ಬುಧವಾರ, ನವೆಂಬರ್ 20, 2019
24 °C

ಬಿಸಿಲ ಧಗೆಯಲ್ಲಿ ಸಂಗೀತದ ಕಂಪು

Published:
Updated:

ಕುಕನೂರು: ಇಲ್ಲಿಯ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಐದು ದಿನಗಳವರೆಗೆ ಕೊಪ್ಪಳ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರ ಪ್ರವಚನದಲ್ಲಿ ಕೊಪ್ಪಳದ ಖ್ಯಾತ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದ ಸದಾಶಿವ ಪಾಟೀಲ ಮತ್ತು ಅವರ ತಂಡ ಸಂಗೀತದ ಸುಧೆ ಹರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.ಮಾ. 29 ರಿಂದ ಏ.2 ರ ವರೆಗೆ ಐದು ದಿನಗಳ ವರೆಗೆ ಹಮ್ಮಿಕೊಂಡಿದ್ದ ಪ್ರವಚನ ಪೂರ್ವದಲ್ಲಿ ಸದಾಶಿವ ಪಾಟೀಲ ಅವರು ವಿವಿಧ ಭಕ್ತಿಗೀತೆ, ವಚನಗೀತೆ, ಭಾವಗೀತೆಗಳನ್ನು ತಮ್ಮ ಕಂಠಸಿರಿಯಲ್ಲಿ ಪ್ರಸ್ತುತಪಡಿಸಿದರು.ಸಂಗೀತದ ಸುಧೆಯನ್ನು ಸವಿಯಲು ಸಹಸ್ರಾರು ಜನರು ಸುಮಾರು ಒಂದು ಗಂಟೆ ಮುಂಚಿತವಾಗಿ ಆಗಮಿಸಿ ತಮ್ಮ ಸ್ಥಾನ ಭದ್ರಪಡಿಸುತ್ತಿದ್ದರು. ಬೆಳಗಿನಿಂದ ಸಂಜೆಯವರೆಗಿನ ಬೇಸಿಗೆ ಧಗೆಯಿಂದ ಬೇಸತ್ತ ಜನತೆ, ಸಂಜೆಯ ಹೊತ್ತಿನ ತಂಪುಗಾಳಿಯಲ್ಲಿ ತೇಲಿ ಬರುವ ಸಂಗೀತ ಅಲೆಗಳನ್ನು ಇಂಪಾಗಿ ಸವಿದು ಮನ್ನ ತಣಿಸಿಕೊಂಡರು.ನೆರೆದ ಸಹಸ್ರಾರು ಭಕ್ತರ ಜೊತೆಗೆ ಗವಿಸಿದ್ದೇಶ್ವರ ಮಹಾಸ್ವಾಮೀಜಿ, ಚಿಕೇನಕೊಪ್ಪ-ಬಳಗಾನೂರ ಸುಕ್ಷೇತ್ರದ ಶಿವಶಾಂತವೀರ ಶರಣರು, ಹೆಬ್ಬಾಳ ಶ್ರೀಗಳು, ಬೆದವಟ್ಟಿ ಶಿವಸಂಗಮೇಶ್ವರ ಶಿವಾಚಾರ್ಯರು ಕೂಡ ಆಲಿಸಿದರು.`ನಿಜವಾಗಿಯೂ ನಾವೆಲ್ಲರೂ ಧನ್ಯರಾಗಿದ್ದೇವೆ. ಒಂದೆಡೆ ಜ್ಞಾನ ದಾಸೋಹ, ಮತ್ತೊಂದೆಡೆ ಸಂಗೀತ ದಾಸೋಹದಿಂದ ನಾವು ಪುನೀತರಾಗಿದ್ದೇವೆ. ನಾಡಿನ ಪೂಜ್ಯರು, ಮಠಮಾನ್ಯಗಳು ಇಂತಹ ಕಾರ್ಯಕ್ರಮಗಳನ್ನು ಎಲ್ಲೆಡೆ ಆಗಿಂದಾಗ್ಗೆ ಏರ್ಪಡಿಸುವ ಮೂಲಕ ಸಮಾಜದ ಏಳ್ಗೆಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು' ಎಂದು ಶಂಭಣ್ಣ ಯಲಬುರ್ಗಿ ಅವರು ಪ್ರತಿಕ್ರಿಯೆ ನೀಡಿದರು.ಸದಾಶಿವ ಪಾಟೀಲರಿಗೆ ವೀರೇಶ ಹಿಟ್ನಾಳ ತಬಲಾ ಸಾಥ್ ನೀಡುವ ಮೂಲಕ ಸಂಗೀತದ ಮೆರಗು ಹೆಚ್ಚಿಸಿದರು.

ಪ್ರತಿಕ್ರಿಯಿಸಿ (+)