ಮಂಗಳವಾರ, ಅಕ್ಟೋಬರ್ 15, 2019
26 °C

ಬಿಸಿಎಂ ಹಾಸ್ಟೆಲ್ ಮೇಲ್ವಿಚಾರಕನ ಅಮಾನತಿಗೆ ಆಗ್ರಹ

Published:
Updated:

ಸೋಮವಾರಪೇಟೆ: ಕುಶಾಲನಗರ ಬಿಸಿಎಂ ವಿದ್ಯಾರ್ಥಿನಿಲಯದ ಮೇಲ್ವಿಚಾರಕನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಿ.ಪಂ. ವರ್ಗಾವಣೆಗೆ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದಲೇ ಅಮಾನತುಗೊಳಿಸುವ ಬಗ್ಗೆ ಮರುತನಿಖೆ ನಡೆಸಬೇಕು ಎಂದು ಸೋಮವಾರಪೇಟೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿ.ಕೆ.ಲೋಕೇಶ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ, ಕುಶಾಲನಗರ ಬಿಸಿಎಂ ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಸಿಂಗಪ್ಪ ಅವರು ಅನುತ್ತೀರ್ಣರಾಗಿರುವ 14 ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳಿಂದ ಹಣ ಪಡೆದು ವಿದ್ಯಾರ್ಥಿ ನಿಲಯದಲ್ಲಿ ಉಳಿಯವ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ಹೊರಗಿನ ವಿದ್ಯಾರ್ಥಿಗಳಿಂದ ಹಣ ಪಡೆದು ಊಟ ನೀಡುತ್ತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ? ಎಂದು ಸದಸ್ಯ ಲತೀಫ್ ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ, ಸಂಬಂಧಿಸಿದ ಅಧಿಕಾರಿ ವಿರುದ್ಧ ಜಿ.ಪಂ.ನಲ್ಲಿ ದೂರು ದಾಖಲಾಗಿದ್ದು, ಈಗಾಗಲೇ ತನಿಖೆ ನಡೆಸಿ ಅಧಿಕಾರಿಯ ವರ್ಗಾವಣೆಗೆ ಆದೇಶಿಸಲಾಗಿದೆ ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲತೀಫ್, ತಪ್ಪಿತಸ್ಥ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಮರುತನಿಖೆ ನಡೆಸಿ, ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ಣಯಿಸಲಾಯಿತು.ಗ್ರಾಮಸಭೆಗಳಿಗೆ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದು, ಇಲಾಖೆ ಮತ್ತು ಸರ್ಕಾರದ ಸೌಲಭ್ಯಗಳ ಮಾಹಿತಿ ಗ್ರಾಮಸ್ಥರಿಗೆ ತಲುಪುತ್ತಿಲ್ಲ ಎಂದು ಎಚ್.ಆರ್.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ, ಗ್ರಾಮ ಸಭೆಗಳು ಮಹತ್ವದ ಸಭೆಗಳಾಗಿದ್ದು, ಫಲಾನುಭವಿಗಳ ಆಯ್ಕೆ, ಅಭಿವೃದ್ಧಿ ಕಾರ್ಯಗಳಿಗೆ ಕ್ರಿಯಾಯೋಜನೆ ತಯಾರಿಸುವುದು ಮುಂತಾದವುಗಳನ್ನು ಗ್ರಾಮ ಸಭೆಗಳಲ್ಲಿ ನಡೆಸಲಾಗುತ್ತದೆ. ಆದ್ದರಿಂದ ಅಧಿಕಾರಿಗಳು ಸಭೆಗೆ ಹಾಜರಾಗುವುದು ಅವಶ್ಯ ಎಂದರು. ಕೊಡ್ಲಿಪೇಟೆ ಗ್ರಾ.ಪಂ.ನಲ್ಲಿ ಇದುವರೆಗೂ ಗ್ರಾಮಸಭೆ ನಡೆದಿಲ್ಲ ಎಂದು ಜೆ.ಆರ್.ಫಾಲಾಕ್ಷ ಹೇಳಿದಾಗ, ಈ ತಿಂಗಳಲ್ಲಿ ಗ್ರಾಮಸಭೆ ನಡೆಸಲು ಸೂಚಿಸಲಾಗುವುದು ಎಂದು ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್ ತಿಳಿಸಿದರು.ಭತ್ತಕ್ಕೆ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದು, ಅದರಂತೆ ಕುಶಾಲನಗರ ಎಪಿಎಂಸಿಯಲ್ಲಿ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಕೃಷಿ ಅಧಿಕಾರಿ ರಾಜಶೇಖರ್ ತಿಳಿಸಿದರು. ದೂರದ ಊರುಗಳಿಂದ ಕುಶಾಲನಗರಕ್ಕೆ ಭತ್ತ ಸಾಗಿಸಲು ರೈತರಿಗೆ ತೊಂದರೆ ಆಗುವುದರಿಂದ ಪ್ರತಿ ಹೋಬಳಿಗಳಲ್ಲಿ ಖರೀದಿ ಕೇಂದ್ರ ತೆರೆಯುವಂತೆ ಎಚ್.ಆರ್.ಸುರೇಶ್ ಆಗ್ರಹಿಸಿದರು. ಈ ಬಗ್ಗೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಕಳುಹಿಸಿಕೊಡಲು ನಿರ್ಧರಿಸಲಾಯಿತು. ಬ್ಯಾಡಗೊಟ್ಟ ಗ್ರಾ.ಪಂ.ನಲ್ಲಿ ಶೇ 22.7ರ ನಿಧಿ ದುರ್ಬಳಕೆಯಾಗಿದೆ ಎಂದು ಗ್ರಾಮಸ್ಥರಿಂದ ಪ್ರತಿಭಟನೆ, ಪತ್ರಿಕಾ ಹೇಳಿಕೆಗಳು ಬರುತ್ತಿದ್ದು ಇದರ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಜೆ.ಆರ್.ಫಾಲಾಕ್ಷ ಹೇಳಿದಾಗ ಸಮಾಜ ಕಲ್ಯಾಣಾಧಿಕಾರಿ ನರಸಿಂಹಮೂರ್ತಿ ಮಾತನಾಡಿ, ಈಗಾಗಲೇ ಸಂಬಂಧಿಸಿದ ಗ್ರಾ.ಪಂ.ಗೆ ಭೇಟಿ ನೀಡಿ ಕಡತ ಪರಿಶೀಲಿಸಲಾಗಿದೆ. ದುರುಪಯೋಗ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ಇದರ ವರದಿಯನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.ಮಕ್ಕಳ ಸಂಖ್ಯೆ ಕಡಿಮೆಯಿರುವ ಅಂಗನವಾಡಿ ಕೇಂದ್ರಗಳನ್ನು ಪಕ್ಕದ ಅಂಗನವಾಡಿ ಕೇಂದ್ರಗಳಲ್ಲಿ ವಿಲೀನಗೊಳಿಸುವಂತೆ ಸರ್ಕಾರ ಆದೇಶಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಎಚ್.ಎಸ್.ಬಲರಾಂ ಸಭೆಯ ಗಮನಕ್ಕೆ ತಂದರು. ಇದಕ್ಕೆ ಅಧ್ಯಕ್ಷರು ಪ್ರತಿಕ್ರಿಯಿಸಿ, ಅಂಗನವಾಡಿ ಕೇಂದ್ರಗಳನ್ನು ಮುಚ್ಚುವುದರಿಂದ ಮಕ್ಕಳಿಗಷ್ಟೇ ಅಲ್ಲ ಬಾಣಂತಿಯರಿಗೆ ಹಾಗೂ ಮಹಿಳೆಯರಿಗೆ ಅಂಗನವಾಡಿ ಕೇಂದ್ರದಿಂದ ಸಿಗುವ ಸವಲತ್ತುಗಳು ಕೈ ತಪ್ಪಿಹೋಗುತ್ತದೆ. ಆದ್ದರಿಂದ ಅಂಗನವಾಡಿ ಕೇಂದ್ರಗಳನ್ನು ಮುಚ್ಚದಂತೆ ಅಧಿಕಾರಿಗಳಿಗೆ ಸೂಚಿಸಿದರು.ಕೊಡ್ಲಿಪೇಟೆಯಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದ್ದು, ಮಾಹಿತಿ ನೀಡಲು ಅರಣ್ಯಾಧಿಕಾರಿ ಸಭೆಗೆ ಗೈರು ಹಾಜರಾಗುತ್ತಿದ್ದಾರೆ ಎಂದು ಜೆ.ಆರ್.ಫಾಲಾಕ್ಷ ಅಸಮಾಧಾನ ವ್ಯಕ್ತಪಡಿಸಿದರು. ಸಭೆಗೆ ಗೈರು ಹಾಜರಾದ ಬಗ್ಗೆ ಮಾಹಿತಿ ನೀಡಲು ಶನಿವಾರಸಂತೆ ವಲಯ ಅರಣ್ಯಾಧಿಕಾರಿಗೆ ನೋಟಿಸ್ ನೀಡುವಂತೆ ನಿರ್ಧರಿಸಲಾಯಿತು.ಲೋಕೋಪಯೋಗಿ ಇಲಾಖೆ ಎಂಜಿನಿಯರ್ ರಾಮಚಂದ್ರಪ್ಪ ಮಾತನಾಡಿ, ತಾಲ್ಲೂಕಿನಲ್ಲಿ 3.55 ಕೋಟಿ ವೆಚ್ಚದಲ್ಲಿ  ಇಲಾಖೆಗೆ ಸಂಬಂಧಿಸಿದ ರಸ್ತೆಗಳನ್ನು ಮರು ಡಾಂಬರೀಕರಣಗೊಳಿಸಲು ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಮಾಹಿತಿ ನೀಡಿದರು.

Post Comments (+)