ಬಿಸಿಯೂಟ ಕೊಠಡಿಗೆ ಬೀಗ

7
ಅಡುಗೆ ಸಹಾಯಕಿ ಅನುಚಿತ ವರ್ತನೆ: ಗ್ರಾಮಸ್ಥರ ಆರೋಪ

ಬಿಸಿಯೂಟ ಕೊಠಡಿಗೆ ಬೀಗ

Published:
Updated:

ಚನ್ನರಾಯಪಟ್ಟಣ: ಶಿಕ್ಷಕರ ಜತೆ ಅಡುಗೆ ಸಹಾಯಕಿ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಸರಿಯಾಗಿ ಅಡುಗೆ ತಯಾರಿಸುವುದಿಲ್ಲ ಎಂದು ಆರೋಪಿಸಿದ ಕಟಗೀಹಳ್ಳಿ ಗ್ರಾಮಸ್ಥರು ಕಳೆದ ಮೂರು ದಿನಗಳಿಂದ ಅಡುಗೆ ಕೊಠಡಿಗೆ ಬೀಗ ಹಾಕಿದ್ದಾರೆ. ಇದರಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 32 ಮಕ್ಕಳು ಬಿಸಿ ಊಟದಿಂದ ವಂಚಿತವಾಗಿದ್ದಾರೆ.ಗುರುವಾರ ಗ್ರಾಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪಾಂಡು, ಇಲಾಖಾಧಿಕಾರಿಗಳಾದ ಬಿ.ಎ. ಕಾಳೇಗೌಡ, ಲೋಕೇಶ್, ಅಕ್ಷರ ದಾಸೋಹ ಸಹಾ ಯಕ ನಿರ್ದೇಶಕ ಚಂದ್ರಪ್ಪ, ನುಗ್ಗೇಹಳ್ಳಿ ಠಾಣೆ ಸಬ್‌ಇನ್ಸ್ ಪೆಕ್ಟರ್ ವೀರಭದ್ರಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.ಗ್ರಾಮಸ್ಥರು ಅಧಿಕಾರಿಗಳ ಮುಂದೆ ಹೇಳಿದ್ದಿಷ್ಟು: ಕಳೆದ ಬುಧವಾರ ಕುಡಿ ಯುವ ನೀರು ಸಂಪರ್ಕ ಕಲ್ಪಿಸುವ ಮೋಟರ್ ಕೆಟ್ಟಿದೆ. ಹಾಗಾಗಿ ಅಡುಗೆ ಸಿಬ್ಬಂದಿ ಊರಿನಿಂದ ಕೊಡದಲ್ಲಿ ನೀರು ತಂದು ಬಿಸಿಯೂಟ ತಯಾರಿಸಿದರು.ಊಟದ ನಂತರ ಮಕ್ಕಳು ನೀರು ತೆಗೆದುಕೊಂಡು ಕೈ ತೊಳೆಯಲು ಮುಂದಾದರು. ಇದರಿಂದ ಸಿಟ್ಟಾದ ಅಡುಗೆ ಸಹಾಯಕಿ ಸರೋಜಮ್ಮ, ಶಿಕ್ಷಕ ಜಯರಾಂ ಅವರನ್ನು ಉದ್ದೇಶಿಸಿ ಮಕ್ಕಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದ ನೀವು ಎಂಥ ಶಿಕ್ಷಕರು ಎಂಬುದು ಸೇರಿದಂತೆ ಕೆಲವು ಆಕ್ಷೇಪಾರ್ಹ ಪದ ಬಳಸಿದರು.ಅವರ ಹೇಳಿಕೆ ಒಂದು ಜನಾಂಗಕ್ಕೆ ಮಾಡಿದ ಅವಮಾನ. ಅಲ್ಲದೇ ಕಳೆದ ಕೆಲ ತಿಂಗಳಿಂದ ಸರಿಯಾಗಿ ಊಟ ತಯಾರಿಸುತ್ತಿಲ್ಲ. ಈ ಎಲ್ಲ ವಿಷಯವನ್ನು ಕಳೆದ ಶುಕ್ರವಾರ ಶಿಕ್ಷಕ ಜಯರಾಂ ಗ್ರಾಮಸ್ಥರ ಗಮನಕ್ಕೆ ತಂದಿದ್ದಾರೆ.ಇದರಿಂದ ಸಿಟ್ಟಾಗಿ ಮಂಗಳವಾರದಿಂದ ಅಡುಗೆ ಕೊಠಡಿಗೆ ಬೀಗ ಹಾಕಬೇಕಾಯಿತು ಎಂದು ಅಧಿಕಾರಿಗಳ ಮುಂದೆ ಗ್ರಾಮಸ್ಥರು ಹೇಳಿಕೆ ನೀಡಿದರು. ಈ ವಿಷಯವನ್ನು ಮುಖ್ಯ ಶಿಕ್ಷಕಿ ರೇಣುಕಮ್ಮ ಗಮನಕ್ಕೆ ತಂದರೆ ನಮಗೆ ಧಮಕಿ ಹಾಕುತ್ತಾರೆ. ಗ್ರಾಮಸ್ಥರ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಹೇಳಿದರು. ಶಿಕ್ಷಕರ ವಿರುದ್ಧ ಹಾಗೂ ಮುಖ್ಯ ಅಡುಗೆಯವರಾದ ರಾಣಿ, ಅಡುಗೆ ಸಹಾಯಕಿ ಸರೋಜಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.`ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ಪೊಲೀಸರಿಗೆ ದೂರು ನೀಡುವುದಾಗಿ ಹೇಳಿಲ್ಲ' ಎಂದು ಮುಖ್ಯ ಶಿಕ್ಷಕಿ ರೇಣುಕಮ್ಮ ಹೇಳಿದರು. `ಶಿಕ್ಷಕ ಜಯರಾಂ ಅಥವಾ ಶಾಲಾ ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ' ಎಂದು ಅಡುಗೆ ಸಹಾಯಕಿ ಸರೋಜಮ್ಮ ಹೇಳಿಕೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪಾಂಡು ಮಾತನಾಡಿ, ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ಏಕೆ ತರಲಿಲ್ಲ ಎಂದು ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಅಡುಗೆ ಸಹಾಯಕಿ ಸರೋಜಮ್ಮ ಅನುಚಿತವಾಗಿ ವರ್ತಿಸಿದ್ದರೆ ಶಿಕ್ಷಕ ಜಯರಾಂ ಮುಖ್ಯ ಶಿಕ್ಷಕರ ಗಮನಕ್ಕೆ ತರಬೇಕಿತ್ತು. ಅದನ್ನು ಬಿಟ್ಟು ಊರವರಿಗೆ ಹೇಳಿದ್ದು ಸರಿಯಲ್ಲ. ಮುಖ್ಯ ಶಿಕ್ಷಕಿ, ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಲಿಖಿತ ದೂರು ನೀಡದೆ ಅಡುಗೆಯವರ ವಿರುದ್ಧ ಕ್ರಮ ಸಾಧ್ಯವಿಲ್ಲ. ಮಾರ್ಚ್ ನಂತರ ಬದಲಿ ವ್ಯವಸ್ಥೆ ಬಗ್ಗೆ ಯೋಚಿಸಲಾಗುವುದು. ಅಲ್ಲಿ ವರೆಗೆ ಬಿಸಿಯೂಟ ಯೋಜನೆಗೆ ಅಡ್ಡಿಪಡಿಸಬೇಡಿ ಎಂದು ಗ್ರಾಮಸ್ಥರಿಗೆ ಮನವಿಕೆ ಮಾಡಿದರು.ಅಡುಗೆಯವರನ್ನು ಬದಲಾಯಿಸುವ ವರೆಗೆ ಕೊಠಡಿ ಬೀಗ ತೆರೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಸ್ಥಳದಲ್ಲಿ ನಡೆಯುತ್ತಿದ್ದ ಘಟನೆ ಸೆರೆ ಹಿಡಿಯಲು ಹೋದ ಪತ್ರಕರ್ತರಿಗೆ ಗ್ರಾಮಸ್ಥರು ಅಡ್ಡಿಪಡಿಸಿದರು. ವರದಿಗಾರರ ಒಂದು ಕ್ಯಾಮೆರಾ ಕಿತ್ತುಕೊಂ ಡರು. ಟಿ.ವಿ ವರದಿಗಾರರನ್ನು ಮುತ್ತಿ ಕೊಂಡ ಮಹಿಳೆಯರು ಊರಿಗೆ ಬರಲು ನಿಮಗೆ ಹೇಳಿದವರಾರು ಎಂದು ಸಿಟ್ಟಾದರು. ಗ್ರಾಮಸ್ಥರು, ಪತ್ರಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಗ್ರಾಮಸ್ಥರ ಬಿಗಿ ನಿಲುವಿನಿಂದ ಸಮಸ್ಯೆ ಬಗೆಹರಿಯದೆ ಅಧಿಕಾರಿಗಳು ವಾಪಸಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry