ಬಿಸಿಲು ನಾಡಿನಲ್ಲಿ ಹಣ್ಣುಗಳ ಕೃಷಿ

ಗುರುವಾರ , ಜೂಲೈ 18, 2019
24 °C

ಬಿಸಿಲು ನಾಡಿನಲ್ಲಿ ಹಣ್ಣುಗಳ ಕೃಷಿ

Published:
Updated:

ಯಾದಗಿರಿ: ಬಿಸಿಲು ನಾಡು ಎಂದೇ ಖ್ಯಾತವಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಈಗ ವಿವಿಧ ಬಗೆಯ ಹಣ್ಣುಗಳನ್ನು ಬೆಳೆಯುವುದಕ್ಕಾಗಿ ಸಿದ್ಧತೆಗಳು ಆರಂಭವಾಗಿವೆ. ತೋಟಗಾರಿಕೆ ಇಲಾಖೆ ವತಿಯಿಂದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯನ್ನು ಈ ಬಾರಿ ಅನುಷ್ಠಾನಗೊಳಿಸಲಾಗುತ್ತಿದ್ದು, ಇದಕ್ಕಾಗಿ ಸುಮಾರು ರೂ.1.70 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.ಜಿಲ್ಲೆಯಾದ್ಯಂತ ಕೇವಲ ಬತ್ತದ ಬೆಳೆಯೇ ಹೆಚ್ಚಾಗುತ್ತಿದ್ದು, ಇದರಿಂದಾಗಿ ಬೇರೆ ಬೆಳೆಯತ್ತ ರೈತರು ಆಸಕ್ತಿ ತೋರುತ್ತಿಲ್ಲ ಎಂಬ ವಾದಗಳು ಕೇಳಿ ಬರುತ್ತಿದ್ದವು. ಇದೀಗ ಕಾಲುವೆಯಲ್ಲಿ ನೀರು ಸಮರ್ಪಕವಾಗಿ ಸಿಗದೇ ಇರುವುದು ಹಾಗೂ ನೀರು ಸಿಕ್ಕರೂ ಬತ್ತಕ್ಕೆ ಒಳ್ಳೆಯ ಬೆಲೆ ಇಲ್ಲದೇ ಇರುವುದರಿಂದ ರೈತರು ಪರ್ಯಾಯ ಬೆಳೆ ಬೆಳೆಯಲು ಚಿಂತನೆ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿಯೇ ತೋಟಗಾರಿಕೆ ಇಲಾಖೆಯಿಂದ ಈ ವರ್ಷ ವಿನೂತನವಾದ ಈ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿದೆ.ಈಗಾಗಲೇ ಯೋಜನೆಗೆ ಸಂಬಂಧಿಸಿದ ಕ್ರಿಯಾಯೋಜನೆ ಸಿದ್ಧವಾಗಿದ್ದು, ಮೂರು ತಾಲ್ಲೂಕುಗಳಲ್ಲಿ ಆಯಾ ಮಣ್ಣು, ಹವಾಗುಣಕ್ಕೆ ಅನುಗುಣವಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಚಿಂತನೆ ನಡೆಸಲಾಗುತ್ತಿದೆ. ಇದಕ್ಕಾಗಿ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಸಂಬಂಧಿಸಿದ ಹೋಬಳಿಗಳಿಗೆ ಭೇಟಿ ನೀಡಿ, ಮಣ್ಣು, ಲಭ್ಯವಿರುವ ನೀರಾವರಿ ಸೌಲಭ್ಯ, ಮತ್ತಿತರ ಅಂಶಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಇದಕ್ಕೆ ಅನುಸಾರವಾಗಿ ಅಲ್ಲಿಗೆ ಹೊಂದಾಣಿಕೆಯಾಗುವ ತೋಟಗಾರಿಕೆ ಬೆಳೆ ಬೆಳೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.ಯಾದಗಿರಿ ತಾಲ್ಲೂಕಿನ ಕೊಂಕಲ್ ಹೋಬಳಿಯಲ್ಲಿ 30 ಹೆಕ್ಟೇರ್, ಬಳಿಚಕ್ರ ಹೋಬಳಿಯಲ್ಲಿ 35 ಹೆಕ್ಟೇರ್ ಪ್ರದೇಶದಲ್ಲಿ ಲಿಂಬೆ, ಸುರಪುರ ತಾಲ್ಲೂಕಿನ ಸುರಪುರ ಹೋಬಳಿಯಲ್ಲಿ 30 ಹೆಕ್ಟೇರ್‌ನಲ್ಲಿ ಸೀಬೆ (ಪೇರಲ), ಕೆಂಭಾವಿ ಹೋಬಳಿಯಲ್ಲಿ 66 ಹೆಕ್ಟೇರ್ ಬಾಳೆ, ಶಹಾಪುರ ತಾಲ್ಲೂಕಿನ ವಡಗೇರಾ ಹೋಬಳಿಯಲ್ಲಿ 26 ಹೆಕ್ಟೇರ್ ಮಾವು, ಗೋಗಿ ಹೋಬಳಿಯ 35 ಹೆಕ್ಟೇರ್‌ನಲ್ಲಿ ಲಿಂಬೆ ಬೆಳೆಯಲು ನಿರ್ಧರಿಸಲಾಗಿದೆ.ಇದಕ್ಕಾಗಿ ಆಯಾ ಹೋಬಳಿಗಳಿಗೆ ನಿಗದಿಪಡಿಸಿದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಆಸಕ್ತಿ ಹೊಂದಿರುವ ರೈತರಿಗೆ ಈ ಕುರಿತು ಮಾಹಿತಿ ನೀಡಲಾಗುತ್ತಿದೆ. ಹೋಬಳಿಯಲ್ಲಿ ಗುಚ್ಛ ಗ್ರಾಮಗಳನ್ನು ರಚಿಸಿ, ಅದರ ಮೂಲಕ ಯೋಜನೆ ಅನುಷ್ಠಾನಗೊಳಿಸುವ ಉದ್ದೇಶವನ್ನು ತೋಟಗಾರಿಕೆ ಇಲಾಖೆ ಹೊಂದಿದೆ.

 

ರೈತರಿಗೆ ಸಬ್ಸಿಡಿ: ಯೋಜನೆಯಡಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮುಂದಾಗುವ ರೈತರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಆಸಕ್ತ ರೈತರು ಸಸಿಗಳನ್ನು ತಂದು ಜಮೀನಿನಲ್ಲಿ ನೆಡಬೇಕು. ನಂತರ ಸ್ಥಳಕ್ಕೆ ಭೇಟಿ ನೀಡುವ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ ನಂತರ ಈ ಸಬ್ಸಿಡಿ ಹಣವನ್ನು ರೈತರಿಗೆ ನೀಡಲಾಗುತ್ತದೆ.ಲಿಂಬೆ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ರೂ.35,250, ಮಾವು ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ರೂ.37,750, ಸೀಬೆ (ಪೇರಲ) ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ರೂ.46,500 ಹಾಗೂ ಬಾಳೆ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ರೂ.1,38,655 ಅನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.ಸಬ್ಸಿಡಿ ಸೇರಿದಂತೆ ಯೋಜನೆಯ ಅನುಷ್ಠಾನಕ್ಕಾಗಿ ರೂ.1.70 ಕೋಟಿ ಅನುದಾನವನ್ನು ತೆಗೆದಿರಿಸಲಾಗಿದ್ದು, ಇನ್ನೂ ಹೆಚ್ಚಿನ ರೈತರು ತೋಟಗಾರಿಕೆ ಬೆಳೆ ಬೆಳೆಯಲು ಮುಂದೆ ಬಂದಲ್ಲಿ ಹೆಚ್ಚಿನ ಅನುದಾನ ಮಂಜೂರು ಮಾಡುವಂತೆ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಹೇಳುತ್ತಾರೆ.ಅವಶ್ಯಕತೆಗಳೇನು?: ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆಯಲು ರೈತರ ಆಯ್ಕೆಗಾಗಿ ನಿರ್ದಿಷ್ಟ ಮಾನದಂಡಗಳು ಇಲ್ಲ. ಹನಿ ನೀರಾವರಿ ಸೌಲಭ್ಯವನ್ನು ಅಳವಡಿಸಿ ಕೊಂಡಿರುವವರಿಗೆ ಆದ್ಯತೆ ನೀಡಲಾಗುತ್ತಿದೆ. ಸಣ್ಣ ರೈತರು, ಅತಿ ಸಣ್ಣ ರೈತರಿಗಷ್ಟೇ ಈ ಯೋಜನೆ ಇಲ್ಲ. ಇದರಲ್ಲಿ ಯಾವ ರೈತರು ಬೇಕಾದರೂ ತೋಟಗಾರಿಕೆ ಬೆಳೆ ಬೆಳೆಯಬಹುದು ಎಂದು ಅಧಿಕಾರಿಗಳು ತಿಳಿಸುತ್ತಾರೆ.ಆಯಾ ಬೆಳೆಗೆ ಅವಶ್ಯಕವಾದ ಮಣ್ಣಿನ ಗುಣಗಳ ಬಗ್ಗೆ ಅಧ್ಯಯನ ಮಾಡಲಾಗುತ್ತದೆ. ನಂತರ ಹೊಲದಲ್ಲಿರುವ ಸೌಲಭ್ಯಗಳನ್ನು ಪರಿಶೀಲಿಸಲಾಗುತ್ತದೆ. ಜೊತೆಗೆ ಆಯಾ ಬೆಳೆಯ ಸಸಿಗಳನ್ನು ತರಿಸಿಕೊಳ್ಳುವುದಕ್ಕೂ ಇಲಾಖೆಯಿಂದಲೇ ಮಾರ್ಗದರ್ಶನ ನೀಡಲಾಗುತ್ತದೆ. ಅಲ್ಲದೇ ಮಾರುಕಟ್ಟೆ ಹಂತದವರೆಗೆ ತೋಟಗಾರಿಕೆ ಇಲಾಖೆಯು ರೈತರಿಗೆ ಅಗತ್ಯ ಸಹಕಾರ ನೀಡಲಿದೆ.ಹೀಗಾಗಿ ತೋಟಗಾರಿಕೆ ಬೆಳೆ ಬೆಳೆಯಲು ಆಸಕ್ತಿ ಹೊಂದಿರುವ ರೈತರು ಇದರ ಪ್ರಯೋಜನ ಪಡೆಯಬಹುದಾಗಿದೆ. ಈಗಾಗಲೇ ಕೆಂಭಾವಿ ಭಾಗದಲ್ಲಿ ಅಂಗಾಂಶ ಕೃಷಿ ಮೂಲಕ ಸಿದ್ಧಪಡಿಸಿದ ಬಾಳೆ ಸಸಿಗಳನ್ನು ನೆಡುವ ಕಾರ್ಯ ಆರಂಭವಾಗಿದೆ. ಹಂತ ಹಂತವಾಗಿ ಎಲ್ಲ ಹೋಬಳಿಗಳಲ್ಲಿ ಈ ಯೋಜನೆಯಡಿ ಸಸಿ ನೆಡುವ ಪ್ರಕ್ರಿಯೆ ನಡೆಯಲಿದೆ ಎಂದು ಹೇಳುತ್ತಾರೆ.ಸಿಬ್ಬಂದಿಯ ಕೊರತೆ: ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿಯಲ್ಲೂ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ವಿವಿಧ ಯೋಜನೆಗಳ ಅಡಿಯಲ್ಲಿ ತಾಂತ್ರಿಕ ನೆರವು ನೀಡಲು ಇರಬೇಕಾದ ತಾಂತ್ರಿಕ ಸಹಾಯಕರೇ ಇಲ್ಲದಾಗಿದೆ.ಒಟ್ಟು 15 ಹುದ್ದೆಗಳು ಈ ಕಚೇರಿಗೆ ಮಂಜೂರಾಗಿದ್ದು, ಕೇವಲ ನಾಲ್ಕು ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಹಾಯಕ ನಿರ್ದೇಶಕರ ಹುದ್ದೆಯಲ್ಲೂ ಪ್ರಭಾರ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಇಲಾಖೆಯ ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆ ಉಂಟಾಗುತ್ತಿದೆ ಎಂದು ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry