮಾಣದಲ್ಲಿ ಕರಗಿದೆ ಎಂದು ಫೋಬ್ಸ್‌ ಹೇಳಿದೆ. 2008ರಲ್ಲಿ ಅವರು 4300 ಕೋಟಿ ಡಾಲರ್‌ಗಳಷ್ಟು (ರೂ. 2.66 ಲಕ್ಷ ಕೋಟಿ) ಸಂಪತ್ತು ಹೊಂದಿದ್ದರು. ಇದೀಗ ಅದು ಅರ್ಧಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.