ಬಿಳಿಯಾನೆಯಾಗಿರುವ ಬಯಲುಸೀಮೆ ಮಂಡಳಿ

7

ಬಿಳಿಯಾನೆಯಾಗಿರುವ ಬಯಲುಸೀಮೆ ಮಂಡಳಿ

Published:
Updated:
ಬಿಳಿಯಾನೆಯಾಗಿರುವ ಬಯಲುಸೀಮೆ ಮಂಡಳಿ

ಚಿತ್ರದುರ್ಗ: ಹಣಕಾಸಿನ ಮುಗ್ಗಟ್ಟಿನಿಂದ ಬಳಲಿರುವ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆಯ ಮೂಲ ಉದ್ದೇಶ ಈಡೇರದೆ ಸರ್ಕಾರಕ್ಕೆ ಬಿಳಿಯಾನೆಯಾಗಿ ಪರಿಣಮಿಸಿದೆ.ಬಯಲುಸೀಮೆ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಚಿತ್ರದುರ್ಗವನ್ನು ಕೇಂದ್ರ ಸ್ಥಾನವಾಗಿ ರಚಿಸಲಾದ ಮಂಡಳಿ 14 ಜಿಲ್ಲೆಗಳ, 57 ತಾಲ್ಲೂಕುಗಳ 70 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಒಳಗೊಂಡಿದ್ದು, ಸಂಸತ್ ಸದಸ್ಯರು, ವಿಧಾನಸಭೆ ಮತ್ತುವಿಧಾನ ಪರಿಷತ್ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಕಾರ್ಯದರ್ಶಿ ಸೇರಿದಂತೆ ಮಂಡಳಿಗೆ 147 ಸದಸ್ಯರಿದ್ದಾರೆ.ಮಂಡಳಿಯ ಕಾಮಗಾರಿಗಳನ್ನು ಜಲಾನಯನ ಇಲಾಖೆ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆ, ಭೂಸೇನಾ ನಿಗಮ ಮತ್ತು ನಿರ್ಮಿತಿ ಕೇಂದ್ರಗಳಿಗೆ ವಹಿಸಲಾಗುತ್ತಿದೆ. ಇದರಿಂದ ಮಂಡಳಿ ಕೇವಲ ಉಸ್ತುವಾರಿಗೆ ಸೀಮಿತವಾಗಿದೆ. ಹೀಗಾದರೆ ಮಂಡಳಿಯ ಅಗತ್ಯವೇನು ಎನ್ನುವ ಪ್ರಶ್ನೆ ಸದಸ್ಯರಿಂದಲೇ ವ್ಯಕ್ತವಾಗಿದೆ.ನಗರದಲ್ಲಿರುವ ಮಂಡಳಿಯ ಕೇಂದ್ರ ಕಚೇರಿ ಖಾಸಗಿ ಕಟ್ಟಡದಲ್ಲಿದ್ದು, ಪ್ರತಿ ತಿಂಗಳು ರೂ. 25 ಸಾವಿರ ಬಾಡಿಗೆ ನೀಡಲಾಗುತ್ತಿದೆ. ಮಂಡಳಿಗೆ ಕಾರ್ಯದರ್ಶಿ ಸೇರಿದಂತೆ 28 ಹುದ್ದೆಗಳು ಮಂಜೂರಾಗಿದ್ದು, 12 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಪ್ರಸ್ತುತ ಮಂಡಳಿಗೆ ನೀಡುತ್ತಿರುವ ಅನುದಾನದಲ್ಲಿ ವರ್ಷಕ್ಕೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಆಡಳಿತಾತ್ಮಕ ವೆಚ್ಚಕ್ಕೆ ತಗುಲುತ್ತಿದೆ.2010-11ನೇ ಸಾಲಿನಲ್ಲಿ ಅಧ್ಯಕ್ಷರ ವೇತನ ಮತ್ತು ಭತ್ಯೆಗೆ ರೂ. 2.16 ಲಕ್ಷ, ಪ್ರವಾಸ ಭತ್ಯೆಗೆ ರೂ. 4.52 ಲಕ್ಷ, ಅತಿಥಿ ಭತ್ಯೆಗೆ ರೂ. 36,176 ವೆಚ್ಚವಾಗಿದೆ. ಇನ್ನು ಅಧಿಕಾರಿಗಳ ಮತ್ತು ಸಿಬ್ಬಂದಿ ವೇತನ ಹಾಗೂ ಭತ್ಯೆಗೆ ರೂ. 33.99 ಲಕ್ಷ ತಗುಲಿದೆ.ಮಂಡಳಿಯ ನಿಯಮಾವಳಿ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಯನ್ನು ಕರೆಯಬೇಕು. ಆದರೆ, 2010-11ನೇ ಸಾಲಿನಲ್ಲಿ ಒಂದು ಸಭೆ ಮಾತ್ರ ಕಾಟಾಚಾರಕ್ಕೆ ನಡೆದಿದೆ. 2011-12ರಲ್ಲಿ ಎರಡು ಸಭೆಗಳನ್ನು ಮಾಡಲಾಗಿದೆ. ಆದರೆ, ಈ ಸಭೆಗಳಲ್ಲೂ ಅನುದಾನದ ಕೊರತೆ ಮುಖ್ಯವಾಗಿ ಚರ್ಚೆಯಾಗಿದೆ.2011-12 ನೇ ಸಾಲಿನ ಬಜೆಟ್‌ನಲ್ಲಿ ಮಂಡಳಿಗೆ ದೊರೆತಿದ್ದು ಒಟ್ಟು 10 ಕೋಟಿ ರೂಪಾಯಿ ಮಾತ್ರ. ಈ ಮೊತ್ತ ಯಾವುದಕ್ಕೂ ಸಾಲುವುದಿಲ್ಲ. ಕನಿಷ್ಠ ಪ್ರತಿ ತಾಲ್ಲೂಕಿಗೆ 50 ಲಕ್ಷ ರೂ. ನಷ್ಟು ಸರ್ಕಾರ ಅನುದಾನ ನೀಡಬೇಕು ಎಂದು ಆಗ್ರಹಿಸಿರುವ ಸದಸ್ಯರು ಫೆ. 9ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.1995ರಲ್ಲಿ ಆರಂಭವಾದ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ನಿರಂತರವಾಗಿ ಅನುದಾನದ ಕೊರತೆ ಎದುರಿಸುತ್ತ ಬಂದಿದೆ. 2008-09ರಲ್ಲಿ ರೂ. 12.20 ಕೋಟಿ ಅನುದಾನ ನಿಗದಿಪಡಿಸಲಾಗಿತ್ತು. ಆದರೆ, ರೂ. 6.10 ಕೋಟಿ ಮಾತ್ರ ಬಿಡುಗಡೆಯಾಯಿತು. ಈ ಕೊರತೆ ನೀಗಿಸಲು 2009-10ನೇ ಸಾಲಿಗೆ ಹೊಸದಾಗಿ ಕ್ರಿಯಾಯೋಜನೆಯನ್ನೇ ರೂಪಿಸಲಿಲ್ಲ. ಇದರಿಂದ ಒಂದೇ ಒಂದು ಕಾಮಗಾರಿಯನ್ನು ಸಹ ಮಂಡಳಿ ಕೈಗೊಂಡಿರಲಿಲ್ಲ. 2010-11ಕ್ಕೆ ರೂ. 5 ಕೋಟಿ ಮಾತ್ರ ಅನುದಾನ ನೀಡಲಾಯಿತು.`ಮಲೆನಾಡು ಅಭಿವೃದ್ಧಿ ಮಂಡಳಿಗೆ ರೂ. 35 ಕೋಟಿ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ರೂ. 38 ಕೋಟಿ ನೀಡಲಾಗಿದೆ. ಆದರೆ, ನಮ್ಮದು ವ್ಯಾಪಕವಾದ ಪ್ರದೇಶವಾಗಿದ್ದರೂ ಅತಿ ಕಡಿಮೆ ಅನುದಾನ ನೀಡಲಾಗುತ್ತಿದೆ. ಮಂಡಳಿ ವ್ಯಾಪ್ತಿಯಲ್ಲಿ ಬರ ಪೀಡಿತ ಪ್ರದೇಗಳು ಇರುವುದರಿಂದ ರೂ. 50 ಕೋಟಿ ನೀಡುವಂತೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದೇವೆ. ಅನುದಾನ ನೀಡದಿದ್ದರೆ ಮಂಡಳಿಯನ್ನೇ ಮುಚ್ಚಿ ಎಂದು ಸದಸ್ಯರು ಸಹ ಆಗ್ರಹಿಸಿದ್ದಾರೆ~ ಎಂದು ಮಂಡಳಿ ಅಧ್ಯಕ್ಷ ರಾಜಶೇಖರ್ ಸಿಂಧೂರ್ ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry