ಗುರುವಾರ , ಮೇ 19, 2022
20 °C

ಬಿಸಿಯೂಟ ವಿವಾದ: ಪೊಲೀಸ್ ಸುಪರ್ದಿಯಲ್ಲಿ ತರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ:  ಬಿಸಿಯೂಟದ ಅಡುಗೆ ತಯಾರಕರೊಬ್ಬರನ್ನು ಕೆಲಸದಿಂದ ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಉಂಟಾದ ಆತಂಕದ ವಾತಾವರಣದ ಕಾರಣದಿಂದ ತಾಲ್ಲೂಕಿನ ಹಸರಗೋಡು ಗ್ರಾ.ಪಂ. ವ್ಯಾಪ್ತಿಯ ಬಾಳೇಸರದ ಹಿರಿಯ ಪ್ರಾಥಮಿಕಶಾಲೆಯಲ್ಲಿ ಶುಕ್ರವಾರ ಪೊಲೀಸರ ಉಪಸ್ಥಿತಿಯಲ್ಲಿ ತರಗತಿಗಳು ನಡೆದವು.ಮಕ್ಕಳು ಮತ್ತು ಶಿಕ್ಷಕರಿರಬೇಕಾಗಿದ್ದಶಾಲೆಯಲ್ಲಿ ಈ ಸಮಸ್ಯೆಯ ಕಾರಣದಿಂದ ಇಬ್ಬರು ಪೊಲೀಸ್ ಸಿಬ್ಬಂದಿ, ಎಸ್‌ಡಿಎಂಸಿ ಅಧ್ಯಕ್ಷ ಸಿ.ಎನ್.ಹೆಗಡೆ, ಗ್ರಾ.ಪಂ. ಸದಸ್ಯೆ ಮಮತಾ ಭಟ್ಟ, ಪಾಲಕ-ಪೋಷಕರು, ಕೆಲಸದಿಂದ ಬಿಡುಗಡೆಗೊಳಿಸಲಾಗಿರುವ ಅಡುಗೆ ಸಿಬ್ಬಂದಿ ಹಾಗೂ ಅವರ ಕಡೆಯವರು ಇದ್ದದ್ದು ಸ್ಥಳಕ್ಕೆ ಭೇಟಿ ನೀಡಿದ್ದ `ಪ್ರಜಾವಾಣಿ~ ಪ್ರತಿನಿಧಿಗೆ ಕಂಡುಬಂದಿತು.ಆರೋಪ:  ಸಮಸ್ಯೆಯ ವಿವರ ನೀಡಿದ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಿ.ಎನ್.ಹೆಗಡೆ, `ಈ ಶಾಲೆಯ  ಮುಖ್ಯ ಅಡುಗೆ ತಯಾರಕರಾಗಿದ್ದ ಮಾದೇವಿ ಮಂಜುನಾಥ ಗೌಡ ಅವರನ್ನು  ಅಡುಗೆ ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಈ ಬಗ್ಗೆ ಗ್ರಾ.ಪಂ. ಅವರಿಗೆ ತಿಳಿಸಿದೆ. ಈ  ಮುಖ್ಯ ಅಡುಗೆ ತಯಾರಕರ ವಿರುದ್ಧ ಹಲವು ಆರೋಪಗಳಿದ್ದವು. ಶಾಲೆಯ ಬಹುತೇಕ ಮಕ್ಕಳು ಊಟ ಮಾಡುತ್ತಿರಲಿಲ್ಲ~ ಎಂದರು.`ಅಡುಗೆಯವರನ್ನು ಬಿಡುಗಡೆಗೊಳಿಸಿದ್ದರಿಂದ ಶಾಲಾ ಪ್ರಾರಂಭೋತ್ಸವದ ದಿನದಂದು ಬಿಸಿಯೂಟಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ಆದರೂ ಮಾದೇವಿ ಗೌಡ  ಅವರು ಅಡುಗೆ ಮಾಡಲು ಅಂದು ಶಾಲೆಯನ್ನು ಪ್ರವೇಶ ಮಾಡಿದರು. ಇದರಿಂದ ನಾವು ರಕ್ಷಣೆ ಕೋರಿ ಪೊಲೀಸರಿಗೆ ಮನವಿ ನೀಡಬೇಕಾಯಿತು~ ಎಂದು ಅವರು ತಿಳಿಸಿದರು.ಆರೋಪ ನಿರಾಕರಣೆ: ತಮ್ಮ ಮೇಲೆ ಮಾಡಲಾಗಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ  ಮಾದೇವಿ ಮಂಜುನಾಥ ಗೌಡ, `ನಾನು 2003ರಿಂದ ಈ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೇನೆ. ಇದೇ 2012ರ ಜನವರಿವರೆಗೂ ಯಾವ ಸಮಸ್ಯೆಯೂ ಇರಲಿಲ್ಲ. ಎಲ್ಲ ಮಕ್ಕಳೂ ಊಟ ಮಾಡುತ್ತಿದ್ದರು. ಈಗ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಡುಗೆ ಕೆಲಸವನ್ನು ನನ್ನದೇ ವಿಭಾಗದವರಿಗೆ ನೀಡಿದರೆ ಮಾತ್ರ ನಾನು ಒಪ್ಪುತ್ತೇನೆ~ ಎಂದರು.ಈ ಸಮಸ್ಯೆಯಿಂದಾಗಿ ಶುಕ್ರವಾರವೂ  ಮಕ್ಕಳ ಬಿಸಿಯೂಟಕ್ಕೆ ಪರ್ಯಾಯ ವ್ಯವಸ್ಥೆ ಮಾಡುವ ಪರಿಸ್ಥಿತಿ  ಬಾಳೇಸರ ಶಾಲೆಯಲ್ಲಿ ನಿರ್ಮಾಣಗೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.