ಶನಿವಾರ, ಜೂನ್ 12, 2021
23 °C

ಬಿಳಿಗಿರಿರಂಗನ ಬೆಟ್ಟದಲ್ಲೂ ಕಾಳ್ಗಿಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ­ದಲ್ಲಿ ಭುಗಿಲೆದ್ದ ಕಾಳ್ಗಿಚ್ಚು ತಹಬಂದಿಗೆ ಬಂದಿದೆ. ಆದರೆ, ಬಂಡೀಪುರದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ಮುಂದುವರಿದಿದ್ದು, ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಕಾಡನ್ನು ಆವರಿಸಿಕೊಳ್ಳುತ್ತಿದೆ.ಈ ನಡುವೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿ­ರಂಗನ­ಬೆಟ್ಟದ ಹುಲಿ ಸಂರಕ್ಷಿತ ಅರಣ್ಯಕ್ಕೂ ಶುಕ್ರವಾರ ಬೆಂಕಿ ಬಿದ್ದಿದೆ.ಕಾಳ್ಗಿಚ್ಚಿಗೆ ನಾಗರಹೊಳೆಯ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು ಅರಣ್ಯ ವಲಯದ 600 ಎಕರೆ ಹಾಗೂ ಬಂಡೀಪುರದ 1,200 ಎಕರೆ ಕಾಡು ಆಹುತಿಯಾಗಿದೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.ಬಂಡೀಪುರ ರಾಷ್ಟ್ರೀಯ ಉದ್ಯಾನ­ದಲ್ಲಿ ಭುಗಿಲೆದ್ದ ಕಾಳ್ಗಿಚ್ಚು ಆರುವ ಮುನ್ನವೇ, ಬಿಳಿಗಿರಿರಂಗನ ಬೆಟ್ಟದಲ್ಲೂ ಬೆಂಕಿ ಕಾಣಿಸಿ­ಕೊಂಡಿರು­ವುದು ಅರಣ್ಯಾ­-ಧಿ­ಕಾರಿ­ಗಳನ್ನು ಚಿಂತೆಗೀಡು ಮಾಡಿದೆ. ಜಿಂಕೆ, ಮೊಲ, ಕಾಡುಕುರಿ, ಹಾವು ಹಾಗೂ ವಿವಿಧ ಜಾತಿಯ ಪಕ್ಷಿಗಳು ಬೆಂಕಿಗೆ ಆಹುತಿಯಾಗಿರುವುದು ಮನ ಕಲಕುವಂತಿದೆ.ಯಳಂದೂರು ವರದಿ: ತಾಲ್ಲೂಕಿನ ಹುಲಿ ಸಂರಕ್ಷಿತ ತಾಣ ಬಿಳಿಗಿರಿರಂಗನಬೆಟ್ಟದಲ್ಲಿ ಶುಕ್ರವಾರ ಕಾಡ್ಗಿಚ್ಚು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಮುತ್ತುಗದ ಗದ್ದೆಯ ಬಳಿಯ ಅರಣ್ಯದಲ್ಲಿ ಆಕಸ್ಮಿಕವಾಗಿ ಕಾಣಿ­ಸಿ­ಕೊಂಡ ಬೆಂಕಿಯ ಕೆನ್ನಾಲಿಗೆಗೆ ಹತ್ತಾರು ಎಕರೆಗೂ ಹೆಚ್ಚು ಕಾಡು ಭಸ್ಮವಾಗಿದೆ. ಗವಿಗಂಗಾಧರೇಶ್ವರ ಬೆಟ್ಟದ ಬಳಿಯ ಬೂರಾರೆ, ಹೊಸ­ಪೋಡು ಸುತ್ತಲ ಅರಣ್ಯ ಪ್ರದೇಶ ಸಂಜೆ­ಯಾದರೂ ಉರಿಯುತ್ತಲೇ ಇತ್ತು.ಮಧ್ಯಾಹ್ನದ ವೇಳೆಗೆ ಅಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಹರಡಿತು. ಇದರಿಂದ ಅಪ­ರೂಪದ ಪಕ್ಷಿಗಳ ಗೂಡುಗಳು ಸುಟ್ಟಿವೆ. ಹೆಚ್ಚಿನ ಪ್ರಮಾಣದಲ್ಲಿ ಪೊದೆ ಸಸ್ಯಗಳು ಇರುವುದು, ಲಂಟಾನ ಹಾಗೂ ತರಗೆಲೆಗಳು ಆವೃತವಾಗಿ­ರುವುದರಿಂದ ಬೆಂಕಿ ಹರಡಲು ಕಾರಣವಾಗಿದೆ.‘ಯಳಂದೂರು ವಲಯದ ಗವಿಗಂಗಾಧರೇಶ್ವರ ಗುಡ್ಡದ ಬಳಿ ಬೆಂಕಿ ಕಾಣಿಸಿಕೊಂಡಿದೆ. ಕೇವಲ ಒಣಹುಲ್ಲಿನ ನೆಲಹಾಸು ಮಾತ್ರ ಸುಟ್ಟಿದೆ. ಯಾವುದೇ ದೊಡ್ಡ ಮರಗಳು ಹೊತ್ತಿ ಉರಿದಿಲ್ಲ.35 ಅರಣ್ಯ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ವಲಯ ಅರಣ್ಯಾಧಿಕಾರಿ ದಿನೇಶ್‌ ತಿಳಿಸಿದರು.ಗೋಣಿಕೊಪ್ಪಲು/ಹುಣಸೂರು ವರದಿ: ಮತ್ತಿಗೋಡು ಅರಣ್ಯದ ಕಾಳ್ಗಿಚ್ಚನ್ನು ತಹಬಂದಿಗೆ ತರುವ ಪ್ರಯತ್ನಕ್ಕೆ ಶುಕ್ರವಾರ ಸ್ವಲ್ಪಮಟ್ಟಿಗೆ ಯಶಸ್ಸು ಸಿಕ್ಕಿದೆ. ಗುರುವಾರ ರಾತ್ರಿ ನಿರಂತರ­ವಾಗಿ ನಡೆಸಿದ ಕಾರ್ಯಾಚ­ರಣೆಯಲ್ಲಿ ಬೆಂಕಿ ಇತರೆಡೆಗೆ ಹರಡ­ದಂತೆ ತಡೆಯಲಾಗಿದೆ.ಗೋಣಿಕೊಪ್ಪಲು, ಪಿರಿಯಾಪಟ್ಟಣದ ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿಯೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಗಲಿರುಳು ಶ್ರಮಿಸಿದ್ದಾರೆ. ಪಾಲಿಬೆಟ್ಟ ಟಾಟಾ ಕಾಫಿ ಸಂಸ್ಥೆ ಕೂಡ ಕಾಳ್ಗಿಚ್ಚು ಆರಿಸುವ ಕಾರ್ಯಕ್ಕೆ ಕೈಜೋಡಿಸಿದೆ. ಆದರೂ, ಬಿದಿರು ಮತ್ತು ಮರಗಳಿಗೆ ಹಬ್ಬಿರುವ ಬೆಂಕಿಯ ಕೆನ್ನಾಲಿಗೆ ಮಾತ್ರ ಇನ್ನೂ ಆರಿಲ್ಲ. ಬಿದಿರು ಸಿಡಿಯುತ್ತಿದ್ದು, ಹತ್ತಿರ ಹೋಗಲು ಅಗ್ನಿಶಾಮಕ ಸಿಬ್ಬಂದಿ ಭಯಪಡುತ್ತಿದ್ದಾರೆ.‘ಕಿಡಿಗೇಡಿಗಳ ಕೃತ್ಯ ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಹೀಗಾಗಿ, ಕಾಳ್ಗಿಚ್ಚನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ಈ ಕುರಿತು ತನಿಖೆಯನ್ನು ಸಿಐಡಿಗೆ ವಹಿಸಲು ಅರಣ್ಯ ಇಲಾಖೆ ಚಿಂತಿಸುತ್ತಿದೆ’ ಎಂದು ನಾಗರಹೊಳೆ ಹುಲಿ ಯೋಜನೆಯ ನಿರ್ದೇಶಕ ಗೋಕುಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಗುಂಡ್ಲುಪೇಟೆ ವರದಿ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಗುರುವಾರ ಬಿದ್ದ ಬೆಂಕಿ ಸತತ 2ನೇ ದಿನವೂ ಹೊತ್ತಿ ಉರಿಯುತ್ತಿದೆ. ಭಸ್ಮವಾಗುತ್ತಿರುವ ಅರಣ್ಯದ ವಿಸ್ತಾರ ಹೆಚ್ಚುತ್ತಲೇ ಇದೆ. ಸುಮಾರು 1,200 ಎಕರೆ ಅರಣ್ಯ ಭಸ್ಮವಾಗಿದೆ.

ತೇಗ, ಬೀಟೆ, ಮತ್ತಿ, ಹೊನ್ನೆ ಮರಗಳು ಭಸ್ಮವಾಗಿದ್ದು ಉದ್ಯಾನದ ಶೇ 10ರಷ್ಟು ಅರಣ್ಯ ಸಂಪತ್ತು ನಾಶವಾ­ಗಿದೆ ಎಂದು ಅಂದಾಜಿಸಲಾಗಿದೆ.ಬೆಂಕಿಯ ಕೆನ್ನಾಲಿಗೆ ಬಂಡೀಪುರ ಅರಣ್ಯ ಕಚೇರಿಯ ಪೂರ್ವದಿಂದ ಪಶ್ಚಿಮದ ಕಡೆಗೂ ಹಬ್ಬುತ್ತಿದೆ. ಗಾಳಿಯ ವೇಗಕ್ಕೆ ಸಮಾನಾಂತರವಾಗಿ ಒಣಗಿದ ಬಿದಿರು, ಲಂಟಾನಾ ಪೊದೆಗಳು ಬೆಂಕಿಯನ್ನು ಹರಡುತ್ತಿವೆ.ಬಿದಿರು ಮರಗಳ ಕಿಡಿಯು ಗಾಳಿಗೆ ತೂರಿ ಮೈಲಿ ದೂರ ಬೀಳುತ್ತಿರುವುದರಿಂದ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಅಗ್ನಿಶಾಮಕ ವಾಹನಗಳು ಬಂದಿದ್ದರೂ, ಅರಣ್ಯದ ಒಳಭಾಗಕ್ಕೆ ಪ್ರವೇಶಿಸಲಾಗದೇ ಹಿಂತಿರುಗಿದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.