ಗುರುವಾರ , ಫೆಬ್ರವರಿ 25, 2021
17 °C

ಬಿಸಿಯೂಟದ ಸಾರಿನಲ್ಲಿ ತೇಲಿದ ಹುಳುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಸಿಯೂಟದ ಸಾರಿನಲ್ಲಿ ತೇಲಿದ ಹುಳುಗಳು

ಮುಂಡಗೋಡ: ಮಧ್ಯಾಹ್ನದ ಬಿಸಿ ಊಟದ ಸಾರಿ(ಸಾಂಬಾರ)ನಲ್ಲಿ ಹುಳಗಳು(ನುಸಿ) ತೇಲುತ್ತಿರುವುದನ್ನು ಕಂಡ ವಿದ್ಯಾರ್ಥಿಗಳು ಊಟದ ತಟ್ಟೆಯೊಂದಿಗೆ ನೇರವಾಗಿ ತಹಶೀಲ್ದಾರ್‌ ಕಚೇರಿಗೆ ತೆರಳಿ ಬಿಸಿಊಟದ ಅವ್ಯವಸ್ಥೆಯನ್ನು ಅಧಿಕಾರಿಗಳ ಗಮನಕ್ಕೆ ತಂದ ಘಟನೆ ಬುಧವಾರ ಜರುಗಿದೆ.ಪಟ್ಟಣದ ದೇಶಪಾಂಡೆ ನಗರದ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ನೀಡಲಾದ ಸಾರಿನಲ್ಲಿ ನುಸಿಗಳು ತೇಲುತ್ತಿರುವುದು ಕಂಡುಬಂದಿದೆ. ಇದನ್ನು ಕಂಡ ಮಕ್ಕಳು ಶಿಕ್ಷಕರಿಗೆ ತೋರಿಸಿ ನಂತರ ಪಾಲಕರೊಂದಿಗೆ ನೇರವಾಗಿ ತಹಶೀಲ್ದಾರ್‌ ಕಚೇರಿಗೆ ತೆರಳಿ ಊಟದ ತಟ್ಟೆಯಿಂದ ನುಸಿಗಳನ್ನು ತೆಗೆದು ತೋರಿಸಿದ್ದಾರೆ. ಈ ಶಾಲೆಯ ಮಕ್ಕಳಿಗೆ ಪಕ್ಕದ ಹಿರಿಯ ಪ್ರಾಥಮಿಕ ಶಾಲೆ ನಂ.3ರಲ್ಲಿ ಅಡುಗೆ ಮಾಡಿ ಸರಬರಾಜು ಮಾಡುವ ವ್ಯವಸ್ಥೆಯಿದ್ದು ಮಧ್ಯಾಹ್ನ ವಿತರಿಸಲಾದ ಊಟದಲ್ಲಿ ನುಸಿಗಳು ಕಂಡುಬಂದಿವೆ.ನಂತರ ತಹಶೀಲ್ದಾರರು ನಂ.3ರ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿ ಬಿಸಿ ಊಟಕ್ಕೆ ಬಳಸುವ ಬೇಳೆಕಾಳುಗಳನ್ನು ಪರಿಶೀಲಿಸಿದಾಗ ಚೀಲದ ತುಂಬ ನುಸಿಗಳ ರಾಶಿ ಕಂಡುಬಂತು. ಅಲ್ಲದೇ ಬೇಳೆಕಾಳುಗಳು ಉತ್ತಮ ಗುಣಮಟ್ಟದಿಂದ ಕೂಡಿರದೇ ಪುಡಿಯಾಗಿರುವುದು ಹಾಗೂ ತಯಾರಿಸಲಾಗಿದ್ದ ಸಾರಿನಲ್ಲಿ ನುಸಿಗಳು ಇರುವುದು ಕಂಡುಬಂತು. ಇದರಿಂದ ಆಕ್ರೋಶಗೊಂಡ ತಹಶೀಲ್ದಾರ್‌ ನಾರಾಯಣ ರಾವ್‌, ‘ಅಡುಗೆ ಮಾಡಲು ಬೇಳೆಕಾಳು ಯೋಗ್ಯವಿಲ್ಲದಿದ್ದರೆ  ಅದನ್ನು ಬಳಸಬಾರದಿತ್ತು. ಈ ರೀತಿ ಮಕ್ಕಳಿಗೆ ಕಳಪೆಯಾಗಿ ಆಹಾರ ಪೂರೈಸುವುದು ಸರಿಯಲ್ಲ’ ಎಂದರು.ಸ್ಥಳಕ್ಕಾಗಮಿಸಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಂಜುನಾಥ ಸಾಳುಂಕೆ, ‘ಕಳಪೆ ಗುಣಮಟ್ಟದ ಸಾಮಗ್ರಿಗಳಿದ್ದರೆ ಅದನ್ನು ಬಳಸದೇ ಮರಳಿಸಲು ಎಲ್ಲ ಶಾಲೆಗಳಿಗೂ ಈಗಾಗಲೇ ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದರೇ ಬಿಸಿ ಊಟದ ಅನುದಾನದಲ್ಲಿ ಶಾಲಾ ಮುಖ್ಯ ಶಿಕ್ಷಕರು ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ’ ಎಂದರು.ಶಾಲೆಯ ಮುಖ್ಯ ಶಿಕ್ಷಕಿ ಎಂ.ಬಿ.ಪಾಳೇದವರ ಮಾತನಾಡಿ, ‘ಕಳೆದ ತಿಂಗಳು ಸರಬರಾಜು ಮಾಡಲಾದ ಬೇಳೆಕಾಳು ಉತ್ತಮ ಗುಣಮಟ್ಟದಲ್ಲಿ ಇಲ್ಲ. ಶಾಲೆಗೆ ಚೀಲಗಳನ್ನು ಇಳಿಸುವಾಗಲೇ ನುಸಿಗಳು ಚೀಲದ ಮೇಲೆ ಹರಿದಾಡುತ್ತಿದ್ದವು. ಆಗಲೇ ಅಕ್ಷರ ದಾಸೋಹ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಆದರೂ ಬೇಳೆಕಾಳುಗಳನ್ನು ಬದಲಿಸಿ ಕೊಡಲಿಲ್ಲ.  ಒತ್ತಾಯಪೂರ್ವಕವಾಗಿ ಬೇಳೆ ಚೀಲಗಳನ್ನು ಶಾಲೆಯಲ್ಲಿ ಇಳಿಸಲಾಗಿದೆ’ ಎಂದರು. ‘ಶಾಲೆಗೆ ಕಳಪೆ ಗುಣಮಟ್ಟದ ಬೇಳೆಕಾಳುಗಳನ್ನು ವಿತರಿಸಲಾಗಿದ್ದು ಅವುಗಳನ್ನು ಕೂಡಲೇ ಬದಲಿಸಿಕೊಡಬೇಕು. ಇಲ್ಲವಾದರೇ ಬಿಸಿ ಊಟದ ಸಹವಾಸವೇ ಬೇಡ ಎಂದು’  ಪಾಲಕರು ಅಕ್ಷರ ದಾಸೋಹ ಅಧಿಕಾರಿಯನ್ನು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.