ಸೋಮವಾರ, ಮೇ 17, 2021
25 °C

ಬಿಸಿಯೂಟದ ಬೇರು

-ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಬಿಸಿಯೂಟದ ಬೇರು

ಶಿಕ್ಷಣದಿಂದ ವಿಮುಖರಾದ ಮಕ್ಕಳನ್ನು ಮತ್ತೆ ಶಾಲೆಯತ್ತ ಸೆಳೆಯಲು, ದಾಖಲಾದ ಮಾಕ್ಕಳ ಹಾಜರಾತಿ ಕಾಯ್ದಿಟ್ಟುಕೊಳ್ಳಲು, ಮಕ್ಕಳ ಮಾನಸಿಕ ಹಾಗೂ ದೈಹಿಕ ಶಿಕ್ಷಣಕ್ಕೆ ಅನುಕೂಲವಾಗುವಂತೆ ಪೌಷ್ಟಿಕ ಆಹಾರ ನೀಡಲು, ಮುಖ್ಯವಾಗಿ ಸಾಮಾಜಿಕ ಸಮಾನತೆಯನ್ನು ಬಾಲ್ಯದಿಂದಲೇ ಮೈಗೂಡಿಸಿಕೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಆರಂಭಗೊಂಡ ಮಧ್ಯಾಹ್ನದ ಬಿಸಿಯೂಟದ ಯೋಜನೆಯಲ್ಲಿ ನಿತ್ಯ ರಾಜ್ಯದ ಆರು ಲಕ್ಷಕ್ಕೂ ಅಧಿಕ ಮಕ್ಕಳ ಹಸಿವು ನೀಗಿಸುವ ಪ್ರಯತ್ನ ನಡೆಯುತ್ತಿದೆ.ಹಸಿದ ಮಗುವಿಗೆ ಆಹಾರ ಒದಗಿಸಬೇಕೆಂಬ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಒಪ್ಪಂದದ ಮೇರೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆಯಲ್ಲಿ ಆರಂಭಗೊಂಡ ಬಿಸಿಯೂಟದ ಯೋಜನೆಗೀಗ ಹತ್ತರ ಸಂಭ್ರಮ.ರಾಜ್ಯದ ತೀರಾ ಹಿಂದುಳಿದ ಈಶಾನ್ಯ ಜಿಲ್ಲೆಗಳಿಂದ ಆರಂಭಗೊಂಡ ಬಿಸಿಯೂಟ ಯೋಜನೆಯನ್ನು 2003ರಲ್ಲಿ ರಾಜ್ಯದ 20 ಜಿಲ್ಲೆಗಳಿಗೆ  ವಿಸ್ತರಿಸಲಾಯಿತು. 2007ರಲ್ಲಿ ಕೇವಲ ಸರ್ಕಾರಿ ಶಾಲೆಗಳು ಮಾತ್ರವಲ್ಲದೆ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ವ್ಯಾಸಂಗ ಮಾಡುವ ಮಕ್ಕಳಿಗೂ ಬಿಸಿಯೂಟ ವಿಸ್ತರಿಸಲಾಗಿದೆ. ಅದರಂತೆ ಬೆಂಗಳೂರಿನಲ್ಲಿ ಪ್ರತಿನಿತ್ಯ 1ರಿಂದ 5ನೇ ತರಗತಿಯ 1.67 ಲಕ್ಷ, 6ರಿಂದ 8ನೇ ತರಗತಿಯ 1.13ಲಕ್ಷ ಹಾಗೂ 9ಮತ್ತು 10ನೇ ತರಗತಿಯ 72 ಸಾವಿರ ವಿದ್ಯಾರ್ಥಿಗಳು ನಿತ್ಯ ಬಿಸಿಯೂಟದ ಸವಿಯುತ್ತಿದ್ದಾರೆ.ನಗರದಲ್ಲಿರುವ ಒಟ್ಟು 2,323 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬಹುತೇಕ ಶಾಲೆಗಳಿಗೆ ಅಡುಗೆ ಕೋಣೆಗಳು ನಿರ್ಮಾಣಕ್ಕೆ ಸ್ಥಳಾವಕಾಶ ಇಲ್ಲ. ಕೆಲವೆಡೆ ಅಡುಗೆಯವರು ಸಿಗುತ್ತಿಲ್ಲ. ಈ ಕಾರಣಗಳಿಂದ ಸರ್ಕಾರೇತರ ಸಂಸ್ಥೆಗಳು ಊಟ ನೀಡುವ ಜವಾಬ್ದಾರಿ ವಹಿಸಿಕೊಂಡಿವೆ. ಅದರಂತೆ 1,943 ಶಾಲೆಗಳ ಮೂರು ಲಕ್ಷ ಮಕ್ಕಳಿಗೆ ಇಸ್ಕಾನ್, ಅದಮ್ಯ ಚೇತನ, ಸಮರ್ಥನಂ, ಸಾಯಿ ಮಂಡಳಿ, ಮೋಹಿಷಿನ್ ಷರೀಫ್ ಎಜುಕೇಷನಲ್ ಟ್ರಸ್ಟ್ ಇತ್ಯಾದಿಗಳು ಸೇರಿದಂತೆ ಒಟ್ಟು 18 ಖಾಸಗಿ ಸಂಘ ಸಂಸ್ಥೆಗಳು ಬಿಸಿಯೂಟದಲ್ಲಿ ತೊಡಗಿಸಿಕೊಂಡಿವೆ. ಉಳಿದಂತೆ 380 ಶಾಲೆಗಳು ಸ್ವಂತ ಅಡುಗೆ ಕೋಣೆಗಳನ್ನು ಹೊಂದಿವೆ.ಬಿಸಿಯೂಟದಲ್ಲಿ ಪ್ರತಿಯೊಂದು ಮಗುವಿಗೂ ಉತ್ತಮ ಕ್ಯಾಲೊರಿ ಸಿಗುವ ಆಹಾರ ಪದಾರ್ಥಗಳನ್ನು ನೀಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ 75:25ರ ಅನುಪಾತದಲ್ಲಿ ಅನುದಾನ ನೀಡುತ್ತಿದೆ. ಅದರಂತೆ ಪ್ರಾಥಮಿಕ ಶಾಲೆಯ ಪ್ರತಿಯೊಂದು ಮಗುವಿಗೂ ಊಟಕ್ಕೆ  ರೂ3.11, ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ತಲಾ ರೂ4.65 ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ತಲಾ ರೂ6.16ರಂತೆ ಅನುದಾನ ನೀಡಲಾಗುತ್ತಿದೆ. ಅಕ್ಕಿ, ಬೇಳೆ, ತರಕಾರಿ ಇತ್ಯಾದಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಅಡುಗೆ ತಯಾರಿಕಾ ವೆಚ್ಚವನ್ನು ಶೇ 7.5ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿರುವುದರಿಂದ ಪರಿಷ್ಕೃತ ಪಟ್ಟಿ ಸಿದ್ಧಗೊಂಡಿದೆ. ಹೀಗಿದ್ದರೂ ಬಿಸಿಯೂಟಕ್ಕೆ ಸಂಬಂಧಿಸಿದಂತೆ ರಾಜ್ಯದ ಇತರ ಭಾಗಗಳಿಗೆ ಹೋಲಿಸಿದಲ್ಲಿ ನಗರ ಭಿನ್ನವಾಗಿದೆ. ಇಲ್ಲಿ ಅನುದಾನಿತ ಶಾಲೆಗಳಲ್ಲಿ ಕಡು ಬಡವರಿಂದ ಹಿಡಿದು, ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರೂ ವ್ಯಾಸಂಗ ಮಾಡುತ್ತಿರುವುದರಿಂದ ಬಿಸಿಯೂಟವನ್ನು ಕೆಲವು ಮಕ್ಕಳೇ ನಿರಾಕರಿಸುತ್ತಿರುವುದೂ ಕೇಳಿಬರುತ್ತಿದೆ. ಜತೆಗೆ ಅಡುಗೆಯವರ ಕೊರತೆ, ಪಾಠ, ಊಟದ ಜತೆ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಇನ್ನೂ ಅನೇಕ ಜವಾಬ್ದಾರಿಗಳು ಇರುವುದರಿಂದ ಬಿಸಿಯೂಟ ನಿರ್ವಹಣೆ ಕಷ್ಟವಾಗುತ್ತಿದ್ದುದರಿಂದ ಯೋಜನೆಯ ಭಾಗವಾಗಿ ಖಾಸಗಿಯವರ ಮೊರೆಹೋಗಿರುವುದರಿಂದ ಇಲಾಖೆಯ ಅಧಿಕಾರಿಗಳು ಕೊಂಚ ನಿರಾಳರಾಗಿದ್ದಾರೆ.ನೂಪಾ ವರದಿ

ಶೈಕ್ಷಣಿಕ ಯೋಜನೆ ಹಾಗೂ ಆಡಳಿತ ರಾಷ್ಟ್ರೀಯ ವಿಶ್ವವಿದ್ಯಾಲಯಕ್ಕಾಗಿ (ನೂಪಾ) ಡಾ. ಕೆ. ಶ್ರೀನಿವಾಸ ಅವರು ಸಮೀಕ್ಷೆಯೊಂದನ್ನು ನಡೆಸಿದರು. ಅದರ ಅನ್ವಯ `ಕರ್ನಾಟಕದಲ್ಲಿ ಯೋಜನೆ ಯಶಸ್ವಿಯಾಗುವಲ್ಲಿ ಶಾಲೆ ಅಭಿವೃದ್ಧಿ ಮೇಲ್ವಿಚಾರಣಾ ಸಮಿತಿಯ ಪಾತ್ರ ದೊಡ್ಡದು'. ಇತರ ರಾಜ್ಯಗಳಂತೆ ಇಲ್ಲಿ ಬಿಸಿಯೂಟ ನೀಡುವುದರ ಜತೆಗೆ ಮಳೆ ನೀರು ಕೊಯ್ಲು, ಬಿಸಿಯೂಟಕ್ಕೆ ಬೇಕಾದ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುವುದು, ನೀರಿನ ಉಳಿತಾಯ ಇತ್ಯಾದಿ ಪರಿಸರ ಸಂಬಂಧಿ ಕಾರ್ಯಗಳನ್ನು ಕೈಗೊಂಡಿರುವುದು ಹೊಸ ಬೆಳವಣಿಗೆ ಎಂದು ಅದು ಹೇಳಿದೆ. ಇದು ಇತರ ರಾಜ್ಯಗಳಿಗೆ ಮಾದರಿ ಎಂದೂ ಅದು ತಿಳಿಸಿದೆ.ಎಸ್‌ಡಿಎಂಸಿ ಸದಸ್ಯರು, ತಾಯಂದಿರ ಸಮಿತಿಯ ಸಕ್ರಿಯ ಪಾಲುದಾರಿಕೆಯಿಂದ ಯೋಜನೆಗೆ ಬಲ ಬಂದಂತಾಗಿದೆ ಎಂದಿರುವ ಸಮೀಕ್ಷೆಯಲ್ಲಿ ಯೋಜನೆಯ ಅನುಷ್ಠಾನದಲ್ಲಿ ಎನ್‌ಜಿಒಗಳ ಸಕ್ರಿಯ ಪಾತ್ರವನ್ನೂ ಉಲ್ಲೇಖಿಸಲಾಗಿದೆ. ಜತೆಗೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರು ಹಾಗೂ ಸಾರ್ವಜನಿಕರಿಗೆ ಅಡುಗೆ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶ ಕಲ್ಪಿಸಿರುವುದರಿಂದ, ಅಡುಗೆಗೆ ಬಳಸುವ ಪದಾರ್ಥಗಳ ಗುಣಮಟ್ಟ ಕಾಯ್ದುಕೊಳ್ಳಲು ಸಹಕಾರಿಯಾಗಿದೆ. `ನೂಪಾ' ನಡೆಸಿರುವ ಸಮೀಕ್ಷೆಯಲ್ಲಿ ಬಿಸಿಯೂಟ ಯೋಜನೆಯ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸಿರುವ ಶಾಲೆಗಳಲ್ಲಿ ತೀರಾ ಹಿಂದುಳಿದ ಎಚ್.ಡಿ. ಕೋಟೆ ತಾಲ್ಲೂಕಿನ ನಂಜನಾಯಕನಹಳ್ಳಿಯಂಥ ಶಾಲೆ ಇದೆ. ಆದರೆ ಇಷ್ಟೆಲ್ಲಾ ಮುಂದುವರಿದಿರುವ ಬೆಂಗಳೂರು ನಗರ ಜಿಲ್ಲೆಯ ಯಾವ ಶಾಲೆಯೂ ಇದರಲ್ಲಿ ಪ್ರಗತಿ ಸಾಧಿಸಿಲ್ಲ.ಅಡುಗೆ ಮಾಡುವವರ ಕೊರತೆ

`ಬೆಂಗಳೂರಿನಂಥ ದುಬಾರಿ ನಗರದಲ್ಲಿ ತಿಂಗಳಿಗೆ ಒಂದು ಸಾವಿರ ಸಂಭಾವನೆಗೆ ಅಡುಗೆಯವರು ಸಿಗುವುದೇ ದೊಡ್ಡ ಸಮಸ್ಯೆಯಾಗಿದೆ. ಕಟ್ಟಡ ನಿರ್ಮಾಣ ಕಾರ್ಯದಲ್ಲೇ ದಿನಕ್ಕೆ  ರೂ 500 ಸಂಭಾವನೆ ಸಿಗುವುದರಿಂದ ಸರ್ಕಾರ ನಿಗದಿಪಡಿಸಿರುವ ಸಂಬಳಕ್ಕೆ ಯಾರೂ ಬಾರದಿರುವುದೂ ಖಾಸಗಿಯವರತ್ತ ಮುಖ ಮಾಡಲು ಒಂದು ಕಾರಣವಾಗಿದೆ. ಅಡುಗೆಯವರು ಮಾತ್ರವಲ್ಲದೆ ಅಡುಗೆ ಬಡಿಸುವ, ತಟ್ಟೆ ತೊಳೆಯುವ ಸಹಾಯಕರಿಗೂ ಬೆಂಗಳೂರಿನಲ್ಲಿ ಕೊರತೆ ಉಂಟಾಗಿದೆ. ಇದೀಗ ಅಡುಗೆ ಸಹಾಯಕರನ್ನು ನೇಮಿಸಿಕೊಳ್ಳುವ ಹೊಸ ಪ್ರಸ್ತಾವನೆಗೆ ಚಾಲನೆ ದೊರೆತಿದೆ. ಅದರಂತೆ ಬಿಸಿಯೂಟ ನೀಡುತ್ತಿರುವ ಖಾಸಗಿ ಸಂಸ್ಥೆಗಳಲ್ಲಿ 13 ಸಂಸ್ಥೆಗಳಿಗೆ ಅಗತ್ಯವಿರುವ 1657 ಸಹಾಯಕರು ಹಾಗೂ ಅಡುಗೆ ಕೇಂದ್ರಗಳಿರುವ 380 ಶಾಲೆಗಳಿಗೆ ಸಹಾಯಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇಸ್ಕಾನ್ ಒಂದಕ್ಕೇ 2,572 ಸಹಾಯಕರು ಬೇಕಾಗಿದ್ದಾರೆ.ಆದರೆ ಕಾರ್ಮಿಕ ಇಲಾಖೆಯ ನಿಯಮಗಳ ಅನ್ವಯ ನೌಕರರಿಗೆ ಭವಿಷ್ಯನಿಧಿ, ಇಎಸ್‌ಐ ಇತ್ಯಾದಿ ನೀಡುವುದು ಅತಿ ಅವಶ್ಯಕ. ಹೀಗಾಗಿ ಸರ್ಕಾರ ನೀಡುವ ಹಣಕ್ಕಿಂತ ಹೆಚ್ಚಿನ ಆರ್ಥಿಕ ಹೊರೆಯನ್ನು ಖಾಸಗಿ ಸಂಸ್ಥೆಗಳೇ ಹೇಗೋ ಭರಿಸಿಕೊಳ್ಳುತ್ತಿವೆ. ಸಹಾಯಕರ ಭತ್ಯೆಯನ್ನು  ರೂ 1500ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಕೂಡ ಸರ್ಕಾರದ ಮುಂದಿದೆ. ಈ ಹಣವನ್ನು ನೇರವಾಗಿ ಸಹಾಯಕರ ಬ್ಯಾಂಕ್ ಖಾತೆಗೆ ಹಾಗೂ ಖಾಸಗಿ ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವವರಿಗಾಗಿ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ. ಆದರೆ ಖಾಸಗಿ ಸಂಸ್ಥೆಗೆ ಬಿಡುಗಡೆ ಮಾಡಿದ ಹಣವನ್ನು ಆರ್‌ಟಿಜಿಎಸ್ (ರಿಯಲ್ ಟೈಂ ಗ್ರಾಸ್ ಸೆಟಲ್‌ಮೆಂಟ್) ಮೂಲಕವೇ ಸಹಾಯಕರಿಗೆ ನೀಡಬೇಕೆಂಬ ಷರತ್ತನ್ನು ಇದು ಒಳಗೊಂಡಿದೆ' ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.ಬಿಸಿಯೂಟ ಬೇಡ ಎಂದ ಮಕ್ಕಳು

ಬೆಂಗಳೂರಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಹಾಗೂ ಅನುದಾನಿತ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಅದರಂತೆಯೇ ಕೆಲವು ಅನುದಾನಿತ ಶಾಲೆಗಳಲ್ಲಿ ಮೇಲ್ಮಧ್ಯಮ ವರ್ಗದ ಮಕ್ಕಳು ಓದುತ್ತಿದ್ದು, ಅವರೆಲ್ಲರೂ ಬಿಸಿಯೂಟವನ್ನು ತಿರಸ್ಕರಿಸಿದ ಘಟನೆಗಳೂ ನಡೆದಿವೆ. ಹೀಗಾಗಿ ಖಾಸಗಿ ಸಂಘ ಸಂಸ್ಥೆ ಹಾಗೂ ಶಾಲಾ ಕ್ಯಾಂಟೀನ್ ಅವರೊಂದಿಗೆ ಒಪ್ಪಂದ ನಡೆಸಿ ಅಲ್ಲಿ ಊಟದ ವ್ಯವಸ್ಥೆ ಮಾಡಿರುವ ಉದಾಹರಣೆಗಳಿವೆ. ಒಟ್ಟಿನಲ್ಲಿ 2012-13ನೇ ಸಾಲಿನಲ್ಲಿ ಬಿಸಿಯೂಟಕ್ಕಾಗಿ ಬೆಂಗಳೂರು ನಗರದ ಶಾಲೆಗಳಿಗೆ ಸರ್ಕಾರ ಒಟ್ಟು  ರೂ 35.5 ಕೋಟಿ ಹಣ ಬಿಡುಗಡೆ ಮಾಡ್ದ್ದಿದು, ಅದರಲ್ಲಿ ಸುಮಾರು  ರೂ32 ಕೋಟಿಯಷ್ಟು ಖರ್ಚಾಗಿದೆ ಎಂದೆನ್ನುತ್ತವೆ ಇಲಾಖೆಯ ದಾಖಲೆಗಳು.ಬಿಸಿಯೂಟದಲ್ಲಿ ತಾಯಂದಿರು

ವಾರದ ದಿನಗಳಲ್ಲಿ ಬೇಳೆ, ತರಕಾರಿ ಬಳಸಿಕೊಂಡು ಅನ್ನ- ಸಾಂಬಾರ್, ಶುಕ್ರವಾರ ಬಿಸಿಬೇಳೆ ಭಾತ್ ಹಾಗೂ ಶನಿವಾರ ತರಕಾರಿ ಉಪ್ಪಿಟ್ಟು ಅಥವಾ ಸಿಹಿ ಪೊಂಗಲ್ ನೀಡಲಾಗುತ್ತಿದೆ. ಶಾಲೆಗಳಲ್ಲಿ ತಯಾರಾಗುವ ಬಿಸಿಯೂಟದ ಗುಣಮಟ್ಟದ ಮೇಲ್ವಿಚಾರಣೆಯನ್ನು ಶಾಲಾ ಹಂತದಲ್ಲಿ ಮುಖ್ಯ ಅಡುಗೆಯವರು ಹಾಗೂ ಶಾಲೆಗಳ ಅಭಿವೃದ್ಧಿ ನಿರ್ವಹಣಾ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷರು ವಹಿಸಿಕೊಳ್ಳುತ್ತಾರೆ. ಕೇವಲ ಅವರು ಮಾತ್ರವಲ್ಲದೆ ಶಾಲಾ ಮಕ್ಕಳ ತಾಯಂದಿರೂ ಅಡುಗೆಯ ಮೇಲ್ವಿಚಾರಣೆ, ಊಟದ ರುಚಿ ನೋಡುವುದರ ಜತೆಗೆ ಬಡಿಸುವುದರಲ್ಲೂ ಪಾಲ್ಗೊಳ್ಳುವ ಮೂಲಕ ಮಕ್ಕಳಿಗೆ ಮನೆ ವಾತಾವರಣ ನೀಡುವ ಅವಕಾಶವೂ ಯೋಜನೆಯಲ್ಲಿ ಕಲ್ಪಿಸಲಾಗಿದೆ.ನಿರ್ಗತಿಕ ಮಹಿಳೆಯರ ಅವಕಾಶ ಎನ್‌ಜಿಒ ಪಾಲು

ಶೈಕ್ಷಣಿಕ ಪ್ರಗತಿಯಲ್ಲಿ ಮಗುವಿನ ಗ್ರಹಿಕಾ ಶಕ್ತಿ ವೃದ್ಧಿಸುವ ಸಲುವಾಗಿ ಪೌಷ್ಟಿಕ ಆಹಾರ ನೀಡುವ ಸರ್ಕಾರದ ಯೋಜನೆ ನಿಜಕ್ಕೂ ಶ್ಲಾಘನೀಯ. ಆದರೆ ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟದ ಜವಾಬ್ದಾರಿ ವಹಿಸಿರುವುದರಿಂದ ಹಿಂದುಳಿದ, ನಿರ್ಗತಿಕ ಮಹಿಳೆಯರಿಗೆ ಕೆಲಸ ನೀಡುವ ಯೋಜನೆಯ ಆಶಯಕ್ಕೆ ಧಕ್ಕೆಯಾಗಿದೆ. ಪ್ರಗತಿ ಸಾಧಿಸಬೇಕೆಂಬ ಏಕೈಕ ಉದ್ದೇಶದಿಂದ ಎನ್‌ಜಿಒಗಳನ್ನು ಯೋಜನೆಯಲ್ಲಿ ಸೇರಿಸಿಕೊಂಡಿರುವುದರಿಂದ ಯೋಜನೆಯ ಧ್ಯೇಯೋದ್ದೇಶ ಸಂಪೂರ್ಣವಾಗಿ ವಿಫಲವಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಹೊಣೆ.ಬೆಂಗಳೂರಿನಲ್ಲಿ ಲಕ್ಷಕ್ಕೂ ಅಧಿಕ ಮಕ್ಕಳಿಗೆ ಖಾಸಗಿ ಸಂಘ ಸಂಸ್ಥೆಗಳು ಸಿದ್ಧಪಡಿಸಿದ ಆಹಾರ ಪೂರೈಕೆಯಾಗುತ್ತಿದೆ. ಆದರೆ ಇವೆಲ್ಲವೂ ಕೇಂದ್ರೀಕೃತ ಅಡುಗೆ ಕೋಣೆಯಲ್ಲಿ ಸಿದ್ಧವಾಗುತ್ತಿವೆ. ಮಧ್ಯಾಹ್ನ ಊಟ ನೀಡಬೇಕೆಂದರೆ ದೂರದ ಶಾಲೆಗಳಿಗೆ ಕನಿಷ್ಠ ಬೆಳಿಗ್ಗೆ 9 ಗಂಟೆಯೊಳಗೆ ಅಡುಗೆ ಮನೆಯಿಂದ ಆಹಾರ ಹೊರಡಬೇಕು. ಅಂದರೆ ಅವು ಮಧ್ಯರಾತ್ರಿಯಿಂದಲೇ ಸಿದ್ಧವಾಗುತ್ತವೆ ಎಂದಾಯಿತಲ್ಲ. ದೂರದ ಶಾಲೆಗಳಿಗೆ ಹೋಗುವುದರೊಳಗೆ ಕೆಲವೆಡೆ ಅನ್ನವು ನೀರು ಬಿಟ್ಟುಕೊಂಡಿರುತ್ತದೆ ಅಥವಾ ಹಳಸಿ ಹೋಗಿರುತ್ತದೆ. ಅಂಥ ಘಟನೆಗಳು ನಮ್ಮ ಗಮನಕ್ಕೆ ಬಂದಿವೆ.ಎನ್‌ಜಿಒಗಳು ಮೇಲ್ನೋಟಕ್ಕೆ ಸಮಾಜ ಸೇವೆ ಮಾಡುತ್ತಿರುವ ಕುರಿತು ಮಾತನಾಡುತ್ತವೆ. ಆದರೆ, ಇದೇ ಮಕ್ಕಳ ಚಿತ್ರಗಳನ್ನು ತೋರಿಸಿ ಹೊರಗಿನಿಂದ ಅವು ಹಣ ವಸೂಲು ಮಾಡುತ್ತಿರುವುದೂ ಗೊತ್ತಿದೆ. ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಇವು ಸಮಾಜ ಸೇವೆಯ ಮುಖವಾಡ ಹಾಕಿಕೊಂಡಿವೆ. ಇಸ್ಕಾನ್ ಮತ್ತಿತರ ಸಂಸ್ಥೆಗಳು ಊಟ ನೀಡುತ್ತಿರುವ ಕೆಲವು ಶಾಲೆಗಳಿಗೆ ಸರಿಯಾದ ರಸ್ತೆ ಇಲ್ಲ. ಹೀಗಾಗಿ ಶಾಲಾ ಮಕ್ಕಳೇ ಊಟವನ್ನು ತಲೆ ಮೇಲೆ ಹೊತ್ತುಕೊಂಡು ಹೋಗುವ ಪರಿಸ್ಥಿತಿಯೂ ಇದೆ. ಇದರ ಬದಲಾಗಿ ಅಲ್ಲೇ ಅಡುಗೆ ಕೋಣೆ ನಿರ್ಮಿಸಲು ಸರ್ಕಾರ ಮುಂದಾದಲ್ಲಿ ಮಕ್ಕಳಿಗೆ ಬಿಸಿಯೂಟ ಸಿಗುವುದರ ಜತೆಗೆ ನಿರ್ಗತಿಕ ಹಾಗೂ ಹಿಂದುಳಿದ ಮಹಿಳೆಯರ ದುಡಿಮೆಗೆ ಒಂದು ದಾರಿಯೂ ಆದಂತಾಗುತ್ತದೆ. ಒಟ್ಟಿನಲ್ಲಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯಲ್ಲಿ ಖಾಸಗಿ ಸಂಸ್ಥೆಗಳನ್ನು ಸೇರಿಸಿಕೊಂಡಿರುವುದರಿಂದ ರಾಜ್ಯದಲ್ಲಿ ಒಟ್ಟು 20 ಸಾವಿರ ಮಹಿಳೆಯರಿಗೆ ಸಿಗಬೇಕಾದ ಕೆಲಸ ತಪ್ಪಿಹೋಗಿದೆ. ಇದಕ್ಕೆ ಸರ್ಕಾರವೇ ನೇರ ಹೊಣೆ.

-ಎಸ್. ವರಲಕ್ಷ್ಮಿ, ಮಧ್ಯಾಹ್ನದ ಬಿಸಿಯೂಟ ಯೋಜನೆ ನೌಕರರ ಸಂಘದ ರಾಜ್ಯಾಧ್ಯಕ್ಷೆ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.