ಭಾನುವಾರ, ಏಪ್ರಿಲ್ 11, 2021
27 °C

ಬಿಸಿ ನೀರಿದ್ದ ಬಕೆಟ್‌ನಲ್ಲಿ ಬಿದ್ದು ಮಗು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಬೆಂಗಳೂರು: ಬಿಸಿ ನೀರು ತುಂಬಿದ್ದ ಬಕೆಟ್‌ನಲ್ಲಿ ಆಕಸ್ಮಿಕವಾಗಿ ಬಿದ್ದ ಮೂರು ವರ್ಷದ ಗಂಡು ಮಗು ಸಾವನ್ನಪ್ಪಿದ ದಾರುಣ ಘಟನೆ ಬನಶಂಕರಿ ಎರಡನೇ ಹಂತದ ಕದಿರೇನಹಳ್ಳಿಯಲ್ಲಿ ನಡೆದಿದೆ.ಚಿನ್ನದ ಆಭರಣಗಳಿಗೆ ಪಾಲಿಶ್ ಹಾಕುವ ಕೆಲಸ ಮಾಡುವ ನಾಗರಾಜ್ ಎಂಬುವರ ಮಗ ಮಹೇಶ್ ಮೃತಪಟ್ಟವನು. ನಾಗರಾಜ್ ಮತ್ತು ಅವರ ಪತ್ನಿ ಯುವರಾಣಿ ಅವರು ಮನೆಯಲ್ಲಿ ಇರುವಾಗಲೇ ಮಾ.19ರಂದು ಈ ದುರ್ಘಟನೆ ನಡೆದಿದೆ. ಸ್ನಾನಕ್ಕೆಂದು ಬಕೆಟ್‌ನಲ್ಲಿ ಬಿಸಿ ನೀರು ತುಂಬಿಟ್ಟಿದ್ದರು. ಯುವರಾಣಿ ಅವರು ಅಡುಗೆ ಮನೆಯಲ್ಲಿ ಮತ್ತು ಅವರ ಪತಿ ಶೌಚಾಲಯದಲ್ಲಿದ್ದರು.ಮಹೇಶ್ ತನ್ನ ಅಣ್ಣ ನಾಲ್ಕು ವರ್ಷ ವಯಸ್ಸಿನ ಭರತ್ ಜತೆ ಆಟವಾಡುತ್ತಿದ್ದ ವೇಳೆ ಮಹೇಶ್ ಬಕೆಟ್ ಒಳಗೆ ಬಿದ್ದಿದ್ದ. ನೀರು ತುಂಬಾ ಬಿಸಿಯಿದ್ದ ಕಾರಣ ಆತನಿಗೆ ಸುಟ್ಟ ಗಾಯಗಳಾಗಿತ್ತು. ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಬುಧವಾರ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.ಕೊಲೆ: ಬಂಧನ: ಜ್ಞಾನಭಾರತಿ ಸಮೀಪದ ಕೆಂಗುಂಟೆ ನಿವಾಸಿ ಕಲ್ಯಾಣಮ್ಮ (55) ಎಂಬುವರನ್ನು ಕೊಲೆ ಮಾಡಿದ್ದ ಆರೋಪದ ಮೇಲೆ ಲಗ್ಗೆರೆ ನಿವಾಸಿ ಶ್ರೀನಿವಾಸಯ್ಯ (69) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಕಲ್ಯಾಣಮ್ಮ ಅವರಿಗೆ ಶ್ರೀನಿವಾಸಯ್ಯ ಪರಿಚಯಸ್ಥರಾಗಿದ್ದರು. ಆಗಾಗ್ಗೆ ಆತ ಅವರ ಮನೆಗೆ ಬಂದು ಹೋಗುತ್ತಿದ್ದ. ಆತ ಕಲ್ಯಾಣಮ್ಮ ಅವರನ್ನು ಸಾಲ ಕೇಳಿದ್ದ. ಆದರೆ ಅವರು ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಆತ ಕಲ್ಯಾಣಮ್ಮ ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಕೊಲೆಯಾದ ನಂತರ ಶ್ರೀನಿವಾಸಯ್ಯನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ಆತನೇ ಆರೋಪಿ ಎಂದು ಗುರುತಿಸಲು ಸಾಧ್ಯವಾಗಿರಲಿಲ್ಲ. ವಿಚಾರಣೆ ಮಾಡಿ ಕಳುಹಿಸಿದ ನಂತರ ಆತ ಮನೆ ಖಾಲಿ ಮಾಡಿಕೊಂಡು ಹೋಗಿದ್ದ. ಆ ನಂತರ ಆತನನ್ನು ಪತ್ತೆ ಮಾಡಿ ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್,ಸಿದ್ದರಾಮಪ್ಪ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಬಿ.ಟಿ.ಚಿದಾನಂದಸ್ವಾಮಿ ಮತ್ತು ತಂಡ ಆರೋಪಿಯನ್ನು ಬಂಧಿಸಿದೆ.

ದರೋಡೆ: ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಕುವಿನಿಂದ ಬೆದರಿಸಿ ಎರಡು ಸಾವಿರ ನಗದು, ಮೊಬೈಲ್ ಫೋನ್ ಮತ್ತು ಕೈಗಡಿಯಾರ ದೋಚಿದ ಘಟನೆ ವಿಜಯನಗರದ ಪೈಪ್‌ಲೈನ್ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ರಾಮನಗರ ಜಿಲ್ಲಾ ನ್ಯಾಯಾಲಯದ ಉದ್ಯೋಗಿ ಕೆ.ಎಂ.ರಮೇಶ್ ದರೋಡೆಗೊಳಗಾದವರು. ಅವರು ರಾಮನಗರಕ್ಕೆ ಹೋಗುವ ಉದ್ದೇಶದಿಂದ ಬಸ್ ನಿಲ್ದಾಣಕ್ಕೆ ಹೋಗಲು ಬೆಳಿಗ್ಗೆ ಐದು ಗಂಟೆ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರನ್ನು ಇಬ್ಬರು ಕಿಡಿಗೇಡಿಗಳು ಅಡ್ಡಗಟ್ಟಿ ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ     ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.