ಬಿಸಿಲ ಝಳ, ಅಂತರ್ಜಲ ಕುಸಿತ-ರೈತ ಕಂಗಾಲು

7

ಬಿಸಿಲ ಝಳ, ಅಂತರ್ಜಲ ಕುಸಿತ-ರೈತ ಕಂಗಾಲು

Published:
Updated:

ತೋವಿನಕೆರೆ: ಮಳೆ ಮುಗಿಲು ಸೇರಿದೆ. ಬಿಸಿಲ ಝಳ ಹೆಚ್ಚುತ್ತಿದೆ. ಅಂರ್ತಜಲ ಬತ್ತಿದೆ. ಇದನ್ನೇ ನಂಬಿ ಇಟ್ಟಿದ್ದ ಬೆಳೆ ಒಣಗುತ್ತಿದೆ. ಅಸಹಾಯಕನಾದ ರೈತ ಕೈಚೆಲ್ಲಿ ಕುಳಿತಿದ್ದಾನೆ. ಏನು ಮಾಡಬೇಕು ಎಂಬುದು ತೋಚದೆ ಕಂಗೆಟ್ಟಿದ್ದಾನೆ.ಮುಂಗಾರು ಪೂರ್ವ ಮಳೆ ಈ ವರ್ಷ ಬಿರುಸಾಗಿ ಬಿದ್ದಿದೆ. ಬಿಸಿಲ ಝಳವೂ ಹೆಚ್ಚಿದೆ. ಕೆಲ ದಿನಗಳಿಂದ ಮಳೆ ನಾಪತ್ತೆ ಆಗಿದ್ದು, ಬೆಳೆ ಬಾಡಲಾರಂಭಿಸಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಕೈ ಖರ್ಚಿಗೆ ಕಾಸು ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿ ಕೈಸುಟ್ಟುಕೊಂಡು ಮೈಮೇಲೆ ಸಾಲ ಹೊತ್ತು ಕೊಳ್ಳುವಂಥ ದುಃಸ್ಥಿತಿ ಎದುರಾಗಿದೆ.ಹೊಸ ಕೊಳವೆಬಾವಿ ಕೊರೆಸಿದರೂ ನೀರು ಸಿಕ್ಕುತ್ತಿಲ್ಲ. ದೇವರ ಮೇಲೆ ಭಾರ ಹಾಕಿ ಮತ್ತೊಮ್ಮೆ ಕೊಳವೆಬಾವಿ ಕೊರೆಸಿದೆ. ಏಳುನೂರು ಅಡಿ ಆಳದಲ್ಲಿ ಉತ್ತಮ ನೀರು ಸಿಕ್ಕಿತು. ಆದರೆ ಬಾವಿಗೆ ಪಂಪ್-ಮೋಟರ್ ಬಿಟ್ಟಾಗ ಹನಿ ನೀರೂ ಮೇಲೆ ಬರುತ್ತಿಲ್ಲ. ಈಗೇನು ಮಾಡಲಿ ಎಂದು ಮಧುಗಿರಿ ತಾಲ್ಲೂಕು ರಂಗಾಪುರದ ಕೃಷಿಕ ಕಾಮಣ್ಣ ಅಸಹಾಯಕತೆ ವ್ಯಕ್ತಪಡಿಸಿದರು.ಇದು ಕೃಷಿಕ ಕಾಮಣ್ಣ ಒಬ್ಬರ ಮಾತಲ್ಲ. ಮಧುಗಿರಿ ತಾಲ್ಲೂಕಿನ ದೊಡ್ಡೇರಿ, ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ, ತುಮಕೂರು ತಾಲ್ಲೂಕು ಕೋರಾ ಹೋಬಳಿಯ ಬಹುತೇಕ ಕೃಷಿಕರ ಬಾಯಲ್ಲಿ ಕೇಳಿ ಬರುತ್ತಿರುವ ಮಾತುಗಳು.ಹದಿನೈದು ದಿನದ ಹಿಂದೆ ಹೊಸ ಕೊಳವೆ ಬಾವಿ ಕೊರೆಸಿದೆ. ನೀರು ಚೆನ್ನಾಗಿ ಬಂತು. ಇದೀಗ ಇದ್ದಕ್ಕಿದ್ದಂತೆ ನಿಂತಿದೆ. ಲಕ್ಷಾಂತರ ರೂಪಾಯಿ ಮಣ್ಣು ಪಾಲಾಗಿದೆ. ಬಾವಿಯಲ್ಲಿ ನೀರು ಬರದೆ ಅಡಿಕೆ, ಇದರ ಜತೆ ಹೊಲ-ತೋಟದ ಬೆಳೆಯೂ ನಾಶವಾಗಿದೆ. ದಿನ ಕಳೆದಂತೆ ಬಿಸಿಲ ಪ್ರಮಾಣ ಹೆಚ್ಚಿದೆ. ಬೆಳೆ ಸಾಕಷ್ಟು ನೀರು ಕೇಳುತ್ತಿದೆ. ಅದಕ್ಕೆ ನೀರು ಪೂರೈಸಿ ಉಳಿಸಿಕೊಳ್ಳಲಾಗುತ್ತಿಲ್ಲ ಎಂಬ ಆತಂಕ ಶಂಭೋನಹಳ್ಳಿಯ ನಿವೃತ್ತ ಶಿಕ್ಷಕ, ಕೃಷಿಕ ಸೀಬಿ ನರಸಿಂಹಯ್ಯ ಅವರದ್ದು.ಬೆಳೆ ಉಳಿಸಿಕೊಳ್ಳಲು ರೈತ ಹರ ಸಾಹಸ ನಡೆಸುತ್ತಿದ್ದಾನೆ. ಇದೀಗ ಎಲ್ಲಿ ನೋಡಿದರೂ ಕೊಳವೆಬಾವಿ ಕೊರೆವ ಲಾರಿಗಳಿಗೆ ಬೇಡಿಕೆ. ಇದರ ಲಾಭ ಪಡೆಯಲು ಲಾರಿ ಮಾಲೀಕರು ಮುಂದಾಗಿದ್ದು, ನಿಗದಿತ ದರಕ್ಕಿಂತ ಹೆಚ್ಚಿಗೆ ವಸೂಲಿ ಮಾಡುತ್ತಿದ್ದಾರೆ. ಇವರನ್ನು ನಿಯಂತ್ರಿಸುವರು ಯಾರು ಇಲ್ಲವೇ ಎಂಬ ಒಡಲಾಳದ ಆಕ್ರೋಶ ರೈತರದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry