ಬೀದರ್: ಅಭಿವೃದ್ಧಿ, ಆಸಕ್ತಿಯಿಂದಲೂ ದೂರ

7

ಬೀದರ್: ಅಭಿವೃದ್ಧಿ, ಆಸಕ್ತಿಯಿಂದಲೂ ದೂರ

Published:
Updated:
ಬೀದರ್: ಅಭಿವೃದ್ಧಿ, ಆಸಕ್ತಿಯಿಂದಲೂ ದೂರ

ಬೀದರ್: ಉತ್ತಮ ಹವಾಗುಣ, ನೀರು, ಭೂಮಿ ಸೌಲಭ್ಯ, ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಶ್ರಮಿಕ ವರ್ಗ ಎಲ್ಲ ಇದ್ದರೂ ಈ ಜಿಲ್ಲೆ ಅಭಿವೃದ್ಧಿಗೆ ದೂರ. ಯೋಜನೆಗಳನ್ನು ತರಬೇಕಾದ ಅಧಿಕಾರಿಗಳಿಗೆ ದೂರ.ಹೂಡಿಕೆದಾರರಿಗೆ ದೂರ. ಉದ್ಯಮಿಗಳಿಗೆ ದೂರ. ಅಭಿವೃದ್ಧಿಗೆ ಒತ್ತು ನೀಡಬೇಕಾದ ಜನಪ್ರತಿನಿಧಿಗಳ ಆಸಕ್ತಿಯಿಂದಂತೂ ದೂರ, ದೂರ.ಇದು, `ಕರ್ನಾಟಕ ಕಿರೀಟ~ ಎಂದೇ ಕರೆಸಿಕೊಳ್ಳುವ ರಾಜ್ಯದ ಉತ್ತರದ ಗಡಿ ಜಿಲ್ಲೆ ಬೀದರ್‌ನ ಸ್ಥಿತಿ. ಉದ್ಯಮ ಸ್ಥಾಪನೆಗೆ ಸೂಕ್ತ ಪರಿಸರ, ಹೈದರಾಬಾದ್‌ಗೆ ಹತ್ತಿರ ಇರುವುದರಿಂದ ವಿಮಾನ ಸೌಲಭ್ಯ, ರಸ್ತೆ, ರೈಲು ಸಂಪರ್ಕ ಸೌಲಭ್ಯ ಎಲ್ಲ ಇದ್ದರೂ ಕೈಗಾರಿಕಾ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿರುವ ಜಿಲ್ಲೆ ಇದು.ಕೈಗಾರಿಕಾ ಅಭಿವೃದ್ಧಿಗೆ ಹತ್ತಾರು ವರ್ಷಗಳ ಹಿಂದೆಯೇ ನಗರ ಹೊರವಲಯದ ನೌಬಾದ್ ಬಳಿ ವಶಕ್ಕೆ ಪಡೆದ ಭೂಮಿ ಇನ್ನೂ ಅಭಿವೃದ್ಧಿಯಾಗಿಲ್ಲ; ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕೋರಿ ಕಳೆದೊಂದು ವರ್ಷದಲ್ಲಿ ವಿವಿಧ ಅಧಿಕಾರಿಗಳಿಂದ ಪ್ರಧಾನಿವರೆಗೂ ಒಟ್ಟು 25 ಪತ್ರಗಳನ್ನು ಬೀದರ್ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ ಬರೆದಿದೆ.`ಆದರೆ, ಪ್ರಧಾನಿ ಕಚೇರಿಯಿಂದ ಒಂದು ಪತ್ರಕ್ಕೆ ಉತ್ತರ ಬಂದಿದ್ದರೂ ಫಲಶ್ರುತಿ ಶೂನ್ಯ. ಉಳಿದ ಪತ್ರಗಳಿಗೆ ಉತ್ತರವೂ ಇಲ್ಲ. ಬಹುತೇಕ ಇಲಾಖೆಗಳಲ್ಲಿ ಅಧಿಕಾರಿಗಳು ನಿಯೋಜನೆ ಮೇಲೆಯೇ ಇದ್ದಾರೆ. ಸಂಪುಟದ ಹೆಚ್ಚಿನ ಸಚಿವರು ಬೀದರ್‌ಗೆ ಬರುವುದೇ ಇಲ್ಲ. ಅಧಿಕಾರಿಗಳು ಬಿಡಿ ಅವರನ್ನು ಕೇಳುವುದೇ ಬೇಡ~ ಎಂದು ಬೇಸರ ಹೊರಹಾಕುತ್ತಾರೆ ಒಕ್ಕೂಟದ ಅಧ್ಯಕ್ಷ ಬಿ.ಜಿ.ಶೆಟಕಾರ.`ಈಗ ಇನ್ನೊಂದು ಜಾಗತಿಕ ಹೂಡಿಕೆದಾರರ ಸಮಾವೇಶ(ಜಿಮ್) ನಡೆಯುತ್ತಿದೆ. ಇವೆಲ್ಲವೂ ಕಣ್ಣೊರೆಸುವ ತಂತ್ರಗಳಷ್ಟೇ. ಇದರಿಂದ ನಮಗೆ, ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಣ್ಣ ಪ್ರಯೋಜನವೂ ಇಲ್ಲ. ಸರ್ಕಾರಕ್ಕೆ ನಿಜಕ್ಕೂ ಆಸಕ್ತಿ ಇದ್ದರೆ ಮೊದಲು ಇಂಥ ಸಮಾವೇಶವನ್ನೇ ಉತ್ತರ ಕರ್ನಾಟಕ ಭಾಗದಲ್ಲಿ ಆಯೋಜಿಸಲಿ~ ಎಂಬುದು ಅವರ ಸವಾಲು.

`ಕಣ್ಣೊರೆಸುವ ತಂತ್ರ~
`ಈಗ ಇನ್ನೊಂದು ಜಾಗತಿಕ ಹೂಡಿಕೆದಾರರ ಸಮಾವೇಶ(ಜಿಮ್) ನಡೆಯುತ್ತಿದೆ. ಇವೆಲ್ಲವೂ ಕಣ್ಣೊರೆಸುವ ತಂತ್ರಗಳಷ್ಟೇ. ಇದರಿಂದ ನಮಗೆ, ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಣ್ಣ ಪ್ರಯೋಜನವೂ ಇಲ್ಲ. ಸರ್ಕಾರಕ್ಕೆ ನಿಜಕ್ಕೂ ಆಸಕ್ತಿ ಇದ್ದರೆ ಮೊದಲು ಇಂಥ ಸಮಾವೇಶವನ್ನೇ ಉತ್ತರ ಕರ್ನಾಟಕ ಭಾಗದಲ್ಲಿ ಆಯೋಜಿಸಲಿ~-ಬಿ.ಜಿ.ಶೆಟಕಾರ

ಅಧ್ಯಕ್ಷ, ಬೀದರ್ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ
`ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ, ಕಚ್ಚಾಪದಾರ್ಥ, ರಸ್ತೆ, ನೀರು, ಭೂಮಿ ಎಲ್ಲ ಸೌಲಭ್ಯವನ್ನು ಪರಿಗಣಿಸಿ ಹೂಡಿಕೆದಾರರು ಬಂಡವಾಳ ಹೂಡಬೇಕು. ಇದನ್ನು ಗಮನಿಸಲು ಹೂಡಿಕೆದಾರರನ್ನು ಇಲ್ಲಿಗೆ ಕರೆ ತರುವ ಕೆಲಸ ಅಧಿಕಾರಿಗಳಿಂದ ಆಗಬೇಕು. ಅಧಿಕಾರಿಗಳೇ ಬರುವುದಿಲ್ಲ. ಇನ್ನೂ ಹೂಡಿಕೆ ಹೇಗೆ ಬರುತ್ತದೆ?~ ಎಂಬುದು ಅವರ ಪ್ರಶ್ನೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯೇ ಪ್ರಕಟಿಸಿರುವ ಮಾಹಿತಿಗಳ ಅನುಸಾರ, 2010ರ ಮಾರ್ಚ್ 31ರಲ್ಲಿ ಇದ್ದಂತೆ ಜಿಲ್ಲೆಯಲ್ಲಿದ್ದ ಒಟ್ಟು ಕಾರ್ಖಾನೆಗಳ ಸಂಖ್ಯೆ 89. ಇದರಿಂದ ಸೃಷ್ಟಿಯಾಗಿರುವ ಉದ್ಯೋಗಗಳ ಸಂಖ್ಯೆ ಕೇವಲ 5,690. ಆ ನಂತರವೂ ಅಂಥ ಗಣನೀಯ ಪ್ರಗತಿಯಾಗಿಲ್ಲ. ಔರಾದ್ ತಾಲ್ಲೂಕಿನಲ್ಲಿ ಒಂದು, ಬಸವಕಲ್ಯಾಣ ಮತ್ತು ಭಾಲ್ಕಿ ತಾಲ್ಲೂಕು ತಲಾ 3 ಕಾರ್ಖಾನೆಗಳಷ್ಟೇ ಸ್ಥಾಪನೆಯಾಗಿವೆ ಎಂಬುದು ಅಭಿವೃದ್ಧಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ತೋರುತ್ತಿರುವ ಕಾಳಜಿಗೆ ಕನ್ನಡಿಯೂ ಹೌದು.ಶೈಕ್ಷಣಿಕವಾಗಿ ಹಿಂದುಳಿದ ಕಾರಣ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಂತದಲ್ಲಿ ಶಿಕ್ಷಣ ತೊರೆದ ಯುವಜನರು ಉದ್ಯೋಗ ಅರಸಿ ಬೆಂಗಳೂರು, ಹೈದರಾಬಾದ್... ಎಂದು ದೂರದೂರಿಗೆ ಹೋಗುತ್ತಾರೆ. ಇಂದಿಗೂ ಕೇವಲ 5ರಿಂದ 6 ಸಾವಿರ ರೂಪಾಯಿಗೆ ಬೆಂಗಳೂರಿಗೆ ಹೋಗಿ ದುಡಿಯುವ ವರ್ಗವೂ ಇಲ್ಲಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಇಲ್ಲಿಯೇ ಒತ್ತು ನೀಡಿದರೆ ಅವರನ್ನು ತವರೂರಲ್ಲಿಯೇ ಉಳಿಸಿಕೊಳ್ಳುವುದರ ಜತೆಗೇ ಈ ಭಾಗವೂ ಅಭಿವೃದ್ಧಿಯಾಗುತ್ತದೆ. ಆದರೆ, ಅಂಥ ಪ್ರಯತ್ನವೇ ಅಧಿಕಾರಿಗಳಿಂದ ಆಗಲಿಲ್ಲ, ಆಗುತ್ತಲೇ ಇಲ್ಲ.ಜನಪ್ರತಿನಿಧಿಗಳು ಭವಿಷ್ಯವನ್ನು ಗಮನಿಸಿ ಇತ್ತ ಒತ್ತು ನೀಡಲೇ ಇಲ್ಲ ಎನ್ನುವುದು ಶೆಟಕಾರ ಅವರ ಬೇಸರದ ನುಡಿ.ಮಾರುಕಟ್ಟೆ ಅವಕಾಶ, ಕಚ್ಚಾಪದಾರ್ಥಗಳ ಲಭ್ಯತೆ ಎರಡನ್ನೂ ದೃಷ್ಟಿಯಲ್ಲಿಟ್ಟುಕೊಂಡು ಉದ್ದಿಮೆಗಳಿಗೆ ಅವಕಾಶ ನೀಡಬೇಕು. ಇರುವ ನೀರಿನ ಸಂಪನ್ಮೂಲವನ್ನು ಬಳಸಿಕೊಂಡು ಸಮರ್ಪಕವಾಗಿ ಒದಗಿಸಲು ಮುಂದಾಗಬೇಕು. ಔರಾದ, ಹುಮನಾಬಾದ್, ಬಸವಕಲ್ಯಾಣ ಭಾಗದಲ್ಲಿ ಪ್ರಗತಿಗೆ ಅವಕಾಶವಿದೆ. ಈಗ ಉದ್ಯೋಗ ಅರಸಿ ದೂರದೂರಿಗೆ ವಲಸೆ ಹೋಗುತ್ತಿರುವ ಯುವಜರಿಗೆ ಉದ್ಯೋಗ ಅವಕಾಶ ಹೆಚ್ಚಿಸಲು ಸಿದ್ಧ ಉಡುಪು (ಗಾರ್ಮೆಟ್ಸ್) ಕ್ಷೇತ್ರ ಸೇರಿದಂತೆ ಹಲವು ಉದ್ದಿಮೆಗಳ ಸ್ಥಾಪನೆಗೆ ಒತ್ತು ನೀಡಬೇಕಾಗಿದೆ ಎನ್ನುತ್ತಾರೆ ಅವರು.ಕಳೆದ 16 ವರ್ಷದಿಂದ ಇಲ್ಲಿನ ಒಕ್ಕೂಟದ ಅಧ್ಯಕ್ಷನಾಗಿ ನಾನು ಜಿಲ್ಲೆಯ ಕೈಗಾರಿಕ ವಲಯದ ಸಮಸ್ಯೆ ಮತ್ತು ಬೆಳವಣಿಗೆಯಲ್ಲಿನ ಹಿನ್ನಡೆ ಬಗ್ಗೆ ಪತ್ರ ಬರೆಯುತ್ತಿದ್ದೇನೆ. ಏನೂ ಪ್ರಯೋಜನ ಆಗುತ್ತಿಲ್ಲ. ಅಧಿಕಾರಿಗಳ, ರಾಜಕಾರಣಿಗಳ ಮನಃಪರಿವರ್ತನೆ ಆಗದೇ ಏನೂ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುತಲ್ಲೇ ಮಾತಿಗೆ ಕೊನೆ ಹಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry