ಬಿಳಿ ಕೂದಲು ಹರೆಯದ ವೃದ್ಧಾಪ್ಯ

7

ಬಿಳಿ ಕೂದಲು ಹರೆಯದ ವೃದ್ಧಾಪ್ಯ

Published:
Updated:

ಜಾರ್ಜ್ ಕ್ಲೂನಿ ಹಾಗೂ ರಿಚರ್ಡ್ ಗೇರ್ ಅವರಂತಹ ಸೆಲೆಬ್ರಿಟಿಗಳು  ತಮ್ಮ ಬಿಳಿಯಾದ, ಗರಿಗರಿ ಕೂದಲಿನ ಮೂಲಕವೇ ಲಲನೆಯರು ತಮ್ಮ ಹಿಂದೆ ಬೀಳುವಂತೆ ಮಾಡಿ ಬಿಡುತ್ತಾರೆ. ಆದರೆ ಎಲ್ಲರಿಗೂ ಈ ರೀತಿ ಮಾಡುವುದು ಸಾಧ್ಯವಿಲ್ಲ. ಅಂದಹಾಗೆ ನಿಮ್ಮ ಕೂದಲು ನೀವು ಮೂವತ್ತು ವರ್ಷ ದಾಟುವ ಮುನ್ನವೇ ಬಿಳಿ ಬಣ್ಣಕ್ಕೆ ತಿರುಗುತ್ತಿದೆಯೇ?ಅಷ್ಟು ಬೇಗ ಬಿಳಿ ಕೂದಲು ಬರುತ್ತಿದೆ ಎಂದರೆ ಎಂಥವರಿಗೂ ಗಾಬರಿಯಾಗುತ್ತದೆ. ಜತೆಗೆ ತಮ್ಮ ಅಂದ ಕುಂದುತ್ತಿದೆಯೇನೋ ಎಂಬ ಆತಂಕವೂ ಮನೆ ಮಾಡಿಬಿಡುತ್ತದೆ. ಹಾಗಿದ್ದರೆ ಈ ರೀತಿ ಕೂದಲು ಬಹುಬೇಗನೇ ಬಿಳಿ ಬಣ್ಣಕ್ಕೆ ತಿರುಗಲು ಕಾರಣವಾದರೂ ಏನು? ವಂಶವಾಹಿಯೇ ಅಥವಾ ಹೆಚ್ಚುತ್ತಿರುವ ಒತ್ತಡವೇ? ಸತ್ಯಾಂಶ ಏನೆಂದರೆ ಈ ಎರಡು ಕಾರಣಗಳಿಂದಲೂ ಕೂದಲು ಬೆಳ್ಳಗಾಗುತ್ತದೆ.ನಮ್ಮ ಶರೀರದಲ್ಲಿ ಬಣ್ಣ ಉತ್ಪಾದಿಸುವ ಜೀವಕಣ­ಗಳು ವರ್ಣ ದ್ರವದ ಉತ್ಪಾದನೆಯನ್ನು ನಿಲ್ಲಿಸಿದ ದಿನದಿಂದಲೇ ನಮ್ಮ ತಲೆಯ ಕೂದಲಿನ ಬಣ್ಣ ಬಿಳಿ ಅಥವಾ ಬೂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಮೊದಲು ಒತ್ತಡಗ­ಳಿಂದ ಕೂದಲು ಹೇಗೆ ಬಣ್ಣ ಕಳೆದುಕೊಳ್ಳುತ್ತದೆ ಮತ್ತು ಉದುರಲು ಆರಂಭಿಸುತ್ತದೆ ಎಂಬುದನ್ನು ತಿಳಿಯೋಣ.ಒತ್ತಡದಿಂದ ಯಾವ ವಯಸ್ಸಿನಲ್ಲಿ ಇಂತಹ ಸಮಸ್ಯೆ ಬರುತ್ತದೆ ಎಂದು ಹೇಳಲಾಗದು. ಮಾನಸಿಕ ಒತ್ತಡದಿಂದ ಮೆದುಳಿಗೆ ಬೇಕಾದ ಅಗತ್ಯ ಪೋಷಕಾಂಶಗಳ ಪೂರೈಕೆ ನಿಂತು ಹೋಗಿ ಸಮಸ್ಯೆ ಶುರುವಾಗುತ್ತದೆ. ಇದರಿಂದ ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಹರೆಯದಲ್ಲಿ ಎಂತಹ ಒತ್ತಡ ಇರುತ್ತದೆ ಎಂದು ನಿಮಗೆ ಅಚ್ಚರಿಯಾಗ­ಬಹುದು. ಆದರೆ ಒತ್ತಡ ಕೇವಲ ಮಾನಸಿಕವಾಗಿ ಮಾತ್ರವಲ್ಲ ದೈಹಿಕವಾಗಿಯೂ ಆಗಬಹುದು. ಉದಾಹರಣೆಗೆ ತಲೆಗೆ ಪೆಟ್ಟಾದರೆ, ದೇಹದಲ್ಲಿ ಝಿಂಕ್‌ನಂತಹ ಪೋಷಕಾಂಶಗಳ ಕೊರತೆ ಕಂಡುಬಂದರೆ ಅಥವಾ ಇತರ ಬಾಹ್ಯ ಒತ್ತಡಗಳಿಂದಲೂ ಕೂದಲು ಬಿಳಿಯ ಬಣ್ಣಕ್ಕೆ ತಿರುಗಬಹುದು.ಇತ್ತೀಚಿನ ದಿನಗಳಲ್ಲಿ ಕೂದಲಿನ ತಜ್ಞರ ಬಳಿಗೆ ಹೆಚ್ಚು ಹೆಚ್ಚು ಯುವಜನರು (20-– 25 ವರ್ಷ) ಭೇಟಿ ನೀಡುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಒತ್ತಡವೇ ಇದಕ್ಕೆ ಕಾರಣ ಆಗಿರುವುದು ಕಂಡುಬಂದಿದೆ. ತಜ್ಞರ ಪ್ರಕಾರ, ಶರೀರದಲ್ಲಿನ ರೋಗ ನಿರೋಧಕ ಶಕ್ತಿಯ ಕುಂದುವಿಕೆ ಹಾಗೂ ಚರ್ಮದ ಕಾಯಿಲೆಗಳಿಂದಲೂ ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ.ಇತರ ಕಾರಣಕಳಪೆ ಆಹಾರ: ಉತ್ತಮ ಆರೋಗ್ಯಪೂರ್ಣ ಆಹಾರದ ಬದಲಾಗಿ ಜಂಕ್ ಫುಡ್ ನಿಮ್ಮ ನೆಚ್ಚಿನ ಆಹಾರ ಪದಾರ್ಥವಾಗಿದ್ದರೆ ಮೊದಲು ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ. ವಿಟಮಿನ್ ಬಿ, ಕಬ್ಬಿಣದ ಅಂಶ, ತಾಮ್ರ ಮತ್ತು ಅಯೋಡಿನ್‌ನಂತಹ ಪೋಷಕಾಂಶಗಳು ಶರೀರದಲ್ಲಿ ಕಡಿಮೆಯಾದರೆ, ಹರೆಯದಲ್ಲಿ ಬಿಳಿ ಕೂದಲಿನ ಸಮಸ್ಯೆ ಹೆಚ್ಚಾಗುತ್ತದೆ.ಆನುವಂಶೀಯತೆ: ಖಂಡಿತವಾಗಿಯೂ ಬಿಳಿ ಕೂದಲಿಗೆ ಆನುವಂಶೀಯತೆ ಬಹು ದೊಡ್ಡ ಕಾರಣ. ಇದರ ಜತೆಗೆ ಒತ್ತಡವೂ ಹೆಚ್ಚಾದರೆ ಇನ್ನಷ್ಟು ಬಹುಬೇಗನೇ ಬಿಳಿ ಕೂದಲು ಬಂದು ಬಿಡುತ್ತದೆ.ಶುಚಿತ್ವ: ನಿಮ್ಮ ಕೂದಲು ಹಾಗೂ ತಲೆಯ ಭಾಗದ ಚರ್ಮವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಆಗ ಬಿಳಿ ಕೂದಲಿನ ಸಮಸ್ಯೆಯಿಂದ ದೂರ ಉಳಿಯಬಹುದು.ಅನಾರೋಗ್ಯ: ಬಹುತೇಕ ಸಂದರ್ಭಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರೂ ಬಿಳಿ ಕೂದಲು ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಶರೀರ ಯಾವಾಗ ದುರ್ಬಲವಾಗುತ್ತದೋ ಸಹಜವಾಗಿಯೇ ತಲೆಯ ಭಾಗದ ಚರ್ಮ, ಶರೀರದ ಇತರ ಭಾಗಗಳಿಗೆ ಸೂಕ್ತ ಪೋಷಕಾಂಶದ ಪೂರೈಕೆ ಆಗುವು­ದಿಲ್ಲ. ಇದರಿಂದ ಶರೀರದಲ್ಲಿನ ವರ್ಣಧಾತುಗಳು ಜೀವ ಕಳೆದುಕೊಳ್ಳುವ ಮೂಲಕ ಕೂದಲು ಬೆಳ್ಳಗಾಗತೊಡಗುತ್ತದೆ.ವಲಸೆ ಹೋಗುವಿಕೆ: ಇತ್ತೀಚಿನ ದಿನಗಳಲ್ಲಿ ಕೆಲಸ ಹಾಗೂ ವಿದ್ಯಾಭ್ಯಾಸದ ಸಲುವಾಗಿ ಯುವಜನರು ವಿವಿಧೆಡೆಗೆ ವಲಸೆ ಹೋಗುತ್ತಿ­ದ್ದಾರೆ. ಇದರಿಂದ ಅವರ ಶರೀರ ಅನಿವಾರ್ಯವಾಗಿ ಬದಲಾದ ಹವಾಗುಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಅಲ್ಲದೆ ಆಹಾರ, ನೀರು ಕೂಡ ಬದಲಾಗಿ ಒತ್ತಡ ಸಂಭವಿಸುವುದರಿಂದ ಕೂದಲು ಬಿಳಿಯಾಗುತ್ತದೆ.ಅಲರ್ಜಿ: ಹೊರಗಿನಿಂದ ಬಂದವರು ಪರ ಊರಿನ  ಹವಾಗುಣಕ್ಕೆ ಹೊಂದಿಕೊಳ್ಳುವುದು ಕಷ್ಟವಾದಾಗ ವಿವಿಧ ಅಲರ್ಜಿಗಳು ಶುರುವಾಗಿ ಬಿಡುತ್ತವೆ. ಇಂತಹ ಕಾರಣಗಳಿಂದಲೂ ಕೂದಲು ಬಿಳಿಯಾಗಬಹುದು.ನೈಸರ್ಗಿಕವಾಗಿ ತಡೆಗಟ್ಟಿ

ಕೆಲ ಸಾಮಾನ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಬಿಳಿ ಕೂದಲಿನ ಸಮಸ್ಯೆಯಿಂದ ದೂರಾಗಬಹುದು. ಮೊದಲು ನಿಮ್ಮ ಕೂದಲನ್ನು ಕಪ್ಪಾಗಿಸಲು ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸದೆ, ದಿನನಿತ್ಯದ ಆಹಾರ ಸೇವನೆಯಲ್ಲಿ ಹೆಚ್ಚು ಹಸಿರು ತರಕಾರಿ, ಹಣ್ಣು ಹಂಪಲು ಸೇವಿಸಿ. ಉದಾಹರಣೆಗೆ, ಕ್ಯಾರೆಟ್ ಹೆಚ್ಚಾಗಿ ಸೇವಿಸಿದರೆ ಮೆದುಳಿನ ಭಾಗಕ್ಕೆ ರಕ್ತದ ಪೂರೈಕೆ ಹೆಚ್ಚಾ­ಗುತ್ತದೆ. ಇದರಿಂದ ತಲೆಯ ಭಾಗದ ಚರ್ಮ ಆರೋಗ್ಯ­ಯುತವಾಗಿ ಕೂದಲಿನ ಆರೋಗ್ಯ ಸಹ ವೃದ್ಧಿಸುತ್ತದೆ.

ದೂಳು ಹಾಗೂ ಇತರ ಮಾಲಿನ್ಯಗಳಿಂದ ಕೂದಲನ್ನು ರಕ್ಷಿಸಿಕೊಳ್ಳಿ. ಹೆಚ್ಚು ಕಾಲ ಪ್ರಯಾಣಿಸಬೇಕಾಗಿ ಬಂದರೆ, ಕೂದಲಿಗೆ ಕ್ಯಾಪ್ ಅಥವಾ ಬಟ್ಟೆ ಕಟ್ಟಿಕೊಳ್ಳುವುದನ್ನು ಮರೆಯಬೇಡಿ.ದೈನಂದಿನ ಆಹಾರ ಪದಾರ್ಥಗಳಲ್ಲಿ ಕರಿಬೇವಿನ ಸೇವನೆ ಹೆಚ್ಚಿಸಿಕೊಳ್ಳಿ. ಸಾಂಬಾರು, ಮಜ್ಜಿಗೆ ಮುಂತಾದ ಪದಾರ್ಥಗಳಲ್ಲಿ ಕರಿಬೇವಿನ ಬಳಕೆ ಹೆಚ್ಚಾಗಿರಲಿ. ಇದರಿಂದ ನಿಮ್ಮ ಆಹಾರ ಪದಾರ್ಥದ ಸ್ವಾದ ಹೆಚ್ಚುವುದಷ್ಟೇ ಅಲ್ಲ ಉಪಯುಕ್ತ ಪೋಷಕಾಂಶಗಳೂ ಲಭಿಸುತ್ತವೆ. ಕರಿಬೇವನ್ನು ಕೊಬ್ಬರಿ ಎಣ್ಣೆಯಲ್ಲಿ ಚೆನ್ನಾಗಿ ಕುದಿಸಿ ವಾರಕ್ಕೆ ಎರಡು ಬಾರಿ ಕೂದಲು ಹಾಗೂ ತಲೆಯ ಬುಡಕ್ಕೆ  ಮಸಾಜ್ ಮಾಡಿ. ಇದರಿಂದ ಕೂದಲು ಕಪ್ಪಾಗುತ್ತದೆ.ಮದರಂಗಿ ಜತೆಗೆ ಟೀ ಡಿಕಾಕ್ಷನ್ ಬೆರೆಸಿ ಪೇಸ್ಟ್ ಮಾಡಿಕೊಂಡು ರಾತ್ರಿ ಮಲಗುವ ಮುನ್ನ ತಲೆಗೆ ಹಚ್ಚಿ ಬೆಳಿಗ್ಗೆ ತೊಳೆದುಕೊಳ್ಳಿ. ಒಂದು ವೇಳೆ ರಾತ್ರಿ ಪೂರಾ ಬಿಡಲು ಸಾಧ್ಯವಾಗದೇ ಇದ್ದರೆ ಬೆಳಿಗ್ಗೆ ಒಂದು ಗಂಟೆ ತಲೆಗೆ ಪೇಸ್ಟ್ ಹಚ್ಚಿ, ಬಳಿಕ  ಮೃದುವಾದ ಶಾಂಪೂ ಬಳಸಿ ತೊಳೆದುಕೊಳ್ಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry