ಬಿಳಿಗಿರಿರಂಗನಬೆಟ್ಟ: ಕುಸಿದ ಅಂತರ್ಜಲ; ನೀರಿಗೆ ತತ್ವಾರ

7

ಬಿಳಿಗಿರಿರಂಗನಬೆಟ್ಟ: ಕುಸಿದ ಅಂತರ್ಜಲ; ನೀರಿಗೆ ತತ್ವಾರ

Published:
Updated:
ಬಿಳಿಗಿರಿರಂಗನಬೆಟ್ಟ: ಕುಸಿದ ಅಂತರ್ಜಲ; ನೀರಿಗೆ ತತ್ವಾರ

ಯಳಂದೂರು: ರಂಗಪ್ಪನ ದರ್ಶನಕ್ಕಾಗಿ ಭಕ್ತರು ಬೆಟ್ಟಕ್ಕೆ ಬಂದರೆ ಕೈ ತೊಳೆಯಲು ನೀರಿಲ್ಲ. ಬಾಯಾರಿದರೆ ತೀರ್ಥ, ಪ್ರಸಾದವನ್ನಷ್ಟೇ ಕರುಣಿಸುತ್ತಾರೆ ಅರ್ಚಕರು. ಸಮರ್ಪಕವಾಗಿ ನೀರು ಪೂರೈಕೆಯೇ ಇಲ್ಲ. ಕುಸಿದಿರುವ ಅಂತರ್ಜಲ ಇಲ್ಲಿನ ನಿವಾಸಿಗಳನ್ನು ಇನ್ನಷ್ಟು ಹೈರಾಣಾಗಿಸಿದೆ.-ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಗಿರಿಜನರು ಹಾಗೂ ಬೆಟ್ಟಕ್ಕೆ ಬರುವ ಭಕ್ತರು ಜೀವಜಲಕ್ಕಾಗಿ ನಿತ್ಯವೂ ಪರಿತಪಿಸುತ್ತಿದ್ದಾರೆ. ಪ್ರಸ್ತುತ ಬೀಳುತ್ತಿರುವ ಮಳೆಗೆ ನಿಧಾನವಾಗಿ ಬೆಟ್ಟ ಹಸಿರಾಗುತ್ತಿದೆ. ಆದರೆ, ಕೆರೆಗಳ ಒಡಲು ತಂಪಾಗುವಷ್ಟು ನೀರು ಹರಿದುಬಂದಿಲ್ಲ. ಇದರ ಪರಿಣಾಮ ನೀರು ಪೂರೈಸುತ್ತಿದ್ದ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿದು ನಿವಾಸಿಗಳು ಹಾಗೂ ಭಕ್ತರು ಪರದಾಡುವಂತಾಗಿದೆ.ಹಿಂದೆಲ್ಲಾ ಕೊಳವೆಬಾವಿ ಕೊರೆದರೆ 150 ಅಡಿಗೆ ನೀರು ಸಿಗುತ್ತಿತ್ತು. ಈಗ 300 ಅಡಿವರೆಗೆ ಕೊರೆದರೂ ನೀರು ಸಿಗುವುದಿಲ್ಲ. ಈ ಗ್ರಾಮದಲ್ಲಿ 400ಕ್ಕೂ ಹೆಚ್ಚು ಮನೆಗಳಿವೆ. ದೇವಳದ ಪೂಜೆಗೂ ನೀರು ಪೂರೈಕೆ ಆಗುತ್ತಿಲ್ಲ.ಇಲ್ಲಿ ವಾಸಿಸುವ ಗುಬ್ಬಚ್ಚಿ ಹಾಗೂ ಮಂಗಗಳು ಸಣ್ಣ ಪೈಪ್‌ನಲ್ಲಿ ಜಿನುಗುವ ನೀರನ್ನೇ ದಾಹ ನೀಗಿಸಲು ಬಳಸುವ ದೃಶ್ಯ ಸಾಮಾನ್ಯವಾಗಿದೆ. ಇಲ್ಲಿನ ಕೊಳವೆಬಾವಿಗಳು ಬತ್ತಿದ್ದರಿಂದ ನೀರಿನ ಪೂರೈಕೆ ತೊಂದರೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.ದೇಗುಲದ ಪಕ್ಕದಲ್ಲಿರುವ ಶೌಚಾಲಯಕ್ಕೆ ನೀರು ಪೂರೈಸುವ ಟ್ಯಾಂಕ್ ಬಿದ್ದುಹೋಗಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಜಲಬಾಧೆ ತೀರಿಸಲೂ ಕಟ್ಟದಡ ಗೋಡೆಗಳನ್ನೆ ಪ್ರವಾಸಿಗರು ಬಳಸುವಂತಾಗಿದೆ.ರಾಜಗೋಪುರದ ಕೆಲಸಕ್ಕೆ ಬಳಕೆಯಾಗುವ ನೀರನ್ನೇ ನಂಬಿಕೊಂಡು ಅರ್ಚಕರು ಬದುಕುವಂತಾಗಿದೆ. ಇಲ್ಲಿಗೆ ಬರುವ ದರ್ಶನಾರ್ಥಿಗಳು ಮುಖ, ಕೈಕಾಲು ತೊಳೆದು ದೇವರಿಗೆ ಪ್ರಾರ್ಥನೆ ಸಲ್ಲಿಸಲು ಹನಿ ನೀರು ಸಿಕ್ಕುವುದಿಲ್ಲ. ಹಣ ಕೊಟ್ಟು ಬಾಟಲಿ ನೀರು ಪಡೆದು ದಾಹ ಇಂಗಿಸಿಕೊಳ್ಳಬೇಕು. ಇದರಿಂದ ಯಾತ್ರಾರ್ಥಿಗಳು ಬವಣೆ ಪಡುವಂತಾಗಿದೆ ಎನ್ನುತ್ತಾರೆ ತುಮಕೂರಿನ ಪ್ರವಾಸಿ ಸಿದ್ದಗಂಗಪ್ಪ.ಕುಡಿಯುವ ನೀರು ಸರಾಗವಾಗಿ ಹರಿದು ಬರಲು ಮೋಟಾರ್‌ಗೆ ಪೂರೈಯಾಗುವ ವಿದ್ಯುತ್ ಆಗಾಗ ಕೈಕೊಡುತ್ತದೆ. ಪ್ರತಿ 3 ತಿಂಗಳಿಗೆ ಒಮ್ಮೆ ಮೋಟಾರ್ ಸುಟ್ಟು ಹೋಗುತ್ತದೆ. ಗಂಗಾಧರೇಶ್ವರ ಹಾಗೂ ಸೋಮರಸನ ಕೆರೆಗಳ ಬಳಿ ಇರುವ ಕೊಳವೆಬಾವಿಗಳಿಗೆ ಜಲ ಮರುಪೂರಣ ಮಾಡಿ ಅಂತರ್ಜಲಮಟ್ಟ ಹೆಚ್ಚಿಸಬೇಕು ಎಂಬುದು ಸ್ಥಳೀಯರ ಒತ್ತಾಯ.`ತಾಲ್ಲೂಕು ಪಂಚಾಯಿತಿ ಆಡಳಿತದಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಅನುದಾನವಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಉಲ್ಬಣಗೊಂಡಿದೆ. ಗ್ರಾಮಸ್ಥರ ಬಳಿ ಈ ಕುರಿತು ಚರ್ಚಿಸಿದ್ದೇನೆ.ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಒತ್ತು ನೀಡುತ್ತೇನೆ~ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಶ್‌ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry