ಭಾನುವಾರ, ಜೂನ್ 13, 2021
24 °C

ಬೀದರ್‌ಗೆ ಒವೈಸಿ ಸಹೋದರರ ಪ್ರವೇಶಕ್ಕೆ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಜಿಲ್ಲೆಯಲ್ಲಿ ಶಾಂತಿಗೆ ಭಂಗ ತರಬಹುದು ಎಂಬ ಹಿನ್ನೆಲೆಯಲ್ಲಿ ಆಲ್‌ ಇಂಡಿಯಾ ಮಜ್ಲಿಸ್ ಇ–ಇತೆ­ಹಾದುಲ್‌ ಮುಸ್ಲಿಮೀನ್‌ ಮುಖಂಡ­ರಾದ ಒವೈಸಿ ಸಹೋದರರಿಗೆ ಜಿಲ್ಲಾ ಪ್ರವೇಶ­ವನ್ನು ನಿರ್ಬಂಧಿಸಿ ಬೀದರ್ ಜಿಲ್ಲಾಧಿಕಾರಿ (ದಂಡಾಧಿಕಾರಿ) ಡಾ. ಪಿ.ಸಿ.ಜಾಫರ್‌ ನೋಟಿಸ್ ಜಾರಿ ಮಾಡಿದ್ದಾರೆ.ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅವರು, ತಮಗೆ ದತ್ತ­ವಾದ ಅಧಿಕಾರ ಬಳಸಿ ನೆರೆಯ ಹೈದರಾಬಾದ್‌ನ ಸಂಸದ ಎಸ್‌.­ಅಸಾ­ಸುದ್ದೀನ್ ಒವೈಸಿ ಹಾಗೂ ಅವರ ಸಹೋ­ದರ, ಶಾಸಕ ಎಸ್‌. ಅಕ್ಬರು­ದ್ದೀನ್ ಒವೈಸಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

‘ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರ ವರದಿ  ಆಧರಿಸಿ ನೋಟಿಸ್‌ ಜಾರಿ ಮಾಡಲಾಗಿದ್ದು, ಸಹೋದರ­ರಿಬ್ಬರೂ ತಮ್ಮ ವಕೀಲರ ಮೂಲಕ ಪ್ರತಿ­ಕ್ರಿ­ಯಿ­ಸಿದ್ದಾರೆ. ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೋರಿ­ದ್ದಾರೆ’ ಎಂದು ಜಿಲ್ಲಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.ಈ ಇಬ್ಬರು ಸಹೋದರರು ಜಿಲ್ಲೆಗೆ ಭೇಟಿ ನೀಡಿದಲ್ಲಿ ನಗರ, ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರ­ಬಹುದು ಎಂಬ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದು ಕೊಳ್ಳಲಾಗಿದೆ.  ಕಳೆದ ವಿಧಾನ­ಸಭಾ ಚುನಾವಣೆಯಲ್ಲಿ ಒವೈಸಿ ಸಹೋದರರು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಕಾರಣ­ವಾಗಿದ್ದ ಎರಡೂ ಪ್ರತ್ಯೇಕ ಬೆಳವಣಿಗೆ­ಗಳು ಈ ಕ್ರಮಕ್ಕೆ ಕಾರಣವಾಗಿವೆ.ಅಸಾಸುದ್ದೀನ್‌ ಒವೈಸಿ ಕಳೆದ ವಿಧಾನ­ಸಭಾ ಚುನಾವಣೆಯಲ್ಲಿ ಜಿಲ್ಲೆಯ ಗಡಿ ತಾಲ್ಲೂಕು ಬಸವ­ಕಲ್ಯಾಣ­ದಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತ­ನಾಡಿದ್ದರು. ಪೂರ್ವಾನುಮತಿ ಇಲ್ಲದೇ ಸಭೆಯನ್ನು ನಡೆಸಿದ್ದಾರೆ ಎಂದು ಆಗ ಚುನಾವಣಾಧಿಕಾರಿ ಪ್ರಕರಣ ದಾಖಲು ಮಾಡಿದ್ದರು. ನಂತರ ಹೈದರಾಬಾದ್‌ಗೆ ಮರಳುವ ಸಂದರ್ಭ­­ದಲ್ಲಿ ಹುಮನಾಬಾದ್‌ ಚೆಕ್‌­ಪೋಸ್ಟ್ ಬಳಿ ಅವರನ್ನು ಬಂಧಿಸ­ಲಾ­ಗಿತ್ತು. ಆಗ ಅವರಲ್ಲಿ  ಪರವಾನಗಿ ಹಾಜರು­ಪಡಿಸದ ಎರಡು ಗನ್‌ ಇದ್ದು, ವಶಕ್ಕೆ ಪಡೆಯಲಾಗಿತ್ತು.ಬಳಿಕ ಸಂಬಂಧಿತ ದಾಖಲೆಗಳನ್ನು ಪೊಲೀಸರ ಎದುರು ಹಾಜರು­ಪಡಿಸುವ ಭರವಸೆ ನೀಡಿದ ಮೇಲೆ ಬಿಡುಗಡೆ ಮಾಡಲಾಗಿತ್ತು. ಅಕ್ಬರು­ದ್ದೀನ್ ಒವೈಸಿ ಅವರೂ ಕಳೆದ ಸೆಪ್ಟೆಂಬರ್‌ ತಿಂಗಳು ಹುಮನಾ­ಬಾದ್‌ಗೆ ಭೇಟಿ ನೀಡಿದ್ದು, ಬೆಂಬಲಿಗರ ಜೊತೆಗೆ ಜೀಪ್‌ ಜಾಥಾ ನಡೆಸಿದ್ದರು. ಇಲ್ಲಿನ ಶಾಸಕರ ನಿವಾಸದ ಎದುರು ಪ್ರಚೋದ­ನಾಕಾರಿ ಘೋಷಣೆ ಕೂಗ­ಲಾಗಿತ್ತು ಎಂಬ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಗಂಭೀರವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.