ಬಿಸಿಸಿಐ ಅಧ್ಯಕ್ಷ ಸ್ಥಾನ; ಶ್ರೀನಿವಾಸನ್ ಇಂದು ಅಧಿಕಾರ ಸ್ವೀಕಾರ

ಶನಿವಾರ, ಮೇ 25, 2019
33 °C

ಬಿಸಿಸಿಐ ಅಧ್ಯಕ್ಷ ಸ್ಥಾನ; ಶ್ರೀನಿವಾಸನ್ ಇಂದು ಅಧಿಕಾರ ಸ್ವೀಕಾರ

Published:
Updated:

 ಮುಂಬೈ (ಪಿಟಿಐ): ಎನ್. ಶ್ರೀನಿವಾಸನ್ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಇಂದು ಆಧಿಕಾರ ಸ್ವೀಕರಿಸಲಿದ್ದಾರೆ. ಮುಂಬೈನಲ್ಲಿ ಸೋಮವಾರ ನಡೆಯಲಿರುವ ಮಂಡಳಿಯ 82ನೇ ವಾರ್ಷಿಕ ಮಹಾ ಸಭೆಯಲ್ಲಿ ಅವರು ಶಶಾಂಕ್ ಮನೋಹರ್ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವರು.2008ರ ಸೆಪ್ಟೆಂಬರ್‌ನಿಂದ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸನ್ ಇನ್ನು ಮುಂದೆ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯ ಆಡಳಿತವನ್ನು ನೋಡಿಕೊಳ್ಳಲಿದ್ದಾರೆ. ಶರದ್ ಪವಾರ್ ಮಂಡಳಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಇವರು ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದರು.ಶ್ರೀನಿವಾಸನ್ ಅವರು ಶಶಾಂಕ್ ಮನೋಹರ್‌ಗೆ ಉತ್ತರಾಧಿಕಾರಿಯಾಗುವರು ಎಂಬುದನ್ನು ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಮಂಡಳಿಯ 81ನೇ ವಾರ್ಷಿಕ ಮಹಾಸಭೆಯಲ್ಲೇ ನಿರ್ಧರಿಸಲಾಗಿತ್ತು. ಚೆನ್ನೈ ಮೂಲದ ಉದ್ಯಮಿ ಬಿಸಿಸಿಐನ 30ನೇ ಅಧ್ಯಕ್ಷ ಎನಿಸಿಕೊಳ್ಳಲಿದ್ದಾರೆ. ಇವರು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ.ಪ್ರಸಕ್ತ ಜಂಟಿ ಕಾರ್ಯದರ್ಶಿಯಾಗಿರುವ ಸಂಜಯ್ ಜಗದಾಳೆ ನೂತನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುವರು. ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥ ಅನುರಾಗ್ ಠಾಕೂರ್ ಮತ್ತು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅಜಯ್ ಶಿರ್ಕೆ ಕ್ರಮವಾಗಿ ಜಂಟಿ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ನೇಮಕಗೊಳ್ಳಲಿದ್ದಾರೆ. ಇದರಿಂದ 82ನೇ ಮಹಾ ಸಭೆಯಲ್ಲಿ ಯಾವುದೇ ಚುನಾವಣೆ ನಡೆಯುವುದಿಲ್ಲ.ಭಾರತ ಕ್ರಿಕೆಟ್ ತಂಡ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನದ ಮೂಲದ ಸುದ್ದಿ ಮಾಡಿರುವ ಸಂದರ್ಭದಲ್ಲೇ ಶ್ರೀನಿವಾಸನ್ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ. ಆದ್ದರಿಂದ ತಂಡವನ್ನು ಮತ್ತೆ ಹಳೆಯ ಟ್ರ್ಯಾಕ್‌ಗೆ ತಂದು ನಿಲ್ಲಿಸುವ ಜವಾಬ್ದಾರಿ ಇವರ ಮುಂದಿದೆ.ಮಹೇಂದ್ರ ಸಿಂಗ್ ದೋನಿ ಬಳಗ ಇಂಗ್ಲೆಂಡ್‌ನಲ್ಲಿ ನೀಡಿದ ಪ್ರದರ್ಶನದ ಬಗ್ಗೆಯೂ ವಾರ್ಷಿಕ ಮಹಾ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ. ಅದೇ ರೀತಿ 23 ವಿವಿಧ ಸಮಿತಿಗಳ ನೇಮಕ ನಡೆಯಲಿದೆ. ಕಾರ್ಯಕಾರಿ ಸಮಿತಿ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯೂ ಇದರಲ್ಲಿ ಒಳಗೊಂಡಿವೆ. ಇತರ ಪದಾಧಿಕಾರಿಗಳ ನೇಮಕ ಕೂಡಾ ಸಭೆಯ ಪ್ರಮುಖ ಅಜೆಂಡಾ ಎನಿಸಿಕೊಂಡಿದೆ.ಐಪಿಎಲ್ ಆಡಳಿತ ಮಂಡಳಿಯ ಪುನರ‌್ರಚನೆ ವಾರ್ಷಿಕ ಮಹಾ ಸಭೆಯಲ್ಲಿ ನಡೆಯಲಿದೆ. ಪ್ರಸಕ್ತ ಉಪಾಧ್ಯಕ್ಷರಾಗಿರುವ ರಾಜೀವ್ ಶುಕ್ಲಾ ಐಪಿಎಲ್‌ನ ಮುಖ್ಯಸ್ಥರಾಗಿ ನೇಮಕಗೊಳ್ಳುವುದು ಖಚಿತ. ಈಗ ಮುಖ್ಯಸ್ಥರಾಗಿರುವ ಚಿರಾಯು ಅಮಿನ್ ಸ್ಥಾನ ತೊರೆಯಲು ನಿರ್ಧರಿಸಿದ್ದಾರೆ.ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಪುನರ‌್ರಚಿಸುವುದು ಸಭೆಯ ಮತ್ತೊಂದು ಪ್ರಮುಖ ಅಜೆಂಡಾ. ಶ್ರೀಕಾಂತ್ ಇನ್ನೊಂದು ವರ್ಷದ ಅವಧಿಗೆ ಸಮಿತಿಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಆದರೆ ಈಗಾಗಲೇ ನಾಲ್ಕು ವರ್ಷಗಳನ್ನು ಪೂರೈಸಿರುವ ಯಶ್ಪಾಲ್ ಶರ್ಮ ಬದಲು ಹೊಸಬರು ಸಮಿತಿಯಲ್ಲಿ ಸ್ಥಾನ ಪಡೆಯಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry