ಬಿಸಿಊಟ ಅಡುಗೆಯವರ ಯಾತನೆ: ದಾರಿ ತಪ್ಪಿದ ಸರ್ಕಾರಿ ಯೋಜನೆ

ಶನಿವಾರ, ಮೇ 25, 2019
33 °C

ಬಿಸಿಊಟ ಅಡುಗೆಯವರ ಯಾತನೆ: ದಾರಿ ತಪ್ಪಿದ ಸರ್ಕಾರಿ ಯೋಜನೆ

Published:
Updated:

ಭಾಲ್ಕಿ: ಎಲ್ಲೆಡೆಯ ಶಾಲೆಗಳಲ್ಲಿನ ಮಕ್ಕಳ ಹಾಜರಾತಿ ಸುಧಾರಿಸಲು ಅಕ್ಷರ ದಾಸೋಹ ಯೋಜನೆ ಜಾರಿಗೆ ಬಂದಿದೆ. ಆದರೆ ಇಲ್ಲಿಯೂ ಸಹ ಸಾಕಷ್ಟು ಅವ್ಯವಸ್ಥೆ ಕಂಡು ಬಂದಿರುವದರಿಂದ ಅಡುಗೆಯ ಸಿಬ್ಬಂದಿಗಳ ನರಕ ಯಾತನೆ ಅಸಹನೀಯವಾಗಿದೆ. ಬಿಸಿ ಊಟದ ಅಡುಗೆ ಮಾಡಲು ಇಲಾಖೆಯಿಂದ ಎಲ್ಲ ಶಾಲೆಗಳಿಗೆ ಅಡುಗೆ ಅನಿಲದ ಸಿಲಿಂಡರ್‌ಗಳು ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗಿವೆ. ಜೊತೆಗೆ ಗ್ಯಾಸ್ ಒಲೆಗಳು, ಇತರೆ ಸಲಕರಣೆಗಳನ್ನು ಒದಗಿಸಲಾಗಿದೆ. ಆದರೆ ಇಂಧನ ಪೂರೈಕೆಯ ಏಜೆನ್ಸಿಗಳು ಮಾತ್ರ ಮುಟ್ಟಿಸಬೇಕಾದ ತುಂಬಿದ ಸಿಲೆಂಡರ್‌ಗಳನ್ನು ಸರಬರಾಜು ಮಾಡುತ್ತಿಲ್ಲ.ಹೀಗಾಗಿ ಅಡುಗೆ ಸಿಬ್ಬಂದಿಯವರು ಕಟ್ಟಿಗೆ ಬಳಸಿ ಹೊಗೆಯಲ್ಲಿ ಅಡುಗೆ ಮಾಡುತ್ತಿರುವದು ಬಹುತೇಕ ಶಾಲೆಗಳಲ್ಲಿನ ವಸ್ತು ಸ್ಥಿತಿಯಾಗಿದೆ. ಹೊಗೆಯಲ್ಲಿ ಕಣ್ಣೀರು ಒರೆಸುತ್ತಾ ಕೂರುವ ಅನಿವಾರ್ಯತೆ ಉಂಟಾಗಿದೆ.ಅನೇಕ ಶಾಲೆಗಳಲ್ಲಿನ ಅಡುಗೆ ಕೋಣೆಗಳ ಕಟ್ಟಡಗಳೂ ಸಹ ಕಳಪೆ ಕಾಮಗಾರಿಯಿಂದ ಕೂಡಿವೆ. ಮಳೆಗಾಲದಲ್ಲಿ ಅಕ್ಷರಶ: ಸೋರುತ್ತಿವೆ. ಬಾಗಿಲು ಕಿಟಕಿಗಳೂ ಮಾಯವಾಗಿವೆ. ಸಕಾಲಕ್ಕೆ ಅಡುಗೆಯವರಿಗೆ ಗ್ಯಾಸ್ ಸಿಲಿಂಡರ್ ಲಭಿಸುತ್ತಿಲ್ಲವಾದ್ದರಿಂದ ಬಹುತೇಕ ಒಲೆಗಳು ಮೂಲೆ ಸೇರಿವೆ. ಶಾಲೆಗಳಲ್ಲಿರಬೇಕಾದ ಖಾಲಿ ಸಿಲಿಂಡರ್‌ಗಳು ತಾತ್ಕಾಲಿಕವಾಗಿ ಸಿಬ್ಬಂದಿ, ಎಸ್‌ಡಿಎಂಸಿ ಸದಸ್ಯರು ಮತ್ತು ಖಾಸಗಿಯವರ ಬಳಕೆಗೆ ಹೋಗುತ್ತಿವೆ ಎಂಬುದು ಅನೇಕರ ಆರೋಪವಾಗಿದೆ.ಅಧಿಕಾರಿಗಳೇನಂತಾರೆ: ಇದನ್ನೆಲ್ಲ ಸಂಬಂಧಪಟ್ಟ ಅಧಿಕಾರಿಗಳಿಗೆ ಗೊತ್ತಿಲ್ಲವಂತಲ್ಲ. ಆದರೆ ಗೊತ್ತಿದ್ದರೂ ಅವರೇನೂ ಮಾಡುವಂಥ ಸ್ಥಿತಿಯಲ್ಲಿ ಇಲ್ಲವೆನ್ನಲಾಗುತ್ತಿದೆ. ಯಾಕೆಂದರೆ ಭಾಲ್ಕಿ ತಾಲ್ಲೂಕಿನ ಶಾಲೆಗಳಿಗೆ ಸಿಲಿಂಡರ್ ಪೂರೈಸುವ ಸೋನಾ ಏಜೆನ್ಸಿಯವರಿಗೆ ಪ್ರತ್ಯೇಕ ಕೋಟಾದಡಿ ಪೂರೈಸುವ ಬದಲಿಗೆ ಇದ್ದ ಸಂಖ್ಯೆಯಲ್ಲಿಯೇ ಶಾಲೆಗಳಿಗೂ ಪೂರೈಸಲು ನಿರ್ದೇಶನ ನೀಡಲಾಗಿದೆಯಂತೆ.ಸಕಾಲಕ್ಕೆ ಬರಬೇಕಾದ ಸಂಖ್ಯೆಯಲ್ಲೂ ಏಜೆನ್ಸಿಗೆ ಸಿಲೆಂಡರ್ ಬರುತ್ತಿಲ್ಲ. ಹಾಗಾಗಿ ಇರುವಷ್ಟರಲ್ಲಿಯೇ ಗ್ರಾಹಕರಿಗೂ ಮತ್ತು ಶಾಲೆಗಳಿಗೂ ಕೊಡುತ್ತಿದ್ದೇವೆ ಎಂಬುದು ಭಾರತ್ ಗ್ಯಾಸ್‌ನವರ ಹೇಳಿಕೆಯಾಗಿದೆ.ಸಮಸ್ಯೆಯ ಸುಧಾರಣೆಗೆ ಮೇಲಾಧಿಕಾರಿಗಳಿಗೆ ಸಾಕಷ್ಟು ಸಲ ಪತ್ರ ಬರೆಯಲಾಗಿದೆ ಎಂಬುದು ಅಧಿಕಾರಿಗಳ ಸ್ಪಷ್ಟನೆ. ಒಟ್ಟಾರೆ ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಅನ್ನುವ ಹಾಗಾಗಿದೆ ಬಿಸಿ ಅಡುಗೆಯ ಸಿಬ್ಬಂದಿಗಳ ಸ್ಥಿತಿ. ಈಗಲಾದರೂ ಅಗತ್ಯ ಕ್ರಮ ಕೈಗೊಂಡು ಹೊಗೆಯ ಬವಣೆಯಿಂದ ಅಡುಗೆಯವರಿಗೆ ಮುಕ್ತಿ ದೊರಕಿಸಲು ಇಲಾಖೆ ಮುಂದಾಗಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry