ಬುಧವಾರ, ಅಕ್ಟೋಬರ್ 23, 2019
27 °C

ಬಿವಿಎ ಪದವೀಧರರಿಂದ ರಾಜ್ಯಪಾಲರಿಗೆ ದೂರು

Published:
Updated:

ಬೆಂಗಳೂರು:  ಚಿತ್ರಕಲಾ ಶಿಕ್ಷಕರ ನೇಮಕಾತಿಗೆ ಬ್ಯಾಚುಲರ್ ಆಫ್ ವಿಷುಯಲ್ ಆರ್ಟ್ಸ್ (ಬಿ.ವಿ.ಎ) ಪದವೀಧರರನ್ನು ಪರಿಗಣಿಸದೆ ಇರುವುದರಿಂದ ಸಾವಿರಾರು ಜನರಿಗೆ ಅನ್ಯಾಯವಾಗಿದೆ ಎಂದು ನೊಂದ ಅಭ್ಯರ್ಥಿಗಳು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ದೂರು ನೀಡಿದ್ದಾರೆ.ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಖಾಲಿ ಇರುವ 282 ಚಿತ್ರಕಲಾ ಶಿಕ್ಷಕರ ಹುದ್ದೆಗಳ ಭರ್ತಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಕಳೆದ ತಿಂಗಳ 27ರಂದು ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿದೆ.ಆ ಪಟ್ಟಿಯಲ್ಲಿ ಬಿ.ವಿ.ಎ ಪದವೀಧರರ ಹೆಸರು ಇದೆ. ಆದರೆ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳು ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ ಪದವಿ ಪಡೆದ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಿ, ಬ್ಯಾಚುಲರ್ ಆಫ್ ವಿಷುಯಲ್ ಆರ್ಟ್ಸ್ ಪದವೀಧರರನ್ನು ಅನರ್ಹಗೊಳಿಸಿದ್ದಾರೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.ಚಿತ್ರಕಲಾ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದಾಗ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ ಅಥವಾ ಅದಕ್ಕೆ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ವಿಶ್ವವಿದ್ಯಾಲಯ ಅನುದಾನ ಆಯೋಗ 2001ರಲ್ಲೇ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ ಪದವಿಯನ್ನು ಬ್ಯಾಚುಲರ್ ಆಫ್ ವಿಷುಯಲ್ ಆರ್ಟ್ಸ್ ಎಂದು ಪರಿಗಣಿಸಿ, ನೂತನ ಪಠ್ಯಕ್ರಮವನ್ನು ಬಿಡುಗಡೆಗೊಳಿಸಿದೆ.ದೇಶದ ಬಹುತೇಕ ವಿಶ್ವವಿದ್ಯಾಲಯಗಳು 2002ರಿಂದ ಬಿ.ಎಫ್.ಎ ಪದವಿಗೆ ತತ್ಸಮಾನವಾಗಿ ಬಿ.ವಿ.ಎ ಪದವಿಯನ್ನು ನೀಡುತ್ತಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಸಹ ಇದೇ ರೀತಿ ಬಿ.ವಿ.ಎ ಪದವಿ ನೀಡುತ್ತಿದ್ದು, ಇದಕ್ಕೆ ರಾಜ್ಯಪಾಲರ ಅನುಮೋದನೆಯೂ ದೊರೆತಿದೆ. ಆದರೂ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಬಿ.ವಿ.ಎ ಪದವೀಧರರನ್ನು ನೇಮಕಾತಿಗೆ ಪರಿಗಣಿಸದೆ ಇರುವುದು ಸರಿಯಲ್ಲ ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ತಿದ್ದುಪಡಿಯಾಗಬೇಕು: ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಬಿ.ವಿ.ಎ ಪದವೀಧರರು ಚಿತ್ರಕಲಾ ಶಿಕ್ಷಕರ ನೇಮಕಕ್ಕೆ ಅರ್ಹರು ಎಂದು ಆದೇಶ ಹೊರಡಿಸಬೇಕು. ಈ ಸಂಬಂಧ 2-3 ಬಾರಿ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ತಿದ್ದುಪಡಿ ತರಲು ನಿರ್ಧರಿಸಲಾಗಿತ್ತು. ಆದರೆ ಇದುವರೆಗೂ ಆಗಿಲ್ಲ. ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ ಎಂದು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎ.ಮುರಿಗೆಪ್ಪ `ಪ್ರಜಾವಾಣಿ~ಗೆ ತಿಳಿಸಿದರು.`ಹಿಂದೆ ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿದ್ದ ಚಿತ್ರಕಲಾ ಮಹಾವಿದ್ಯಾಲಯಗಳನ್ನು 1994ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಲಾಯಿತು. ಆಗಿನಿಂದ ವಿಶ್ವವಿದ್ಯಾಲಯವೇ ಪರೀಕ್ಷೆಗಳನ್ನು ನಡೆಸಿ ಪದವಿ ನೀಡುತ್ತಿದೆ. ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವಂತೆ ಒತ್ತಾಯಿಸುತ್ತಿದ್ದೇವೆ~ ಎಂದರು.ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಈ ಬಗ್ಗೆ ಮಾತನಾಡಿ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)