ಶನಿವಾರ, ಮೇ 15, 2021
24 °C

`ಬಿ' ಸ್ಕೀಮ್: 65 ಸಾವಿರ ಕೋಟಿ ಮೀಸಲು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ಕೃಷ್ಣ ಮೇಲ್ದಂಡೆ ಸೇರಿದಂತೆ `ಬಿ' ಸ್ಕೀಮ್ ಯೋಜನೆ ಅಡಿಯಲ್ಲಿ ಬರುವ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ಕರ್ನಾಟಕದ ಪಾಲಿನ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು 65ಸಾವಿರ ಕೋಟಿ ರೂಪಾಯಿ ಮೀಸಲಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಸ್ಥಳೀಯ ಶಾಸಕ ಬಾದರ್ಲಿ ಕುಟುಂಬದವರ ವಿವಾಹಕ್ಕೆ ಆಗಮಿಸಿದ್ದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಸಾಕಷ್ಟು ಮಳೆಯಾದ ಹಿನ್ನೆಲೆಯಲ್ಲಿ ಬಿತ್ತನೆಗೆ ರೈತ ಸಮುದಾಯ ಸಜ್ಜಾಗಿದ್ದು, ಅವರಿಗೆ ಬೇಕಾಗುವ ಬೀಜ ಮತ್ತು ಗೊಬ್ಬರವನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ರೈತರಿಗೆ ಬೇಕಾದ ದಾಸ್ತಾನನ್ನು ವಿತರಿಸಲು ಸೂಚಿಸಲಾಗಿದೆ. ಕೃಷಿ ಸಚಿವರು ಈ ಕುರಿತು ಸೂಕ್ತ ಕ್ರಮಕೈಗೊಂಡಿದ್ದಾರೆ ಎಂದು ವಿವರಿಸಿದರು.ಅನಗತ್ಯ ಕ್ಯಾತೆ ಬೇಡ: ತಮಿಳುನಾಡಿಗೆ ನೀರು ಬಿಡುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ನೀರು ಇಲ್ಲದ ಸಂದರ್ಭದಲ್ಲಿಯೂ ನೀರು ಹರಿಸಲಾಗಿದೆ. ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚಿನ ನೀರು ಸಂಗ್ರಹವಿದ್ದರೆ ತಾನೆ ಅವರು ಕೇಳಬೇಕು? ಜುಲೈ ತಿಂಗಳಿನಲ್ಲಿ ನೀರು ಕೇಳಬೇಕಾದ ಅವರು ಈಗಲೇ ಹರಿಸುವಂತೆ ಕ್ಯಾತೆ ತೆಗೆಯುತ್ತಿರುವುದು ರಾಜಕೀಯ ಉದ್ದೇಶವೇ ಹೊರತು ತಮಿಳುನಾಡಿನ ಹಿತದೃಷ್ಟಿಯಿಂದ ಅಲ್ಲ ಎಂದು ಟೀಕಿಸಿದರು. ರಾಯಚೂರು ಜಿಲ್ಲೆಯ ನಿರ್ಮಿತಿ ಕೇಂದ್ರ ಮತ್ತಿತರ ಆಶ್ರಯ ಯೋಜನೆಯಲ್ಲಾದ ಅವ್ಯವಹಾರದ ಬಗ್ಗೆ ವರದಿ ತರಿಸಿಕೊಂಡು ಸೂಕ್ತ ಕ್ರಮಕೈಗೊಳ್ಳುವುದಾಗಿ  ಭರವಸೆ ನೀಡಿದರು.ಅನ್ಯಾಯ ಸರಿಪಡಿಸುವೆ: ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಪ್ರಾತಿನಿಧ್ಯ ನೀಡದಿರುವ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಪರ್ಯಾಯ ಮಾರ್ಗದಿಂದ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವುದಾಗಿ ತಿಳಿಸಿದ ಅವರು,  ಒಬ್ಬರನ್ನು ವಿಧಾನಪರಿಷತ್ತಿಗೆ ನೇಮಕ ಮಾಡುವುದಾಗಿ ಭರವಸೆ ನೀಡಿದರು. ಶಾಸಕರಾದ ಬಾದರ್ಲಿ ಹಂಪನಗೌಡ ಮತ್ತು ವೆಂಕಟೇಶ ನಾಯಕರಿಗೆ ಸ್ಥಾನಮಾನ ಕಲ್ಪಿಸುವ ವಿಚಾರ ಪರಿಶೀಲನೆಯಲ್ಲಿದೆ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಬೋಸರಾಜ, ಸಚಿವರಾದ ಎಚ್.ಸಿ.ಮಹಾದೇವಪ್ಪ, ಮಹಾದೇವ ಪ್ರಸಾದ, ಶಾಸಕರಾದ ಹಂಪನಗೌಡ ಬಾದರ್ಲಿ, ಪ್ರತಾಪಗೌಡ ಪಾಟೀಲ್, ವೆಂಕಟೇಶ ನಾಯಕ, ಹಂಪಯ್ಯ ನಾಯಕ, ಮಾಜಿ ಶಾಸಕರಾದ ರಾಜಾ ರಂಗಪ್ಪ ನಾಯಕ ಎ.ಬಿ.ಪಾಟೀಲ್, ಅಮರೇಶಗೌಡ ಬಯ್ಯಾಪುರ, ಕೆಪಿಸಿಸಿ ಸದಸ್ಯ ಎನ್.ಶಿವನಾಗಪ್ಪ, ಜಿಲ್ಲಾ ಉಪಾಧ್ಯಕ್ಷ ಎಂ.ಕಾಳಿಂಗಪ್ಪ ವಕೀಲ ಮತ್ತಿತರರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.