ಭಾನುವಾರ, ಮೇ 16, 2021
28 °C

ಬಿಳಿ ಅಂಗಿಯ ಮೇಲೆ ಕೊಳೆ!

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಬಿಳಿ ಅಂಗಿಯ ಮೇಲೆ ಕೊಳೆ!

ಜಯಲಲಿತಾ ಪ್ರಧಾನಿ ಮನಮೋಹನ್ ಸಿಂಗ್ ಎದುರು ಕುಳಿತು, `ನಿಮ್ಮ ಹಣಕಾಸು ಸಚಿವರು ವಂಚನೆಯಿಂದ ಚುನಾಯಿತರಾಗಿದ್ದಾರೆ. 2009ರ ಲೋಕಸಭಾ ಚುನಾವಣೆಯಲ್ಲಿ ಡೇಟಾಎಂಟ್ರಿ ಆಪರೇಟರನ್ನು ಬುಟ್ಟಿಗೆ ಹಾಕಿಕೊಂಡು ನಮ್ಮ ಎಐಡಿಎಂಕೆ ಪಕ್ಷದ ರಾಜಾ ಕಣ್ಣಪ್ಪನ್‌ಗೆ ಬಂದಿದ್ದ ಕೆಲವು ವೋಟುಗಳನ್ನು ತಮ್ಮ ಖಾತೆಗೆ ಹಾಕಿಸಿಕೊಂಡರು.

ಚುನಾವಣೆಯ ಫಲಿತಾಂಶ ಪ್ರಕಟಿಸುವಾಗಲೂ ಮೊದಲಿಗೆ ಮೂರು ಸಾವಿರ ಮತಗಳ ಅಂತರದಿಂದ ಕಣ್ಣಪ್ಪನ್ ಗೆದ್ದಿದ್ದಾರೆ ಎಂದೇ ಘೋಷಿಸಲಾಗಿತ್ತು. ಆದರೆ, ಅದನ್ನು ಪ್ರಶ್ನಿಸಿದ ಚಿದಂಬರಂ ಆಮೇಲೆ ಫಲಿತಾಂಶ ತಮ್ಮ ಕಡೆಗೆ ವಾಲುವಂತೆ ಮಾಡಿಕೊಂಡರು~ ಎಂದು ದೂರಿದ್ದರು.

`2 ಜಿ ಹಗರಣದಲ್ಲಿ ನಷ್ಟ ಮಾಡಿರುವವರ ವಿರುದ್ಧ ಕಟುವಾದ ಕ್ರಮ ತೆಗೆದುಕೊಳ್ಳುವ ಬದಲು ಈ ಪ್ರಕರಣವನ್ನು ಮುಚ್ಚಿಹಾಕಬೇಕು ಎಂದು ಪ್ರಧಾನಮಂತ್ರಿ ಯವರಿಗೆ ಹಣಕಾಸು ಸಚಿವರೇ ಮನವಿ ಮಾಡಿರುವ ಸಂಗತಿ ಗೊತ್ತಾಗಿ ನಮಗೆ ಅಚ್ಚರಿಯಾಗಿದೆ~ ಎಂದು ಮೊನ್ನೆಮೊನ್ನೆ ಎಜಿ ಹಗರಣಕ್ಕೆ ಸಂಬಂಧಿಸಿದಂತೆ `ಪಬ್ಲಿಕ್ ಅಕೌಂಟ್ಸ್ ಕಮಿಟಿ~ (ಪಿಎಸಿ) ತನ್ನ ವರದಿಯಲ್ಲಿ ಬರೆದುಕೊಂಡಿತ್ತು.

ಬಿಳಿ ಅಂಗಿ-ಬಿಳಿ ಪಂಚೆಯನ್ನೇ ಹೆಚ್ಚಾಗಿ ಹಾಕಿಕೊಳ್ಳುವ, ಮೃದು ಮಾತಿನ, ಜಿಗುಟು ಸ್ವಭಾವವನ್ನೇ ಮುಖದ ಮೇಲಿಟ್ಟುಕೊಂಡು ಓಡಾಡುವಂತೆ ಕಾಣುವ, ನಾಟಕ ಬೆರೆತಂತೆ ನಗುವ ಪಿ.ಚಿದಂಬರಂ ವ್ಯಕ್ತಿತ್ವ ಕಣ್ಣಿಗೆ ಕಾಣುವಷ್ಟೇ ಸತ್ಯ ಅಲ್ಲ.

ಅವರ ಬಿಳಿ ಉಡುಪಿಗೆ ಆಗೀಗ ಕೊಳೆ ಮೆತ್ತಿಕೊಂಡಿದೆ. ಅವರಾಡುವ ಮೃದುಮಾತಿನಲ್ಲಿ ಸತ್ಯ ಎಷ್ಟೋ ಸಲ ಮರೆಯಾದದ್ದಿದೆ. ಆದರೂ ಅವರ ರಾಜಕೀಯ ಸಂಕಲ್ಪ ಹಾಗೂ ಈ ಕ್ಷೇತ್ರದಲ್ಲಿನ ನಿರಂತರ ಪಯಣ ಅಚ್ಚರಿ ಹುಟ್ಟಿಸುವಂತಿದೆ.

ಜಯಲಲಿತಾ ತಮ್ಮ ಮೇಲೆ ಆರೋಪ ಮಾಡಿದ ಕೆಲವೇ ನಿಮಿಷಗಳ ನಂತರ, `ಆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಜಯಲಲಿತಾ ಮಾತು ನ್ಯಾಯಾಲಯ ನಿಂದನೆಯಾಗುತ್ತದೆ~ ಎಂದು ಚಿದಂಬರಂ ಪ್ರತಿಕ್ರಿಯಿಸಿದ್ದರು.

ವಿಷಯಾಂತರ ಮಾಡುವ ಜಾಣ್ಮೆ ಅವರಿಗೆ ಕರಗತ. ದೆಹಲಿಯಲ್ಲಿ ಇತ್ತೀಚೆಗೆ ಬಾಂಬ್ ಸ್ಫೋಟಗೊಂಡಾಗ ಅವರು ಅಲ್ಲಿನ ಭದ್ರತೆಯ ಕುರಿತು ಮಾತನಾಡುವ ಬದಲು ಕರ್ನಾಟಕದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಿದ್ದ ಸ್ಫೋಟದ ತನಿಖೆ ಸರಿಯಾಗಿ ನಡೆದಿಲ್ಲವೆಂದು ದೂರಿದ್ದರು.

ಮೊನ್ನೆ ಶುಕ್ರವಾರವಷ್ಟೇ (ಸೆ.16) 66ನೇ ವರ್ಷಕ್ಕೆ ಕಾಲಿಟ್ಟ ಚಿದಂಬರಂ ಹುಟ್ಟಿದ್ದು ಶಿವಗಂಗಾ ಜಿಲ್ಲೆಯ ಕಣಾದುಕಥನ್ ಎಂಬಲ್ಲಿ. ತಂದೆ ಎಲ್.ಪಳನಿಯಪ್ಪ ಚೆಟ್ಟಿಯಾರ್.
ತಾಯಿ ಲಕ್ಷ್ಮಿ ಆಚಿ.  ಅವರದ್ದು ಪ್ರತಿಷ್ಠಿತ ಚೆಟ್ಟಿನಾಡ್ ಕುಟುಂಬ. ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರದಲ್ಲಿ ಬಿ.ಎಸ್‌ಸಿ. ಪದವಿ ಪಡೆದ ನಂತರ ಅವರು ಮದ್ರಾಸ್ `ಲಾ ಕಾಲೇಜ್~ನಲ್ಲಿ ಕಾನೂನು ಪದವಿ ಓದಿದರು. ಹಾರ್ವರ್ಡ್ ಬಿಸಿನೆಸ್ ಶಾಲೆಯಲ್ಲಿ ಕಲಿತದ್ದು ಎಂ.ಬಿ.ಎ. ಚೆನ್ನೈನ ಲಯೋಲಾ ಕಾಲೇಜಿನ ಸ್ವಾತಕೋತ್ತರ ಪದವಿಯೂ ವಿದ್ಯಾರ್ಜನೆಯ ಪಟ್ಟಿಗೆ ಸೇರಿದೆ.

1984 ಚಿದಂಬರಂ ಬದುಕಿನ ಮಹತ್ವದ ವರ್ಷ. ಅವರು ಚೆನ್ನೈ ಹೈಕೋರ್ಟ್‌ನಲ್ಲಿ ಸೀನಿಯರ್ ಅಡ್ವೊಕೇಟ್ ಆದ ವರ್ಷವೂ ಅದೇ, ರಾಜಕೀಯರಂಗಕ್ಕೆ ಕಾಲಿಟ್ಟ ವರ್ಷವೂ ಅದೇ.

ಶಿವಗಂಗಾ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆಯಾದ ಅವರು 1985ರಲ್ಲಿ ರಾಜೀವಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ವಾಣಿಜ್ಯ ಖಾತೆಯ ಉಪ ಸಚಿವರಾಗಿ ಸಾರ್ವಜನಿಕ ಸೇವೆ ಆರಂಭಿಸಿದರು.

ಟೀ ಬೆಲೆಯನ್ನು ಇಳಿಸುವ ಹೊಣೆಗಾರಿಕೆ ಆಗ ಅವರ ಮೇಲಿತ್ತು. ದರ ನಿಗದಿಯಲ್ಲಿ ಅವರು  ಮಾಡಿದ ಬದಲಾವಣೆಗಳಿಂದ ಶ್ರೀಲಂಕನ್ ಟೀ ಮಾರಾಟ ನೆಲಕಚ್ಚಿತು. ಇದನ್ನು ಶ್ರೀಲಂಕಾ ಸರ್ಕಾರ ಖಂಡಿಸಿತು. ತಮ್ಮ ಚುರುಕುತನದಿಂದಲೇ  ಅವರು ರಾಜಕೀಯ ವಲಯದಲ್ಲಿ ಬಲು ಬೇಗ ಲಯ ಕಂಡುಕೊಂಡರು.

1986ರಲ್ಲಿ ಅವರನ್ನು ಕೇಂದ್ರದ ಸಹಾಯಕ ಸಚಿವರ ಮಟ್ಟಕ್ಕೆ ಏರಿಸಲಾಯಿತು. ಸಾರ್ವಜನಿಕ ಸಮಸ್ಯೆಗಳು ಹಾಗೂ ಪಿಂಚಣಿ ಸಂಬಂಧಿತ ಖಾತೆಯಲ್ಲಿ ಅವರಿಗೆ ಜವಾಬ್ದಾರಿ ಲಭಿಸಿತು. ಅದೇ ವರ್ಷ ಆಂತರಿಕ ಭದ್ರತಾ ಸಚಿವರ `ಜೂನಿಯರ್~ ಆಗಿ ಇನ್ನೊಂದು ಮೆಟ್ಟಿಲೇರುವ ಅವಕಾಶ ಸೃಷ್ಟಿಯಾಯಿತು. ಈ ಸುಶಿಕ್ಷಿತ ಯುವಕನನ್ನು ರಾಜಕೀಯದಲ್ಲಿ ಬೆಳೆಯಲು ಬಿಟ್ಟರೆಂಬ ಖ್ಯಾತಿ ಆಗ ರಾಜೀವ್‌ಗಾಂಧಿ ಅವರದ್ದಾಯಿತು.

1984, 1989, 1991, 1996, 2004 ಹಾಗೂ 2009ರ ಲೋಕಸಭಾ  ಚುನಾವಣೆಗಳಲ್ಲಿ ಶಿವಗಂಗಾ ಕ್ಷೇತ್ರದಿಂದ ಅವರು ಮರು ಆಯ್ಕೆ ಆಗುತ್ತಲೇ ಬಂದಿದ್ದಾರೆ. ಪಿ.ವಿ. ನರಸಿಂಹ ರಾವ್ ಸರ್ಕಾರದಲ್ಲಿ ಮೊದಲು ಸಿಕ್ಕಿದ್ದು ವಾಣಿಜ್ಯ  ಖಾತೆ.

ಅವರು ಕಾಂಗ್ರೆಸ್ ತ್ಯಜಿಸಿ ಅದರದ್ದೇ ಕವಲೆಂಬಂತೆ ತಮಿಳುನಾಡಿನಲ್ಲಿ ಹುಟ್ಟಿಕೊಂಡ `ತಮಿಳು ಮನಿಲಾ ಕಾಂಗ್ರೆಸ್~ (ಟಿಎಂಸಿ) ಸೇರಿಕೊಂಡರು. 1996ರ ಚುನಾವಣೆಯ ನಂತರ ಟಿಎಂಸಿ ಹಾಗೂ ದೇಶದ ಇತರ ಕೆಲವು ಪಕ್ಷಗಳು ಸೇರಿ ಸಮ್ಮಿಶ್ರ ಸರ್ಕಾರ ರಚಿತವಾಯಿತು. ಅದು ಚಿದಂಬರಂ ರಾಜಕೀಯ ಬದುಕಿನ ದೊಡ್ಡ ತಿರುವು.

ಯಾಕೆಂದರೆ, ಅವರು ಮೊದಲಿಗೆ ಹಣಕಾಸು ಸಚಿವರಾದದ್ದೇ ಆಗ. ಸಮ್ಮಿಶ್ರ ಸರ್ಕಾರ ಉಳಿದದ್ದು ಎರಡೇ ವರ್ಷವಾದರೂ ಅಷ್ಟರಲ್ಲೇ ಚಿದಂಬರಂ `ಚರಿಷ್ಮಾ~ ಬೆಳೆಸಿಕೊಂಡರು.2004ರ ಚುನಾವಣೆಯ ನಂತರ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲೂ ಅವರಿಗೆ ಹಣಕಾಸು  ಖಾತೆಯೇ ಸಿಕ್ಕಿತು.

ಮುಂಬೈನಲ್ಲಿ ನಡೆದ ಸರಣಿ ಸ್ಫೋಟಗಳ ನೈತಿಕ ಹೊಣೆ ಹೊತ್ತು ಶಿವರಾಜ್ ಪಾಟೀಲ್ ರಾಜೀನಾಮೆ ಕೊಟ್ಟ ನಂತರ ಆ ಸ್ಥಾನ ತೆರವಾಯಿತು. ಅಲ್ಲಿಗೆ ನವೆಂಬರ್ 30, 2008ರಲ್ಲಿ ಮತ್ತೆ ಬಂದದ್ದು ಇದೇ ಚಿದಂಬರಂ. ಅವರ ಆಯ್ಕೆಯ ಕುರಿತು ಆಗ ಜನಬೆಂಬಲ ಕೂಡ ವ್ಯಕ್ತವಾಯಿತು.  2009ರಲ್ಲಿ ಮತ್ತೆ ಶಿವಗಂಗಾ  ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಚಿದಂಬರಂ ಈಗ ಗೃಹ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ.

ತಮಿಳುನಾಡು ಸಂಪ್ರದಾಯದ ಬೇರಿನವರಾದ ಚಿದಂಬರಂ ಹೀಗೆ ಚಕಚಕನೆ ರಾಜಕೀಯದ ಏಣಿಯ ಮೆಟ್ಟಿಲುಗಳನ್ನು ಹತ್ತಿದರು. ಆಗೀಗ ಅವರು ಕಾಲುಜಾರಿದ್ದೂ ಉಂಟು.

ಬ್ರಿಟಿಷ್ ಆರ್ಥಿಕ ತಜ್ಞ ಹಾಗೂ ತತ್ವಜ್ಞಾನಿ ಫ್ರೆಡ್ರಿಕ್ ಹಯೇಕ್ ಪ್ರತಿಪಾದಿಸಿದ್ದ ಮುಕ್ತ ಮಾರುಕಟ್ಟೆ ಪರಿಕಲ್ಪನೆಯ ಟೀಕಕಾರರಾಗಿದ್ದ ಚಿದಂಬರಂ, ಗೋಧಿ ಹಾಗೂ ಅಕ್ಕಿಯ ವಾಯದಾ ವಹಿವಾಟು ನಿಷೇಧಿಸುವ ಮೂಲಕ ಜರ್ಮನಿಯ ಸಮಾಜ ವಿಜ್ಞಾನಿ ಫ್ರೆಡ್ರಿಕ್ ಎಂಜೆಲ್ಸ್ ಸಿದ್ಧಾಂತವನ್ನು ಅನುಕರಿಸಿದರು.

ಯೋಜಿತ ಆರ್ಥಿಕತೆಯನ್ನು ಬೆಂಬಲಿಸಿದ ಅವರು ಸಿಮೆಂಟಿನ ರಫ್ತಿನ ಮೇಲೆ ಕಡಿವಾಣ ಹೇರಿ ಅನೇಕ ಉದ್ಯಮಿಗಳನ್ನು ಎದುರುಹಾಕಿಕೊಂಡರು. 1997ರಲ್ಲಿ ತಾವು ಮಂಡಿಸಿದ ಬಜೆಟ್ಟನ್ನು ಅವರು `ಕನಸಿನ ಬಜೆಟ್~ ಎಂದೇ ಬಣ್ಣಿಸಿದರು. ಯಾಕೆಂದರೆ, ಆ ಬಜೆಟ್ ಹೆಚ್ಚಾಗಿ ವ್ಯಾಪಾರಿಗಳ, ಉದ್ದಿಮೆದಾರರ ಪರವಾಗಿತ್ತು.

ಸಾಹಿತ್ಯಾಸಕ್ತರೂ ಆಗಿರುವ ಚಿದಂಬರಂ ತಮಿಳಿನ ಸಾಹಿತ್ಯಕ ಸಂಘಟನೆಯಾದ `ಇಲಕಿಯ ಚಿಂತನೈ~ನ ಟ್ರಸ್ಟಿಗಳಲ್ಲಿ ಒಬ್ಬರು.

ವಿವಾದಗಳು ಅವರನ್ನು ಹಲವು ಬಾರಿ ಸುತ್ತಿಕೊಂಡಿದ್ದಿದೆ. ಅಮೆರಿಕದ ವಿವಾದಾತ್ಮಕ ಎನ್ರಾನ್ ಎಂಬ ವಿದ್ಯುತ್ ಉತ್ಪಾದನಾ ಕಂಪೆನಿಯ ಹಿರಿಯ ವಕೀಲರಾಗಿ ಅವರು ಕೆಲಸ ನಿರ್ವಹಿಸಿ ಟೀಕೆ ಎದುರಿಸಿದ್ದರು.

ಧಾಬೋಲ್ ವಿದ್ಯುತ್ ಯೋಜನೆಗೆ ಮತ್ತೆ ಜೀವ ಕೊಡುವ ನಿಟ್ಟಿನಲ್ಲಿ ಅವರು ವಾದಿಸಿದ್ದರು. ಷೇರು ಹಗರಣದಲ್ಲಿ  ಶಾಮೀಲಾಗಿದೆ ಎಂಬ ಆರೋಪ ಹೊತ್ತ `ಫೇರ್‌ಗ್ರೋತ್~ ಕಂಪೆನಿಯಲ್ಲಿ ಬಂಡವಾಳ ಹೂಡಿದ ನೈತಿಕ ಹೊಣೆ ಹೊತ್ತು 1992ರಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಒಂದೊಮ್ಮೆ ತಮಿಳುನಾಡಿನಲ್ಲಿ ಚುನಾವಣಾ ಭಾಷಣ ಮಾಡುವಾಗ ಹಿಂದಿ ಭಾಷಿಕರಿಗೆ ಪೆಟ್ಟುಕೊಡುವ ಮಾತುಗಳನ್ನಾಡಿ ದೇಶದ ಬಹುಭಾಷಿಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಎನ್‌ಡಿಎ  ಸರ್ಕಾರದಲ್ಲಿ ಹಿಂದಿ ಮಾತನಾಡುವ ಮಂತ್ರಿಗಳೇ ಹೆಚ್ಚಾಗಿದ್ದಾರೆ ಎಂಬುದು ಅವರು ಭಾಷಣದಲ್ಲಿ ಮಾಡಿದ್ದ ಟೀಕೆ.

1997ರಲ್ಲಿ ಅವರು ಪ್ರಕಟಿಸಿದ `ಸ್ವಯಂ ಆದಾಯ ಘೋಷಣೆ~ ಯೋಜನೆಯನ್ನು ಭಾರತದ ಮಹಾ ಲೆಕ್ಕ ಪರಿಶೋಧಕರೇ ಟೀಕಿಸಿದ್ದರು. ಬ್ರಿಟನ್‌ನ `ವೇದಾಂತ~ ಎಂಬ ಗಣಿಗಾರಿಕಾ ಕಂಪೆನಿಯ ವಿವಾದಾತ್ಮಕ ಪ್ರಕರಣದಲ್ಲಿ ಆ ಕಂಪೆನಿಯ ಪರವಾಗಿ ಮುಂಬೈ ಹೈಕೋರ್ಟ್‌ನಲ್ಲಿ 2003ರವರೆಗೆ ವಾದ ಮಾಡಿದ್ದ ಚಿದಂಬರಂ, ಆ ಕಂಪೆನಿಯ ಮಂಡಳಿ ನಿರ್ದೇಶಕರಲ್ಲೂ ಒಬ್ಬರಾಗಿದ್ದರು.

ಚುನಾವಣೆಯ ಸಂದರ್ಭದಲ್ಲಿ ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ ಎಂಬ ಆರೋಪ ಬಂದಾಗ, 2006ರಲ್ಲಿ ಆ ಕುರಿತು ಮನಮೋಹನ್ ಸಿಂಗ್ ಹಾಗೂ ಚಿದಂಬರಂ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲು ಚುನಾವಣಾ ಆಯೋಗಕ್ಕೆ ಆಗಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅನುಮತಿ ನೀಡಿದ್ದರು.

1984ರಲ್ಲಿ ಸಿಖ್ಖರ ನರಮೇಧದ ಪ್ರಕರಣ ನಡೆದಿತ್ತು. ಆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಪಾತ್ರವಿಲ್ಲ ಎಂದು ಸಿಬಿಐ ಹೇಳಿತ್ತು. ಸರ್ಕಾರವೇ ಒತ್ತಡ ಹೇರಿ ಸಿಬಿಐ ಹಾಗೆ ಹೇಳುವಂತೆ ಮಾಡಿದೆಯೇ ಎಂದು ಜರ್ನೈಲ್ ಸಿಂಗ್ ಎಂಬ ಪತ್ರಕರ್ತ 2009ರಲ್ಲಿ  ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆದಾಗ ಕೇಳಿದರು. ಅದಕ್ಕೆ ಸಮರ್ಪಕ ಉತ್ತರ ಬಾರದಿದ್ದಾಗ, ಚಿದಂಬರಂ ಅವರತ್ತ ಬೂಟನ್ನು ತೂರಿದ್ದು ದೊಡ್ಡ ಸುದ್ದಿಯಾಗಿತ್ತು.

ವಿವಿಧ ಯೋಜನೆಗಳ ವಿಷಯದಲ್ಲಿ ಚಿದಂಬರಂ ಧೋರಣೆ, ದೆಹಲಿಯಲ್ಲಿ ಅಪರಾಧದ ಪ್ರಮಾಣ ಹೆಚ್ಚಿಸುವಲ್ಲಿ ವಲಸೆಗಾರರ ಪ್ರಮಾಣ ಹೆಚ್ಚಿರುವುದೇ ಕಾರಣ ಎಂದು ವಿಶ್ಲೇಷಿಸಿದ್ದು, ಮಾವೋವಾದಿಗಳ ದಾಳಿ ಹತ್ತಿಕ್ಕುವಲ್ಲಿ ವಿಫಲರಾರೆಂಬ ಟೀಕೆಗೆ ಒಳಪಟ್ಟಿದ್ದು- ಇವೆಲ್ಲವೂ ಚಿದಂಬರಂ ಅವರತ್ತ ಕೂರಂಬುಗಳು ತೂರಿಬಂದದ್ದಕ್ಕೆ ಉದಾಹರಣೆಗಳು.

ಇಷ್ಟಾದರೂ ಮೆಲುದನಿಯಲ್ಲೇ ಅವರಾಡುವ ಮಾತುಗಳು ಹೊಸ ಅರ್ಥಗಳನ್ನು ಹೊಮ್ಮಿಸುತ್ತಲೇ ಇವೆ. ಮಾತನಾಡಲು ಪ್ರಧಾನಿ ಮನಮೋಹನ್ ಸಿಂಗ್ ಪದೇಪದೇ ಇವರನ್ನೇ ಮುಂದುಬಿಡುವುದು ಮುಂದುವರಿದೇ ಇದೆ. ಹೀಗೆ ಚಿದಂಬರಂ ವಿಷಯಾಂತರ ಧಾಟಿ ಅವಿರತ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು