ಬಿಸಿ ಊಟಕ್ಕೆ ಹಾಜರ್: ಪಾಠಕ್ಕೆ ಚಕ್ಕಾರ್

ಗುರುವಾರ , ಜೂಲೈ 18, 2019
28 °C

ಬಿಸಿ ಊಟಕ್ಕೆ ಹಾಜರ್: ಪಾಠಕ್ಕೆ ಚಕ್ಕಾರ್

Published:
Updated:

ದೇವದುರ್ಗ: ಪುರಸಭೆ ವ್ಯಾಪ್ತಿಯ ಯಲ್ಲಾಲಿಂಗ ಕಾಲೋನಿಯಲ್ಲಿ ಬರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಪಾಲಕರಿಗೆ ಅವರ ದುಡಿಮೆಯೇ ಮುಖ್ಯ. ಆದರೆ, ಮಕ್ಕಳಿಗೆ ಪಾಠಕ್ಕಿಂತ ಬಿಸಿ ಊಟವೇ ಮುಖ್ಯವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.ಸರ್ಕಾರಿ ಶಾಲೆಯ ಪ್ರತಿಯೊಬ್ಬ ಮಗುವಿಗೆ ಸರ್ಕಾರ ಪ್ರಾಥಮಿಕ ಶಿಕ್ಷಣಕ್ಕಾಗಿ ಪ್ರತಿವರ್ಷ ಸಾವಿರಾರೂ ರೂಪಾಯಿ ಖರ್ಚು ಮಾಡುತ್ತಿದ್ದರೆ ಅದರ ಲಾಭ ಪಡೆಯಬೇಕಾದ ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ ಎಂಬ ಆರೋಪ ಶಿಕ್ಷಕರದು.ಪಾಲಕರು ಕಾಟಾಚಾರಕ್ಕೆ ಎಂಬುವಂತೆ ಮಕ್ಕಳನ್ನು ಶಾಲೆಗೆ ಕಳಿಸುವುದು ವಾಡಿಕೆಯಾಗಿ ಬಿಟ್ಟಿದೆ. ಯಲ್ಲಾಲಿಂಗ ಕಾಲೋನಿಯಲ್ಲಿ ಶೇ 100ರಷ್ಟು ಅಲೆಮಾರಿ ಜನಾಂಗಕ್ಕೆ ಸೇರಿದ ಜನರು ವಾಸಿಸುತ್ತಿದ್ದಾರೆ. 40 ಕುಟುಂಬಗಳು ಇರುವ ಕಾಲೋನಿಗೆ ಶಿಕ್ಷಣ ಇಲಾಖೆ 1ನೇ ತರಗತಿಯಿಂದ  5ನೇ ತರಗತಿ ಶಾಲೆಯನ್ನು ಆರಂಭಿಸಿದೆ. ಶಾಲೆಗೆ ಸೌಕರ್ಯಗಳಾದ ಕಟ್ಟಡ, ಶೌಚಾಲಯ, ಶಿಕ್ಷಕರು ಮತ್ತು ಬಿಸಿ ಊಟದ ಕೋಣೆ ಸೇರಿದಂಥೆ ಇಲಾಖೆಯ ಇತರ ಯೋಜನೆಗಳು ಬಂದಿವೆ. ಆದರೆ ಅದರ ಲಾಭ ಮಕ್ಕಳು ಪಡೆಯದೆ ವಂಚನೆಗೆ ಒಳಗಾಗಿರುವುದು ಪಾಲಕರ ಬೇಜವಾಬ್ದಾರಿ ಎದ್ದುಕಾಣುತ್ತಿವೆ ಎಂದು ಇಲ್ಲಿನ ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಾರೆ.ಒಂದರಿಂದ ಐದನೇ ತರಗತಿಗೆ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ 36 ಇದ್ದರೂ, ಶಾಲೆ ಆರಂಭವಾಗಿ ತಿಂಗಳು ಕಳೆದರೂ ಹಾಜರಾತಿ ಮಾತ್ರ 20ರ ಗಡಿ ದಾಟಿಲ್ಲ. ಶಾಲೆಯ ಆರಂಭದಲ್ಲಿ ಸಮವಸ್ತ್ರ, ಪಠ್ಯ ಪುಸ್ತಕ ಇಲಾಖೆಯ ವತಿಯಿಂದ ಉಚಿತವಾಗಿ ವಿತರಣೆ ಮಾಡಿದರೂ ಸಮವಸ್ತ್ರ ಹಾಕಿಕೊಳ್ಳದೆ ಶಾಲೆಗೆ ಬರುವುದು ನಡೆದಿದೆ. ಈ ವರ್ಷ ಇಲಾಖೆ ನೀಡುವ ಮೊದಲ ಜೊತೆ ಸಮವಸ್ತ್ರವನ್ನು ಪಾಲಕರೇ ಹೊಲಿಗೆ ಮಾಡಿಸಬೇಕು ನಂತರ ಎರಡನೇ ಜೊತೆ ಸಮವಸ್ತ್ರ ಹೊಲಿಗೆಗೆ ಇಲಾಖೆ ಹಣ ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ.ಆದರೆ ಮೊದಲು ನೀಡಿದ ಸಮವಸ್ತ್ರವನ್ನು ಪಾಲಕರು ತಿಂಗಳು ಕಳೆದರೂ ಹೊಲಿಗೆಗೆ ನೀಡದೆ ಮಕ್ಕಳನ್ನು ಕಾಟಾಚಾರಕ್ಕೆ ಎಂಬುವಂತೆ ಶಾಲೆಗೆ ಕಳಿಸುವುದು ನಡೆದಿದೆ. ಮಧ್ಯಾಹ್ನ ನೀಡುವ ಬಿಸಿ ಊಟಕ್ಕೆ ಮಾತ್ರ ಹಾಜರಾತಿಗಿಂತ ಹೆಚ್ಚು ಮಕ್ಕಳು ಹಾಜರ್ ಇರುವುದು ನಡೆದಿದೆ. ಕಾಲೋನಿಯ ಪಾಲಕರು ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡದೆ ಇರುವುದು ಬೇಸರ ತಂದಿದೆ ಎಂದು ಶಾಲೆಯ ಶಿಕ್ಷಕರು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry