ಬಿಸಿಸಿಐ ಗದ್ದುಗೆಗೆ ಮತ್ತೆ ಶ್ರೀನಿವಾಸನ್‌

7
ಅಧ್ಯಕ್ಷರಾಗಿ ಅವಿರೋಧ ಆಯ್ಕೆ; ಎಲ್ಲಾ ಸಮಿತಿಗಳಲ್ಲಿ ಬೆಂಬಲಿಗರದ್ದೇ ರಾಜ್ಯಭಾರ

ಬಿಸಿಸಿಐ ಗದ್ದುಗೆಗೆ ಮತ್ತೆ ಶ್ರೀನಿವಾಸನ್‌

Published:
Updated:
ಬಿಸಿಸಿಐ ಗದ್ದುಗೆಗೆ ಮತ್ತೆ ಶ್ರೀನಿವಾಸನ್‌

ಚೆನ್ನೈ: ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ಪ್ರಕರಣದಲ್ಲಿ ಎದುರಾದ ಟೀಕಾ ಪ್ರಹಾರಕ್ಕೆ ಸಡ್ಡು ಹೊಡೆದಿರುವ ಎನ್‌.ಶ್ರೀನಿವಾಸನ್‌ ಮತ್ತೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಪಂಚತಾರಾ ಹೋಟೆಲ್‌ನಲ್ಲಿ ಭಾನುವಾರ ನಡೆದ ಮಂಡಳಿಯ 84ನೇ ವಾರ್ಷಿಕ ಮಹಾಸಭೆಯಲ್ಲಿ ಶ್ರೀನಿವಾಸನ್‌ ಮತ್ತೊಂದು ವರ್ಷದ ಅವಧಿಗೆ (2013-2014) ಅಧ್ಯಕ್ಷರಾಗಿ ಅವಿರೋಧವಾಗಿ ಮರುಆಯ್ಕೆಯಾದರು. ಈ ಆಯ್ಕೆ ಮೊದಲೇ ಖಚಿತಗೊಂಡಿತ್ತು. ಏಕೆಂದರೆ ಈ ಬಾರಿ ಅಧ್ಯಕ್ಷರ ಆಯ್ಕೆ ಸಂಬಂಧ ಹೆಸರನ್ನು ಸೂಚಿಸುವ ಮತ್ತು ಅನುಮೋದಿಸುವ ಅಧಿಕಾರ ದಕ್ಷಿಣ ವಲಯಕ್ಕೆ ಸೇರಿತ್ತು. ಈ ವಲಯದ ಆರೂ ಸಂಸ್ಥೆಗಳು ಶ್ರೀನಿವಾಸನ್‌ ಪರ ಇದ್ದವು. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬ ಅಭ್ಯರ್ಥಿ ಸ್ಪರ್ಧಿಸಲು ಅವಕಾಶವೇ ಇರಲಿಲ್ಲ. ಬೇರೆ ವಲಯದ ಯಾರೇ ಸ್ಪರ್ಧಿಸಿದ್ದರೂ ದಕ್ಷಿಣ ವಲಯದ ಬೆಂಬಲ ಬೇಕಿತ್ತು.ವಿಶೇಷವೆಂದರೆ ಇಡೀ ಸಭೆಯಲ್ಲಿ ಶ್ರೀನಿವಾಸನ್‌ ವಿರುದ್ಧ ಒಬ್ಬರೂ ಧ್ವನಿ ಎತ್ತಲಿಲ್ಲ. ಇದು ತಮಿಳುನಾಡು ಮೂಲದ ಕ್ರಿಕೆಟ್‌ ಆಡಳಿತದಾರ ಹೊಂದಿರುವ ಪಾರಮ್ಯಕ್ಕೆ ಸಾಕ್ಷಿ. ಮಂಡಳಿಯ ಇತರ ಪದಾಧಿಕಾರಿಗಳ ಆಯ್ಕೆ, ಐಪಿಎಲ್‌, ಎನ್‌ಸಿಎ ಮುಖ್ಯಸ್ಥರ ನೇಮಕ , ಸಮಿತಿ ಹಾಗೂ ಉಪಸಮಿತಿಗಳ ನೇಮಕದಲ್ಲೂ ಶ್ರೀನಿವಾಸನ್‌ ಅವರ ಪ್ರಾಬಲ್ಯವೇ ಎದ್ದುಕಂಡಿತು. ಮಂಡಳಿಯ ಅಧ್ಯಕ್ಷರಾಗಿ ಈಗಾಗಲೇ ಅವರು ಎರಡು ವರ್ಷಗಳ ಮೊದಲ ಅವಧಿಯನ್ನು ಪೂರ್ಣಗೊಳಿಸಿದ್ದರು.ತೀರ್ಪು ಬಂದಮೇಲಷ್ಟೆ ಅಧಿಕಾರ ಸ್ವೀಕಾರ

ಅಧ್ಯಕ್ಷರಾಗಿ ಮರುಆಯ್ಕೆಯಾಗಿರುವ ಶ್ರೀನಿವಾಸನ್‌ ಅಧಿಕಾರ ಸ್ವೀಕರಿಸುವಂತಿಲ್ಲ. ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಅಂತಿಮ ತೀರ್ಪು ಬರುವವರೆಗೆ ಅವರು ಕಾಯಬೇಕು. ಅಷ್ಟರವರೆಗೆ ಕಾರ್ಯದರ್ಶಿ ಸಂಜಯ್‌ ಪಟೇಲ್‌ ಎಲ್ಲಾ ವ್ಯವಹಾರ ನೋಡಿಕೊಳ್ಳಲಿದ್ದಾರೆ. ಸೋಮವಾರ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ಶ್ರೀನಿವಾಸನ್‌ ಮತ್ತೆ ಸ್ಪರ್ಧಿಸದಂತೆ ತಡೆಯೊಡ್ಡಬೇಕು ಎಂದು ಕೋರಿ ಬಿಹಾರ ಕ್ರಿಕೆಟ್‌ ಸಂಸ್ಥೆ (ಸಿಎಬಿ)  ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.ಷಾ, ದಬೀರ್‌ಗೆ ಮುಖಭಂಗ

ಶರದ್‌ ಪವಾರ್‌ ಬೆಂಬಲಿಗರು ಎನ್ನಲಾದ ನಿರಂಜನ್‌ ಷಾ ಹಾಗೂ ಶಶಾಂಕ್‌ ಮನೋಹರ್‌ ಬೆಂಬಲಿಗರು ಎನ್ನಲಾದ ಸುಧೀರ್‌ ದಬೀರ್‌ ಅವರು ಉಪಾಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ. ‘ಬಹುಮತಕ್ಕೆ ಇಲ್ಲಿ ಮಹತ್ವ. ಮಂಡಳಿಯ ಸಂವಿಧಾನದ ಪ್ರಕಾರ ಚುನಾವಣೆ ನಡೆದಿದೆ. ಶ್ರೀನಿವಾಸನ್‌ ಅದರ ಅಧ್ಯಕ್ಷತೆ ವಹಿಸಿದ್ದರು. ಈ ಬಗ್ಗೆ ನನಗೆ ಬೇಸರವಿಲ್ಲ’ ಎಂದು ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಮುಖ್ಯಸ್ಥರು ಆಗಿರುವ ಷಾ ಹೇಳಿದರು.ಕೇಂದ್ರ ಸಚಿವ ರಾಜೀವ್‌ ಶುಕ್ಲಾ ಮಂಡಳಿಯ ಉಪಾಧ್ಯಕ್ಷ ಹಾಗೂ ಪ್ರವಾಸ ಕಾರ್ಯಕ್ರಮ ಸಮಿತಿ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆ ಅಮಿತಾಭ್‌ ಚೌಧರಿ ಅವರನ್ನು ಮಾರುಕಟ್ಟೆ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಹಿಂದೆ ಜಮ್ಮುಕಾಶ್ಮೀರದ ಫಾರೂಖ್‌ ಅಬ್ದುಲ್ಲಾ ಈ ಸ್ಥಾನದಲ್ಲಿದ್ದರು. ಕೊನೆ ಕ್ಷಣದಲ್ಲಿ ಶ್ರೀನಿವಾಸನ್‌ ಗುಂಪು ಸೇರಿದ್ದ ಆಂಧ್ರ ಕ್ರಿಕೆಟ್‌ ಸಂಸ್ಥೆ ಜಿ,ಗಂಗಾ ರಾಜು ಅವರನ್ನು ಹಣಕಾಸು ಸಮಿತಿಯ ಮುಖ್ಯಸ್ಥರಾಗಿ ಹಾಗೂ ಗೋವಾ ಕ್ರಿಕೆಟ್‌ ಸಂಸ್ಥೆಯ ವಿನೋಧ್‌ ಫಡ್ಕೆ ಅವರನ್ನು ಮಾಧ್ಯಮ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.ದಾಲ್ಮಿಯಾಗೆ ಹಿನ್ನಡೆ

ಶ್ರೀನಿವಾಸನ್‌ ಸಂಕಷ್ಟಕ್ಕೆ ಸಿಲುಕಿದಾಗ ಮಂಡಳಿಯ ನೆರವಿಗೆ ಬಂದಿದ್ದು ಜಗಮೋಹನ್‌ ದಾಲ್ಮಿಯ. ಅಳಿಯ ಗುರುನಾಥನ್‌ ಮೇಯಪ್ಪನ್‌ ಬಂಧನವಾದಾಗ ಶ್ರೀನಿವಾಸನ್‌ ಮಂಡಳಿಯ ಅಧಿಕಾರದಿಂದ ಬದಿಗೆ ಸರಿದಿದ್ದರು. ಆಗ ದಾಲ್ಮಿಯ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ವಾರ್ಷಿಕ ಮಹಾಸಭೆಯಲ್ಲಿ ದಾಲ್ಮಿಯ ಅವರನ್ನು ಕೂಡ ಮೂಲೆಗೆ ಸರಿಸಲಾಗಿದೆ. ಐಪಿಎಲ್‌ ಅಧ್ಯಕ್ಷ ಪಟ್ಟವನ್ನೂ ತಪ್ಪಿಸಲಾಗಿದೆ. ಬಿಸ್ವಾಲ್‌ ಅವರನ್ನು ಐಪಿಎಲ್‌ ಮುಖ್ಯಸ್ಥರನ್ನಾಗಿ ನೇಮಿಸುವುದನ್ನು ದಾಲ್ಮಿಯ ವಿರೋಧಿಸಿದ್ದರು ಎನ್ನಲಾಗಿದೆ. ಅವರನ್ನು ಈಶಾನ್ಯ ರಾಜ್ಯಗಳ ಕ್ರಿಕೆಟ್‌ ಅಭಿವೃದ್ಧಿ ಸಮಿತಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಇದು ಅಷ್ಟೇನು ಮಹತ್ವವಲ್ಲದ ಸಮಿತಿ ಎನ್ನಲಾಗುತ್ತಿದೆ.ಅಧಿಕಾರ ವಹಿಸಿಕೊಳ್ಳುತ್ತಿಲ್ಲ (ಐಎಎನ್‌ಎಸ್‌ ವರದಿ): ‘ನಾನು ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಆದರೆ ಸದ್ಯಕ್ಕೆ ಅಧಿಕಾರ ವಹಿಸಿಕೊಳ್ಳುತ್ತಿಲ್ಲ. ನೂತನ ಪದಾಧಿಕಾರಿಗಳಿಗೆ ಈ ಕೆಲಸ  ವಹಿಸಿದ್ದೇನೆ. ನಾನು ಸುಪ್ರೀಂ ಕೋರ್ಟ್‌ ತೀರ್ಪಿಗೆ ಕಾಯುತ್ತಿದ್ದೇನೆ’ ಎಂದು ಶ್ರೀನಿವಾಸನ್‌ ಸಭೆಯ ಬಳಿಕ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry