ಬುಧವಾರ, ಜೂನ್ 16, 2021
23 °C

ಬಿ–ಟೌನ್‌ನ ಮಹಿಳಾ ಚಿತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುರುಷ ಪ್ರಧಾನ ಚಿತ್ರರಂಗ ಎಂದು ಖ್ಯಾತಿ ಗಳಿಸಿದ್ದರೂ, ಬಾಲಿವುಡ್‌  ಕೆಲವೊಮ್ಮೆ ಮಹಿಳಾ ಶಕ್ತಿಯನ್ನು ಮುಕ್ತಕಂಠದಿಂದ ಹೊಗಳುವುದುಂಟು. ಮಹಿಳಾ ದಿನಾಚರಣೆಯನ್ನು ತಪ್ಪದೇ ಆಚರಿಸುವುದೂ ಇದೆ. ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲೂ ಕಳೆದ ಒಂದು ದಶಕದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಸಾಕಷ್ಟು ಸಂಖ್ಯೆಯಲ್ಲಿ ಬಂದು ಹೋಗಿವೆ. ಅವುಗಳಲ್ಲಿ ಆಯ್ದ ಹಾಗೂ ಗಮನ ಸೆಳೆದ ಹತ್ತು ಚಿತ್ರಗಳ ಪಟ್ಟಿ ಇಲ್ಲಿದೆ.ಮರ್ಡರ್‌ (2004): ಹಿಂದಿ ಸಿನಿಮಾಗಳೆಂದರೆ ತಲೆ ಎತ್ತದ, ಸದಾ ಕಣ್ಣಾಲಿಯಲ್ಲಿ ಗಂಗೆ ಸುರಿಸುವ ವನಿತೆಯರ ಚಿತ್ರಣವೇ ಕಣ್ಣಮುಂದೆ ಬರುತ್ತಿದ್ದ ಕಾಲದಲ್ಲಿ ಬಿಡುಗಡೆಯಾದ ‘ಮರ್ಡರ್‌’ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಮದುವೆಯಾಗಿದ್ದರೂ ಗೆಳೆಯನೊಂದಿಗೆ ಸ್ವಚ್ಛಂದವಾಗಿ ವಿಹರಿಸುವ ಹಾಗೂ ಆತನೊಂದಿಗೆ ಖಾಸಗಿ ಕ್ಷಣಗಣನ್ನು ಕಳೆಯುವ ಆ ಹೆಣ್ಣಿನ ಪಾತ್ರದಲ್ಲಿ ಮಲ್ಲಿಕಾ ಶೆರಾವತ್‌ ಅಷ್ಟೇ ದಿಟ್ಟತನದಿಂದ ನಟಿಸಿದ್ದರು. ಪ್ರಣಯ ಸನ್ನಿವೇಶಗಳಲ್ಲಿ ಮಲ್ಲಿಕಾ ಗಮನ ಸೆಳೆದಿದ್ದರು. ಮಹಿಳೆಯ ಒಳ ಉಡುಪು ಆಕೆಯ ಒಳ ಮನಸ್ಸಿನಷ್ಟೇ ಪ್ರಾಮುಖ್ಯ ಪಡೆದಿದ್ದು ಈ ಚಿತ್ರದಿಂದಲೇ.ಬ್ಲಾಕ್‌ (2005): ರಾಣಿ ಮುಖರ್ಜಿ ಅವರ ಜೀವಮಾನದ ಅತ್ಯುತ್ತಮ ಚಿತ್ರ ಎನ್ನಬಹುದಾದಷ್ಟು ಪ್ರಬುದ್ಧ ನಟನೆಯನ್ನು ಈ ಚಿತ್ರದಲ್ಲಿ ಕಾಣಬಹುದು. ಮಾತು ಬಾರದ ಹುಡುಗಿಯ ಪಾತ್ರದಲ್ಲಿ ತನ್ನೆದುರಿಗೆ ಸವಾಲಾಗಿ ನಿಂತಿದ್ದ ಎಲ್ಲವನ್ನೂ ಮೆಟ್ಟಿನಿಂತ ದಿಟ್ಟೆಯಾಗಿ ರಾಣಿ ಗಮನ ಸೆಳೆದರು. ಸಂಜಯ್‌ ಲೀಲಾ ಬನ್ಸಾಲಿ ಅವರ ನಿರ್ದೇಶನದ ಆ ಚಿತ್ರದ ಪಾತ್ರದ ಮೂಲಕ ಕಾಪಿ ಬುಕ್‌ ಪಾತ್ರಗಳನ್ನು ರಾಣಿ ಮುಖರ್ಜಿ ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ ಎಂಬ ಹೊಗಳಿಕೆ ಬಾಲಿವುಡ್‌ ಅಂಗಳದಲ್ಲಿ ಹರಿದಾಡಿತು. ಇದಾದ ನಂತರ ‘ಅಯ್ಯ’ ಎಂಬ ಚಿತ್ರದಲ್ಲೂ ರಾಣಿ ತಾನು ಎಂಥ ಪಾತ್ರಕ್ಕಾದರೂ ಸೈ ಎಂದು ತೋರಿಸಿಕೊಟ್ಟರು. ಅದರ ಬೆನ್ನಲ್ಲೇ ‘ಮರ್ದಾನಿ’ ಎಂಬ ಕಾದಂಬರಿ ಆಧಾರಿತ ಪಾತ್ರದಲ್ಲಿ ನಟಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು.ವಾಟರ್‌ (2005): ನೂತನ್‌ ನಂತರ ಪಾತ್ರಕ್ಕೆ ಜೀವ ತುಂಬುವ ನಟನೆಯ ಮೂಲಕ ಮನಮಿಡಿದ ಮತ್ತೊಬ್ಬ ನಾಯಕಿ ಕಲ್ಯಾಣಿ. ಇಂಥದ್ದೊಂದು ಪಾತ್ರ ಸೃಷ್ಟಿಸಿದ್ದು ನಿರ್ದೇಶಕಿ ದೀಪಾ ಮೆಹ್ತಾ. ಕಲ್ಯಾಣಿಯಾಗಿ ಲೀಸಾ ರೇ ಕೂಡ ಆ ಪಾತ್ರಕ್ಕೆ ನ್ಯಾಯ ದೊರಕಿಸುವಲ್ಲಿ ತಮ್ಮ ಸಂಪೂರ್ಣ ಪರಿಶ್ರಮ ಹಾಕಿದ್ದು, ಈ ಚಿತ್ರದಲ್ಲಿ ಕಾಣಬಹುದಾಗಿತ್ತು.‘ದಿ ನೇಮ್‌ಸೇಕ್‌’ (2007): ಅಮೆರಿಕದಲ್ಲಿದ್ದ ಔಷಿಮಾ ಗಂಗೂಲಿ, ತಮ್ಮ ಪತಿಯ ನಿಧನದ ನಂತರ ಸಂಪೂರ್ಣ ಬೀದಿಪಾಲಾಗುವ ಹಾಗೂ ಅದನ್ನು ನಿಭಾಯಿಸುವ ಪಾತ್ರದಲ್ಲಿ ಟಬು ಅವರ ನಟನೆ ಗಮನ ಸೆಳೆಯಿತು. ತನ್ನ ಚಿಕ್ಕಮ್ಮ ಶಬಾನಾ ಆಜ್ಮಿ ಅವರ 1970ರ ಹಾಗೂ 80ರ ದಶಕದ ಚಿತ್ರಗಳ ನಟನೆಯನ್ನು ನೆನಪಿಸಿತು. ಟಬು ತಾವೇ ಪಾತ್ರವಾಗಿ ನಟಿಸಿದ ಚಿತ್ರವದು.ಫ್ಯಾಷನ್‌ (2008): ಮಧುರ್‌ ಭಂಡಾರ್ಕರ್‌ ಅವರ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರವಿದು. ಪುಟ್ಟ ಪಟ್ಟಣದ ಹುಡುಗಿಯೊಬ್ಬಳು ಫ್ಯಾಷನ್‌ ಜಗತ್ತಿನ ಕನಸು ಕಟ್ಟಿಕೊಂಡು ಮಹಾನಗರ ಸೇರುವುದು ಮಾತ್ರವಲ್ಲ, ಸೂಪರ್‌ ಮಾಡೆಲ್‌ ಆಗಿ ಇಡೀ ಜಗತ್ತಿನ ಗಮನ ಸೆಳೆಯುತ್ತಾಳೆ. ಆದರೆ ಆ ಕೀರ್ತಿಯ ಉತ್ತುಂಗದಲ್ಲಿ ಮಾಡುವ ಒಂದಷ್ಟು ಸಣ್ಣ ಎಡವಟ್ಟುಗಳಿಂದ ವೃತ್ತಿಜೀವನ ಮಾತ್ರವಲ್ಲ ವೈಯಕ್ತಿಕ ಜೀವನ ಹೇಗೆ ಹಾಳಾಗುತ್ತದೆ ಎಂಬುದನ್ನು ಪ್ರಿಯಾಂಕಾ ಮನೋಜ್ಞವಾಗಿ ತೆರೆಯ ಮೇಲೆ ಮೂಡಿಸಿದ್ದಾರೆ. ನಂತರದಲ್ಲಿ ಆಕೆ ಆ ಖಿನ್ನತೆಯಿಂದ ಹೊರಬರುವ ದಿಟ್ಟ ಮಹಿಳೆಯಾಗಿ ಹಾಗೂ ತೊಂದರೆಯಲ್ಲಿರುವ ತನ್ನ ಪ್ರತಿಸ್ಪರ್ಧಿಗೆ ನೆರವಾಗುವ ಸನ್ನಿವೇಶವೂ ಮನಕಲಕುತ್ತದೆ.ದಟ್‌ ಗರ್ಲ್‌ ಇನ್‌ ಎಲ್ಲೋ ಬೂಟ್ಸ್‌ (2011): ವಿದೇಶಿ ಮಹಿಳೆಯೊಬ್ಬಳು ಮುಂಬೈ ಎಂಬ ಮಹಾನಗರದಲ್ಲಿ ಜೀವನ ಸಾಗಿಸಲು ನಡೆಸುವ ಹೋರಾಟ, ಅದಕ್ಕಾಗಿ ಆಕೆ ಮಸಾಜ್‌ ಪಾರ್ಲರ್‌ ಸೇರುವ ಅನಿವಾರ್ಯ ಸನ್ನಿವೇಶವನ್ನು ಚಿತ್ರದಲ್ಲಿ ಕಾಣಬಹುದು.ಕಹಾನಿ (2012): ಇಡೀ ಚಿತ್ರದಲ್ಲಿ ನಾಯಕಿ ಗರ್ಭಿಣಿಯಾಗಿ ಕಾಣಿಸಿಕೊಳ್ಳುತ್ತಾಳೆ. ಈ ಚಿತ್ರದಲ್ಲಿ ವಿದ್ಯಾ ಹಾಗೂ ಕೋಲ್ಕತ್ತ ಎರಡೇ ಪ್ರಮುಖ ಪಾತ್ರಗಳು. ಸುಜೋಯ್ ಘೋಷ್‌ ಅವರು ವಿದ್ಯಾ ಬಾಲನ್‌ ಅವರಿಗಾಗಿಯೇ ಸಿದ್ಧಪಡಿಸಿದ ಕಥೆ ಇದು.ಇಂಗ್ಲಿಷ್‌ ವಿಂಗ್ಲಿಷ್‌ (2012): ಶ್ರೀದೇವಿ ಚಿತ್ರರಂಗಕ್ಕೆ ಮರಳಿದ ಚಿತ್ರವಿದು. 50 ವರ್ಷ ವಯಸ್ಸಿನ ಶ್ರೀದೇವಿ ತಮ್ಮದೇ ವಯಸ್ಸಿನ ಪಾತ್ರ ನಿಭಾಯಿಸಿದ್ದು ಹಾಗೂ ಗೃಹಿಣಿಯಾಗಿ ತನ್ನನ್ನು ತಾನು ರೂಪುಗೊಳ್ಳುವಂತೆ ಮಾಡುವ ಚಿತ್ರದಲ್ಲಿನ ನಟನೆ ಮಹಿಳೆಯರಲ್ಲಿ ಸ್ಫೂರ್ತಿ ತುಂಬುವಂಥದ್ದು.ಹೀರೊಯಿನ್‌ (2012): ನಿರೀಕ್ಷಿತ ಯಶಸ್ಸು ಗಳಿಸದೇ ಇದ್ದರೂ ವಿಚಲಿತೆಯ ಪಾತ್ರದಲ್ಲಿ ಕರೀನಾ ಕಪೂರ್‌ ಮಿಂಚಿದ್ದರು. ಮಧುರ್‌ ಭಂಡಾರ್ಕರ್‌ ಅವರ ನಿರ್ದೇಶನದ ಬಹಳಷ್ಟು ಚಿತ್ರಗಳು ಮಹಿಳೆಯ ಸುತ್ತಲೇ ಇರುತ್ತವೆ. ಅದಕ್ಕೆ ಹೊಸ ಸೇರ್ಪಡೆ ಹೀರೋಯಿನ್‌. ಉತ್ತಮ ನಿರ್ದೇಶನ ಹಾಗೂ ಅತ್ಯುತ್ತಮ ನಟನೆ ಇದ್ದರೂ ಚಿತ್ರ ಗೆಲ್ಲುವಲ್ಲಿ ವಿಫಲವಾಯಿತು.ಕ್ವೀನ್‌ (2014): ಭಾರತದ ಪುಟ್ಟ ಪಟ್ಟಣದ ರಾಣಿ ಎಂಬ ಯುವತಿಯೊಬ್ಬಳು ವಿದೇಶದಲ್ಲಿ ಜೈಲು ಪಾಲಾಗುತ್ತಾಳೆ. ಆ ನಂತರ ತನ್ನ ಬದುಕನ್ನೇ ಬದಲಾಯಿಸಿಕೊಳ್ಳುವ ಪ್ರಯತ್ನವನ್ನು ಆಕೆ ನಡೆಸುತ್ತಾಳೆ. ಬದುಕಿನ ದಿಕ್ಕನ್ನೇ ಬದಲಿಸಿಕೊಳ್ಳುವ ಪಾತ್ರದಲ್ಲಿ ನಟಿಸಿರುವ ಕಂಗನಾ ರನೋಟ್‌ ಪುಟಿದೆದ್ದಿದ್ದಾರೆ. ಮಹಿಳೆಯಾಗಿ ಎದ್ದು ನಿಂತು ಚಪ್ಪಾಳೆ ತಟ್ಟಿ ಪ್ರಶಂಸಿಸದಿರಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಕಂಗನಾ ಅವರ ನಟನೆಯನ್ನು ಚಿತ್ರದಲ್ಲಿ ಕಾಣಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.