ಬಿಳಿಯ ಕೋಲೇ ಬದುಕಿನ ಆಧಾರ

7

ಬಿಳಿಯ ಕೋಲೇ ಬದುಕಿನ ಆಧಾರ

Published:
Updated:

ದೊಡ್ಡಬಳ್ಳಾಪುರ: `ಮೂರು ತಿಂಗಳಾಯಿತು ನಮ್ಮ ಮನೆ ಕಡೆಗೆ ಪೋಸ್ಟ್ ಮ್ಯಾನ್ ಬಂದು. ಪಿಂಚಣಿ ಕೇಳಿದರೆ ಸರ್ಕಾರದಿಂದ ಹಣ ಬಂದಿಲ್ಲ ಅಂತಾರೆ. ಅದಕ್ಕೆ ಅಂಚೆ ಕಚೇರಿಗೆ ಹೋಗಿ ಕೇಳೋಣ ಅಂತಾ ಬಂದೆ~ ಎಂದು ತಮ್ಮ ಅಳಲು ತೋಡಿಕೊಂಡವರು ನಗರದ ಚೈತನ್ಯ ನಗರದ ನಿವಾಸಿ ನಾರಾಯಣಪ್ಪ.ನಾರಾಯಣಪ್ಪ ಶೇಕಡ 70ರಷ್ಟು ದೃಷ್ಟಿ ದೋಷ ಹೊಂದಿದ ವೃದ್ಧರು. ಶೇ.70 ಕ್ಕಿಂತಲೂ ಹೆಚ್ಚು ದೃಷ್ಟಿದೋಷ ಹೊಂದಿದವರಿಗೆ ಸರ್ಕಾರ ಪ್ರತಿ ತಿಂಗಳೂ ಒಂದು ಸಾವಿರ ರೂಗಳ ವೇತನ ನೀಡುತ್ತದೆ. ಈ ಹಣವನ್ನು ಪಡೆಯಲು ಅವರು ಕೋಲಿನ ಸಹಾಯದಿಂದ ಅಂಚೆಕಚೇರಿಗೆ ಬಂದಿದ್ದರು. ಆದರೆ ಇತ್ತೀಚೆಗೆ ಈ ಹಣ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬುದು ಇವರ ಕೊರಗು.`ಬೇರೊಬ್ಬರನ್ನು ಅವಲಂಬಿಸಿಯೇ ಜೀವನ ಮಾಡುವ ನಮ್ಮಂತಹವರಿಗೆ ಹಣ ಇಲ್ಲ ಅಂದರೆ ಹೇಗೆ ಬದುಕು ಸಾಗಿಸಬೇಕು~ ಎಂದು ಅವರು ಪ್ರಶ್ನಿಸುತ್ತಾರೆ. `ಅದಕ್ಕಾಗಿಯೇ ಅಂಚೆ ಕಚೇರಿವರೆಗೂ ಬರಬೇಕಾಯಿತು~ ಎಂಬುದು ಅವರ ನಿಸ್ಸಹಾಯಕ ವಿವರಣೆ.ಮಾರ್ಗದರ್ಶಿ: 9ನೇ ತರಗತಿವರೆಗೆ ಓದಿರುವ ನಾರಾಯಣಪ್ಪನವರಿಗೆ ಮೊದಮೊದಲು `ರಾತ್ರಿ ವೇಳೆ ಮಾತ್ರ ಅಲ್ಪಸ್ವಲ್ಪ ದೃಷ್ಟಿಯ ತೊಂದರೆಯಿತ್ತು. ಆದರೆ ನಂತರದ ದಿನಗಳಲ್ಲಿ ಪೂರ್ಣ ಪ್ರಮಾಣದ ದೋಷ ಕಾಣಿಸಿಕೊಂಡಿತು.ಲಯನ್ಸ್  ಕ್ಲಬ್‌ನ ಕಣ್ಣಾಸ್ಪತ್ರೆ ಸೇರಿದಂತೆ ಹಲವಾರು ವೈದ್ಯರ ಬಳಿ ಈ ಬಗ್ಗೆ ಪರೀಕ್ಷೆ ನಡೆಸಲಾಯಿತು. ಆದರೆ ಕಣ್ಣಿನ ನರ ಶಕ್ತಿ ಕಳೆದುಕೊಂಡಿರುವುದರಿಂದ ಕಣ್ಣಿನ ದೃಷ್ಟಿ ಬರುವಂತೆ ಮಾಡುವುದು ಸಾಧ್ಯ ಇಲ್ಲ ಎಂದು ಹೇಳಿದರು.ಅಂದಿನಿಂದ ಅಕ್ಕನ ಮನೆಯಲ್ಲಿಯೇ ವಾಸವಾಗಿದ್ದೇನೆ. ನಗರದಲ್ಲಿನ ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ ಬಿಳಿಕೋಲು ನೀಡಿದೆ. ಈ ಕೋಲೆ ಇವತ್ತು ನಮ್ಮಂತಹ ಅಂಧರ ಬಾಳಿಗೆ ಮಾರ್ಗದರ್ಶಿಯಾಗಿದೆ ಎನ್ನುತ್ತಾರೆ ಅವರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry