ಶುಕ್ರವಾರ, ಜೂನ್ 25, 2021
29 °C
ಗೋಶಾಲೆಯಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಲು ಮನವಿ

ಬಿಸಿಲ ತಾಪಕ್ಕೆ ಬಡವಾದ ಜಾನುವಾರು

ಪ್ರಜಾವಾಣಿ ವಾರ್ತೆ/ ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ‘ಗೋಶಾಲೆ ಒಳ ಹೊಕ್ಕ ಕ್ಷಣವೇ ಜಾನುವಾರು ಬಿಸಿಲಿನ ತಾಪಕ್ಕೆ ಸೊರಗುತ್ತಿರುವ ಹಾಗೂ ರಕ್ಷಣೆಗಾಗಿ ನೆರಳನ್ನು ಹುಡುಕಾಡುವ ದೃಶ್ಯಗಳನ್ನು ಕಾಣಸಿಗುವ ಮೂಲಕ ಎಂಥವರೂ ವ್ಯವಸ್ಥೆ ಹೊಣೆ ಹೊತ್ತವರಿಗೆ ಹಿಡಿಶಾಪ ಹಾಕುವ ಪರಿಸ್ಥಿತಿಯನ್ನು ತಾಲ್ಲೂಕಿನ ಮುತ್ತಿಗಾರಗಳ್ಳಿ ಬಳಿ ಸ್ಥಾಪಿಸಿರುವ ಗೋಶಾಲೆಯಲ್ಲಿ ನೋಡಬಹುದಾಗಿದೆ.ತೀವ್ರ ಬರ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಸ್ಥಳೀಯ ‘ಅರುಂಧತಿ ಸಸ್ಯಕ್ಷೇತ್ರ’ ಆವರಣದಲ್ಲಿ ಈ ಗೋಶಾಲೆ ಸ್ಥಾಪನೆ ಮಾಡಿದೆ. ಸೂಕ್ತ ಶೆಡ್‌ ವ್ಯವಸ್ಥೆ ಇಲ್ಲ ಎಂಬ ಕಾರಣದಿಂದ ಒಂದು ಬಾರಿ ಉದ್ಘಾಟನೆ ಮುಂದೂಡಲಾಗಿದ್ದರೂ ನಂತರ ವ್ಯವಸ್ಥೆಯಲ್ಲಿ ಅಂತಹ ಬದಲಾವಣೆ ಏನೂ ಆಗಿಲ್ಲ ಎನ್ನಲಾಗಿದೆ.ಗೋಶಾಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಇಲ್ಲ, ಒಂದು ನೀರಿನ ತೊಟ್ಟಿ ದುರಸ್ಥಿ ಮಾಡಿಸಬೇಕಿದೆ. ಪ್ರತಿದಿನ ಒಂದುವರೆ ಲೋಡ್‌ ಮೇವು ಖರ್ಚಾಗುತ್ತಿದೆ. ಮಾಜಿ ಶಾಸಕ ಎನ್‌.ವೈ.ಗೋಪಾಲಕೃಷ್ಣ ಹತ್ತಿರದ ಸಂಬಂಧಿಕರೊಬ್ಬರು ಮೇವು ಪೂರೈಕೆ ಟೆಂಡರ್‌ ಪಡೆದುಕೊಂಡಿದ್ದಾರೆ.ಪ್ರತಿವರ್ಷ ನಿರ್ಮಿತಿ ಕೇಂದ್ರಕ್ಕೆ ಶೆಡ್‌ಗಳ ನಿರ್ಮಾಣ ಕಾರ್ಯ ನೀಡಲಾಗುತ್ತಿತ್ತು, ಆದರೆ, ಈ ಬಾರಿ ಚಳ್ಳಕೆರೆಯ ಖಾಸಗಿ ವ್ಯಕ್ತಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಸರಿಯಾಗಿ ಶೆಡ್ ಹಾಕಿಲ್ಲ, ಗ್ವಾದಲಿ (ಮೇವು ತಿನ್ನುವ ಜಾಗ) ಸರಿಯಾಗಿ ಮಾಡಿಲ್ಲ. ಪ್ರತಿಶೆಡ್‌ನಲ್ಲಿ 50–60 ಜಾನುವಾರು ನಿಲ್ಲಬಹುದಾಗಿದೆ. ಉಳಿದವುಗಳಿಗೆ ತೀವ್ರ ಬಿಸಿಲು ಇರುವ ಕಾರಣ ತೊಂದರೆಯಾಗುತ್ತಿದೆ. ಹೆಚ್ಚಿನ ಶೆಡ್‌ಗಳ ವ್ಯವಸ್ಥೆಗೆ ಮುಂದಾಗಬೇಕು ಎಂದು ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಜತೆ ಮಾತನಾಡಿದ ಜಾನುವಾರು ಮಾಲೀಕರು ಮನವಿ ಮಾಡಿದರು.ಗೋಶಾಲೆ ಸಿಬ್ಬಂದಿ ನೀಡಿದ ಮಾಹಿತಿ ಪ್ರಕಾರ, ಮಾರ್ಚ್‌ 10ರಂದು 507, 11ರಂದು 743, 12 ರಂದು 745, 13 ರಂದು 717, 14 ರಂದು 782, 15 ರಂದು 760 ಹಾಗೂ 16 ರಂದು 761 ಜಾನುವಾರು ಗೋಶಾಲೆಗೆ ಬಂದಿವೆ ಎಂದು ಹೇಳಿದರು.ಶೆಡ್‌ ಕೊರತೆ ಹಾಗೂ ಬಿಸಿಲಿನ ತಾಪ ತಾಳದೇ ಜಾನುವಾರು ಮಾಲೀಕರೇ ಗೋಶಾಲೆ ಆವರಣದಲ್ಲಿ ಅಲ್ಲಲ್ಲಿ ಸ್ವಂತಕ್ಕೆ ಶೆಡ್‌ಗಳನ್ನು ಮಾಡಿಕೊಂಡಿದ್ದಾರೆ. ಇದರ ಪರಿಣಾಮ ವ್ಯಾಪಕವಾಗಿ ಹುಲ್ಲು ಹಾಗೂ ಸಗಣಿ ವ್ಯರ್ಥವಾಗುತ್ತಿದೆ. ಹೆಚ್ಚಿನ ಶೆಡ್‌ ನಿರ್ಮಾಣಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಚುನಾವಣೆ ಕಾರ್ಯದಲ್ಲಿ ಇರುವುದು ಅಡ್ಡಿಯಾಗಿದೆ. ಹೆಚ್ಚುವರಿ ಶೆಡ್‌ಗಳ ನಿರ್ಮಾಣಕ್ಕೆ ಶೀಘ್ರವೇ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಭಾನುವಾರ ತಹಶೀಲ್ದಾರ್ ನಿಸ್ಸಾರ್‌ ಅಹಮದ್‌ ತಿಳಿಸಿದರು.ಜಿಲ್ಲಾಡಳಿತ ಇತ್ತ ಗಮನಹರಿಸಿ ಹೆಚ್ಚುವರಿ ಶೆಡ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಮೂಲಕ ಜಾನುವಾರುಗಳ ನೆರವಿಗೆ ಬರಬೇಕು ಎಂದು ಮನವಿ ಮಾಡಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.