ಭಾನುವಾರ, ಏಪ್ರಿಲ್ 18, 2021
32 °C

ಬೀಜ ಮಸೂದೆಗೆ ತಿದ್ದುಪಡಿ ತರಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಬೀಜ ಮಸೂದೆ 2004(2010)ಗೆ ಸೂಕ್ತ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿ ಬಿಜೆಪಿಯ ಕಿಸಾನ್ ಮೋರ್ಚಾ ಘಟಕವು ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಅವರ ಮೂಲಕ ಕೇಂದ್ರ ಕೃಷಿ ಸಚಿವರಿಗೆ ಈಚೆಗೆ ಮನವಿ ಸಲ್ಲಿಸಿತು. ಬೀಜ ಮಸೂದೆ ಕರಡು 2004ರಲ್ಲಿ ಸಿದ್ಧವಾಗಿದೆ. ಇದರ ಮೂಲ ಸ್ವರೂಪವನ್ನು ಬದಲಾಯಿಸಿ ರಾಜ್ಯಸಭೆಯ ಅನುಮೋದನೆಗಾಗಿ ಮಂಡಿಸಿದಾಗ ರೈತಪರ ಕಾಳಜಿ ಹೊಂದಿರುವ ಬಿಜೆಪಿ ಹಾಗೂ ಇತರೆ ರಾಜ್ಯಸಭಾ ಸದಸ್ಯರು ಕೆಲವು ಲೋಪಗಳನ್ನು ಉಲ್ಲೇಖಿಸಿ ತಿದ್ದುಪಡಿಗೆ ಒತ್ತಾಯಿ ಸಿದ್ದರಿಂದ ಈ ಮಸೂದೆಯ ಲೋಪ ದೋಷಗಳನ್ನು ಸರಿಪಡಿಸಲು ಸಮಿತಿ ರಚಿಸಲಾಗಿದೆ.ರೈತರಿಗೆ ಉತ್ಕೃಷ್ಟ ದರ್ಜೆಯ ಬಿತ್ತನೆ ಬೀಜ ಕಡಿಮೆ ದರದಲ್ಲಿ ಸಿಗುವಂತಾಗಬೇಕು. ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಬೀಜ ಉತ್ಪಾದನಾ ಕಂಪೆನಿಗಳು ರಾಜಧನದ ಮೂಲಕ ರೈತರನ್ನು ಶೋಷಣೆ ಮಾಡಬಾರದು. ವ್ಯವಸ್ಥಿತ ರೀತಿಯಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಅವಧಿಯಲ್ಲಿಯೇ ಸಿಗಬೇಕು ಹಾಗೂ ವ್ಯವಸ್ಥಿತ ಜವಾಬ್ದಾರಿಯುತ ವಿತರಣೆ ವ್ಯವಸ್ಥೆ ಜಾರಿಯಾಗಬೇಕು ಎಂದು ಕಿಸಾನ್ ಮೋರ್ಚಾ ಒತ್ತಾಯಿಸಿದೆ.ಬಿತ್ತನೆ ಬೀಜ ವಿಫಲವಾದಾಗ ರೈತರಿಗೆ ಬೆಳೆ ಆಧಾರಿತ ವೆಚ್ಚದ ಪರಿಹಾರ ನೀಡಬೇಕು. ಪರಿಹಾರದ ಅಂದಾಜು ತಾಲ್ಲೂಕು ಸಮಿತಿ ಮಟ್ಟದಲ್ಲೇ ಆಗಬೇಕು. ಬಿತ್ತನೆ ಬೀಜಗಳು ಸೂಕ್ತ ವಿಮೆಯಾದ ನಂತರವೇ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು. ಕೃಷಿ ಪ್ರದೇಶಗಳು ಆಯಾ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದ್ದು ಬಿತ್ತನೇ ಬೀಜ ಕಂಪೆನಿಗಳ ನೊಂದಣಿ ಸಮಯದಲ್ಲಿ ರಾಜ್ಯ ಸರಕಾರವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಕಿಸಾನ್ ಮೋರ್ಚಾ ಮನವಿ ಮಾಡಿದೆ.ಭಾರತೀಯ ಸಾಂಪ್ರದಾಯಿಕ ಬಿತ್ತನೆ ಬೀಜಗಳ ರಕ್ಷಣೆಯ ಬಗ್ಗೆ ಮಸೂದೆಯಲ್ಲಿ ಮಾಹಿತಿ ಇಲ್ಲ. ಶೇ  60ರಷ್ಟು ರೈತರು ನಮ್ಮ ಸಾಂಪ್ರದಾಯಿಕ ಬಿತ್ತನೆ ಬೀಜಗಳ ಆಧಾರದಿಂದಲೇ ಕೃಷಿಯಲ್ಲಿ ತೊಡಗಿದ್ದಾರೆ. ಇದಕ್ಕೆ ಸಂಚಕಾರ ಬಂದರೆ ಬಹು ಸಂಖ್ಯಾತ ರೈತರು ತೊಂದರೆಗೊಳಗಾಗುವುದಲ್ಲದೇ ಸಾಂಪ್ರದಾಯಿಕ ಆಹಾರ ಪದ್ಧತಿ ಕಣ್ಮರೆಯಾಗುತ್ತದೆ ಎಂದು ಮೋರ್ಚಾ ಆತಂಕ ವ್ಯಕ್ತಪಡಿಸಿದೆ.ಸಣ್ಣಸಸಿ ಕ್ಷೇತ್ರವನ್ನು ಕೃಷಿ ಕ್ಷೇತ್ರವನ್ನಾಗಿ ಪರಿಗಣಿಸಬೇಕು. ಸಸಿ ಕ್ಷೇತ್ರವನ್ನು ಬೀಜ ನೊಂದಣಿ ಅಥವಾ ಬೀಜ ಉತ್ಪಾದನಾ ಕೇಂದ್ರವನ್ನಾಗಿ ವಿಭಾಗಿಸಬಾರದು. ವಿಭಾಗಿಸಿದರೆ ಬಹುರಾಷ್ಟ್ರೀಯ ಕಂಪೆನಿಗಳು ಸಸ್ಯ ಕ್ಷೇತ್ರಕ್ಕೆ ಲಗ್ಗೆ ಇಡುತ್ತಾರೆ ಹಾಗೂ ಉಳಿದ ಸಣ್ಣಸಸ್ಯ ಕ್ಷೇತ್ರದ ಮಾಲೀಕರಿಗೆ ತಂತ್ರಜ್ಞಾನ ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎಂದು ಮೋರ್ಚಾ ತಿಳಿಸಿದೆ.ಕಿಸಾನ್ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಶಂಭುಲಿಂಗ ಹೆಗಡೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸಾದ ಕಾರವಾರಕರ್, ಜಗದೀಶ ಬಿರ್‌ಕೋಡಿಕರ್, ವಿನೋದ ಪ್ರಭು, ರತನ್ ದುರ್ಗೇಕರ್, ಸತೀಶ ಭಟ್ಟ, ರಾಜು ಧೂಳಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.