ಶುಕ್ರವಾರ, ನವೆಂಬರ್ 15, 2019
20 °C

ಬಿಸಿಲಲ್ಲಿ `ಮಳೆ ಹುಡುಗಿ' ಮತ ಬೇಟೆ

Published:
Updated:

ರಾಯಚೂರು: `ಮಳೆ ಹುಡುಗಿ'ಯಾಗಿ ರಾಜ್ಯದ ಯುವಜನರನ್ನು, ಸಿನಿಮಾಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆದು ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದ ಚಿತ್ರ ನಟಿ ಪೂಜಾ ಗಾಂಧಿ ಅವರು ತಮ್ಮ ಗಲ್ಲಿಗಳಲ್ಲಿ ಓಡಾಡುತ್ತಿರುವುದು ರಾಯಚೂರಿನ ಕೊಳೆಗೇರಿಗಳ ನಿವಾಸಿಗಳಿಗೆ `ವಿಸ್ಮಯ' ಎನಿಸಿದೆ.ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಪೂಜಾ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ. ಅವರನ್ನು ಹತ್ತಿರದಿಂದ ನೋಡಿ, ಮಾತನಾಡಿಸಲು, ಆಟೋಗ್ರಾಫ್ ಪಡೆಯಲು ಮಹಿಳೆಯರು-ಮಕ್ಕಳು, ಯುವಜನ ಮುಗಿ ಬೀಳುತ್ತಿದ್ದಾರೆ. ಬಿಸಿಲಿನ ಝಳಕ್ಕೆ ಪೂಜಾ ಮುಖದ ಬಣ್ಣ ಮಾಸಿದೆ. ಆದರೆ ಉತ್ಸಾಹ ಕುಗ್ಗಿಲ್ಲ.ಕಾಲು ನೋವಿನ ಯಾತನೆ ಹೆಜ್ಜೆ ಕೀಳಲು ಬಿಡದಿದ್ದರೂ ಜನರ ಮುಂದೆ ನಿಂತು ಕೈಮುಗಿಯುತ್ತಾರೆ. ಮಹಿಳೆಯರ ಕೈ ಹಿಡಿದು ಪ್ರೀತಿ ತೋರುತ್ತಾರೆ. ಬಿಸಿಲು ಹೆಚ್ಚೆನಿಸಿದಾಗ ತಲೆಗೆ ದುಪಟ್ಟಾ ಸುತ್ತಿಕೊಂಡು ಮತ ಬೇಟೆಯಲ್ಲಿ ತೊಡಗಿದ್ದಾರೆ. ಬೆಳಿಗ್ಗೆ ಹೊತ್ತು ರಸ್ತೆ ಬದಿಯ ಅಂಗಡಿಗೆ ಚಹಾ ಸೇವಿಸಲು ಬರುತ್ತಾರೆ ಎಂದು ಕೆಲ ದಿನಗಳಿಂದ ರಾಯಚೂರಿನಲ್ಲಿ `ಬೆಳಗುತ್ತಿರುವ' ಪೂಜಾ ಕುರಿತು ಜನ ಮಾತನಾಡಿಕೊಳ್ಳುತ್ತಾರೆ.ಪ್ರಚಾರದ ವೇಳೆ ಪೂಜಾ ಕೂಡ ಮಹಿಳೆಯರನ್ನೇ ಗುರಿಯಾಗಿಸಿಕೊಂಡು `ಮುಜೇ ಏಕ್‌ಬಾರ್ ಮೋಕಾ ದೀಜೀಯೇ' (ನನಗೆ ಒಂದು ಬಾರಿ ಅವಕಾಶ ಕೊಡಿ), `ಫ್ಯಾನ್‌ಕೋ ವೋಟ್ ಡಾಲ್ನಾ' (ಫ್ಯಾನ್ ಗುರುತಿಗೆ ಮತ ಹಾಕಿ) ಎಂದು ಹಿಂದಿಯಲ್ಲಿ ಮತಯಾಚಿಸುತ್ತಿದ್ದಾರೆ. ಶುಕ್ರವಾರ ಸೂರ್ಯನ ಪ್ರಖರತೆ 40 ಡಿಗ್ರಿ ಸೆಲ್ಸಿಯಸ್ ಸಮೀಪವಿದ್ದರೂ ಅವರ ಉತ್ಸಾಹ ಬತ್ತಿರಲಿಲ್ಲ. `ನಿಮ್ಮ ಮನೆಗಳನ್ನು ನೋಡಿದರೆ ದುಃಖವಾಗುತ್ತದೆ. ನನ್ನನ್ನು ಗೆಲ್ಲಿಸಿ, ನಿಮಗೆ ಮನೆ ಕಟ್ಟಿಕೊಳ್ಳಲು ಜಾಗ ಕೊಡಿಸುತ್ತೇನೆ' ಎಂದು ಅವರು ಬೇಗಂ ಎಂಬ ಅಜ್ಜಿಯ ಕೈಹಿಡಿದು ಆತ್ಮೀಯವಾಗಿ ನುಡಿದರು. ಅಜ್ಜಿಗಿಂತಲೂ ಆಕೆಯ ಕುಟುಂಬದವರಿಗೆ ಪೂಜಾ ಮಾತುಗಳು ಬೆಳಕಿನ ಆಶಾಕಿರಣದಂತೆ ಕಂಡು ಕಣ್ಣುಗಳು ಹೊಳೆದವು.ರಾಯಚೂರು ನಗರ ಕೊಳೆಗೇರಿಗಳ ಆಗರ. ಈ ಭಾಗವನ್ನೆ ತಮ್ಮ ಗೆಲುವಿಗೆ ಅವರು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಅಲ್ಲಿಯ ಅಜ್ಜಿಯಂದಿರ ಕಾಲಿಗೆ ನಮಸ್ಕರಿಸುತ್ತಾರೆ. ಸಣ್ಣ ಮಕ್ಕಳ ಕೆನ್ನೆ ಗಿಂಡುತ್ತಾರೆ. ಶುಕ್ರವಾರ ಶೇಖ್ ಬಂಡಾ ಪ್ರದೇಶದ ಪುಟ್ಟ ಬಾಲಕನಿಗೆ ಪೂಜಾ ಗಾಂಧಿಯಿಂದ ಸ್ನಾನ ಮಾಡಿಸಿಕೊಳ್ಳುವ ಅದೃಷ್ಟ ದಿಢೀರ್ ಒಲಿದುಬಂತು. ನೆರೆದಿದ್ದವರು ನಕ್ಕು, ಸಂಭ್ರಮಿಸಿದರು.ಮಡ್ಡಿಪೇಟೆಯ ಶೇಖ್ ಬಂಡಾ ಪ್ರದೇಶದಲ್ಲಿನ ಓಣಿಗಳು ಎಷ್ಟು ಇಕ್ಕಟ್ಟಾಗಿವೆ ಎಂದರೆ ಇಬ್ಬರು ಒಟ್ಟಿಗೆ ನಡೆಯಲೂ ಆಗದು. ಅಲ್ಲೇ ಗೋಡೆ ಬದಿಯಲ್ಲಿ ಪಾಯಖಾನೆ. ಆದರೂ ಮೂಗಿಗೆ ಕರವಸ್ತ್ರವನ್ನು ಯಾರೂ ಹಿಡಿದಿರಲಿಲ್ಲ. ಗರಿ ಗರಿ ಬಿಳಿ ಜುಬ್ಬಾ ತೊಟ್ಟಿದ್ದ ಒಂದಿಬ್ಬರು ಮುಖಂಡರೂ ಸೇರಿದಂತೆ ಎಲ್ಲರೂ ಲಗುಬಗೆಯಿಂದಲೇ ಪೂಜಾ ಹಿಂದೆ ಹೆಜ್ಜೆ ಹಾಕಿದರು.ಬಿರುಸಿನ ಓಡಾಟ, `ಸೂರ್ಯನ ಕೋಪ'ದಿಂದ ಬಸವಳಿದು ಕಾಲು ನೋವಿನಿಂದ ಮನೆಯೊಂದರ ಮೆಟ್ಟಿಲ ಮೇಲೆ ಕುಳಿತು ಕಾಲು ನೀವಿಕೊಳ್ಳ ತೊಡಗಿದ್ದ ಪೂಜಾ ಅವರನ್ನು ಮಾತಿಗೆಳೆದು, `ರೀಲ್ ಲೈಫ್ ನೋಡಿದ್ದ ನೀವು ರಿಯಲ್ ಲೈಫ್ ನೋಡುತ್ತಿದ್ದೀರಿ. ಈ ಜನರ ಜೀವನದ ಬಗ್ಗೆ ಏನು ಅನಿಸುತ್ತದೆ' ಎಂಬ ಪ್ರಶ್ನೆಗೆ,`ಇಂಥ ಪ್ರದೇಶಗಳಿಗೆ ಇದುವರೆಗೆ ನಾನು ಹೋಗಿರಲಿಲ್ಲ. ಜನರ ಸ್ಥಿತಿಯನ್ನು ನೋಡಿ ಅಯ್ಯೋ ಎನಿಸಿತು. ಇವರನ್ನು ಈ ಸ್ಥಿತಿಯಲ್ಲಿಟ್ಟಿರುವವರಿಗೆ ನಾಚಿಕೆಯಾಗಬೇಕು. ಆಹಾರ, ಸ್ವಂತ ಮನೆ ಇಲ್ಲದ ವಯಸ್ಸಾದವರು ತಿಂಗಳಿಗೆ ಸರ್ಕಾರ ನೀಡುವ 400 ರೂಪಾಯಿಗೆ ಕಾದು ಕುಳಿತಿರುತ್ತಾರೆ. ಇದನ್ನು ಕೇಳಿ ಬೇಸರವಾಯಿತು. ಜನರಿಗೆ ಮೂಲ ಸೌಕರ್ಯಗಳೇ ಸಿಕ್ಕಿಲ್ಲ. ಅಂಗಡಿಗಳಲ್ಲಿ ಮಕ್ಕಳು ದುಡಿಯುತ್ತಾರೆ. ಅವರಿಗೆ ಶಾಲೆ ಭಾಗ್ಯ ದೊರೆತಿಲ್ಲ. ನಾನು ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದು ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ಇಲ್ಲಿನ ಪರಿಸ್ಥಿತಿ ನಿಜಕ್ಕೂ ಬೇಸರವಾಗಿದೆ' ಎಂದು ಎರಡು ವಾರಗಳಲ್ಲಿ ತಮ್ಮ ಸುತ್ತಾಟದಲ್ಲಿ ಗಮನಿಸಿದ ಅಂಶಗಳನ್ನು ತೆರೆದಿಟ್ಟರು.`ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ನನಗೆ ಮುಖ್ಯವಲ್ಲ. ಈ ಜನರ ಸಮಸ್ಯೆ ನಿವಾರಣೆಗೆ ನನ್ನ ಆದ್ಯತೆ. ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ' ಎಂದರು.ಅವರು ಅತ್ತ ಹೊರಟ ನಂತರ, ಅವರು ಕುಳಿತಿದ್ದ ಮನೆಯ ಮಹಿಳೆಯನ್ನು ಈಗ ಬಂದಿದ್ದವರು ಯಾರು? ಅವರ ಹೆಸರೇನು ಎಂದರೆ, `ಗೊತ್ತಿಲ್ಲ. ಟಿ.ವಿಯಲ್ಲಿ ಯಾವಾಗಲೋ ನೋಡಿದ್ದೇನೆ. ಜ್ಞಾಪಕವಿಲ್ಲ' ಎಂಬ ಉತ್ತರ ಬಂತು.ಆದರೆ, ಪೂಜಾ ಅವರ ಭರವಸೆಯ ಮಾತುಗಳ ಮೋಡಿಗೆ ಒಳಗಾದ ಬೇಗಂ ಅವರ ಸೊಸೆ ಖಾಜಾಬೀ, `ಚೆನ್ನಾಗಿದ್ದಾರೆ. ಅವರನ್ನು ನಮ್ಮ ಮನೆ ಬಾಗಿಲಿನಲ್ಲಿ ನೋಡಿ ಸಂತೋಷವಾಯಿತು. ಅವರು ಬಡವರಿಗೆ ಸಹಾಯ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಹಿಂದೆ ಯಾರ‌್ಯಾರೋ ಬಂದು ಏನೇನೋ ಆಶ್ವಾಸನೆಗಳನ್ನು ಕೊಟ್ಟಿದ್ದರು. ಏನೂ ಮಾಡಿಲ್ಲ. ಈಗ ಇವರಿಗೊಂದು ಅವಕಾಶ ಕೊಡಬೇಕು. ಕೊಳೆಗೇರಿಗೆ ಬಂದ ಅವರನ್ನು ಕಂಡು ನನಗೆ ಅಯ್ಯೋ ಎನಿಸಿತು' ಎಂದು ಮುಚ್ಚುಮರೆಯಿಲ್ಲದೆ ಹೇಳಿದರು.ಇದು ನಗರ ಪ್ರದೇಶದಲ್ಲಿ ಒಂದೇ ಕಡೆ ಹೆಚ್ಚು ಮತದಾರರು ಕೇಂದ್ರೀಕೃತವಾಗಿರುವ ಕ್ಷೇತ್ರದಲ್ಲಿನ ಪ್ರಚಾರದ ಭರಾಟೆಯಾದರೆ, ಗ್ರಾಮೀಣ ಪ್ರದೇಶದ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ ಗುರುವಾರ ಸಂಜೆಯ ನಂತರ ಗಾಂಧಿನಗರ, ರಂಗಾಪುರ ಕ್ಯಾಂಪ್, ಸತ್ಯವತಿ ಕ್ಯಾಂಪ್‌ಗಳಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದುದು ನಾವು ಆ ರಸ್ತೆಯಲ್ಲಿ ಸಾಗುವಾಗ ಕಂಡುಬಂತು.ರಾತ್ರಿ 8-30ರ ಸುಮಾರಿಗೆ ರಂಗಾಪುರ ಕ್ಯಾಂಪ್‌ನಲ್ಲಿ ನೆರೆದಿದ್ದ ಸುಮಾರು 150 ಜನರನ್ನು ಉದ್ದೇಶಿಸಿ ಪುಟ್ಟ ಭಾಷಣ ಮಾಡಿದ ಬಾದರ್ಲಿ, `ಬಿಜೆಪಿ, ಜೆಡಿಎಸ್, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಎಲ್ಲವೂ ಒಂದೇ ನಾಣ್ಯದ ನಾಲ್ಕು ಮುಖಗಳು. ಇವನ್ನು ನಂಬಬೇಡಿ. ಕಾಂಗ್ರೆಸ್‌ಗೆ ಮತ ನೀಡಿ, ಸುಭದ್ರ ಸರ್ಕಾರ ಅಧಿಕಾರ ಹಿಡಿಯಲು ನನ್ನನ್ನು ಗೆಲ್ಲಿಸಿ' ಎಂದರು.ಹಿಂದೆ ತಾವು ಶಾಸಕರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳು, ಕಾಂಗ್ರೆಸ್ ಪಕ್ಷದ ಸುದೀರ್ಘ ಅಳ್ವಿಕೆ, ಜಾರಿಗೆ ತಂದ ಕಾರ್ಯಕ್ರಮಗಳನ್ನು ವಿವರಿಸಿ, ದೇಶದಲ್ಲಿ ನಿರ್ಮಾಣಗೊಂಡಿರುವ ಎಲ್ಲ ಅಣೆಕಟ್ಟೆಗಳನ್ನು ಕಾಂಗ್ರೆಸ್ ಅಳ್ವಿಕೆಯಲ್ಲಿಯೇ ಆದದ್ದು ಎಂಬ ಅಂಶವನ್ನು ಒತ್ತಿ ಹೇಳಿದರು. ಬಾದರ್ಲಿಯವರ ಭಾಷಣ ಮುಗಿಯುತ್ತಿದ್ದಂತೆಯೇ ವ್ಯಕ್ತಿಯೊಬ್ಬರು, `ನೀವು ಶಾಸಕರಾಗಿದ್ದಾಗ ಕೊಟ್ಟ ಆಶ್ವಾಸನೆಯಂತೆ ಚರ್ಚ್ ಕಟ್ಟಡವನ್ನು ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡಲಿಲ್ಲ. ನಾವೇ ಚರ್ಚ್ ಕಟ್ಟಿಕೊಂಡಿದ್ದೇವೆ. ಇನ್ನಷ್ಟು ಕೆಲಸ ಮಾಡಿಸಿಕೊಡಿ' ಎಂದರು. `ಚುನಾವಣೆ ಮುಗಿಯಲಿ, ಮಾಡಿಸಿಕೊಡುತ್ತೇನೆ' ಎಂದು ಬಾದರ್ಲಿ ಮುಂದಿನ ಊರಿಗೆ ಹೊರಟರು.ನಮ್ಮಂದಿಗೆ ಮಾತನಾಡುತ್ತಿದ್ದ ಆ ವ್ಯಕ್ತಿಯನ್ನು ಕೆಲವರು ಗದರಿಸಿ, `ಏನಿಲ್ಲ ಸಾರ್, ಎಲ್ಲವೂ ಆಗಿದೆ. ಏನೂ ತೊಂದರೆ ಇಲ್ಲ' ಎಂದು ಅವರನ್ನು ಕರೆದುಕೊಂಡು ಹೋದರು. ಇಲ್ಲಿ ಆಂಧ್ರ ಮೂಲದ ಶ್ರೀಮಂತ ರೈತರು-ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

ಇದೇ ಕ್ಷೇತ್ರದಿಂದ ಪುನರಾಯ್ಕೆ ಬಯಸಿರುವ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಮುದ್ದಾಪುರ ಕ್ರಾಸ್ ಬಳಿ ಮತಯಾಚನೆಯಲ್ಲಿ ತೊಡಗಿದ್ದರು.ಪಕ್ಷದ ಕಾರ್ಯಕರ್ತರ, ಬೆಂಬಲಿಗರ ದೊಡ್ಡ ಮನೆಗಳಲ್ಲಿ ಕುಳಿತು ರಾಜಕೀಯ ತಂತ್ರಗಾರಿಕೆ ರೂಪಿಸಿದ ನಂತರ ಸಿಂಧನೂರು ಕಡೆಗೆ ಸಾಗಿದ ಅವರ ವಾಹನ ದಾರಿಯಲ್ಲಿ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ರಂಗಮ್ಮ ಅವರ ಪತಿ ಶಿವರಾಜಪ್ಪ ಅವರನ್ನು ಕಂಡು ನಿಂತಿತು. ವಾಹನದಿಂದ ಇಳಿದ ಶಾಸಕರು ಶಿವರಾಜಪ್ಪ ಅವರ ಕೈಹಿಡಿದು ಬೆಂಬಲ ಕೋರಿದರು.

ಪ್ರತಿಕ್ರಿಯಿಸಿ (+)