ಬೀಗರಾದ ಯಡಿಯೂರಪ್ಪ-ಚಿಕ್ಕನಗೌಡ್ರ

ಶುಕ್ರವಾರ, ಜೂಲೈ 19, 2019
28 °C

ಬೀಗರಾದ ಯಡಿಯೂರಪ್ಪ-ಚಿಕ್ಕನಗೌಡ್ರ

Published:
Updated:

ಹುಬ್ಬಳ್ಳಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪತ್ನಿಯ ಸಹೋದರಿ ಪುತ್ರ ಎಚ್.ಕೆ. ನಿತೀಶ್ ಹಾಗೂ ಶಾಸಕ ಎಸ್.ಐ. ಚಿಕ್ಕನಗೌಡ್ರ ಅವರ ಪುತ್ರಿ ನಂದಾ ಅವರ ವಿವಾಹ ನಿಶ್ಚಿತಾರ್ಥ ಸಮಾರಂಭ ಸೋಮವಾರ ಇಲ್ಲಿಯ ಚವ್ಹಾಣ ಗಾರ್ಡನ್‌ನಲ್ಲಿ ನಡೆಯಲಿದ್ದು, ಯಡಿಯೂರಪ್ಪ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಮೈತ್ರಾದೇವಿ ಅವರ ಸಹೋದರಿ ಚಂದ್ರಪ್ರಭಾ ಹೊನ್ನಪ್ಪ ಅವರ ಏಕೈಕ ಪುತ್ರನಾಗಿರುವ ನಿತೀಶ್ ಶಿವಮೊಗ್ಗದಲ್ಲಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಾರೆ. ಅವರನ್ನು ಕೈಹಿಡಿಯಲಿರುವ ನಂದಾ ಬಿಎ ಓದಿದ್ದು, ಚಿಕ್ಕನಗೌಡ್ರ ಅವರ ಏಕೈಕ ಪುತ್ರಿಯಾಗಿದ್ದಾರೆ. ಹೀಗಾಗಿ ನಿಶ್ಚಿತಾರ್ಥ ಕಾರ್ಯಕ್ರಮವೂ ಮದುವೆಯಂತೆಯೇ ನಡೆಯಲಿದೆ.`ಪ್ರಕಾಶ ಬೆಂಡಿಗೇರಿ ಅವರ ಮಧ್ಯಸ್ಥಿಕೆಯಲ್ಲಿ ಈ ಸಂಬಂಧ ಕುದುರಿತು. ನಾಲ್ಕು ತಿಂಗಳ ಹಿಂದೆ ಅವರೆಲ್ಲ ಬಂದು ಕನ್ಯೆಯನ್ನು ನೋಡಿಕೊಂಡು ಹೋಗಿದ್ದರು. ಸಂಬಂಧ ಇಬ್ಬರಿಗೂ ಪರಸ್ಪರ ಒಪ್ಪಿಗೆ ಆಗಿದ್ದರಿಂದ ನಿಶ್ಚಿತಾರ್ಥಕ್ಕೆ ನಿರ್ಧರಿಸಿದೆವು. ನವೆಂಬರ್‌ನಲ್ಲಿ ಮದುವೆ ಮಾಡಲು ಉದ್ದೇಶಿಸಿದ್ದೇವೆ~ ಎಂದು ಚಿಕ್ಕನಗೌಡ್ರ `ಪ್ರಜಾವಾಣಿ~ಗೆ ತಿಳಿಸಿದರು.ಯಡಿಯೂರಪ್ಪ ಅವರ ಇಡೀ ಕುಟುಂಬವೇ ಸಮಾರಂಭದಲ್ಲಿ ಪಾಲ್ಗೊಳ್ಳಲಿದೆ. ಅವರ ಪುತ್ರ, ಸಂಸದ ಬಿ.ವೈ. ರಾಘವೇಂದ್ರ, ಇಬ್ಬರೂ ಪುತ್ರಿಯರು, ಸೊಸೆಯಂದಿರು ನಿಶ್ಚಿತಾರ್ಥಕ್ಕೆ ಸಾಕ್ಷಿಯಾಗಲಿದ್ದಾರೆ. ಸಚಿವರಾದ ವಿ.ಸೋಮಣ್ಣ, ಸಿ.ಎಂ.ಉದಾಸಿ, ಜಗದೀಶ ಶೆಟ್ಟರ, ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ ಸೇರಿದಂತೆ ಯಡಿಯೂರಪ್ಪ ಸಂಪುಟದ ಹಲವು ಜನ ಸಹೋದ್ಯೋಗಿಗಳು, ಸಂಸದರು, ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ನಿಶ್ಚಿತಾರ್ಥ ಸಮಾರಂಭಕ್ಕೆ ಮುನ್ನ 10.30ಕ್ಕೆ ಅಮರಗೋಳದಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ಆಯೋಜಿಸಿರುವ ವಸತಿ ಯೋಜನೆಗಳಿಗೆ ಭೂಮಿಪೂಜಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ರಸ್ತೆ ಮೂಲಕ ಹಾವೇರಿಗೆ ತೆರಳಿ ಅಲ್ಲಿ ಮಾಜಿ ಮುಖ್ಯಮಂತ್ರಿ ದಿ. ಜೆ .ಎಚ್. ಪಟೇಲ್ ಅವರ ಪ್ರತಿಮೆ ಅನಾವರಣ ಹಾಗೂ ಜಿಲ್ಲಾ ವಾರ್ತಾಭವನ ಉದ್ಛಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry