ಮಂಗಳವಾರ, ಮಾರ್ಚ್ 9, 2021
31 °C

ಬಿಸಿನೀರ ಬುಗ್ಗೆಗಳ ತವರು ‘ಯೆಲ್ಲೋಸ್ಟೋನ್’

ಶ್ರೀಮತಿದೇವಿ,ಸಾಲ್ಟ್ ಲೇಕ್ ಸಿಟಿ Updated:

ಅಕ್ಷರ ಗಾತ್ರ : | |

ಬಿಸಿನೀರ ಬುಗ್ಗೆಗಳ ತವರು ‘ಯೆಲ್ಲೋಸ್ಟೋನ್’

ಅಮೆರಿಕದ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾದ ‘ಯೆಲ್ಲೋ ಸ್ಟೋನ್‌’, ಆ ದೇಶದ ಪ್ರತಿಷ್ಠೆಯೂ ಹೌದು, ಹಲವು ಅಚ್ಚರಿಗಳ ತಾಣವೂ ಹೌದು. ವಿಶ್ವದಲ್ಲೇ ಅತಿ ಹೆಚ್ಚು ‘ಹೈಡ್ರೋಥರ್ಮಲ್’ ಚಟುವಟಿಕೆಗೆ ಹೆಸರಾದ ಪರಿಸರ ಇಲ್ಲಿಯದು. ದಟ್ಟವಾದ ಕಾಡು, ಎಲ್ಲೆಲ್ಲೂ ಕಾಣುವ ಬಿಸಿನೀರಿನ ಬುಗ್ಗೆಗಳು, ಉದ್ಯಾನವನದ ಉದ್ದಕ್ಕೂ ಅಲ್ಲಲ್ಲಿ ಕಾಣುವ ಯೆಲ್ಲೋ ಸ್ಟೋನ್ ಹಾಗೂ ಮತ್ತಿತರ ನದಿಗಳು, ಹಲವಾರು ಜಲಪಾತಗಳು, ಹಲವು ಬಗೆಯ ಕಾಡುಪ್ರಾಣಿಗಳು– ಹೀಗೆ ಹಲವು ಬಿಡಿಬಿಡಿ ಚಿತ್ರಗಳ ಕೊಲಾಜ್‌ನಂತೆ ಯೆಲ್ಲೋ ಸ್ಟೋನ್‌ ಕಾಣಿಸುತ್ತದೆ.ಇದು ಪ್ರಮುಖವಾಗಿ ಅಮೆರಿಕದ ವಯೋಮಿಂಗ್ ರಾಜ್ಯದಲ್ಲಿ ಇದ್ದರೂ ಇದರ ಕೆಲವು ಪ್ರದೇಶಗಳು ಮೊಂಟಾನಾ ಹಾಗೂ ಇಡಾಹೊ ರಾಜ್ಯಗಳಲ್ಲೂ ಹರಡಿಕೊಂಡಿವೆ. 22 ಲಕ್ಷದ 19 ಸಾವಿರದ 789 ಎಕರೆಯ ವಿಸ್ತಾರ ಹೊಂದಿರುವ ಈ ಪ್ರದೇಶವನ್ನು 1872ರ ಮಾರ್ಚ್ 1ರಂದು ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಲಾಯಿತು.

ವಿಶ್ವದ ಮೊದಲ ರಾಷ್ಟ್ರೀಯ ಉದ್ಯಾನವನ ಎನ್ನುವುದು ಇದರ ಅಗ್ಗಳಿಕೆ. ಇದರ ಎಷ್ಟೋ ಮೂಲೆಗಳು ರಸ್ತೆ ಸಂಪರ್ಕದಿಂದ ದೂರವೇ ಉಳಿದಿವೆ ಹಾಗೂ ಈ ಪ್ರದೇಶಗಳು ಯಾವ ರೀತಿಯಿಂದಲೂ ತಲುಪಲಾಗದಷ್ಟು ದುರ್ಗಮವಾಗಿವೆ. ಇಡೀ ಉದ್ಯಾನವನ್ನು ತಿರುಗಿ ತಿಳಿದುಕೊಳ್ಳಲು ಒಂದು ಜೀವಮಾನವೇ ಸಾಲದು ಎನ್ನುವುದು ‘ಯೆಲ್ಲೋ ಸ್ಟೋನ್‌’ ಬಗ್ಗೆ ಇರುವ ದಂತಕಥೆಗಳಲ್ಲಿ ಒಂದು.‘ಯೆಲ್ಲೋ ಸ್ಟೋನ್‌’ ನೋಡಲು ಹೊರಟ ನಾವು, ವಯೋಮಿಂಗ್ ರಾಜ್ಯದ ಪಕ್ಕದ ರಾಜ್ಯವಾದ ಉಟಾದಿಂದ ಹೊರಟು 5 ಗಂಟೆಗಳ ಕಾರು ಪ್ರಯಾಣದ ನಂತರ ಉದ್ಯಾನವನದ ಪಶ್ಚಿಮ ದ್ವಾರದಿಂದ ಸ್ವಲ್ಪ ದೂರವಿರುವ ವಸತಿಗೃಹವನ್ನು ಸಂಜೆ 7ರ ಸುಮಾರಿಗೆ ತಲುಪಿದೆವು. ದಾರಿಯಲ್ಲಿ ಎದುರಾದ ಮಳೆಯ ನಡುವೆ, ರಸ್ತೆಯ ಇಕ್ಕೆಲಗಳಲ್ಲಿನ ಅದ್ಭುತ ದೃಶ್ಯಗಳನ್ನು ಸವಿಯುತ್ತಾ ಹೋದ ನಾವು, ಕಾರಿನಿಂದ ಕೆಳಗಿಳಿದಾಗ ಚಳಿಗೆ ಗಡಗಡ ನಡುಗುತ್ತಿದ್ದೆವು.ನಾವು ಉಳಿದಕೊಂಡ ಜಾಗ ಮಾಡಿಸನ್ ನದಿಯ ತಪ್ಪಲಲ್ಲಿ ಇದ್ದು, ಸುತ್ತುಮುತ್ತಲಿನ ಪರಿಸರ ಮನಮೋಹಕವಾಗಿತ್ತು. ಎಲ್ಲ ಕಡೆಯಿಂದಲೂ ತುಂಬಾ ಕೇಳಿದ, ಓದಿದ ಯೆಲ್ಲೋ ಸ್ಟೋನ್‌ ಅನ್ನು ಮರುದಿನ ನೋಡುವ ಕಾತುರ ಇಟ್ಟುಕೊಂಡು ಮಲಗಿದೆವು. ಮುಂಜಾನೆ ಐದೂವರೆಗೆ ನಮ್ಮ ಗುಂಪಿನ 10 ಜನರ ತಂಡ ಮಾಯಾಲೋಕದ ದರ್ಶನಕ್ಕೆ ಸಿದ್ಧವಾಗಿತ್ತು. ಮಂಜು ಮುಸುಕಿದ, ನದಿಯನ್ನು ಬಳಸಿಕೊಂಡೇ ಸಾಗುವ ರಸ್ತೆಯಲ್ಲಿ ಹೋಗುತ್ತಿರುವಾಗ ಎರಡು-ಮೂರು ಬಗೆಯ ಪ್ರಾಣಿಗಳು ಎದುರಾದವು. ಪಶ್ಚಿಮ ದ್ವಾರದ ಮೂಲಕ ಒಳಸೇರಿ ಮುಂದೆ ಹೋಗುತ್ತಿದ್ದಂತೆ ದೂರದಿಂದ ಎದ್ದೆದ್ದು ಬರುತ್ತಿದ್ದ ರಾಶಿ-ರಾಶಿ ಹೊಗೆ ಕಾಣಲಾರಂಭಿಸಿತು... ಜೊತೆಗೆ ತಡೆಯಲಾಗದಷ್ಟು ಸಲ್ಫರ್‌ನ ವಾಸನೆ.ಕುದಿನೆಲದ ಒಳಹೊರಗೆ...

ಪ್ರಪಂಚದಲ್ಲಿನ ಒಟ್ಟು ಭೂಶಾಖದ (ಜಿಯೋಥರ್ಮಲ್) ಚಟುವಟಿಕೆಗಳಲ್ಲಿ ಅರ್ಧದಷ್ಟು ಯೆಲ್ಲೋಸ್ಟೋನ್ ಒಂದರಲ್ಲೇ ಕಾಣಸಿಗುತ್ತವೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಭೂಮಿಯೊಳಗೆ ಸತತವಾಗಿ ಸರಿದಾಡುತ್ತಿರುವ ಜ್ವಾಲಾಮುಖಿ. ಜ್ವಾಲಾಮುಖಿಯ ಬುಗ್ಗೆಯಿಂದ ಹೊರಗೆ ಬಂದು ಗಟ್ಟಿಯಾದ ಲಾವಾರಸ, ಯೆಲ್ಲೋಸ್ಟೋನ್ ಪ್ರದೇಶದ ಹೆಚ್ಚಿನ ಭಾಗವನ್ನು ಆವರಿಸಿದೆ. ಬಿಸಿನೀರಿನ ಬುಗ್ಗೆಗಳ ಮೂಲಕ ಒಳಗೆ ಸೃಷ್ಟಿಯಾಗುವ ಅತಿಯಾದ ಉಷ್ಣತೆ ಹೊರಗೆ ಚಿಮ್ಮಿ ಬರುತ್ತದೆ.10 ಸಾವಿರಕ್ಕೂ ಹೆಚ್ಚಿನ ಜಲೋಷ್ಣೀಯ (ಹೈಡ್ರೋಥರ್ಮಲ್) ಚಟುವಟಿಕೆಗಳಿರುವ ಈ ಪ್ರದೇಶದಲ್ಲಿ ಮುನ್ನೂರಕ್ಕಿಂತಲೂ ಹೆಚ್ಚಿನ ಬಿಸಿನೀರಿನ ಬುಗ್ಗೆಗಳಿವೆ. ಯೆಲ್ಲೋಸ್ಟೋನ್‌ನ ಅನೇಕ ಕಡೆ ಇಂತಹ ಬುಗ್ಗೆಗಳಿವೆ. ಈ ಬುಗ್ಗೆಗಳು ಯಾವುದೇ ಸಂದರ್ಭದಲ್ಲಿ ಹೊರಚಿಮ್ಮಿ ಬರುಬಹುದಾದಷ್ಟು ದುರ್ಬಲವಾದ ಭೂಮಿ ಇಲ್ಲಿಯದು. ಇಂಥ ಬಿಸಿಬುಗ್ಗೆಗಳ ಬಳಿಗೆ ಹೋಗಲು ಮರದಹಲಗೆಗಳ ಹಾಸುಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಮಣ್ಣಿನ ಮೇಲೆ ಕಾಲಿಡದಂತೆ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡುವ ಸೂಚನಾ ಫಲಕಗಳಿವೆ.ಪ್ರವಾಸಿಗರ ಸ್ವರ್ಗ

ಪರಿಸರ ಪ್ರೇಮಿಗಳ ನಂದನವನವೂ ವಿಜ್ಞಾನದ ವಿದ್ಯಾರ್ಥಿಗಳ ಪ್ರಯೋಗಶಾಲೆಯೂ ಆಗಿರುವ ಯೆಲ್ಲೋಸ್ಟೋನ್ ಪ್ರತಿವರ್ಷ ಲಕ್ಷಾಂತರ ಜನರನ್ನು ವಿಶ್ವದ ಎಲ್ಲೆಡೆಯಿಂದ ತನ್ನೆಡೆಗೆ ಆಕರ್ಷಿಸುತ್ತಿದೆ. ಯೆಲ್ಲೋಸ್ಟೋನ್‌ನ ಅಧಿಕೃತ ವೆಬ್‌ಸೈಟ್ (yellowstonenationalpark.com) ಪ್ರಕಾರ 2014ರ ಸಾಲಿನಲ್ಲಿ 42 ಕೋಟಿಗೂ ಹೆಚ್ಚು ಜನರು ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ. ಇಲ್ಲಿ ಟ್ರಕ್ಕಿಂಗ್, ಹೈಕಿಂಗ್‌ಗಳಿಗೆ ಬೇಕಾದಷ್ಟು ಅವಕಾಶಗಳಿದ್ದರೂ, ಬಹುತೇಕ ಸ್ಥಳಗಳಿಗೆ ಕಾರಲ್ಲೇ ಹೋಗಿ ಭೇಟಿ ನೀಡುವಂತಿರುವುದು ವಿಶೇಷ.ವಯಸ್ಸಾದವರು, ಮಕ್ಕಳಿಂದ ಹಿಡಿದು ಎಲ್ಲರೂ ಸುಲಭವಾಗಿ ನೋಡಬಹುದಾದ ಸ್ಥಳವಿದು. ಆದರೆ ಇಲ್ಲಿಗೆ ಹೋಗುವಾಗ ಮಾತ್ರ ಎಲ್ಲಾ ರೀತಿಯ ಊಟ–ಉಪಹಾರಗಳನ್ನು ಜೊತೆಗೆ ಕೊಂಡೊಯ್ಯುವುದೇ ಸೂಕ್ತ. ಅತ್ಯಂತ ದೊಡ್ಡದಾದ ಉದ್ಯಾನವನದಲ್ಲಿ ನೀರು–ಆಹಾರವನ್ನು ಹೊತ್ತಿಗೆ ಸರಿಯಾಗಿ ಹುಡುಕುವುದು ಕಷ್ಟವಾಗುತ್ತದೆ. ಅಲ್ಲದೇ ಈ ಹುಡುಕಾಟ ನಮ್ಮ ಆನಂದದ ತಿರುಗಾಟಕ್ಕೆ ಅಡ್ಡಿಯಾಗುತ್ತದೆ. ಆದರೆ ಆಗಾಗ ದೊರಕುವ ಚಿಕ್ಕ ಚಿಕ್ಕ ಜನರಲ್ ಸ್ಟೋರ್ಸ್‌ಗಳಲ್ಲಿ ಸಿಗುವ ಕಾಫಿ ಹಾಗೂ ಐಸ್‌ಕ್ರೀಂಗಳನ್ನು ಸವಿಯಲು ಮಾತ್ರ ಮರೆಯಬೇಡಿ.ಸೈಕಲ್ಲಿನಲ್ಲಿ ಸುತ್ತಾಟ, ಈಜಾಟ, ಚಾರಣ, ನಡೆದಾಟ, ಮೀನು ಹಿಡಿಯುವುದು, ಶಿಬಿರಗಳನ್ನು ಹಾಕುವುದು, ಕಾಡಿನಲ್ಲಿ ಸಫಾರಿ, ದೋಣಿಯಾನ, ಕುದುರೆ ಸವಾರಿ– ಹೀಗೆ ಅನೇಕ ಚಟುವಟಿಕೆಗಳಿಗೆ ಯೆಲ್ಲೋಸ್ಟೋನ್‌ನಲ್ಲಿ ಅವಕಾಶವಿದೆ.ಗೀಸರ್ಸ್ ಹಾಗೂ ಹಾಟ್ ಸ್ಪ್ರಿಂಗ್ಸ್

ತನ್ನೊಳಗೆ ಸದಾ ಕ್ರಿಯಾಶೀಲವಾಗಿರುವ ಬಿಸಿನೀರಿನ ಸ್ರೋತವನ್ನು ಹೊಂದಿರುವ ಈ ಭೂಮಿಯ ವೈಚಿತ್ರ್ಯವೇ ಈ ಬಿಸಿನೀರಿನ ಬುಗ್ಗೆಗಳು. 2011ರ ಒಂದು ಅಧ್ಯಯನದ ಪ್ರಕಾರ ಯೆಲ್ಲೋಸ್ಟೋನ್‌ನಲ್ಲಿ ಇಲ್ಲಿಯ ತನಕ ಕನಿಷ್ಠ 1283 ಬುಗ್ಗೆಗಳು ಹೊರಚಿಮ್ಮಿವೆ.  ಇವುಗಳಲ್ಲಿ ಬಹುಮುಖ್ಯವಾದ ಬುಗ್ಗೆಗಳೆಂದರೆ: ಓಲ್ಡ್ ಫೈತ್‌ಫುಲ್ ಚಿಲುಮೆ, ನಾರಿಸ್ಸ್ ಬಿಸಿಚಿಲುಮೆಯ ಜಲಾಯನ ಪ್ರದೇಶ, ಗ್ರಾಂಡ್ ಪ್ರೆಸ್ಮಾಟಿಕ್ ಚಿಲುಮೆ, ವೆಸ್ಟ್ ಥಂಬ್ ಬಿಸಿಬುಗ್ಗೆಗಳ ಜಲಾಯನ ಪ್ರದೇಶ ಹಾಗೂ ಮಾಮೂತ್ ಹಾಟ್ ಸ್ಪ್ರಿಂಗ್ಸ್.ಓಲ್ಡ್ ಫೈತ್‌ಫುಲ್ ಚಿಲುಮೆ

ಓಲ್ಡ್ ಫೈತ್‌ಫುಲ್ ಚಿಲುಮೆ ಹಲವಾರು ವರ್ಷಗಳಿಂದ ಸ್ವಲ್ಪವೂ ವ್ಯತ್ಯಾಸವಾಗದಂತೆ ಪ್ರತಿ 91 ನಿಮಿಷಕ್ಕೆ ಒಮ್ಮೆ ಅತಿ ರಭಸದಿಂದ ಬಿಸಿಯನ್ನು ಕಾರುತ್ತಾ ಬಂದಿದೆ. ಪ್ರತಿಬಾರಿ ಇದು ಚಿಮ್ಮಿದಾಗ ಸಾವಿರಾರು ಗ್ಯಾಲನ್‌ಗಳಷ್ಟು ಕುದಿ ನೀರು ಆಕಾಶದೆತ್ತರಕ್ಕೆ ಚಿಮ್ಮುತ್ತದೆ. ಈ ಬುಗ್ಗೆಯ ಸಮಯದ ನಿಷ್ಠೆಯ ಕಾರಣದಿಂದ ಇದಕ್ಕೆ ‘ಓಲ್ಡ್ ಫೈತ್‌ಫುಲ್’ ಎಂಬ ಹೆಸರನ್ನು ನೀಡಲಾಗಿದೆ. 91 ನಿಮಿಷಗಳಿಗೊಮ್ಮೆ ಸುಮಾರು ಎರಡು ನಿಮಿಷಗಳವರೆಗೆ ಇದು ಚಿಮ್ಮುವುದನ್ನು ನೋಡಲು ಪ್ರತಿಬಾರಿಯೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿರುತ್ತಾರೆ. ಓಲ್ಡ್ ಫೈತ್‌ಫುಲ್ ಜಲಾನಯನ ಪ್ರದೇಶದಲ್ಲಿ ಸುಮಾರು 2 ಗಂಟೆ ಸುತ್ತಾಡಿದರೆ, ಇಂತಹ ಹಲವು ಬುಗ್ಗೆಗಳು, ಚಿಲುಮೆಗಳು, ಮಡ್‌ಪಾಟ್‌ಗಳು ಕಾಣಸಿಗುತ್ತವೆ. ಅವುಗಳಲ್ಲಿ ಲೋನೆಸ್ಟರ್, ಬೀಹಿವ್, ಕಾಸ್ಟ್ಲ್, ಲಯನ್ ಚಿಲುಮೆಗಳು ಅತ್ಯಂತ ಸುಂದರವಾಗಿವೆ.ನಾರಿಸ್ಸ್ ಬಿಸಿ ಚಿಲುಮೆ

ಮೇಲ್ಭಾಗದ, ಮಧ್ಯಮ ಹಾಗೂ ಕೆಳ ಹಂತದ– ಒಟ್ಟು ಮೂರು ಹಂತದ ಚಿಲುಮೆಗಳ ಜೊತೆಗೆ ಪ್ರಪಂಚದ ಅತಿ ಎತ್ತರದ ಚಿಲುಮೆಯನ್ನೂ ಒಳಗೊಂಡಿರುವುದು ‘ನಾರಿಸ್ಸ್‌’ ಚಿಲುಮೆ ಪ್ರದೇಶದ ಹಿರಿಮೆ. ಇಲ್ಲಿನ ಸ್ಟೀಮ್‌ಬೋಟ್ ಗೀಸರ್ ವಿಶ್ವದ ಅತಿ ದೊಡ್ಡ ಕ್ರಿಯಾಶೀಲವಾಗಿರುವ ಬುಗ್ಗೆ ಎಂಬ ಹೆಸರು ಪಡೆದಿದೆ. ಇದರ ಎತ್ತರ ಸುಮಾರು 300-400 ಅಡಿ. ಇಲ್ಲಿನ ಚಿಲುಮೆಗಳು ಗುಲಾಬಿ, ಕಿತ್ತಳೆ, ಹಸಿರು, ಕಂದು ಬಣ್ಣಗಳಿಂದ ಕೂಡಿದವುಗಳು.

ಗ್ರಾಂಡ್ ಪ್ರೆಸ್ಮಾಟಿಕ್ ಚಿಲುಮೆ 370 ಮೀಟರ್ ಸುತ್ತಳತೆಯನ್ನು ಹೊಂದಿದ್ದು, ಮಧ್ಯದಲ್ಲಿ ಗಾಢ ನೀಲಿ ಬಣ್ಣ ಹಾಗೂ ಅಂಚಿನಲ್ಲಿ ಕೆಂಪು–ಹಳದಿಯ ಬಣ್ಣಗಳನ್ನು ಹೊಂದಿದೆ. ಓಲ್ಡ್ ಫೈತ್‌ಫುಲ್ ಬುಗ್ಗೆಯಿಂದ ಸುಮಾರು 17 ಮೈಲುಗಳಷ್ಟು ಪೂರ್ವಕ್ಕಿರುವ ವೆಸ್ಟ್ ಥಂಬ್ ಬಿಸಿಬುಗ್ಗೆಗಳ ಜಲಾಯನ ಪ್ರದೇಶ ಯೆಲ್ಲೋಸ್ಟೋನ್ ಕೆರೆಯ ದಡದಲ್ಲೇ ಇದೆ. ಇಲ್ಲಿನ ನೀರು ಸಿಲಿಕಾದ ಅಂಶದಿಂದ ಕೂಡಿದ್ದು– ಗುಲಾಬಿ, ಹಳದಿ, ಕಿತ್ತಳೆ, ಕಂದು ಬಣ್ಣಗಳಲ್ಲಿ ಕಂಗೊಳಿಸುತ್ತವೆ.ಮಾಮೂತ್ ಹಾಟ್ ಸ್ಪ್ರಿಂಗ್ಸ್

ಮಾಮೂತ್ ಎಂಬ ಶಬ್ದದ ಅರ್ಥವೇ ಬೃಹದಾಕಾರ ಎಂಬುದಾಗಿದೆ. ಇಲ್ಲಿ ಭೂಮಿಯ ಒಳಗಿನ ಖನಿಜಯುಕ್ತ ಬಿಸಿನೀರು ಹೊರಬಂದು ಮೆಟ್ಟಲು–ಮೆಟ್ಟಲಿನ ರಚನೆಯನ್ನು ಹೊಂದಿದೆ. ಅತ್ಯಂತ ಹಳೆಯ ಸುಣ್ಣದ ಕಲ್ಲಿನಿಂದ ರೂಪುಗೊಂಡ ಈ ಚಿಲುಮೆಯ ನೀರು, ಕಾಲ್ಷಿಯಂ ಹಾಗೂ ಸಲ್ಫರ್‌ನಿಂದ ಕೂಡಿದೆ.ಬಿಸಿ ಚಿಲುಮೆಗಳ ವೈವಿಧ್ಯಮಯವಾದ ಬಣ್ಣಗಳಿಗೆ ಕಾರಣ, ವರ್ಣಭರಿತ ಬಾಕ್ಟೀರಿಯಾಗಳು. ಭೂಮಿಯ ಮೇಲಿನ ಅತ್ಯಂತ ತೆಳ್ಳಗಿನ ಪದರಿನಲ್ಲಿರುವ ಈ ಬಾಕ್ಟೀರಿಯಾಗಳು ಖನಿಜಯುಕ್ತ ನೀರಿನೊಂದಿಗೆ ಬೆರೆತು ಈ ರೀತಿಯ ಬಣ್ಣಗಳ ಉತ್ಪತ್ತಿಯಾಗುತ್ತದೆ. ಪ್ರತಿಯೊಂದು ಬುಗ್ಗೆಯಲ್ಲಿರುವ ಬೇರೆ ಬೇರೆ ಬಣ್ಣಗಳು ಬಾಕ್ಟೀರಿಯಾದಲ್ಲಿನ ಹರಿತ್ತು, ಕಾರೋಟಿನೋಯ್ಡ್ಸ್ ಹಾಗೂ ಅಲ್ಲಿನ ನೀರಿನ ತಾಪಮಾನವನ್ನು ಅವಲಂಬಿಸಿಕೊಂಡು ರೂಪುಗೊಳ್ಳುತ್ತವೆ.ಈ ರಾಷ್ಟ್ರೀಯ ಉದ್ಯಾನವನವನ್ನು ಪ್ರವೇಶಿಸಲು ಐದು ದ್ವಾರಗಳಿವೆ. ಅವುಗಳಲ್ಲಿ ಉತ್ತರ ಹಾಗೂ ಈಶಾನ್ಯದ ದ್ವಾರಗಳು ಪ್ರವಾಸಿಗರಿಗಾಗಿ ವರ್ಷವಿಡೀ ತೆರೆದೇ ಇರುತ್ತವೆ. ಪಶ್ಚಿಮ, ಪೂರ್ವ ಹಾಗೂ ದಕ್ಷಿಣದ ದ್ವಾರಗಳು ನವೆಂಬರ್‌ನಿಂದ ಏಪ್ರಿಲ್ ಮಧ್ಯದ ತನಕ ಮುಚ್ಚಿರುತ್ತವೆ.ನವೆಂಬರ್‌ನಿಂದ ಮಾರ್ಚ್ ತನಕದ ಚಳಿಗಾಲದಲ್ಲಿ ಊಹಿಸಲೂ ಸಾಧ್ಯವಿಲ್ಲದಷ್ಟು ಹಿಮದಿಂದ ಆವೃತವಾಗಿರುವ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಬೇಸಿಗೆ ಕಾಲ.ಇಲ್ಲಿನ ವಾತಾವರಣ ಅನಿರೀಕ್ಷಿತವಾಗಿ ಬದಲಾಗುತ್ತದೆ. ಬೇಸಿಗೆಯಲ್ಲೂ ಅಚಾನಕ್ ಆಗಿ ಧಾರಾಕಾರ ಮಳೆ ಬಂದು, ಇದ್ದಕ್ಕಿದ್ದಂತೆ ಚಳಿ ಹೆಚ್ಚಾಗಬಹುದು. ಪ್ರವಾಸಿಗರು ಮೊದಲೇ ಇಲ್ಲಿನ ತಾಪಮಾನದ ಬಗ್ಗೆ ಅಧ್ಯಯನ ಮಾಡಿ, ಹವಾಮಾನದ ವೈಪರೀತ್ಯಗಳಿಗೆ ಸಿದ್ಧವಿರಬೇಕಾಗಿರುತ್ತದೆ. ಇಲ್ಲಿನ ಕಾಡಿನ ಕೆಲವು ಭಾಗ ಅತ್ಯಂತ ದಟ್ಟವಾಗಿದ್ದು, ಇಲ್ಲಿನ ಕಾಡುಪ್ರಾಣಿಗಳು ನಿರಾತಂಕವಾಗಿ ಬದುಕಲು ಸಾಧ್ಯವಿದೆ.ಯೆಲ್ಲೋಸ್ಟೋನ್‌ಗೆ ಪ್ರವಾಸ ಮಾಡುವ  ಮೊದಲು ಇಲ್ಲಿನ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣವೆಂದು ಯಾವ ವೆಬ್‌ಸೈಟ್‌ಗೆ ಭೇಟಿ ನೀಡಿದರೂ, ಯಾವ ಪುಸ್ತಕ ತಿರುವಿ ಹಾಕಿದರೂ ‘ಕರಡಿ ಎದುರಾದಾಗ ಏನು ಮಾಡಬೇಕು?’ ಎಂಬ ಬಗ್ಗೆ ಇದ್ದ ರಾಶಿ ರಾಶಿ ಮಾಹಿತಿ ನೋಡಿ ಮೊದಲಿಗೆ ಭಯವಾಗಿದ್ದರೂ ನಂತರ ಕರಡಿಯನ್ನು ಪ್ರತ್ಯಕ್ಷವಾಗಿ ನೋಡಲು ಕಾತರರಾಗಿದ್ದೆವು. ನಾವು ಹೋಗುವ ಒಂದು ವಾರದ ಹಿಂದಷ್ಟೇ ಕರಡಿಯೊಂದು ಪ್ರವಾಸಿಯೊಬ್ಬನನ್ನು ಎಳೆದೊಯ್ದ ತಿಂದ ಅಪರೂಪದ ಘಟನೆ ಅಲ್ಲಿ ನಡೆದಿತ್ತು. ಆದರೆ 4 ದಿನಗಳ ನಮ್ಮ ಓಡಾಟದಲ್ಲಿ ಎಲ್ಲಿಯೂ ಕರಡಿ ಎದುರಾಗಲಿಲ್ಲ. ಕೊನೆಗೆ ಮೃಗಾಲಯ ಒಂದಕ್ಕೆ ಭೇಟಿ ನೀಡಿ, ನಮ್ಮ ಆಸೆ ಈಡೇರಿಸಿಕೊಳ್ಳಬೇಕಾಯಿತು.ಅಮೆರಿಕದ ಎಲ್ಲಾ ಕಡೆಯಿಂದಲೂ ಇಲ್ಲಿ ತಲುಪಲು ವಿಮಾನ ಸಂಪರ್ಕವಿದ್ದರೂ ಅತ್ಯಂತ ಸಮರ್ಪಕವಾದ ಸಂಪರ್ಕ ಸಾಧನವೆಂದರೆ ಕಾರ್ ಎಂದೇ ಹೇಳಬದುದು. ಉದ್ಯಾನವನದ ಒಳಗಡೆ ಕೆಲವು ನಿರ್ದಿಷ್ಟ ಕಡೆಗಳಲ್ಲಿ ಮಾತ್ರ ಮೊಬೈಲ್ ಫೋನ್‌ಗೆ ಸಂಪರ್ಕ ದೊರಕುತ್ತದೆ. ಆದ್ದರಿಂದ ಹೊರಗಿನ ಜಗತ್ತಿನ ಯಾವ ಜಂಜಾಟವೂ ಇಲ್ಲದೆ ಒಂದೆರಡು ದಿನಗಳಾದರೂ ಕಾಡಿನಲ್ಲಿ ಸಂತೋಷದಿಂದ ಇರಬಹುದು.ಪ್ರಕೃತಿಯ ಮಡಿಲಲ್ಲಿ...

ಇಲ್ಲಿನ ಜನರಿಗೆ ಹೊರಗಡೆ ಬಯಲಿನಲ್ಲಿ ಶಿಬಿರಗಳಲ್ಲಿ ಇರುವುದು ತುಂಬಾ ಇಷ್ಟದ ವಿಚಾರ. ಬೇಸಿಗೆ ಕಾಲದಲ್ಲಿ ಎಲ್ಲಿ ಹೋದರೂ ಶಿಬಿರ ಹಾಕಲು ಬೇಕಾದ ಸಾಮಗ್ರಿಗಳೊಂದಿಗೆ ಸಿದ್ಧರಾಗಿ ಬಂದ ಜನರನ್ನು ನಾವು ಕಾಣಬಹುದು. ಯೆಲ್ಲೋಸ್ಟೋನ್‌ನಲ್ಲಿ ಶಿಬಿರಕ್ಕೆಂದೇ ಇರುವ ಮೈದಾನಗಳು ಹಲವಾರಿವೆ. ಪ್ರಶಾಂತವಾದ ವಾತಾವರಣದಲ್ಲಿ, ಮಕ್ಕಳು ಮರಿಗಳೊಂದಿಗೆ ಬಯಲಿನಲ್ಲಿ ಆಕಾಶ ನೋಡುತ್ತಾ ಮಲಗುವ ಖುಷಿಯೇ ಬೇರೆ.ಭೂಮಿಯ ಸಮಶೀತೋಷ್ಣವಲಯದಲ್ಲಿ ಏನೂ ಘಾಸಿಯಾಗದೆ ಉಳಿದಿರುವ ಜೀವಪರಿಸರದ ಕೊನೆಯ ಭಾಗವೇ ಯೆಲ್ಲೋಸ್ಟೋನ್ ಎನ್ನಲಾಗುತ್ತದೆ. ಈ ಭೂಮಿ ಪ್ರತಿವರ್ಷವೂ ಸಾವಿರಾರು ಲಘು ಭೂಕಂಪಗಳಿಗೆ ಸಾಕ್ಷಿಯಾಗುತ್ತದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಹಾಗೂ ವೈಚಿತ್ರ್ಯಗಳು ನೈಸರ್ಗಿಕವಾದುವಾದರೂ ಅವುಗಳ ಕ್ರಮಬದ್ಧವಾದ ಅಧ್ಯಯನಕ್ಕಾಗಿ ಇಲ್ಲಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾತ್ರಿ ಹೊತ್ತು ಆಕಾಶವನ್ನು ಗಮನಿಸುವ ಹಲವು ರೀತಿಯ ಖಗೋಲ ಸಂಬಂಧಿತ ಕಾರ್ಯಕ್ರಮಗಳನ್ನು ಇಲ್ಲಿ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗುತ್ತದೆ.ಮಲೆನಾಡು–ಕರಾವಳಿ ಪ್ರದೇಶದ ಮಡಿಲಲ್ಲೇ ಬೆಳೆದ ನನಗೆ ಕಾಡು–ಗುಡ್ಡಗಳೆಂದರೆ ವಿಶೇಷವಾದ ಪ್ರೀತಿ. ಮಳೆ–ನೀರು ಎಂದರೆ ಸಂಭ್ರಮ. ಆದರೆ ನಿಸರ್ಗದ ಒಂದು ಮುಖವನ್ನು ಮಾತ್ರ ನೋಡಿದ್ದ ನಮಗೆ ಯೆಲ್ಲೋಸ್ಟೋನ್‌ನಲ್ಲಿ ಪ್ರಕೃತಿಯ ಇನ್ನೊಂದು ಮುಖದ ವಿರಾಟ್ ದರ್ಶನವಾದಂತಾಯಿತು.ಯಾವುದೇ ಕ್ಷಣದಲ್ಲಿ ನಾವು ನಿಂತಲ್ಲೇ ಹೊಸಬುಗ್ಗೆಯೊಂದು ಹುಟ್ಟಬಹುದಾದ, ಕರಡಿಯೊಂದು ಥಟ್ಟನೆ ಎದುರಾಗಬಹುದಾದ ನೆಲದ ಅನುಭವ ಪಡೆದ ಕ್ಷಣ ನಮ್ಮದಾಯಿತು. ಬಿಸಿನೀರು ಚಿಮ್ಮುತ್ತಿರುವ ಈ ಬುಗ್ಗೆಯಿಂದ ಏನಾದರೂ ಈಗ ಲಾವಾರಸ ಹೊರಬಂದರೆ... ಪ್ರತಿವರ್ಷವೂ ಹಲವಾರು ಭೂಕಂಪಗಳಿಗೆ ತುತ್ತಾಗುವ ಈ ಭೂಮಿ, ಮುಂದಿನ ಬಾರಿ ನಾವು ಬಂದಾಗ ಹೇಗೆ ಬದಲಾಗಿರಬಹುದು... ಈ ರೀತಿಯ ಹಲವು ಆಲೋಚನೆಗಳೊಂದಿಗೆ ಮರಳಿ ಮನೆ ತಲುಪಿದರೂ ಮತ್ತದೇ  ಕಾಡುವ ಬುಗ್ಗೆಗಳ ನೆನಪು, ಮೂಗಲ್ಲಿ ಅದೇ ಸಲ್ಫರ್ ಘಾಟು.ಇತರ ಪ್ರೇಕ್ಷಣೀಯ ಸ್ಥಳಗಳು

ಗ್ರಾಂಡ್ ಕಾನ್ಯನ್: ಇದು ಯೆಲ್ಲೋಸ್ಟೋನ್ ನದಿಯ ಅತಿ ಉದ್ದದ (24ಮೈಲಿ) ಕಣಿವೆ. ಇಲ್ಲಿರುವ, ಯೆಲ್ಲೋಸ್ಟೋನ್ ನದಿಯಿಂದ ಉಚಿಟಾದ, 308 ಅಡಿಯಿಂದ ಧುಮುಕುವ ಲೋವರ್ ಫಾಲ್ಸ್ ಹಾಗೂ 109 ಅಡಿ ಆಳಕ್ಕೆ ಧುಮುಕುವ ಅಪ್ಪರ್ ಜಲಪಾತಗಳ  ದೃಶ್ಯಗಳು ಮೈನವಿರೇಳಿಸುವಷ್ಟು ರೋಚಕವಾಗಿವೆ. ಹಲವಾರು ವರ್ಷಗಳಿಂದ ಮೇಲ್ಮುಖವಾಗಿ ಚಿಮ್ಮಿ ಬರುತ್ತಿರುವ ಬಿಸಿಬುಗ್ಗೆಗಳು, ಉಗಿಕಿಂಡಿಗಳು ಈ ಕಣಿವೆಯ ಕಲ್ಲಿನ ಬಣ್ಣವನ್ನೇ ಬದಲಿಸಿ, ಕೆಂಪು, ಬಿಳಿ, ಗುಲಾಬಿ ಬಣ್ಣಗಳಿಗೆ ತಿರುಗಿಸಿದೆ.

ಎಲ್ಲೋಸ್ಟೋನ್ ಕೆರೆ: ಇದು ಉತ್ತರ ಅಮೆರಿಕದಲ್ಲೇ ಸಮುದ್ರ ಮಟ್ಟದಿಂದ ಅತಿ ಹೆಚ್ಚಿನ ಎತ್ತರದಲ್ಲಿರುವ ಕೆರೆ. ಇದರ ದಡದ ಉದ್ದ 141 ಮೈಲಿ. ಪಶ್ಚಿಮ ಹಾಗೂ ಪೂರ್ವದ ದ್ವಾರಗಳಿಂದ ಪ್ರವೇಶಿಸಿದಾಗ ಸುಲಭವಾಗಿ ಕಾಣಸಿಗುವ ಕೆರೆಯಿದು. ಇದರ ರಮಣೀಯವಾದ ರೂಪ ನಮಗೆ ಗ್ರಾಂಟ್ ಹಾಗೂ ಲೇಕ್ ವಿಲೇಜ್‌ಗಳಲ್ಲಿ ಸಿಗುತ್ತದೆ.ಹೈಡನ್ ಹಾಗೂ ಲಾಮರ್ ಕಣಿವೆ: ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಡುಪ್ರಾಣಿಗಳು ನೋಡಲು ದೊರಕುವ ಸ್ಥಳವಿದು. ಈ ದಾರಿಯಲ್ಲಿ ನಮಗೆ ಕಾಡುಕೋಣಗಳ ಹಿಂಡು ಹಿಂಡೇ ಎದುರಾಯಿತು.ಫೈರ್‌ಹೋಲ್ ಜಲಪಾತ: ಫೈರ್‌ಹೋಲ್ ನದಿಯಿಂದ ಉಂಟಾದ ಜಲಪಾತವಿದು. ಯೆಲ್ಲೋಸ್ಟೋನ್‌ನ ಪಶ್ಚಿಮ ದ್ವಾರಕ್ಕೆ ಸಮೀಪವಾಗಿ ಕಾಣಸಿಗುವ ಇದು ಅತ್ಯಂತ ಸೊಬಗಿನ ಜಲಪಾತ. ಗಿಬ್ಬನ್ ಜಲಪಾತ ಹಾಗೂ ಟವರ್ ಜಲಪಾತಗಳು ಕೂಡಾ ತುಂಬಾ ಸುಂದರವಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.