ಬಿಳಿಗಿರಿ ಬನದಲ್ಲಿ ಪಕ್ಷಿ ಗಣತಿಗೆ ಸಿದ್ಧತೆ

ಭಾನುವಾರ, ಮೇ 26, 2019
30 °C

ಬಿಳಿಗಿರಿ ಬನದಲ್ಲಿ ಪಕ್ಷಿ ಗಣತಿಗೆ ಸಿದ್ಧತೆ

Published:
Updated:
ಬಿಳಿಗಿರಿ ಬನದಲ್ಲಿ ಪಕ್ಷಿ ಗಣತಿಗೆ ಸಿದ್ಧತೆ

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದ(ಬಿಆರ್‌ಟಿ) ವ್ಯಾಪ್ತಿಯಲ್ಲಿ ನವೆಂಬರ್ ತಿಂಗಳಿನಲ್ಲಿ ಪಕ್ಷಿಗಳ ಗಣತಿ ನಡೆಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.ಬಿಳಿಗಿರಿರಂಗನಬೆಟ್ಟ ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಅಪರೂಪದ ತಾಣ. ರಕ್ಷಿತಾರಣ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಸ್ಯ ಪ್ರಭೇದ ಗಳಿವೆ. 25ಕ್ಕೂ ಹೆಚ್ಚು ಬಗೆಯ ಸಸ್ತನಿಗಳಿವೆ. 22 ಬಗೆಯ ಸರೀಸೃಪಗಳು, 11 ಪ್ರಭೇದಕ್ಕೆ ಸೇರಿದ ನಿಶಾಚರಿಗಳು ಹಾಗೂ 145 ಪ್ರಭೇದದ ಚಿಟ್ಟೆಗಳಿಗೆ ಈ ಅರಣ್ಯ ಆವಾಸ ಸ್ಥಾನವಾಗಿದೆ.ಇಲ್ಲಿಯವರೆಗೆ ಈ ರಕ್ಷಿತಾರಣ್ಯದಲ್ಲಿ 274 ಪಕ್ಷಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಅಳಿವಿನ ಅಂಚಿನಲ್ಲಿರುವ 18 ಪಕ್ಷಿಗಳಿವೆ. 1997ರಲ್ಲಿ ಪಕ್ಷಿ ತಜ್ಞರಾದ ಬೆಂಗಳೂರಿನ ಎಂ.ಬಿ. ಕೃಷ್ಣ ಹಾಗೂ ಎಸ್. ಸುಬ್ರಮಣ್ಯ ರಕ್ಷಿತಾರಣ್ಯದಲ್ಲಿ ಪಕ್ಷಿಗಳ ಗಣತಿ  ನಡೆಸಿದ್ದರು.ನಂತರದ ವರ್ಷಗಳಲ್ಲಿ ಹಲವು ಪಕ್ಷಿತಜ್ಞರು ಬಿಳಿಗಿರಿರಂಗನ ಬೆಟ್ಟದಲ್ಲಿ ಅಧ್ಯಯನ ನಡೆಸಿದ್ದಾರೆ. ಆದರೆ, ಗಣತಿ ಕಾರ್ಯ ನಡೆದಿರಲಿಲ್ಲ. ಹೀಗಾಗಿ, 15ವರ್ಷದ ಬಳಿಕ ಪಕ್ಷಿಗಳ ಗಣತಿ ನಡೆಯುತ್ತಿದೆ. ಗಣತಿ ಮೂಲಕ ಅಳಿವಿನ ಅಂಚಿನಲ್ಲಿರುವ ಪಕ್ಷಿಗಳನ್ನು ಗುರುತಿಸಿ ಸಂರಕ್ಷಿಸಲು ಯೋಜನೆ ರೂಪಿಸುವ ಉದ್ದೇಶ ಹೊಂದಲಾಗಿದೆ.ಬಿಆರ್‌ಟಿ ಹುಲಿ ರಕ್ಷಿತಾರಣ್ಯ ಒಟ್ಟು 574.82 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. 1974ರಲ್ಲಿ ಇದನ್ನು ಅಭಯಾರಣ್ಯವೆಂದು ಘೋಷಿಸಲಾಯಿತು. ಕಳೆದ ವರ್ಷ ಹುಲಿ ಯೋಜನೆಗೆ ಒಳಪಟ್ಟ ಈ ರಕ್ಷಿತಾರಣ್ಯದಲ್ಲಿ 30ಕ್ಕೂ ಹೆಚ್ಚು ಹುಲಿಗಳಿರುವ ಬಗ್ಗೆ ಅಂದಾಜಿಸಲಾಗಿದೆ. ಚಾಮರಾಜನಗರ, ಕೊಳ್ಳೇಗಾಲ ಹಾಗೂ ಯಳಂದೂರು ತಾಲ್ಲೂಕಿನಲ್ಲಿ ಹಬ್ಬಿರುವ ರಕ್ಷಿತಾರಣ್ಯದಲ್ಲಿ ಗುಂಡಾಲ್ ಮತ್ತು ಸುವರ್ಣಾವತಿ ಜಲಾಶಯಗಳಿವೆ.ಈ ಜಲಾಶಯಗಳಿಗೆ ಪ್ರತಿವರ್ಷವೂ ಚಳಿಗಾಲದ ವೇಳೆ ವಿವಿಧ ಪಕ್ಷಿಗಳು ವಲಸೆ ಬರುತ್ತವೆ. ಉತ್ತರ ಭಾರತದಿಂದ ಇಲ್ಲಿಗೆ ವಲಸೆ ಬರುವ ಪಕ್ಷಿಗಳ ಸಂಖ್ಯೆ ಹೆಚ್ಚಿದೆ. ಬಿಳಿಗಿರಿ ಬನದಲ್ಲಿ ಕೆಂಪುಚುಕ್ಕಿಯ ಬುಲ್‌ಬುಲ್, ಕೋಗಿಲೆ, ಜೇನುಕುಟಿಕ, ಕಾವುಟನ ಹಕ್ಕಿ, ಹಸಿರು ಪಾರಿವಾಳ, ಚುಕ್ಕಿ ಪಾರಿವಾಳ, ನೀಲಹಕ್ಕಿ, ನವಿಲು, ಟ್ರೀ ಪೈ, ಬಾಳೆ ಗಿಳಿ, ಕುಟ್ರಹಕ್ಕಿ, ಮಿನಿವೆಟ್, ಮೈನಾ, ಕೆಂಬೂತ, ನೀಲಕಂಠ, ಕಾಜಾಣ, ಮಿಂಚುಳ್ಳಿ, ಮರಕುಟಿಕ, ಮಡಿವಾಳ ಹಕ್ಕಿಗಳು ಸಾಮಾನ್ಯವಾಗಿ ಕಾಣಸಿಗುತ್ತವೆ.ಈ ಹಿಂದೆ ಬಿಆರ್‌ಟಿ ರಕ್ಷಿತಾರಣ್ಯದಲ್ಲಿ ಪಕ್ಷಿಗಳ ಅಧ್ಯಯನ ಮಾಡಿರುವ ತಜ್ಞರು, ಹವ್ಯಾಸಿ ಪಕ್ಷಿ ವೀಕ್ಷಕರು, ಸ್ವಯಂ ಸೇವಕರನ್ನು ಬಳಸಿಕೊಂಡು ಗಣತಿ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಟ್ರಾನ್ಸೆಕ್ಟ್ ವಿಧಾನದಡಿ ಗಣತಿ ನಡೆಯಲಿದ್ದು, ಪಕ್ಷಿಗಳ ಸಾಂದ್ರತೆ ಬಗ್ಗೆಯೂ ವಿಶೇಷ ಒತ್ತು ನೀಡಲು ತೀರ್ಮಾನಿಸಲಾಗಿದೆ.`ರಕ್ಷಿತಾರಣ್ಯದಲ್ಲಿ ಹಲವು ಪಕ್ಷಿತಜ್ಞರು ಅಧ್ಯಯನ ನಡೆಸಿದ್ದಾರೆ. ತಜ್ಞರ ಈ ಅಧ್ಯಯನದಿಂದಾಗಿ ಪಟ್ಟಿಗೆ ಸೇರ್ಪಡೆಗೊಳ್ಳುವ ಪಕ್ಷಿಗಳ ಸಂಖ್ಯೆಯೂ ಹೆಚ್ಚಲಿದೆ. ಜತೆಗೆ, ವೈಜ್ಞಾನಿಕವಾಗಿ ಪಕ್ಷಿಗಳ ಗಣತಿ ನಡೆಸುವ ಅಗತ್ಯವಿದೆ. ಆಗ ಮಾತ್ರ ಅಳಿವಿನ ಅಂಚಿನಲ್ಲಿರುವ ಪಕ್ಷಿಗಳ ಉಳಿವಿಗೆ ಸಂರಕ್ಷಣಾ ಕ್ರಮಕೈಗೊಳ್ಳಬಹುದು.ಹೀಗಾಗಿ, ಗಣತಿ ನಡೆಸಲು ನಿರ್ಧರಿಸಲಾಗಿದ್ದು, ಸಿದ್ಧತೆ ನಡೆದಿದೆ. ಗಣತಿದಾರರಿಗೆ ಮೊದಲು ಸೂಕ್ತ ತರಬೇತಿ ಕೂಡ ನೀಡಲಾಗುವುದು~ ಎಂದು ಬಿಆರ್‌ಟಿ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ವಿಜಯ್ ಮೋಹನ್‌ರಾಜ್ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry