ಭಾನುವಾರ, ಏಪ್ರಿಲ್ 18, 2021
32 °C

ಬಿಸಿಬಿಸಿ ಚರ್ಚೆಗೆ ಗ್ರಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಬಜೆಟ್‌ನಲ್ಲಿ ಇಂಧನ ಇಲಾಖೆಗೆ ಹೆಚ್ಚಿನ ಅನುದಾನ ನೀಡಿರುವುದು ವಿಧಾನ ಪರಿಷತ್ತಿನಲ್ಲಿ ಮಂಗಳವಾರ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸ ಒದಗಿಸಿತು.ಗ್ರಾಮೀಣಾಭಿವೃದ್ಧಿ, ವಸತಿ ಸೇರಿದಂತೆ ಪ್ರಮುಖ ಖಾತೆಗಳ ಅನುದಾನವನ್ನು ಕಡಿತಮಾಡಿ, ಕೇವಲ ಇಂಧನ ಇಲಾಖೆಗೆ ಏಕೆ ಹೆಚ್ಚಿನ ಅನುದಾನ ನೀಡಿದ್ದಾರೆ ಎನ್ನುವುದು ಇಲ್ಲಿರುವವರಿಗೆಲ್ಲ ಗೊತ್ತು ಎಂದು ವಿರೋಧ     ಪಕ್ಷದ ನಾಯಕಿ ಮೋಟಮ್ಮ ಮಾತಿಗೆ ಪೀಠಿಕೆ ಹಾಕಿದರು.ಆಡಳಿತ ಪಕ್ಷದ ಸದಸ್ಯೆ ಭಾರತಿ ಶೆಟ್ಟಿ ಮಧ್ಯಪ್ರವೇಶಿಸಿ, ‘ರಾಜ್ಯಕ್ಕೆ ವಿದ್ಯುತ್ ಅವಶ್ಯಕತೆ ಬಹಳಷ್ಟಿದೆ. ಆದ್ದರಿಂದ ರಾಜ್ಯವನ್ನು ಕತ್ತಲಲ್ಲಿ ಮುಳುಗಿಸಬಾರದು ಎಂದು ಹೆಚ್ಚಿನ ಅನುದಾನ ನೀಡಲಾಗಿದೆ’ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು (ಇಂಧನ ಸಚಿವೆ ಶೋಭಾ ಕರಂದ್ಲಾಜೆ ಗೈರುಹಾಜರಿದ್ದರು). ‘ಹಾಗಾದರೆ, ಬೇರೆ ಇಲಾಖೆಗಳಿಗೆ ಮಹತ್ವ ಇಲ್ಲವೇ? ಇವುಗಳ ಅನುದಾನದಲ್ಲಿ ಕಡಿತ ಮಾಡಿ, ಕೇವಲ ಇಂಧನ ಇಲಾಖೆಗೆ ಮಾತ್ರ ಹೆಚ್ಚಿನ ಅನುದಾನ ನೀಡಿರುವುದು ಎಷ್ಟು ಸರಿ?’ ಎಂದು ಮೋಟಮ್ಮ ಹಠಕ್ಕೆ ಬಿದ್ದವರಂತೆ ವಾದ ಮಂಡಿಸಿದರು.ಜೆಡಿಎಸ್‌ನ ಬಸವರಾಜ ಹೊರಟ್ಟಿ ಮಧ್ಯಪ್ರವೇಶಿಸಿ, ‘ಅವರು (ಶೋಭಾ ಕರಂದ್ಲಾಜೆ) ಸಾಕಷ್ಟು ಹೋರಾಟ ಮಾಡಿಕೊಂಡು ಬಂದವರಾಗಿದ್ದಾರೆ. ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುವರು ಎನ್ನುವ ಭರವಸೆಯಿಂದ ಅನುದಾನ ನೀಡಿದ್ದಾರೆ. ಇಂತಹ ಜವಾಬ್ದಾರಿಯನ್ನು ನಿಮ್ಮಿಂದಲೂ (ವಿಮಲಾಗೌಡ ಅವರೆಡೆ ಬೊಟ್ಟು ಮಾಡಿ) ನಾವು ಬಯಸಿದ್ದೆವು. ಆದರೆ, ನಿಮ್ಮನ್ನು ಕತ್ತಲಲ್ಲಿ ಕುಳ್ಳರಿಸಿಬಿಟ್ಟಿದ್ದಾರೆ’ ಎಂದು ಚುಚ್ಚಿದರು.ಉಪಸಭಾಪತಿಯಾಗಿರುವ ವಿಮಲಾಗೌಡ ಅವರು ಆ ವೇಳೆ ಸಭಾಪತಿಗಳ ಪೀಠವನ್ನು ಅಲಂಕರಿಸಿದ್ದರು. ತಕ್ಷಣ ಉತ್ತರಿಸಿದ ಅವರು, ‘ನಾನಿರುವ ಕಡೆ ಬೆಳಕು ಹರಿಯುತ್ತದೆ’ ಎಂದರು.‘ಹೆಣ್ಣು ಮಗಳೊಬ್ಬಳ ವಿಷಯವಾಗಿ ನೀವೆಲ್ಲಾ ಕಿತ್ತಾಡುತ್ತಿದ್ದರೆ ನಾವು ನೋಡಿಕೊಂಡು ಸುಮ್ಮನೆ ಕುಳಿತಿರಬೇಕಾ’ ಎಂದು ಬಿಜೆಪಿ ಸದಸ್ಯ, ನಟ ಶ್ರೀನಾಥ್ ಚರ್ಚೆಗೆ ತೆರೆ ಎಳೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.