ಬಿಸಿರಕ್ತದ ಹುಡುಗರ ಹಸಿಕಥೆ

ಶುಕ್ರವಾರ, ಜೂಲೈ 19, 2019
28 °C

ಬಿಸಿರಕ್ತದ ಹುಡುಗರ ಹಸಿಕಥೆ

Published:
Updated:

ಬೆಂಗಳೂರಿನ ಮಧ್ಯಮವರ್ಗದ ಹುಡುಗರು ಅಪರಾಧ ಜಗತ್ತನ್ನು ತಮ್ಮ ಸುತ್ತಲಿನ ಪರಿಸರದ ಪ್ರಭಾವದಿಂದ ಹೇಗೆ ಪ್ರವೇಶಿಸುತ್ತಾರೆ ಹಾಗೂ ಅದರಲ್ಲೇ ಸಿಕ್ಕಿಕೊಂಡು ಹೇಗೆ ನಾಶವಾಗುತ್ತಾರೆ ಎಂಬುದು `ರಾಜಧಾನಿ~ಯ ಒಂದು ಸಾಲಿನ ಕಥೆ. ಐವರು ಹುಡುಗರು ದಾರಿ ತಪ್ಪುವ ಎಳೆಯನ್ನೇ ಇಟ್ಟುಕೊಂಡು ಈ ಚಿತ್ರವನ್ನು ನಿರೂಪಿಸಲಾಗಿದೆ.ಹರಿತವಾದ ಆದರೆ ಕೆಲವೊಮ್ಮೆ ಪ್ರೇಕ್ಷಕರ ಕಿವಿಯನ್ನು ಇರಿಯುವ ಸಂಭಾಷಣೆ, ರವಿವರ್ಮ ಅವರ ಸಾಹಸ, ಒರಟು ಎನಿಸುವಂಥ ನಿರೂಪಣೆ ಸಿನಿಮಾದ ಮುಖ್ಯ ಅಂಶಗಳು.ಇದರೊಂದಿಗೆ ತಮ್ಮ ಪಾತ್ರಗಳನ್ನು ತಲ್ಲೆನರಾಗಿ ಅಭಿನಯಿಸಿರುವ ಉಮಾಶ್ರೀ, ತುಳಸಿ ಶಿವಮಣಿ, ರಮೇಶ್ ಭಟ್, ಹುಡುಗರ ಪಾತ್ರದಲ್ಲಿ ನಟಿಸಿರುವ ನಾಯಕ ಯಶ್, ಸಹನಟರಾದ ಸಂದೀಪ್, ಚೇತನ್‌ಚಂದ್ರ, ರವಿತೇಜ, ಸತ್ಯ ಅವರ ಅಭಿನಯವನ್ನೂ ಇದಕ್ಕೆ ಸೇರಿಸಬಹುದು. ಹಾಗೆಂದು ಇದನ್ನು ಯುವಕರ ಕರುಣಾಜನಕ ಕಥೆ ಎಂದು ನೋಡಲಾಗದು.ಇದು ಬಡಿದಾಟ, ಕೊಲೆಗಳಿರುವ ಭೂಗತ ಜಗತ್ತಿನ ಮತ್ತೊಂದು ಸಿನಿಮಾವಷ್ಟೆ. ಇದರಲ್ಲಿ ಪ್ರೀತಿ, ತಾಯಿತಂದೆಯ ಮಮತೆ, ಹಣ, ಕ್ರೌರ್ಯ, ರಕ್ತ, ಬಡಿದಾಟ, ಕುಡಿತ, ಮುಮೈತ್ ಖಾನ್ ಅವರ ಸೊಂಟದ ಬಳುಕಾಟದಂಥ ಜೀವನದ ಸಕಲ ರಾಗ-ದ್ವೇಷಗಳು ಕೂಡ ಇವೆ.

 

ಅವೆಲ್ಲವೂ ವರ್ಣರಂಜಿತವಾಗಿ ತೆರೆಯ ಮೇಲೆ ಮೂಡಿಬಂದಿವೆ. ಈ ಬಗೆಯಲ್ಲಿ ವರ್ಣರಂಜಿತವಾಗಿ ಮೂಡಿಬರಲು ಎಚ್.ಸಿ. ವೇಣುಗೋಪಾಲ್ ಅವರ ಛಾಯಾಗ್ರಹಣ ಹಾಗೂ ಅರ್ಜುನ್ ಅವರ ಒಂದು ಹಾಡಿನ ಕೊಡುಗೆಯೂ ಇದೆ.ಸಿನಿಮಾವನ್ನು ಒರಟು ಎನಿಸಿದರೂ ತಮ್ಮದೇ ಶೈಲಿಯಲ್ಲಿ ನಿರ್ದೇಶಕ ಕೆ.ವಿ.ರಾಜು ತೋರಿಸಿದ್ದಾರೆ. ಆದರೆ ಸಿನಿಮಾದಲ್ಲಿ ಪ್ರಮುಖ ಆಕರ್ಷಣೆಯಾದ ಅವರ ಸಂಭಾಷಣೆ ಬೆಂಗಳೂರು ಭಾಷೆಯ ದೇಸಿ ಶೈಲಿಯಿಂದ ಪ್ರೇಕ್ಷಕರ ತುಟಿಯಲ್ಲಿ ನಗು ಅರಳಿಸಿದರೂ, ಅನೇಕ ಪಾತ್ರಗಳು ಆಗಾಗ ಉಸುರುವ `ಅಮ್ಮ, ಅಕ್ಕ, ಅಪ್ಪ~ನ ಬೈಗುಳಗಳಿಂದಾಗಿ ಕಿವಿ ಮುಚ್ಚಿಕೊಳ್ಳುವಂತಾಗುತ್ತದೆ.

 

ಇದು ಅವರಿಗೆ ಪ್ರಿಯವಾದ ಬೈಗುಳವಾಗಿರಬಹುದಾದರೂ ಮತ್ತೆ ಮತ್ತೆ ಕೇಳುವುದು ಸಹನೀಯವಲ್ಲ. ರಾಜು ತಮ್ಮ ದೇಸಿ ಛಾಯೆಯ ದಾಢಸಿ ಭಾಷೆಯನ್ನು ಕೊಂಚ ಕಡಿಮೆ ಮಾಡಬಹುದಿತ್ತು. ಎಲ್ಲ ಪಾತ್ರಗಳು ಒಂದೇ ರೀತಿಯಲ್ಲಿ ಮಾತನಾಡುವುದನ್ನು ತಪ್ಪಿಸಬಹುದಿತ್ತು.ಕನ್ನಡದ ಪ್ರತಿಭಾವಂತ ನಟರೆಲ್ಲ ಇಲ್ಲಿದ್ದಾರೆ. ಪ್ರಕಾಶ್ ರೈ, ಅಚ್ಯುತ, ಉಮಾಶ್ರೀ, ಶರತ್‌ಲೋಹಿತಾಶ್ವ, ರಮೇಶ್ ಭಟ್ ಇವರೆಲ್ಲ ಇದ್ದಾರೆ. ಪ್ರಕಾಶ್ ರೈ ಅವರಿಗೆ ಸಿನಿಮಾದಲ್ಲಿ ಅಪರಾಧಿಗಳಾದ ಹುಡುಗರನ್ನು ಬೆಂಬೆತ್ತುವುದೇ ಕೆಲಸವಾಗಿ ಅವರ ಅಭಿನಯ ತನ್ನ ಆಕರ್ಷಣೆ ಕಳೆದುಕೊಂಡಿದೆ. ಇದ್ದುದರಲ್ಲಿ ಪುಟ್ಟದಾದರೂ ಹೆಚ್ಚು ಜೀವಂತ ಎನಿಸುವುದು ಉಮಾಶ್ರೀ ಅವರ ಪಾತ್ರ.ಅನೇಕ ಅಂಶಗಳು ಕಿಕ್ಕಿರಿದಿದ್ದರೂ ಈ ಸಿನಿಮಾ ಅಷ್ಟಾಗಿ ಗಮನ ಸೆಳೆಯುವುದಿಲ್ಲ.ಅದಕ್ಕೆ ಅದರ ಸಾಮಾನ್ಯವಾದ ಯುವಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರೂಪಿಸಲಾದ ಬಿಸಿರಕ್ತದ ಹುಡುಗರ ಹಸಿಕಥೆಯೂ ಕಾರಣವಿದ್ದೀತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry