ಬಿಹಾರದ ಧರ್‌ಹರ ಗ್ರಾಮದ ವಿಶಿಷ್ಟ ಆಚರಣೆ...

ಗುರುವಾರ , ಜೂಲೈ 18, 2019
28 °C

ಬಿಹಾರದ ಧರ್‌ಹರ ಗ್ರಾಮದ ವಿಶಿಷ್ಟ ಆಚರಣೆ...

Published:
Updated:

ಪಟ್ನಾ (ಐಎಎನ್‌ಎಸ್): ಹೆಣ್ಣು ಮಗು ಜನಿಸಿದರೆ ಸಂಭ್ರಮಿಸಿ ಸಸಿಗಳನ್ನು ನೆಟ್ಟು ಪೋಷಿಸುವ ಗ್ರಾಮವೊಂದು ಬಿಹಾರದಲ್ಲಿದೆ. ಹಾಗಾಗಿ ಈ ಗ್ರಾಮ ಇತರೆಡೆಗಳಿಗಿಂತ ಹೆಚ್ಚು ಹಸಿರಿನಿಂದ ಸದಾ ನಳನಳಿಸುತ್ತಿದೆ.ಹೆಣ್ಣುಶಿಶು ಹತ್ಯೆ ವಿರುದ್ಧ ಸಾಂಕೇತಿಕವಾಗಿ ಈ ಕ್ರಮ ಕೈಗೊಂಡಿರುವ ಧರ್‌ಹರ ಗ್ರಾಮವು ಈಗ, ಕಳೆದ ನೂರು ವರ್ಷಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಮತ್ತು ನೆಟ್ಟ ಸಸಿಗಳನ್ನು ಎಣಿಸಲು ಹೊರಟಿದೆ.`ಪೀಳಿಗೆಯ ಪಟ್ಟಿಗಾಗಿ ನಾವು ಗ್ರಾಮದಲ್ಲಿ ಹುಟ್ಟಿದ ಪ್ರತಿ ಹೆಣ್ಣುಮಗುವಿನ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಲಿಂಗ ಸಮಾನತೆಯಲ್ಲಿ ಈ ಗ್ರಾಮ ಮಾದರಿಯಾಗಿದೆ ಎಂಬುದು ನಮಗೆ ಹೆಮ್ಮೆಯ ವಿಷಯ~ ಎನ್ನುತ್ತಾರೆ ಗ್ರಾಮದ ನಾಗೇಂದರ್ ಸಿಂಗ್.`ಗ್ರಾಮದಲ್ಲಿ ಹೆಣ್ಣು ಮಗುವಿನ ಜನನದ ಬಗ್ಗೆ ಸಂತಸ ಪಡುವ ನಮ್ಮ ಬದ್ಧತೆಯನ್ನು ಅಂಕಿ ಅಂಶ ಸಂಗ್ರಹಿಸುವ ನಿರ್ಧಾರ ಮತ್ತೆ ದೃಢಪಡಿಸುತ್ತದೆ~ ಎನ್ನುವುದು ಗ್ರಾಮದ ಮತ್ತೊಬ್ಬ ವ್ಯಕ್ತಿ ರಮೇಶ್ ಪ್ರಸಾದ್ ಹೇಳಿಕೆ.ಈ ವಿಶಿಷ್ಟವಾದ ಸಂಪ್ರದಾಯದಿಂದ ಭಾಗಲ್‌ಪುರ ಜಿಲ್ಲೆಯ ಧರ್‌ಹರ ಗ್ರಾಮವು ವಿಶ್ವದ ಗಮನ ಸೆಳೆದಿತ್ತು.

`ಹೆಣ್ಣು ಮಗು ಹುಟ್ಟಿದರೆ ನಾವು ದುಃಖಿಸುವುದಿಲ್ಲ. ಬದಲು ಸಸಿಗಳನ್ನು ನೆಟ್ಟು ಸಂಭ್ರಮಿಸುತ್ತೇವೆ. ಹೆಣ್ಣುಮಕ್ಕಳ ಸಂಖ್ಯೆ ಮತ್ತು ಅವರ ಜನನ ಸಂದರ್ಭದಲ್ಲಿ ನೆಟ್ಟ ಸಸಿಗಳನ್ನು ಎಣಿಸಲು ಎಲ್ಲಾ ಗ್ರಾಮಸ್ಥರು ನೆರವು ನೀಡುತ್ತಿದ್ದಾರೆ. ಎಲ್ಲಾ ಕುಟುಂಬಗಳ ವಂಶ ಪಾರಂಪರ‌್ಯ ಪಟ್ಟಿ ಸಂಗ್ರಹಿಸಲು ನಾವು ಯತ್ನಿಸುತ್ತಿದ್ದೇವೆ~ ಎಂದು ನಾಗೇಂದ್ರಸಿಂಗ್ ಹೇಳುತ್ತಾರೆ.ಈ ಅಂಕಿಅಂಶ ಸಂಗ್ರಹಿಸುವುದರಿಂದ ಪ್ರತಿ ಹೆಣ್ಣುಮಗುವಿನ ಜನನಕ್ಕೆ ಸಸಿ ನೆಡುವ ಸಂಪ್ರದಾಯ ಯಾವಾಗ ಆರಂಭವಾಯಿತು ಎಂಬುದನ್ನೂ ಪತ್ತೆ ಹಚ್ಚಲು ಸಾಧ್ಯ ಎನ್ನುತ್ತಾರೆ ಅವರು.`ಇದು ಹೆಣ್ಣುಮಗುವನ್ನು ಉಳಿಸುವ ಸಂಪ್ರದಾಯವನ್ನು ಸ್ಥಿರೀಕರಿಸುವ ದಾಖಲೆಯೂ ಆಗುತ್ತದೆ. ನಾವು ಈವರೆಗೆ ನೆಟ್ಟಿರುವ ಸಸಿಗಳನ್ನು- ಗ್ರಾಮದ ಮೌಲ್ಯಯುತ ಹಸಿರು ಸಂಪನ್ಮೂಲವನ್ನು- ಎಣಿಸುತ್ತೇವೆ~ ಎಂದು ಅವರು ವಿವರಿಸುತ್ತಾರೆ.ರೂಢಿಯ ಪ್ರಕಾರ ಗ್ರಾಮದಲ್ಲಿ ಹೆಣ್ಣು ಮಗು ಜನಿಸಿದಾಗ ಪ್ರತಿ ಕುಟುಂಬವು ಕನಿಷ್ಠ 10 ಸಸಿಗಳನ್ನು ನೆಟ್ಟಿದೆ. ಇದರಿಂದ ಈಗ ಧರ್‌ಹರ ಗ್ರಾಮದ ಜತೆ ಹೋಲಿಸಿದಾಗ ಇತರ ಗ್ರಾಮಗಳು ಪೇಲವವಾಗಿ ಕಾಣುತ್ತವೆ ಎಂದು ಪ್ರಸಾದ್ ಅಭಿಪ್ರಾಯ ಪಡುತ್ತಾರೆ.ಮಹಿಳಾ ಸಶಕ್ತೀಕರಣ ಮತ್ತು ಪರಿಸರ ಸಂರಕ್ಷಣೆಯನ್ನು ವಿಶೇಷ ರೀತಿಯಲ್ಲಿ ಸೂಚಿಸುವ ತನ್ನ ಕ್ರಮದ ಮೂಲದ ಗ್ರಾಮವು ಕಳೆದ ವರ್ಷ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರ ಮೇಲೆ ಗಾಢ ಪ್ರಭಾವ ಬೀರಿತ್ತು.

ಗ್ರಾಮದಲ್ಲಿ ಅಂದಾಜು ಸುಮಾರು 20 ಸಾವಿರ ಮರಗಳು ಇವೆ ಎಂದು ಅಂದಾಜು ಮಾಡಲಾಗಿದೆ.ಹಣ್ಣಿನ ಮರಗಳು ಗ್ರಾಮಕ್ಕೆ ಆರ್ಥಿಕವಾಗಿ ನೆರವಾಗಿವೆ.  `ಹಣ್ಣಿನ ಮರಗಳು ಬ್ಯಾಂಕ್‌ನ ಠೇವಣಿ ಇದ್ದಂತೆ. ಜತೆಗೆ ಇದು ಪರಿಸರವನ್ನೂ ಸಂವೃದ್ಧವಾಗಿಡುತ್ತದೆ~ ಎನ್ನುತ್ತಾರೆ ಗ್ರಾಮದ ಮುನ್ನಾ ಸಿಂಗ್.`ಹೆಣ್ಣುಮಗುವನ್ನು ನಾವು ಲಕ್ಷ್ಮಿಯ ಅವತಾರ ಎಂದು ಪರಿಗಣಿಸುತ್ತೇವೆ~ ಎಂದೂ ಅವರು ಹೇಳುತ್ತಾರೆ.

ರಾಷ್ಟ್ರಮಟ್ಟದಲ್ಲಿ ಒಂದು ಸಾವಿರ ಗಂಡು ಮಕ್ಕಳಿಗೆ ಅಂದಾಜು 914 ಹೆಣ್ಣುಮಕ್ಕಳಿದ್ದರೆ ಬಿಹಾರ ರಾಜ್ಯದಲ್ಲಿ ಈ ಅನುಪಾತ 933 ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry