ಬಿಸಿಲಿನ ಬೇಗೆ ಜತೆ ಕ್ರಿಕೆಟ್ ಜ್ವರ!

7

ಬಿಸಿಲಿನ ಬೇಗೆ ಜತೆ ಕ್ರಿಕೆಟ್ ಜ್ವರ!

Published:
Updated:

ಗುಲ್ಬರ್ಗ: ಎಲ್ಲೆಲ್ಲೂ ಈಗ ‘ಕ್ರಿಕೆಟ್ ಜ್ವರ’...ಕಳೆದ ಎರಡು ದಿನಗಳ ಹಿಂದೆ ಆರಂಭವಾದ ವಿಶ್ವಕಪ್ ಕ್ರಿಕೆಟ್‌ನತ್ತಲೇ ಎಲ್ಲರ ಚಿತ್ತ. ಆಬಾಲವೃದ್ಧರಾದಿಯಾಗಿ ಎಲ್ಲರನ್ನೂ ಸೆಳೆಯುತ್ತಿರುವ ಕ್ರಿಕೆಟ್‌ನದ್ದೇ ಈಗ ಎಲ್ಲರ ಮಾತು. ಪರಸ್ಪರ ಮಾತು ಆರಂಭವಾಗುವುದೇ ‘ಸ್ಕೋರ್ ಎಷ್ಟಾಯ್ತು?’ ಎಂಬ ಮಾತಿನಿಂದ!ನಗರದಲ್ಲಿ ಬಿಸಿಲಿನ ಬೇಗೆ ಹೆಚ್ಚುತ್ತಿರುವಂತೆ ಕ್ರಿಕೆಟ್‌ನ ಬಿಸಿ ಕೂಡ ಏರುತ್ತಿದೆ. ಟಿ.ವಿ. ಇದ್ದವರು ಮನೆ-ಮನೆಗಳಲ್ಲಿ ಕ್ರಿಕೆಟ್ ಆಟ ನೋಡುತ್ತಿದ್ದಾರೆ. ಇನ್ನು ಆ ಸೌಲಭ್ಯ ಇಲ್ಲದವರಿಗೆ ಅಂಗಡಿ, ವ್ಯಾಪಾರ ಮಳಿಗೆಗಳಲ್ಲಿ ಇಟ್ಟಿರುವ ಟಿ.ವಿ.ಗಳೇ ಆಸರೆ. ಪಂದ್ಯ ನಡೆಯುತ್ತಿರುವ ವೇಳೆ ಅಂಗಡಿಗಳ ಮುಂದೆ ಆಸಕ್ತರ ಗುಂಪು ನಿಂತುಕೊಂಡು ತಾಸುಗಟ್ಟಲೇ ಆಟ ನೋಡುವುದು ಸಾಮಾನ್ಯ ದೃಶ್ಯವಾಗಿದೆ.ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಟಿ.ವಿ. ಕಂಪೆನಿಗಳು ತಮ್ಮ ಉತ್ಪನ್ನಗಳ ಮೇಲೆ ರಿಯಾಯಿತಿ ಘೋಷಿಸಿವೆ. ಸಾಮಾನ್ಯವಾಗಿ ದೀಪಾವಳಿ ಅಥವಾ ಯುಗಾದಿ ಹಬ್ಬದ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ರಿಯಾಯತಿ ಇರುತ್ತದೆ. ಈಗ ನಡೆಯುತ್ತಿರುವ ವಿಶ್ವಕಪ್ ಕೂಡ ಕ್ರೀಡಾ ಪ್ರೇಮಿಗಳಿಗೆ ಹಬ್ಬವಿದ್ದಂತೆಯೇ. ಹಾಗಾಗಿ ಬಹುತೇಕ ಎಲ್ಲ ಕಂಪೆನಿಗಳೂ ರಿಯಾಯಿತಿ ಪ್ರಕಟಿಸಿವೆ. “ಕಳೆದ ತಿಂಗಳು ಗ್ರಾಹಕರು ನಮ್ಮ ಮಳಿಗೆಗೆ ಬಂದು ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ರಿಯಾಯಿತಿ ಇರುವ ಬಗ್ಗೆ ಮಾಹಿತಿ ಪಡೆದಿದ್ದರು. ಎರಡು ವಾರಗಳಲ್ಲಿ ನಾವು ಸುಮಾರು ನೂರು ಟೆಲಿವಿಶನ್ ಸೆಟ್ ಮಾರಾಟ ಮಾಡಿದ್ದೇವೆ. ಇದು ಉಳಿದ ಅವಧಿಗೆ ಹೋಲಿಸಿದರೆ ಮೂರು ಪಟ್ಟು ಜಾಸ್ತಿ” ಎಂದು ಸೂಪರ್ ಮಾರ್ಕೆಟ್‌ನಲ್ಲಿರುವ ಅಮೋಘ ಎಲೆಕ್ಟ್ರಾನಿಕ್ ಮಳಿಗೆಯ ವ್ಯವಸ್ಥಾಪಕರು ಹೇಳುತ್ತಾರೆ.ವಿಶ್ವಕಪ್ ಕ್ರಿಕೆಟ್ ಆರಂಭದ ದಿನ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕ್ರಿಕೆಟ್‌ಪ್ರೇಮಿಗಳು ಪಟಾಕಿ ಸಿಡಿಸಿ, ಸಂಭ್ರಮಿಸಿ ಸ್ವಾಗತ ಕೋರಿದ್ದಾರೆ. ಹಲವು ಆಟಗಾರರು ದೇವಸ್ಥಾನಕ್ಕೆ ತೆರಳಿ ‘ವಿಶ್ವಕಪ್ ಭಾರತ ತಂಡದ ಪಾಲಾಗಲಿ’ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ. ಕೆಲವು ಅಭಿಮಾನಿಗಳು ತಲೆಗೆ ಕೇಸರಿ, ಬಿಳಿ ಹಸಿರು (ತ್ರಿವರ್ಣ) ಬಳಿದುಕೊಂಡು ಅಭಿಮಾನ ಮೆರೆದಿದ್ದಾರೆ. ‘ಟೀಮ್ ಯೂನಿಟಿ’ ಸದಸ್ಯರು ಭಾರತ ತಂಡಕ್ಕೆ ಶುಭ ಕೋರಿ ಕಾರ್ ಹಾಗೂ ಬೈಕ್ ರ್ಯಾಲಿ ನಡೆಸಿದ್ದಾರೆ.“ಕಳೆದ ಸಲದ ವಿಶ್ವಕಪ್ ಸಂದರ್ಭದಲ್ಲಿ ಭರ್ಜರಿಯಾಗಿ ಹೋಮ-ಹವನ ಮಾಡಿ ಭಾರತ ಕ್ರಿಕೆಟ್ ತಂಡಕ್ಕೆ ಶುಭ ಕೋರಿದ್ದೆವು. ಆದರೆ ತಂಡ ಸೂಪರ್‌ಲೀಗ್ ಹಂತಕ್ಕೂ ತಲುಪಲಿಲ್ಲ. ಇದರಿಂದ ನಮಗೆ ತೀವ್ರ ನಿರಾಶೆಯಾಗಿತ್ತು. ಹಾಗಾಗಿ ಈ ಬಾರಿ ಸ್ವಲ್ಪ ದಿನ ಕಾಯುತ್ತೇವೆ. ಭಾರತ ತಂಡ ನಿರೀಕ್ಷಿತ ಹಂತ ಮುಟ್ಟಿದರೆ ಭರ್ಜರಿಯಾಗಿ ಪೂಜೆ- ಪುನಸ್ಕಾರ ನಡೆಸಲು ನಿರ್ಧರಿಸಿದ್ದೇವೆ” ಎಂದು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಡಾ. ರಾಜು ಕುಳಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.ಹಾಸ್ಟೆಲ್‌ಗಳಲ್ಲಿ...: ಕಾಲೇಜು ಹಾಸ್ಟೆಲ್‌ಗಳಲ್ಲೂ ‘ಕ್ರಿಕೆಟ್ ಜ್ವರ’ ಕಾಣಿಸಿಕೊಂಡಿದೆ. ಪಂದ್ಯ ಆರಂಭವಾಗುತ್ತಿರುವಂತೆಯೇ ಟಿ.ವಿ ಮುಂದೆ ಸೇರುವ ವಿದ್ಯಾರ್ಥಿಗಳು ಆಟ ನಡೆಯುವ ಸಮಯದುದ್ದಕ್ಕೂ ಪಾಠ- ಪ್ರವಚನ ಮರೆಯುತ್ತಾರೆ. ನೆಚ್ಚಿನ ತಂಡದ ಅಬ್ಬರದ ಬ್ಯಾಟಿಂಗ್ ಅಥವಾ ಬೌಲಿಂಗ್‌ಗೆ ಕಿವಿಗಡಚಿಕ್ಕುವಂತೆ ಸಿಳ್ಳೆ- ಕೇಕೆ ಹಾಕಿ ಕುಣಿಯುತ್ತಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿದಂತೆ ಇತರ ಪರೀಕ್ಷೆಗಳು ನಡೆಯುತ್ತಿರುವ ಅವಧಿಯಲ್ಲೇ ವಿಶ್ವಕಪ್ ಕ್ರಿಕೆಟ್ ಆರಂಭವಾಗಿರುವುದು ವಿದ್ಯಾರ್ಥಿಗಳಿಗೆ ತುಸು ನಿರಾಶೆ ತಂದೊಡ್ಡಿರುವುದಂತೂ ನಿಜ.ಬೆಟ್ಟಿಂಗ್: ಕ್ರಿಕೆಟ್ ಎಂದರೇನೇ ‘ಬೆಟ್ಟಿಂಗ್’ ಎಂಬಂತಾಗಿರುವ ಈ ದಿನಗಳಲ್ಲಿ ನಗರದಲ್ಲೂ ಬೆಟ್ಟಿಂಗ್ ಹಾವಳಿ ಸಣ್ಣದಾಗಿ ಆರಂಭವಾಗಿದೆ. ರನ್ ಗಳಿಕೆ, ವಿಕೆಟ್ ಪತನ, ಸೋಲು ಅಥವಾ ಗೆಲುವಿನ ಲೆಕ್ಕಾಚಾರದ ಮೇಲೆ ಸಾವಿರಾರು ರೂಪಾಯಿ ಸುರಿಯುವ ಭೂಪರಿದ್ದಾರೆ. ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳದ ಬೆಟ್ಟಿಂಗ್ ಏಜೆಂಟ್‌ಗಳು ಎಲ್ಲವನ್ನೂ ಮೊಬೈಲ್ ಮೂಲಕವೇ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಇವರನ್ನು ಬಂಧಿಸುವುದು ಸವಾಲಿನ ಕೆಲಸ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry