ಮಂಗಳವಾರ, ನವೆಂಬರ್ 19, 2019
23 °C

ಬಿಸಿಲು: ಕಮರುತ್ತಿದೆ ವೀಳ್ಯದೆಲೆ

Published:
Updated:

ಹನುಮಸಾಗರ:  ವೀಳ್ಯದೆಲೆ ಹಾಗೂ ಕರಿ ಎಲೆಗೆ ಪ್ರಶಿದ್ದಿಯಾಗಿರುವ ಈ ಭಾಗದ ಯರಗೇರಾ, ಕುಂಬಳಾವತಿ, ಮದ್ನಾಳ, ಮಡಿಕ್ಕೇರಿ, ಗುಡದೂರಕಲ್, ಮಾವಿನಇಟಗಿ ಗ್ರಾಮಗಳ್ಲ್ಲಲೀಗ ಚುನಾವಣೆಯ ಕಾವಿಲ್ಲ. ತಮಗೆ ಅನ್ನ ನೀಡುತ್ತಿರುವ ಚಿಗುರೆಲೆಯ ಮೃದು ಎಲೆ ಬಳ್ಳಿಗಳು ಸದ್ಯ ಬಿರುಬೇಸಿಗೆಗೆ ತತ್ತರಿಸಿ ಕಮರಿ ಹೋಗುತ್ತಿರುವುದರಿಂದ ರೈತರು ಕಂಗಾಲಾಗಿ ಕುಳಿತಿದ್ದಾರೆ.ಕಳೆದ ಎರಡು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲ, ಅಂತರ್ಜಲ ಕುಸಿತವಾಗಿರುವುದರಿಂದ ಇದ್ದಬಿದ್ದ ಕೊಳವೆಬಾವಿಗಳ ಬತ್ತಿ ಹೋಗಿರುವುದೆ ಈ ಪ್ರಮಾಣದಲ್ಲಿ ಎಲೆ ಬಳ್ಳಿಗಳು ಬಾಡಿಬಕ್ಕುಲಗಳಾಗಲು ಮುಖ್ಯ ಕಾರಣಗಳಾಗಿದೆ. ಅನಾದಿ ಕಾಲದಿಂದಲೂಎಲೆಬಳ್ಳಿ ಬೇಸಾಯ ಈ ಭಾಗದ ಬಹುತೇಕ ಹಳ್ಳಿಗರ ಮುಖ್ಯ ಬೇಸಾಯವಾಗಿದೆ.ಪ್ರತಿಯೊಬ್ಬ ರೈತರು ಕನಿಷ್ಟ ಪಕ್ಷ ಒಂದು ಗುಂಟೆಯಷ್ಟಾದರೂ ಎಲೆಬಳ್ಳಿ ಹೊಂದಿದ್ದಾರೆ. ಗಡಸುತನ ಹೊಂದಿರುವ ಕರಿಎಲೆ, ಬಾಯಿಗೆ ಮಧುರ ನೀಡುವ ವೀಳ್ಯದೆಲೆ ಕಟಾವ್ ಮಾಡಿ ಸುತ್ತಲಿನ ಪಟ್ಟಣಗಳಿಗೆ ನಿತ್ಯ ವಹಿವಾಟು ನಡೆಸುತ್ತಾ ಬದುಕು ನಡೆಸುತ್ತಿರುವುದು ಅನಾದ ಕಾಲದಿಂದಲ ನಡೆದು ಬಂದ ಬದುಕಾಗಿದೆ.ಸಾಮಾನ್ಯವಾಗಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಎಲೆಗಳ ಇಳುವರಿ ಕಡಿಮೆ ಇರುವುದರಿಂದ ರೈತರು ಬಳ್ಳಿ ಇಳಿಸುವುದು, ಪಾತಿ ಮಾಡುವುದು, ಹಳೆ ಬಳ್ಳಿಗಳನ್ನು ಕತ್ತರಿಸಿ ಹೊಸದಾಗಿ ನಾಟಿ ಮಾಡುವುದಕ್ಕೆ ಭೂಮಿ ಸಿದ್ದ ಮಾಡುವುದು, ಒಣಗಿದ ಕಡ್ಡಿಗಳನ್ನು ಕತ್ತರಿಸುವಂತಹ ಕೆಲಸಗಳಲ್ಲಿ ತೊಡಗಿರುತ್ತಾರೆ. ಆದಾಗ್ಯೂ ತಮ್ಮ ದಿನನಿತ್ಯದ ಖರ್ಚುವೆಚ್ಚ ತೂಗಿಸುವಷ್ಟು ಎಲೆ ಕೊಯ್ಲು ನಡೆದಿರುತ್ತದೆ.ಇನ್ನು ಬೇಸಿಗೆಯ ದಿನಗಳಲ್ಲಿ ಮದುವೆ ಕಾರ್ಯಗಳು ಹೆಚ್ಚು ನಡೆಯುವುದರಿಂದ ಹಾಗೂ ಈ ಸಮಯದಲ್ಲಿ ಎಲೆಗೆ ಉತ್ತಮ ಬೆಲೆ ದೊರೆಯುತ್ತದೆ ಎಂಬ ನಂಬಿಕೆಯಿಂದ ಈ ಹಿಂದೆಯೇ ಬಳ್ಳಿ ಇಳಿಸಿ ಮಳೆಗಾಲದಲ್ಲಿ ಬರುವ ಇಳುವರಿಯನ್ನು ಬೇಸಿಗೆ ಕಾಲದಲ್ಲಿಯೇ ಪಡೆದುಕೊಳ್ಳುವ ದಾವಂತದಲ್ಲಿ ರೈತರಿರುತ್ತಾರೆ.ಆದರೆ ಈ ಬಾರಿ ಎಲೆ ಕೊಯ್ಲು ಮಾಡುವುದು ದೂರ ಉಳಿಯಿತು. ಒಣಗಿ ಹೋಗುವ ಬಳ್ಳಿಯನ್ನು ಉಳಿಸಿಕೊಳ್ಳುವುದೇ ಅವರಿಂದ ಸಾಧ್ಯವಾಗುತ್ತಿಲ್ಲ. ಹೋದ ವರ್ಷ ಸಾವಿರಾರು ರೂಪಾಯಿ ಖರ್ಚು ಮಾಡಿ ಹೊಸ ಬಳ್ಳಿ ನಾಟಿ ಮಾಡೀನ್ರಿ, ನನ್ನ ಕಣ್ಮುಂದ ಬಳ್ಳಿ ಬಾಡಿ ಹೋಗುತ್ತಿರುವುದನ್ನು ನೋಡಿದ್ರ ಸಂಕಟ ಆಕೈತ್ರಿ ಎಂದು ಯರಗೇರಾದ ದೇವಪ್ಪ ಹಾಳೂರ ನೋವಿನಿಂದ ಹೇಳುತ್ತಾರೆ.ಎಲೆಬಳ್ಳಿ ಬೆಳೆ ಅನಾದಿ ಕಾಲದಿಂದಲೂ ಉತ್ತಮ ಬೆಲೆ ತಂದು ರೈತರಿಗೆ ಆರ್ಥಿಕ ನೆಲೆಗಟ್ಟು ನೀಡಿದ್ದರಿಂದಲೇ ಈ ಕೃಷಿ ಅಜ್ಜನಿಂದ ಮಗನಿಗೆ, ಮಗನಿಂದ ಮೊಮ್ಮಗನಿಗೆ ಈ ಭಾಗದಲ್ಲಿ ಬಳುವಳಿಯಾಗಿ ಬಂದಿದೆ.ಹೋದ ವರ್ಷ ನೀರಿಲ್ಲದ ಬಾಡುತ್ತಿದ್ದ ಬಳ್ಳಿಗೆ ಬಂಡಿ ಕಟ್ಟಿ ಬೇರೆ ತೋಟಗಳಿಂದ ನೀರು ತಂದು ಹಾಕಿದ್ವಿ, ಈ ಬಾರಿ ಯಾವ ಬೋರ್ನ್ಯಾಗ ನೀರ ಇರಲಾರ‌್ದಕ ನಾವು ಕೈ ಚೆಲ್ಲ ಕುಂತಿವಿ ಎಂದು ಹೇಳುವ ಮಲ್ಲಪ್ಪ ಕುಂಟೋಜಿ, ಹುಲುಗಪ್ಪ ಈಳಗೇರ, ಯಮನಪ್ಪ ಕುಂಟೋಜಿಯವರು ಬಳ್ಳಿ ಒಣಗಿಂದ ಅನಿವಾರ್ಯವಾಗಿ ನಾವು ಕುಟುಂಬ ಸಮೇತ ಗುಳೆ ಹೋಗುವುದು ತಪ್ಪುವುದಿಲ್ರಿ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.ಸಮರ್ಪಕವಾಗಿ ನೀರು ಇದ್ದರೆ ಈ ನಾಜೂಕಿನ ಎಲೆಬಳ್ಳಿಗೆ ನೆರಳಿನಾಸೆರೆಗೆಂದು ಬೆಳೆಸುವ ಮುಂಡದ ಬಳ್ಳಿ, ನುಗ್ಗೆ, ಹಾಲುವಣ, ಚೊಗಚೆಗಳಿಂದ ಕೊಂಚ ಆದಾಯವು ಬರುತ್ತಿತ್ತು. ಆದರೆ ಎಲೆಬಳ್ಳಿಯ ಜೊತೆಗೆ ಆ ಎಲ್ಲ ಮರಗಳೂ ಸದ್ಯ ಒಣಗಿ ನಿಂತಿವೆ.

ಈ ಭಾಗದಲ್ಲಿ 2ಸಾವಿರ ಎಕರೆವರೆಗೂ ಇದ್ದ ಎಲೆಬಳ್ಳಿ ಈಗ ಕೇವಲ 400 ಎಕರೆಗೆ ಇಳಿದಿದೆ.ಮರುಕಟ್ಟೆಯಲ್ಲಿ ಎಲೆಯ ಅಭಾವ ತಲೆದೂರಿರುವುದರಿಂದ ಕಳೆದ ತಿಂಗಳ ಒಂದು ಪೆಂಡಿ ಎಲೆಗೆ (3 ಸಾವಿರ ಎಲೆ) ಸ್ಥಳೀಯ ಮಾರುಕಟ್ಟೆಯಲ್ಲಿ ರೂ.800 ರಿಂದ 1000 ವರೆಗಿದ್ದ ಬೆಲೆ ಸದ್ಯ 1500 ರೂಪಾಯಿಗೆ ಏರಿದೆ.ಮೂಗುತಿಯಷ್ಟು ತುಂಬು ಇದ್ರೂ ಮೂರು ಸಂತಿ ತಿರಗತೀನಿ ಅಂತಿದ್ದ ನಮ್ಮ ಎಲೆಗಳಿಗೆ ಬಡತನ ಅನ್ನೋದು ಗೊತ್ತಿದ್ದಿಲ್ರಿ, ಆದ್ರ ಎರಡು ವರ್ಷಗಳಿಂದ ಆ ಭರವಸೆ ನಮಗ ಉಳಿದಿಲ್ರಿ ಎಂದು ಹುಲಗಪ್ಪ ಈಳಗೇರ ನೂವು ತೋಡಿಕೊಳ್ಳುತ್ತಾರೆ.

ಪ್ರತಿಕ್ರಿಯಿಸಿ (+)