ಶನಿವಾರ, ನವೆಂಬರ್ 23, 2019
23 °C
ಅದ್ದೂರಿ ಮೆರವಣಿಗೆಯೊಂದಿಗೆ ನಾಮಪತ್ರ, ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಕಾಂಚಾಣ!

ಬಿಸಿಲ ತಾಪದಲ್ಲಿಯೂ ಕುಂದದ ಅಭ್ಯರ್ಥಿಗಳ ಶಕ್ತಿ ಪ್ರದರ್ಶನ

Published:
Updated:

ಚಿತ್ರದುರ್ಗ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಬುಧವಾರ ಕಟ್ಟುನಿಟ್ಟಿನ ನೀತಿ ಸಂಹಿತೆ ನಡುವೆಯೂ ಅಭ್ಯರ್ಥಿಗಳು ತಮ್ಮ ಶಕ್ತಿ ಪ್ರದರ್ಶಿಸುವ ಪ್ರಯತ್ನ ಮಾಡಿದರು.ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಅಭ್ಯರ್ಥಿಗಳು ಬೆಂಬಲಿಗರು ಮತ್ತು ಮುಖಂಡರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ಕೆಲವು ಮಂದಿ ಮಾತ್ರ ಸ್ವಯಂ ಇಚ್ಛೆಯಿಂದ ಅಭ್ಯರ್ಥಿಗಳ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಉಳಿದಂತೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕೂಲಿಕಾರ್ಮಿಕರಿಗೆ ಪುರುಷರಿಗೆ 350, ಮಹಿಳೆಯರಿಗೆ ರೂ 250 ಮೊದಲೇ ನೀಡಲಾಗಿತ್ತು. ಕೆಲವೆಡೆ ಇನ್ನೂ ಹೆಚ್ಚಿನ ಹಣ ನೀಡಲಾಗಿತ್ತು. ಹಲವರನ್ನು ಗೂಡ್ಸ್ ಆಟೋಗಳಲ್ಲಿ ಮತ್ತು ಇತರ ವಾಹನಗಳಲ್ಲಿ ಜನರನ್ನು ಕರೆ ತರಲಾಗಿತ್ತು.ಹಿರಿಯೂರಿನಲ್ಲಿ ಸುಧಾಕರ್ ಮತ್ತು ಮಾಜಿ ಸಚಿವ ಎ. ಕೃಷ್ಣಪ್ಪ ಮೆರವಣಿಗೆಯಲ್ಲಿ ಆಗಮಿಸಿ ಶಕ್ತಿ ಪ್ರದರ್ಶಿಸಿದರು. ಹೊಳಲ್ಕೆರೆಯಲ್ಲೂ ಮಾಜಿ ಶಾಸಕ ಎಚ್. ಆಂಜನೇಯ ಅವರು ಬೃಹತ್ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ನಗರದಲ್ಲಿಯೂ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈಗಾಗಲೇ ಮೂರು ಬಾರಿ ಶಾಸಕರಾಗಿ ಮತ್ತು ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ತಿಪ್ಪಾರೆಡ್ಡಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.ತಮ್ಮ ನಿವಾಸದಿಂದ ನಾಮಪತ್ರ ಸಲ್ಲಿಸುವ ಹೊಸ ನಗರಸಭೆ ಕಟ್ಟಡದವರೆಗೂ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ಮುಖಂಡರ ಜತೆ ತೆರೆದ ವಾಹನದಲ್ಲಿ ಆಗಮಿಸಿ ತಿಪ್ಪಾರೆಡ್ಡಿ ನಾಮಪತ್ರ ಸಲ್ಲಿಸಿದರು. ನೀತಿ ಸಂಹಿತೆ ಉಲ್ಲಂಘಿಸಿ ತಿಪ್ಪಾರೆಡ್ಡಿ ಬೆಂಬಲಿಗರು ಪಟಾಕಿ ಸಿಡಿಸಿದರು.ತಿಪ್ಪಾರೆಡ್ಡಿ ಜತೆಯಲ್ಲಿ ಸಂಸತ್ ಸದಸ್ಯ ಜನಾರ್ದನಸ್ವಾಮಿ, ಮುಖಂಡರಾದ ಎಂ.ಪಿ. ಗುರುರಾಜ್, ನರೇಂದ್ರನಾಥ್, ಮೋಹನ್ ಸೇರಿದಂತೆ ಪಕ್ಷದ ಮುಖಂಡರು, ಜಿ.ಪಂ. ಸದಸ್ಯರು ಆಗಮಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ತಿಪ್ಪಾರೆಡ್ಡಿ, ಕೇಂದ್ರದ ಯುಪಿಎ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿ, ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿವರಿಸಿದರು.ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಹೊಡೆದಾಡುತ್ತಿದ್ದಾರೆ. ಹಣಕ್ಕಾಗಿ ಟಿಕೆಟ್ ಮಾರಾಟ ಮಾಡಲಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಕಳಂಕ ಅಂಟಿಕೊಂಡಿದೆ ಎಂದು ತಿಪ್ಪಾರೆಡ್ಡಿ ಟೀಕಿಸಿದರು.ಕೆಲವು ಸಣ್ಣ-ಪುಟ್ಟ ಜಗಳ, ಗೊಂದಲಗಳ ಮಧ್ಯೆ ರಾಜ್ಯದಲ್ಲಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡಿದೆ. ಪ್ರತಿಯೊಂದು ಜನಾಂಗದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಶ್ರಮಿಸಿದೆ. ಬಿಜೆಪಿ ಸರ್ಕಾರ ಹಿಂದುಳಿದ ಅಲ್ಪ ಸಂಖ್ಯಾತರಿಗೆ ಬೇರೆ ಸರ್ಕಾರಗಳೂ ನೀಡದಷ್ಟು ಸಹಾಯವನ್ನು ಮಾಡಿದೆ. ಬೆಂಗಳೂರಿನಲ್ಲಿ ಸುಮಾರು ರೂ 50 ಕೋಟಿ ವೆಚ್ಚದಲ್ಲಿ ಹಜ್ ಭವನ ನಿರ್ಮಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅತಿ ಹೆಚ್ಚಿನ ಅನುದಾನವನ್ನು ಮೀಸಲಿಟ್ಟು ಯೋಜನೆಗಳನ್ನು ರೂಪಿಸಿದೆ ಎಂದರು.ಎಲ್ಲ ಜನಾಂಗಗಳ ಮಠಗಳಿಗೆ ಅನುದಾನ ನೀಡಲಾಗಿದೆ. ಆದರೆ, ಈ ಅನುದಾನವನ್ನು ನೇರವಾಗಿ ಮಠಾಧೀಶರಿಗೆ ನೀಡಿಲ್ಲ. ಮಠಗಳು ರೂಪಿಸುವ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿ ಮೂಲಕವೇ ಅನುದಾನ ನೀಡಲಾಗಿದೆ ಎಂದು ವಿವರಿಸಿದರು.ಉಮಾಪತಿ ನಾಮಪತ್ರ

ಮಾಜಿ ಶಾಸಕ ಉಮಾಪತಿ ಕೆಜೆಪಿಯಿಂದ ನಾಮಪತ್ರ ಸಲ್ಲಿಸಿದರು. ಮಾಜಿ ಶಾಸಕ ಚಂದ್ರಪ್ಪ ಹಾಗೂ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ಉಮಾಪತಿ ನಾಮಪತ್ರ ಸಲ್ಲಿಸಿದರು.ದಾಖಲೆ ಸಲ್ಲಿಕೆ: ಶಾಸಕ ಎಸ್.ಕೆ. ಬಸವರಾಜನ್ ಸಹ ಬುಧವಾರ `ಬಿ' ಫಾರಂ ಮತ್ತು ಇತರ ದಾಖಲೆಗಳನ್ನು ಚುನಾವಣಾಧಿಕಾರಿಗೆ ತಲುಪಿಸಿದರು. ನಗರಸಭೆ ಸದಸ್ಯ ಖಾದರ್‌ಖಾನ್ ಅವರು ಈ ದಾಖಲೆಗಳನ್ನು ಸಲ್ಲಿಸಿದರು.

ಇತರ ಪಕ್ಷಗಳು ಹಾಗೂ ಪಕ್ಷೇತರರಾಗಿಯೂ ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)