ಬೀದರ್: ಕಬ್ಬು ಬೆಳೆಗಾರರ ಪ್ರತಿಭಟನೆ

7

ಬೀದರ್: ಕಬ್ಬು ಬೆಳೆಗಾರರ ಪ್ರತಿಭಟನೆ

Published:
Updated:

ಬೀದರ್: ಕಬ್ಬಿನ ಬಾಕಿ ಹಣ ಪಾವತಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ನಗರದ ಗಾಂಧಿಗಂಜ್‌ನ ರೈತ ಭವನದ ಎದುರು ಜಮಾಯಿಸಿದ ಕಾರ್ಯಕರ್ತರು ಅಲ್ಲಿಂದ ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರಾದರೂ ಪೊಲೀಸರು ಅವಕಾಶ ಕೊಡಲಿಲ್ಲ. ಕಚೇರಿಯ ಗೇಟಿನ ಬಳಿಯೇ ಅವರನ್ನು ತಡೆದರು. ನಂತರ ರೈತರು ನಡು ರಸ್ತೆಯಲ್ಲಿ ಧರಣಿ ಕುಳಿತು ಪ್ರತಿಭಟಿಸಿದರು. ಹೀಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.ಕಬ್ಬು ಪೂರೈಸಿರುವ ರೈತರಿಗೆ ಟನ್‌ಗೆ ರೂ. 200 ಬಾಕಿ ಉಳಿಸಿಕೊಂಡಿದ್ದು, ಅದನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು. ಬಾಕಿ ಪಾವತಿಸುವವರೆಗೆ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.ಕಟಾವು ಮತ್ತು ಸಾಗಣೆ ವೆಚ್ಚ ಸೇರಿ ಪ್ರಸಕ್ತ ಹಂಗಾಮಿಗಾಗಿ ಕ್ವಿಂಟಲ್ ಕಬ್ಬಿಗೆ 3 ಸಾವಿರ ರೂಪಾಯಿ ಬೆಲೆ ನಿಗದಿಪಡಿಸಬೇಕು. ಕೇಂದ್ರ ಘೋಷಿಸಿರುವ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರವೂ ಉದ್ದಿಗೆ ಕ್ವಿಂಟಲ್‌ಗೆ 500 ರೂಪಾಯಿ ಪ್ರೋತ್ಸಾಹಧನ ಘೋಷಿಸಬೇಕು. ಕೂಡಲೇ ಉದ್ದು ಖರೀದಿ ಆರಂಭಿಸಬೇಕು.ತೊಗರಿಗೆ 5 ಸಾವಿರ ಬೆಂಬಲ ಬೆಲೆ ನಿಗದಿಪಡಿಸಿ ಡಿಸೆಂಬರ್‌ನಿಂದ ಜೂನ್‌ವರೆಗೂ ಖರೀದಿಸಬೇಕು. ಹಗಲು ಹೊತ್ತಿನಲ್ಲಿ 6 ತಾಸು ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ.

ಮಹಾರಾಷ್ಟ್ರದ ಶೇತಕಾರಿ ಸಂಘಟನೆಯ ಮುಖಂಡ ಸದಾಭಾವು ಖೋಟ್, ರಾಜುಶೆಟ್ಟಿ, ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಪಾಟೀಲ್ ಕೌಠಾ, ಬಸವಲಿಂಗ ಪಟ್ಟದ್ದೇವರು, ರಾಜೇಶ್ವರ ಶಿವಾಚಾರ್ಯ, ಶಿವಾನಂದ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry