ಗುರುವಾರ , ನವೆಂಬರ್ 21, 2019
21 °C

ಬಿಸಿಲಲ್ಲೂ ರಾಹುಲ್ ಮೋಡಿ

Published:
Updated:

ಬಾಗಲಕೋಟೆ: ಮೇ 5ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆಗಾಗಿ ಮಂಗಳವಾರ ಜಿಲ್ಲೆಗೆ ಆಗಮಿಸಿದ್ದ ಯುವರಾಜ, ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಮತ್ತು ಮತದಾರರಲ್ಲಿ ಸಂಚಲನ ಮೂಡಿಸಿದರು.ಇಳಕಲ್‌ನ ಆರ್. ವೀರಮಣಿ ಕ್ರೀಡಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ 11.30ಕ್ಕೆ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ರಾಹುಲ್‌ಗಾಂಧಿ ಮೂರು ಗಂಟೆ ವಿಳಂಬವಾಗಿ ಅಂದರೆ, ಮಧ್ಯಾಹ್ನ 2.30ಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಒಡಗೂಡಿ ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಹೆಲಕಾಫ್ಟರ್‌ನಲ್ಲಿ ಆಗಮಿಸಿದರು.ಬಿರು ಬಿಸಿಲನ್ನು ಲೆಕ್ಕಿಸದೇ ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸಿದ್ದ 10 ಸಾವಿರಕ್ಕೂ ಅಧಿಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಮತದಾರರು ರಾಹುಲ್‌ಗಾಂಧಿ ಆಗಮನಕ್ಕಾಗಿ ಕಾದುಕುಳಿತಿದ್ದರು.ಬೆಳಿಗ್ಗೆ 11 ಗಂಟೆಗೆ ಕ್ರೀಡಾಂಗಣದತ್ತ ಆಗಮಿಸಿದ್ದ ಕಾರ್ಯಕರ್ತರು ಬಿಸಿಲ ತಾಪ ತಾಳಲಾರದೇ ಕ್ರೀಡಾಂಗಣದ ಸುತ್ತ ಇರುವ ಮರಗಿಡಗಳ ನೆರಳಲ್ಲಿ ಮೂರು ಗಂಟೆಗೂ ಅಧಿಕ ಕಾಲ ಕುಳಿತು ಕಾದರು. ಕುಡಿಯುವ ನೀರು, ಶಾಮಿಯಾನದ ವ್ಯವಸ್ಥೆ ಇರದಿದ್ದ ಕಾರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರು ಬಿಸಿಲ ತಾಪಕ್ಕೆ ಹೈರಣರಾದರು.ಮಧ್ಯಾಹ್ನ 2.30ಕ್ಕೆ ಕ್ರೀಡಾಂಗಣಕ್ಕೆ ಆಗಮಿಸಿದ ರಾಹುಲ್ ಪಕ್ಷದ ಕಾರ್ಯಕರ್ತರತ್ತ ಕೈಬೀಸಿ ಹುರಿದುಂಬಿಸಿದರು. ಅಭಿಮಾನಿಗಳಿಗೆ ಹಸ್ತಲಾಘವ ನೀಡಿದರು. ಕೇವಲ 10 ನಿಮಿಷ ಮಾತ್ರ ಭಾಷಣ ಮಾಡಿದರು. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಳಿಕ ವಿಜಾಪುರಕ್ಕೆ ಪ್ರಯಾಣ ಬೆಳೆಸಿದರು.ಬಿಗಿ ಭದ್ರತೆ: ಕ್ರೀಡಾಂಗಣದ ಸುತ್ತ ಪೊಲೀಸ್ ಮತ್ತು ಸಿಆರ್‌ಪಿಎಫ್ ಯೋಧರು ಬಿಗಿ ಭದ್ರತೆ ಕೈಗೊಂಡಿದ್ದರು. ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಿ ಕ್ರೀಡಾಂಗಣದ ಒಳಗೆ ಬಿಡಲಾಯಿತು.ಬದಲಾವಣೆ ಅಗತ್ಯ:

`ಐದು ವರ್ಷ ಆಡಳಿತ ನಡೆಸಿದ ಬಿಜೆಪಿ ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆದಿದೆ. ನಿರುದ್ಯೋಗ ನಿವಾರಣೆ, ದಕ್ಷ ಮತ್ತು ಸ್ವಚ್ಛ ಆಡಳಿತಕ್ಕಾಗಿ ಬದಲಾವಣೆ ಅಗತ್ಯವಾಗಿದೆ. ಕಾರಣ ಈ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಬೆಂಬಲಿಸಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮತದಾರರಲ್ಲಿ ಮನವಿ ಮಾಡಿದರು.`ಕೃಷ್ಣ ಕೊಳ್ಳದ ರಾಜ್ಯದ ಪಾಲಿನ 259 ಟಿಎಂಸಿ ನೀರು ಆಂಧ್ರಕ್ಕೆ ಹರಿದು ಹೋಗುತ್ತಿದೆ. ಬಿಜೆಪಿ ಸರ್ಕಾರ ನೀರಿನ ಸದ್ಭಳಕೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ 10 ಸಾವಿರ ಕೋಟಿ ಅನುದಾನ ನೀಡುವ ಮೂಲಕ ಐದು ವರ್ಷದಲ್ಲಿ 20 ಲಕ್ಷ ಎಕರೆ ಭೂಮಿಯನ್ನು ನೀರಾವರಿಗೆ ಒಳಪಡಿಸಲಾಗುವುದು' ಎಂದರು.ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, `ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಡವರಿಗೆ ರೂ.2ಕ್ಕೆ 25 ಕೆ.ಜಿ.ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ಐದು ವರ್ಷದ ಅಧಿಕಾರವಧಿಯಲ್ಲಿ ನೀಡಲಿಲ್ಲ. ಇದೀಗ ಮತ್ತೆ ರೂ.1 ಕ್ಕೆ 20 ಕೆ.ಜಿ.ನೀಡುವುದಾಗಿ ಸುಳ್ಳು ಭರವಸೆ ನೀಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೂ.2ಕ್ಕೆ 30 ಕೆ.ಜಿ. ಅಕ್ಕಿ ನೀಡಲಿದೆ' ಎಂದು ಭರವಸೆ ನೀಡಿದರು.`ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ವೈ.ಅಧಿಕಾರಕ್ಕೆ ಬಂದು 10 ದಿನದಲ್ಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸುವ ಮೂಲಕ ಇಬ್ಬರನ್ನು ಬಲಿ ತೆಗೆದುಕೊಂಡರು. ಇದೊಂದು ರೈತ ವಿರೋಧಿ ಸರ್ಕಾರವಾಗಿದೆ' ಎಂದು ವಾಗ್ದಾಳಿ ನಡೆಸಿದರು.ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಜಿಲ್ಲೆಯ ವಿವಿಧ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಆರ್.ಬಿ.ತಿಮ್ಮಾಪುರ, ಎಚ್.ವೈ.ಮೇಟಿ, ವಿಜಯಾನಂದ ಕಾಶಪ್ಪನವರ, ಉಮಾಶ್ರೀ, ಸಿದ್ದು ನ್ಯಾಮಗೌಡ, ಜೆ.ಟಿ.ಪಾಟೀಲ, ಬಿ.ಬಿ.ಚಿಮ್ಮನಕಟ್ಟಿ, ಮಾಜಿ ಸಚಿವರಾದ ಅಜಯಕುಮಾರ ಸರನಾಯಕ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ, ಡಾ. ದೇವರಾಜ ಪಾಟೀಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)