ಬಿಸಿಲಲಿ ನೆರಳಲಿ!

7

ಬಿಸಿಲಲಿ ನೆರಳಲಿ!

Published:
Updated:
ಬಿಸಿಲಲಿ ನೆರಳಲಿ!

ಚಿತ್ರದ ಹೆಸರು ನೆರಳು. ಆದರೆ ಆ ನೆರಳಿನ ಸುದ್ದಿಗೋಷ್ಠಿ ನಡೆದದ್ದು ಮಾತ್ರ ಬಿರು ಬಿಸಿಲಿನಲ್ಲಿ. ಸುಡುವ ಸೂರ್ಯನನ್ನು ಕವಿದು ನೆರಳು ದಯಪಾಲಿಸಲು ಮೇಘರಾಜ ಹರಸಾಹಸ ಪಡುತ್ತಿದ್ದ. ಕೆಂಗೇರಿಯ ಮನೆಯೊಂದರಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ಚಿತ್ರತಂಡ ಹೊರಾಂಗಣದ ಹಸಿರು ಹಾಸಿನ ನಡುವೆ ಮಾತಿಗೆ ಕುಳಿತುಕೊಂಡಿತು.ಥ್ರಿಲ್ಲರ್ ಸಿನಿಮಾ ಆದದ್ದರಿಂದ ಕಥೆಯ ನೆರಳನ್ನು ಬಿಟ್ಟುಕೊಡಲು ಹಿಂದೇಟು ಹಾಕಿದರು ನಿರ್ದೇಶಕ ವಿನೋದ್ ಖನದಲಿ. ಕಥೆ ಗುಟ್ಟು ಬಿಟ್ಟುಕೊಡಬಾರದು ಎಂಬುದು ನಿರ್ಮಾಪಕರ ಕಟ್ಟಪ್ಪಣೆಯಂತೆ. ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ವಿನೋದ್‌ಗೆ ಇದು ಮೊದಲ ಚಿತ್ರ.ಜೀವನದಲ್ಲಿ ಗೊತ್ತಿದ್ದೂ ಗೊತ್ತಿಲ್ಲದೆಯೋ ತಪ್ಪು ಮಾಡುತ್ತೇವೆ. ಆದರದು ನಮ್ಮನ್ನು ನೆರಳಿನಂತೆ ಹೇಗೆ ಹಿಂಬಾಲಿಸುತ್ತದೆ ಎನ್ನುವುದನ್ನು ದೃಶ್ಯಗಳಲ್ಲಿ ಅವರು ತೋರಿಸಿದ್ದಾರಂತೆ. ಅಂದಹಾಗೆ ಇಲ್ಲಿ ಪಾತ್ರಗಳಲ್ಲೂ ಹಲವು ಛಾಯೆಗಳಿವೆಯಂತೆ.ಥ್ರಿಲ್ಲರ್ ಆದರೂ ಕುಟುಂಬವಿಡೀ ಕುಳಿತು ನೋಡುವಂತಹ ಚಿತ್ರವಿದು ಎಂದರು ವಿನೋದ್.

ಚಿತ್ರದಲ್ಲಿ ಇಬ್ಬರು ನಾಯಕರು. ಒಬ್ಬಳೇ ನಾಯಕಿ. ಥ್ರಿಲ್ಲರ್ ಜೊತೆಗೆ ತ್ರಿಕೋನ ಪ್ರೇಮಕಥೆಯೂ ಇಲ್ಲಿದೆ. ನಾಯಕ ಸಂಜೀವ್‌ಗೆ ಕಾಲೇಜು ವಿದ್ಯಾರ್ಥಿಯ ಪಾತ್ರ. `ಮೈ ಆಟೋಗ್ರಾಫ್~ನಲ್ಲಿ ಸುದೀಪ್‌ರ ಹೈಸ್ಕೂಲು ಹುಡುಗನ ಪಾತ್ರವನ್ನು ಮಾಡಿದ್ದವರು ಸಂಜೀವ್.ಬಳಿಕ `ಮರುಭೂಮಿ~ ಎಂಬ ಚಿತ್ರದಲ್ಲಿ ನಾಯಕನಾಗಿಯೂ ಅವರು ನಟಿಸಿದ್ದರು.

ಮತ್ತೊಬ್ಬ ನಾಯಕ ಆಕಾಶ್ `ಮೊಗ್ಗಿನ ಮನಸ್ಸು~ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದವರು. ಚಿತ್ರದಲ್ಲಿ ಅವರ ಪಾತ್ರಕ್ಕೆ ಮೂರು ಛಾಯೆಗಳಿವೆಯಂತೆ. ಆಸೆ ಪಟ್ಟಿದ್ದ ಪಾತ್ರ ಇದೀಗ ಸಿಕ್ಕಿದೆ ಎಂಬ ಖುಷಿ ಅವರದು. ಇಬ್ಬರಿಗೂ ನಾಯಕಿ ಶ್ರುತಿ.ಅವಿನಾಶ್ ಮತ್ತು ಸುಧಾ ಬೆಳವಾಡಿ ನಾಯಕಿಯ ತಂದೆ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಮಗಳ ಬಗ್ಗೆ ಅತಿಯಾದ ಒಲವುಳ್ಳ ತಂದೆಯಾಗಿ ಅವಿನಾಶ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಥೆ ಬಗ್ಗೆ ಏನೂ ಗೊತ್ತಿರಲಿಲ್ಲ. ಈಗಲೇ ಅಲ್ಪಸ್ವಲ್ಪ ಗೊತ್ತಾಗಿದ್ದು ಎಂದು ನಕ್ಕರು ಸುಧಾ ಬೆಳವಾಡಿ.ಹೊನ್ನವಳ್ಳಿ ಕೃಷ್ಣ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ 42 ವಸಂತಗಳನ್ನು ಪೂರೈಸಿರುವ ಅವರು ನಟಿಸಿರುವ ಚಿತ್ರಗಳ ಸಂಖ್ಯೆ 650 ದಾಟಿವೆಯಂತೆ. ಇಂದಿಗೂ ನಿರ್ಮಾಪಕರು ಮತ್ತು ನಿರ್ದೇಶಕರು ತಮ್ಮನ್ನು ಮರೆತಿಲ್ಲ ಎಂಬ ಧನ್ಯ ಭಾವ ಅವರದು.ಮಹಾರಾಷ್ಟ್ರದಲ್ಲಿ ಉದ್ದಿಮೆ ನಡೆಸುತ್ತಿರುವ ಅತುಲ್ ಕುಲಕರ್ಣಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬೆಳಗಾವಿ ಮೂಲದವರಾದ ಅವರು ಚಿತ್ರರಂಗದ ಬಗ್ಗೆ ತಮ್ಮ ಒಲವನ್ನು ಹಂಚಿಕೊಂಡರು.ಶಶಿಕುಮಾರ್ ಖಾಸಗಿ ಪತ್ತೇದಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀಹರ್ಷ ಐದು ಹಾಡುಗಳಿಗೆ ಸಂಗೀತ ಹೆಣೆಯಲಿದ್ದಾರೆ. ಹಾಡುಗಳ ಚಿತ್ರೀಕರಣಕ್ಕಾಗಿ ಬೆಳಗಾವಿಗೆ ತೆರಳುವ ಇರಾದೆ ಚಿತ್ರತಂಡದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry